ನವದೆಹಲಿ(ಜು.05): ಮೋದಿ 2.0 ಸರ್ಕಾರದ ಮೊದಲ ಪೂರ್ಣ ಪ್ರಮಾಣದ ಬಜೆಟ್ ಲೋಕಸಭೆಯಲ್ಲಿ ಮಂಡನೆಯಾಗಿದೆ. ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಬಜೆಟ್ ಬುತ್ತಿ ಬಿಚ್ಚಿಟ್ಟಿದ್ದಾರೆ. ಬಜೆಟ್ ಭಾಷಣ ಪೂರ್ಣಗೊಳಿಸಿರುವ ನಿರ್ಮಲಾ ಸೀತಾರಾಮನ್, ದೇಶದ ಆರ್ಥಿಕ ಅಭಿವೃದ್ಧಿಯ ನೀಲನಕ್ಷೆಯನ್ನು ಎಳೆ ಎಳೆಯಾಗಿ ಬಿಚ್ಚಿಟ್ಟರು.

ಇನ್ನು ನಿರ್ಮಲಾ ಸೀತಾರಾಮನ್ ಇಂದು ಮಂಡಿಸಿರುವ ಪ್ರಸಕ್ತ ಬಜೆಟ್'ನ ವಿಶ್ಲೇಷಗಿಳಿಯುವುದಾದರೆ, ಇಂದಿನ ಬಜೆಟ್ ಬರೋಬ್ಬರಿ 28.86 ಲಕ್ಷ ಕೋಟಿ ರೂ. ಗಾತ್ರದ ಬೃಹತ್ ಬಜೆಟ್ ಆಗಿದೆ. ಒಟ್ಟಾರೆ ಕ್ಷೇತ್ರಗಳನ್ನು ಗಮನದಲ್ಲಿರಿಸಿ ವಿತ್ತ ಸಚಿವರು ಹಣ ಹಂಚಿಕೆ ಮಾಡಿರುವುದು ನಿಜಕ್ಕೂ ಅದ್ಭುತವೇ ಸರಿ.

ಇಷ್ಟು ಬೃಹತ್ ಗಾತ್ರದ ಬಜೆಟ್ ಮಂಡಿಸಿರುವ ನಿರ್ಮಲಾ ಸೀತಾರಾಮನ್, ದೇಶದ ಅರ್ಥ ಪಥದ ದಿಕ್ಕನ್ನು ಸ್ಪಷ್ಟವಾಗಿ ಗುರುತಿಸಿದ್ದಾರೆ. ಯಾವ ಕ್ಷೇತ್ರಕ್ಕೆ ಎಷ್ಟು ಎಂಬ ಅವರ ಲೆಕ್ಕಾಚಾರ ನಿಜಕ್ಕೂ ಗಮನ ಸೆಳೆಯುತ್ತದೆ.

ನಿರಂತರ 2 ಗಂಟೆ 15 ನಿಮಿಷಗಳ ಕಾಲ ಬಜೆಟ್ ಮಂಡಿಸಿದ ನಿರ್ಮಲಾ ಸೀತಾರಾಮನ್, ಗಡಿ ಭದ್ರತೆ ಹಾಗೂ ಆರ್ಥಿಕ ಅಭಿವೃದ್ಧಿ ಎಂಬ ತಮ್ಮ ಸರ್ಕಾರದ ಸಿದ್ಧಾಂತಡಿ ತಾವು ಮುಂದುವರೆಯುತ್ತಿರುವುದಾಗಿ ತಿಳಿಸಿದರು.

ಈ ವರ್ಷ ದೇಶ 3 ಟ್ರಿಲಿಯನ್ ಯುಎಸ್ ಡಾಲರ್ ಅರ್ಥ ವ್ಯವಸ್ಥೆಯನ್ನು ಹೊಂದಲಿದ್ದು, 2024ರೊಳಗಾಗಿ 5 ಟ್ರಿಲಿಯನ್ ಯುಎಸ್ ಡಾಲರ್ ಅರ್ಥ ವ್ಯವಸ್ಥೆ ಹೊಂದುವ ಪ್ರಧಾನಿ ಮೋದಿ ಅವರ ಕನಸನ್ನು ಈಡೇರಿಸುವ ಭರವಸೆಯನ್ನು ವಿತ್ತ ಸಚಿವರು ವ್ಯಕ್ತಪಡಿಸಿದರು.

