ಲೋಕಸಭೆಯಲ್ಲಿ ಮೋದಿ 2.0 ಸರ್ಕಾರದ ಮೊದಲ ಬಜೆಟ್ ಮಂಡನೆ| ಬಜೆಟ್ ಮಂಡಿಸುತ್ತಿರುವ ಕೇಂದ್ರ ಹಣಕಾಸು ಸಚಿವೆ| ಅರ್ಥ ಪಥದ ನೀಲನಕ್ಷೆ ಬಿಚ್ಚಿಡುತ್ತಿರುವ ನಿರ್ಮಲಾ ಸೀತಾರಾಮನ್| 'ಭಾರತ ಸದ್ಯ ವಿಶ್ವದ ಐದನೇ ಬಲಾಢ್ಯ ಆರ್ಥಿಕ ವ್ಯವಸ್ಥೆ ಹೊಂದಿದೆ'| ಮೂರನೇ ಬಲಾಢ್ಯ ಆರ್ಥಿಕ ಶಕ್ತಿಯಾಗಿ ಹೊರ ಹೊಮ್ಮಲು ದೃಢ ನಿರ್ಧಾರ| 'ಮೂಲ ಸೌಕರ್ಯ, ಡಿಜಿಟಲಿಕರಣಕ್ಕೆ ಕೇಂದ್ರ ಸರ್ಕಾರ ಹೆಚ್ಚಿನ ಒತ್ತು'| 'ಒನ್ ನೇಶನ್ ಒನ್ ಗ್ರೀಡ್ ಯೋಜನೆ ಮೂಲಕ ಎಲ್ಲರಿಗೂ ವಿದ್ಯುತ್ ಸೌಕರ್ಯ'| 'ಕಾರ್ಪೋರೇಟ್ ಬಾಂಡ್'ಗಳ ಕುರಿತು ಹೊಸ ನೀತಿ ಜಾರಿಗೆ ನಿರ್ಧಾರ'| FDI ಉತ್ತೇಜಿಸಲು ಕೆವೈಸಿ ನೀತಿಯ ಸರಳೀಕರಣಕ್ಕೆ ಮುಂದಾದ ಕೇಂದ್ರ'| 'ವಿಮೆ ಕ್ಷೇತ್ರದಲ್ಲಿ ಶೇ.100ರಷ್ಟು FDI ಹೂಡಿಕೆಗೆ ಅನುಮತಿ'|
ನವದೆಹಲಿ(ಜು.05): ಮೋದಿ 2.0 ಸರ್ಕಾರದ ಮೊದಲ ಪೂರ್ಣ ಪ್ರಮಾಣದ ಬಜೆಟ್ ಲೋಕಸಭೆಯಲ್ಲಿ ಮಂಡನೆಯಾಗುತ್ತಿದ್ದು, ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಬಜೆಟ್ ಬುತ್ತಿ ಬಿಚ್ಚಿಡುತ್ತಿದ್ದಾರೆ. ಬಜೆಟ್ ಭಾಷಣ ಆರಂಭಿಸಿರುವ ನಿರ್ಮಲಾ ಸೀತಾರಾಮನ್, ದೇಶದ ಆರ್ಥಿಕ ಅಭಿವೃದ್ಧಿಯ ನೀಲನಕ್ಷೆಯನ್ನು ಎಳೆ ಎಳೆಯಾಗಿ ಬಿಚ್ಚಿಡುತ್ತಿದ್ದಾರೆ.
ಐದು ವರ್ಷದ ಹಿಂದೆ ಅರ್ಥ ವ್ಯವಸ್ಥೆಯಲ್ಲಿ ಭಾರತ 11ನೇ ಸ್ಥಾನದಲ್ಲಿತ್ತು. ಆದರೆ ಇದೀಗ ವಿಶ್ವದಲ್ಲಿ ಭಾರತ ಐದನೇ ಬೃಹತ್ ಆರ್ಥಿಕ ಶಕ್ತಿಯಾಗಿ ಹೊರ ಹೊಮ್ಮಿದೆ. ಮುಂದಿನ ಐದು ವರ್ಷದಲ್ಲಿ ಭಾರತ ಮೂರನೇ ಬಲಾಢ್ಯ ಆರ್ಥಿಕ ಶಕ್ತಿಯಾಗಿ ಪುಟಿದೇಳಲಿದೆ ಎಂದು ವಿತ್ತ ಸಚಿವೆ ಘೊಷಿಸಿದರು.
