ಬೆಂಗಳೂರು (ಜೂ.29) : 'ಒಂದು ಭಾರತ ಒಂದು ಸ್ಮಾರ್ಟ್ ಗ್ರಿಡ್' ಪಂಚವಾರ್ಷಿಕ ಯೋಜನೆಯನ್ನು 2019-20ನೇ ಸಾಲಿನ ಕೇಂದ್ರದ ಬಜೆಟ್‌ನಲ್ಲಿ ಜಾರಿಗೆ ತರುವಂತೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ಗೆ ಬಿಜೆಪಿ ಹಿರಿಯ ನಾಯಕ ಎಸ್.ಎಂ.ಕೃಷ್ಣ ಪತ್ರದ ಮೂಲಕ ಮನವಿ ಮಾಡಿದ್ದಾರೆ.

ಈ ಬಾರಿಯ ಕೇಂದ್ರ ಬಜೆಟ್‌ನಲ್ಲಿ ‘ಒನ್ ಇಂಡಿಯಾ ಒನ್ ಸ್ಮಾರ್ಟ್ ಗ್ರಿಡ್’ ಯೋಜನೆ ಜಾರಿಯಾದಲ್ಲಿ ಇಂಧನ ಉಳಿತಾಯ ಹೆಚ್ಚಾಗುವುದಲ್ಲದೇ, ಸಂಬಂಧಿಸಿದ ಇಲಾಖೆಗಳ ನಡುವೆ ಸಮನ್ವಯತೆ ಹಾಗೂ ನಿರ್ವಹಣೆ ಸರಳವಾಗಲಿದೆ, ಎಂದು ಬಿಜೆಪಿ ಹಿರಿಯ ನಾಯಕ ಅಭಿಪ್ರಾಯ ಪಟ್ಟಿದ್ದಾರೆ.

ಸುಸ್ಥಿರ, ಸುರಕ್ಷಿತ ಡಿಜಿಟಲ್ ವ್ಯವಸ್ಥೆಗೆ ಪೂರಕ ವಾತಾವರಣ ಸೃಷ್ಟಿಸುವ ಜೊತೆಗೆ ದೇಶದ ರೈತರಿಗೆ ಉತ್ತಮ ಹಾಗೂ ಸೂಕ್ತ ರೀತಿಯಲ್ಲಿ ವಿದ್ಯುತ್ ಪೂರೈಕೆಗೆ ಹೊಸ ಯೋಜನೆಯು ಸಹಕಾರಿಯಾಗಲಿದೆ ಎಂದು ಮಾಜಿ ಸಿಎಂ ಪತ್ರದಲ್ಲಿ ತಿಳಿಸಿದ್ದಾರೆ. 

2015ರಲ್ಲಿ ಕೇಂದ್ರ ಸರ್ಕಾರ ನ್ಯಾಷನಲ್ ಸ್ಮಾರ್ಟ್ ಗ್ರಿಡ್ ಮಿಷನ್ ಯೋಜನೆ ಆರಂಭಿಸಿತ್ತು.  ಈಗಾಗಲೇ ಪ್ರಾಯೋಗಿಕವಾಗಿ ಯೋಜನೆಯನ್ನು ಜಾರಿ ಮಾಡಿದ ಪ್ರದೇಶಗಳಲ್ಲಿ ಸಾಕಷ್ಟು ಪ್ರಯೋಜನಗಳಾಗಿದೆ. ಸ್ಮಾರ್ಟ್ ಸಿಟಿಗೂ ಇದು ಪೂರಕವಾಗಿದೆ .ಅತ್ಯಂತ ದೀರ್ಘಾವಧಿಯಲ್ಲಿ ಇಂಧನ ವ್ಯವಸ್ಥೆಯ ಸುಸ್ಥಿರತೆಗೆ ಸಹಕಾರಿಯಾಗಲಿದೆ. ಆರ್ಥಿಕ ಪ್ರಗತಿಗೆ, ಹೊಸ ತಂತ್ರಜ್ಞಾನಗಳ ಅಳವಡಿಕೆಗೆ, ಹೊಸ ಹೊಸ ರೀತಿಯ ಪ್ರಯೋಗಗಳಿಗೆ ಸ್ಮಾರ್ಟ್ ಗ್ರಿಡ್ ಯೋಜನೆ ಉಪಯುಕ್ತವಾಗಲಿದೆ ಎಂದು ತಿಳಿಸಿದ್ದಾರೆ. ಆ ನಿಟ್ಟಿನಲ್ಲಿ ಮಹಾರಾಷ್ಟ್ರದ ಕೆಲವು ಉದಾಹರಣೆಗಳನ್ನೂ ಅವರು ನೀಡಿದ್ದಾರೆ. 