ದೇಶದ ಅಭಿವೃದ್ಧಿಗೆ ಖಾಸಗಿ ಬಂಡವಾಳದ ಅವಶ್ಯಕತೆಯನ್ನು ಈ ಬಜೆಟ್ ಒತ್ತಿ ಹೇಳಿದೆ. ಇದಕ್ಕೆ ಪೂರಕವಾಗಿ ಸಾರ್ವಜನಿಕ ವಲಯದಲ್ಲಿ ಖಾಸಗಿ ಬಂಡವಾಳದ ಹರಿವಿಗೆ ಹೆಚ್ಚಿನ ಅವಕಾಶ ಕಲ್ಪಿಸಲಾಗಿದೆ.

ಮೇಲ್ನೋಟಕ್ಕೆ ಉದ್ದಿಮೆ ಮತ್ತು ಉದ್ಯಮ ಪೂರಕವಾಗಿ ಬಜೆಟ್ ಗೋಚರವಾಗುತ್ತದೆ. ಕಾರಣ ಉದ್ಯಮ ಕ್ಷೇತ್ರಕ್ಕೆ ಈ ಬಜೆಟ್ ಹೆಚ್ಚಿನ ಪ್ರಾಶಸ್ತ್ಯ ನೀಡಿದೆ. ಇದೇ ವೇಳೆ ಕೃಷಿ ಕ್ಷೇತ್ರವನ್ನು ತುಸು ಕಡೆಗಣಿಸಿರುವುದು ಸ್ಪಷ್ಟವಾಗಿ ಕಂಡು ಬರುತ್ತದೆ.

ಕಾರಣ ಈ ಬಜೆಟ್'ನಲ್ಲಿ ಕೃಷಿ ಕ್ಷೇತ್ರಕ್ಕಾಗಿ ಒಂದೇ ಒಂದು ಹೊಸ ನೀತಿಯನ್ನು ಘೋಷಿಸಿಲ್ಲ. ಆದರೆ ಉದ್ದಿಮೆ ವಲಯಕ್ಕೆ ಯಥೇಚ್ಛವಾಗಿ ಅನುದಾನ ಬಿಡುಗಡೆ ಮಾಡಲಾಗಿದ್ದು, ಕೃಷಿ ವಲಯಕ್ಕೆ ಹಿಂದಿನ ಯೋಜನೆಗಳನ್ನಷ್ಟೇ ಮುಂದುವರೆಸಲಾಗಿದೆ.

ಇನ್ನು ಕಳೆದ ಬಾರಿ ಬಜೆಟ್'ನಲ್ಲಿ ಘೋಷಿಸಲಾಗಿದ್ದ ವಾರ್ಷಿಕ 5 ಲಕ್ಷ ರೂ. ಆದಾಯದಾರರಿಗೆ ತೆರಿಗೆ ವಿನಾಯ್ತಿಯನ್ನು ಘೋಷಿಸಲಾಗಿತ್ತು. ಈ ಬಾರಿ ಇದನ್ನು ಮುಂದುವರಸಲಾಗಿದೆ.

ಅದರಂತೆ ಗೃಹಸಾಲದ ಮೇಲಿನ ಬಡ್ಡಿ ಹೊರೆಯನ್ನು ಕಡಿಮೆ ಮಾಡಲಾಗಿದ್ದು, ಗೃಹಸಾಲದ ಉಸ್ತುವಾರಿಯನ್ನು ನೇರವಾಗಿ RBIಗೆ ವಹಿಸಲಾಗಿದೆ. ಅಲ್ಲದೇ ಶ್ರೀಮಂತರ ಮೇಲೆ ಹೆಚ್ಚಿನ ತೆರಿಗೆ ಹೊರೆ ಹೊರಿಸಿರುವುದು ಈ ಬಜೆಟ್'ನ ವಿಶೇಷ.

ಈ ಬಜೆಟ್'ನ ಮತ್ತೊಂದು ವಿಶೇಷತೆ ಎಂದರೆ ಡಿಜಿಟಲ್ ಪೇಮೆಂಟ್ ಮೇಲೆ ಸರ್ಕಾರ ಹೆಚ್ಚಿನ ಒತ್ತು ನೀಡಿದೆ. ಇದೇ ಕಾರಣಕ್ಕೆ ಕ್ರೆಡಿಟ್ ಕಾರ್ಡ್ ಮೇಲಿನ ಸೇವಾ ಶುಲ್ಕವನ್ನು ತೆಗೆದು ಹಾಕಲಾಗಿದೆ.

