ನವದೆಹಲಿ[ಜು.05]: ದೇಶದ ಮೊಟ್ಟ ಮೊದಲ ಪೂರ್ಣಾವಧಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತಮ್ಮ ಚೊಚ್ಚಲ ಬಜೆಟ್ ಮಂಡಿಸಿದ್ದಾರೆ. ಈ ಬಜೆಟ್ ದೇಶದ ಜನರಿಗೆ ಸ್ವಲ್ಪ ಸಿಹಿ, ಸ್ವಲ್ಪ ಕಹಿ ನೀಡಿದೆ. ಎಲ್ಲಾ ಕ್ಷೇತ್ರಗಳಿಗೆ ಅಳೆದು ತೂಗಿ ಅನುದಾನ ಹಾಗೂ ಯೋಜನೆಗಳನ್ನು ಘೋಷಿಸಿರುವ ಕೇಂದ್ರ ಮುಂಗಡ ಪತ್ರದ ಬಗ್ಗೆ ಪರ, ವಿರೋಧಗಳು ಕೇಳಿ ಬಂದಿವೆ. ಹಾಗಾದ್ರೆ ಬಜೆಟ್ ಕುರಿತಾಗಿ ಗಣ್ಯ ನಾಯಕರು ಹೇಳಿದ್ದೇನು? ಇಲ್ಲಿದೆ ನೋಡಿ

ಪ್ರಸಕ್ತ ಬಜೆಟ್ ನ್ನು ಪ್ರಧಾನಿ ಮೋದಿ ಮುಕ್ತ ಕಂಠದಿಂದ ಶ್ಲಾಘಿಸಿದ್ದು, ಮಧ್ಯಮ ವರ್ಗದ ಬಜೆಟ್ ಎಂದು ಹೊಗಳಿದ್ದಾರೆ. ಸಮಾಜದ ಎಲ್ಲ ವರ್ಗಗಳಿಗೆ ಪೂರಕವಾದ ಬಜೆಟ್ ನ್ನು ಮಂಡಿಸಲಾಗಿದ್ದು, ಇದಕ್ಕಾಗಿ ತಾವು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮತ್ತು ಅವರ ತಂಡವನ್ನು ಅಭಿನಂದಿಸುವುದಾಗಿ ಹೇಳಿದ್ದಾರೆ.

ಬಿಜೆಟ್ ಕುರಿತಾಗಿ ಟ್ವೀಟ್ ಮೂಲಕ ಪ್ರತಿಕ್ರಿಯಿಸಿರುವ ಗೃಹಮಂತ್ರಿ ಅಮಿತ್ ಶಾ 'ಇಂದಿನ ಬಜೆಟ್ ನರೇಂದ್ರ ಮೋದಿ ಕಂಡ ಭಾರತದ ಅಭಿವೃದ್ಧಿಯ ಕನಸಿನ ಪ್ರತಿಬಿಂಬವಾಗಿದೆ' ಎಂದಿದ್ದಾರೆ.

ನಿರ್ಮಲಾ ಮಂಡಿಸಿರುವ ಬಜೆಟ್‌ಗೆ ಬಿಜೆಪಿ ನಾಯಕರು ಭೇಷ್ ಎಂದಿದ್ದರೆ, ಇತ್ತ ಕಾಂಗ್ರೆಸ್ ಪಕ್ಷದ ನಾಯಕರು ಸೇರಿದಂತೆ ಕೆಲವರು ಇದೊಂದು ಉಪಯೋಗಕ್ಕಿಲ್ಲದ ಬಜೆಟ್ ಎಂದು ಟೀಕಿಸಿದ್ದಾರೆ.

ಒಟ್ಟಾರೆಯಾಗಿ ನಿರ್ಮಲಾ ಸೀತಾರಾಮನ್ ಮಂಡಿಸಿದ ಚೊಚ್ಚಲ ಬಜೆಟ್ ಸಿಹಿ ಕಹಿ ಎರಡನ್ನೂ ನೀಡಿದೆ ಎಂದರೆ ತಪ್ಪಾಗುವುದಿಲ್ಲ.