ನವದೆಹಲಿ [ಜು.05]: ಲೋಕಸಭೆ ಚುನಾವಣೆ ಯಲ್ಲಿ ಐತಿಹಾಸಿಕ ಜಯಭೇರಿ ಬಾರಿಸಿ ಪುನರಾಯ್ಕೆಯಾಗಿರುವ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ಎರಡನೇ ಅವಧಿಯ ಮೊದಲ ಬಜೆಟ್ ಶುಕ್ರವಾರ ಬೆಳಗ್ಗೆ 11 ಗಂಟೆಗೆ ಸಂಸತ್ತಿನಲ್ಲಿ ಮಂಡನೆಯಾಗಲಿದೆ. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮುಂಗಡ ಪತ್ರ ಓದುವ ಮೂಲಕ ಹೊಸ ಇತಿಹಾಸ ಸೃಷ್ಟಿಸಲಿದ್ದಾರೆ.

ಇಂದಿರಾ ಗಾಂಧಿ ನಂತರ ದೇಶದ ಬಜೆಟ್ ಮಂಡನೆ ಮಾಡಿದ ಎರಡನೇ ಮಹಿಳೆ ಹಾಗೂ ಮೊದಲ ಪೂರ್ಣಾ ವಧಿ ಹಣಕಾಸು ಸಚಿವೆ ಎಂಬ ಹಿರಿಮೆಗೆ ಅವರು ಪಾತ್ರರಾಗಲಿದ್ದಾರೆ. ಕರ್ನಾಟಕದಿಂದ ಆಯ್ಕೆಯಾದ ಸಂಸದರೊಬ್ಬರು ಮುಂಗಡಪತ್ರ ಮಂಡಿಸುತ್ತಿರುವುದು ಇದೇ ಪ್ರಥಮ ಬಾರಿ ಆಗಿರುವ ಕಾರಣ ಕನ್ನಡಿಗರೂ ಹೆಮ್ಮೆಪಡುವಂತಾಗಿದೆ. 1970 ರಲ್ಲಿ ಇಂದಿರಾ ಗಾಂಧಿ ಅವರು ಆಯವ್ಯಯ ಮಂಡನೆ ಮಾಡಿದ್ದರು. ಆದರೆ
ಅವರು ಪೂರ್ಣಾವಧಿ ಹಣಕಾಸು ಸಚಿವೆಯಾಗಿರಲಿಲ್ಲ. 

ಭಾರಿ ನಿರೀಕ್ಷೆ: ಮೋದಿ 2.0 ಸರ್ಕಾರದ ಮೊದಲ ಬಜೆಟ್ ಬಗ್ಗೆ ಸಾಕಷ್ಟು ನಿರೀಕ್ಷೆಗಳನ್ನು ಜನಸಾಮಾನ್ಯರು ಹೊಂದಿದ್ದಾರೆ. ಆದಾಯ ತೆರಿಗೆ ವಿನಾಯಿತಿ ಮಿತಿ 2.5 ಲಕ್ಷ ರು.ನಿಂದ 3 ಲಕ್ಷ ರು.ಗೆ ಹೆಚ್ಚಳಗೊಳ್ಳಬಹುದು. ಸೆಕ್ಷನ್ 80 ಸಿ ಅಡಿ ಮಾಡುವ ಹೂಡಿಕೆ ಮಿತಿಯನ್ನು 1.5 ಲಕ್ಷ ರು.ನಿಂದ 2 ಲಕ್ಷ ರು.ಗೆ ಏರಿಕೆಯಾಗಬಹುದು. ಕೃಷಿ, ಆರೋಗ್ಯ, ಮೂಲಸೌಕರ್ಯ ಕ್ಷೇತ್ರಕ್ಕೆ ಹೆಚ್ಚಿನ ಒತ್ತು ಕೊಡಬಹುದು ಎಂಬ ವಿಶ್ಲೇಷಣೆಗಳು ಇವೆ.