ಇನ್ನುಳಿದಂತೆ ಮಹಿಳಾ ಸಬಲೀಕರಣ, ಪ್ರವಾಸೋದ್ಯಮ, ಗೃಹ ನಿರ್ಮಾಣ ಸೇರಿದಂತೆ ವಿವಿಧ ವಲಯಗಳಿಗೆ ಆದ್ಯತೆಯ ಮೇರೆಗೆ ಪ್ರಾಶಸ್ತ್ಯ ನೀಡಲಾಗಿದೆ.

ಆದರೆ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಸೆಸ್ ಅಧಿಕಗೊಳಿಸಿರುವುದು, ಚಿನ್ನದ ಮೇಲಿನ ಆಮದು ಸುಂಕ ಅಧಿಕಗೊಳಿಸಿರುವುದು ಸಾರ್ವಜನಿಕರನ್ನು ದಂಗು ಬಡಿಸಿದೆ.

ಒಂದು ಕಡೆ ಇದು ಮಧ್ಯಮ ವರ್ಗದ ಬಜೆಟ್ ಎಂದು ಪ್ರಧಾನಿ ಮೋದಿ ಈ ಬಜೆಟ್'ನ್ನು ಬಣ್ಣಿಸಿದ್ದಾರೆ. ಆದರೆ ಮಧ್ಯಮ ವರ್ಗದ ಜೀವನದ ಭಾಗವಾಗಿರುವ ವಲಯದಲ್ಲಿ ಹೆಚ್ಚಿನ ತೆರಿಗೆ ವಿಧಿಸಿರುವುದು ಅರ್ಥ ತಜ್ಞರನ್ನೂ ಆಶ್ಚರ್ಯಕ್ಕೆ ದೂಡಿದೆ.

ಇದರ ಹೊರತಾಗಿ ಬಜೆಟ್'ನಲ್ಲಿ ಕೆಲವು ಜನಪ್ರಿಯ ಘೋಷಣೆಗಳನ್ನೂ ಕಾಣಬಹುದಾಗಿದೆ. ಪ್ರಮುಖವಾಗಿ ವಿಲ್ಲರೆ ವ್ಯಾಪಾರಿಗಳಿಗಾಗಿ ಪಿಂಚಣಿ ಸೌಲಭ್ಯ, ಸ್ವಚ್ಛ ಭಾರತ್ ಯೋಜನೆಯಡಿ ಗ್ರಾಮೀಣ ಭಾರತದಲ್ಲಿ ಹಲವು ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ, ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ ಫಲಾನುಭವಿಗಳಿಗೆ ಗೃಹ ನಿರ್ಮಾಣ ಸೇರದಿಂತೆ ಹಲವು ಜನಪ್ರಿಯ ಯೋಜನೆಗಳು ಎದ್ದು ಕಾಣುತ್ತವೆ.

ಬ್ಯಾಂಕಿಂಗ್ ಕ್ಷೇತ್ರದ ಏಕೀಕರಣಕ್ಕಗಿ ಹೆಚ್ಚಿನ ಒತ್ತು ನೀಡಿರುವ ಕೇಂದ್ರ ಸರ್ಕಾರ, ಕೆಟ್ಟ ಸಾಲ ಮತ್ತು ಅನುತ್ಪಾದಕ ಆಸ್ತಿಗಳ ಮೇಲೆ ನಿಯಂತ್ರಣ ಸಾಧಿಸುವಲ್ಲಿ ಮುಂದಡಿ ಇಟ್ಟಿದೆ.

ಇನ್ನು ತಮ್ಮ ಬಜೆಟ್ ಕೊನೆಯಲ್ಲಿ ದೇಶದ ವಿತ್ತೀಯ ಕೊರತೆ ಘೋಷಿಸಿರುವ ಹಣಕಾಸು ಸಚಿವೆ ಪ್ರಸಕ್ತ ವರ್ಷ ವಿತ್ತೀಯ ಕೊರತೆ ಶೇ.3.4ರಿಂದ ಶೇ.3.3ಕ್ಕೆ ಇಳಿದಿದೆ ಎಂದು ಘೋಷಿಸಿದ್ದಾರೆ.

ಒಟ್ಟಿನಲ್ಲಿ ಪ್ರಸಕ್ತ ಕೇಂದ್ರ ಬಜೆಟ್'ನ್ನು ಹೊರೆ ರಹಿತ ಎಂದು ಬಣ್ಣಿಸಬಹುದಾದರೂ, ಜನಸಾಮಾನ್ಯರ ಜೇಬು ಗಟ್ಟಿಗೊಳಿಸುವ ಇರಾದೆಯೂ ಸರ್ಕಾರಕ್ಕೆ ಇದ್ದಂತಿಲ್ಲ ಎಂದು ಹೇಳಬಹುದಾಗಿದೆ.