ಮೂಲ ಸೌಕರ್ಯ, ಡಿಜಿಟಲಿಕರಣಕ್ಕೆ ಕೇಂದ್ರ ಸರ್ಕಾರ ಹೆಚ್ಚಿನ ಒತ್ತು ನೀಡಿದ್ದು, ಸಾರಿಗೆ ಸಂಪರ್ಕ ಅಭಿವೃದ್ಧಿಯಿಂದ ದೇಶವನ್ನು ಮತ್ತಷ್ಟು ಸದೃಢಗೊಳಿಸುವುದು ಸರ್ಕಾರದ ಗುರಿಯಾಗಿದೆ ಎಂದು ನಿರ್ಮಲಾ ಸೀತಾರಾಮನ್ ಹೇಳಿದರು.
ಒನ್ ನೇಶನ್ ಒನ್ ಗ್ರೀಡ್ ಯೋಜನೆ ಮೂಲಕ ಎಲ್ಲರಿಗೂ ವಿದ್ಯುತ್ ಸೌಕರ್ಯ, ಗ್ಯಾಸ್ ಗ್ರೀಡ್ ಮತ್ತು ವಾಟರ್ ಗ್ರೀಡ್ ನಿರ್ಮಾಣಕ್ಕೆ ಸರ್ಕಾರದ ಬದ್ಧವಾಗಿದೆ ಎಂದು ಹಣಸಕಾಸು ಸಚಿವೆ ತಿಳಿಸಿದರು.
ಸಾಗರ್ ಮಾಲಾ, ಭಾರತ್ ಮಾಲಾ ಯೋಜನೆಯ ಮೂಲಕ ಗಂಗಾನದಿ ಒಳನಾಡು ಜಲಸಾರಿಗೆಗೆ ಆದ್ಯತೆ ನೀಡಿ ಸರಕು ಸಾಗಾಣಿಕೆಗೆ ಅನುಕೂಲಕರ ವಾತಾವರಣ ನಿರ್ಮಾಣ ಮಾಡಿಕೊಡುವುದು ನಮ್ಮ ಗುರಿ ಎಂದು ನಿರ್ಮಲಾ ತಿಳಿಸಿದರು.
ಕಾರ್ಪೋರೇಟ್ ಬಾಂಡ್'ಗಳ ಕುರಿತು ಹೊಸ ನೀತಿ ಜಾರಿಗೆ ನಿರ್ಧರಿಸಿಲಾಗಿದ್ದು, FDI ಉತ್ತೇಜಿಸಲು ಕೆವೈಸಿ ನೀತಿಯ ಸರಳೀಕರಣಕ್ಕೆ ಕೇಂದ್ರ ಮುಂದಾಗಿದೆ ಎಂದು ನಿರ್ಮಲಾ ಸೀತಾರಾಮನ್ ಮಾಹಿತಿ ನೀಡಿದರು. ಅಲ್ಲದೇ FDI ಇದೀಗ 1.3 ಟ್ರಿಲಿಯನ್‌ನಿಂದ 1.5 ಟ್ರಿಲಿಯನ್‌ಗೆ ಏರಿಕೆಯಾಗಿದೆ ಎಂದು ಅವರು ಸ್ಪಷ್ಟಪಡಿಸಿದರು.
ಭಾರತದಲ್ಲಿ FDI ಹೂಡಿಕೆದಾರರನ್ನು ಆಕರ್ಷಿಸಲು ಕ್ರಮ ಕೈಗೊಳ್ಳಲಾಗಿದ್ದು, ವಿಮೆ ಕ್ಷೇತ್ರದಲ್ಲಿ ಶೇ.100ರಷ್ಟು FDI ಹೂಡಿಕೆಗೆ ಅನುಮತಿ ನೀಡಲಾಗಿದೆ ಎಂದು ಸಚಿವರು ಸದನಕ್ಕೆ ಮಾಹಿತಿ ನೀಡಿದರು.