ಇದನ್ನೂ ಓದಿ | ಮಾಜಿ ಪಿಎಂ ಮನಮೋಹನ್ ಸಿಂಗ್ ಭೇಟಿ ಮಾಡಿದ ನಿರ್ಮಲಾ ಸೀತಾರಾಮನ್

ಈಗಾಗಲೇ ಕರ್ನಾಟಕದಲ್ಲಿ ಬೆಂಗಳೂರು ಸುತ್ತಲ ಕೆಲ ಭಾಗದಲ್ಲಿ ಸ್ಮಾರ್ಟ್ ಗ್ರಿಡ್ ವ್ಯವಸ್ಥೆ ಅಳವಡಿಸಲಾಗಿದೆ.  ಕೇಂದ್ರ ಸರ್ಕಾರವು ಮುಂದಿನ ಐದು ವರ್ಷಗಳಲ್ಲಿ ಹಂತ ಹಂತವಾಗಿ ಸ್ಮಾರ್ಟ್ ಗ್ರಿಡ್ ಯೋಜನೆ ಜಾರಿ ಮಾಡಲು ಚಿಂತನೆ ನಡೆಸಬೇಕು. ಅಲ್ಲದೇ ಯೋಜನೆಯ ವೆಚ್ಚವನ್ನು ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು 50:50 ರ ಅನುಪಾತದಲ್ಲಿ ಭರಿಸಬೇಕು, ಎಂದು ಕೃಷ್ಣ  ಪತ್ರದಲ್ಲಿ ಮನವಿ ಮಾಡಿದ್ದಾರೆ.

ಸಸ್ಯ ಶ್ಯಾಮಲ ಕೃಷಿ ಸಮೃದ್ಧಿ ಯೋಜನೆ:  

ಕರ್ನಾಟಕದಲ್ಲಿ 10 HP ಸಾಮರ್ಥ್ಯದ ಪಂಪ್‌ಸೆಟ್‌ಗಳಿಗೆ ದಿನಕ್ಕೆ 7 ಗಂಟೆಯಂತೆ ಸರ್ಕಾರ ವಿದ್ಯುತ್ತನ್ನು ಪೂರೈಸುತ್ತಿದೆ. ಇದರಿಂದ 26 ಲಕ್ಷ ರೈತರು ಪ್ರಯೋಜನ ಪಡೆಯುತ್ತಿದ್ದಾರೆ. ಈ ಪಂಪ್‌ಸೆಟ್‌ಗಳನ್ನು BEE ಮಾನ್ಯತೆ ಪಡೆದ ಪಂಪ್‌ಸೆಟ್ಗಳೊಂದಿಗೆ ಸಬ್ಸಿಡಿ ಆಧಾರದಲ್ಲಿ ಬದಲಾಯಿಸಿದಲ್ಲಿ ಸುಮಾರು ಶೇ.30 ರಷ್ಟು ಇಂಧನ ಉಳಿಸಬಹುದು, ಎಂದು ಕೃಷ್ಣ ತಿಳಿಸಿದ್ದಾರೆ.

ಮುಂದುವರಿದು, ಹೊಸ ಯೋಜನೆ ಅನುಷ್ಠಾನವಾದಲ್ಲಿ ಗಣನೀಯ ಪ್ರಮಾಣದಲ್ಲಿ ವಿದ್ಯುತ್ ಸೋರಿಕೆಯನ್ನು ತಡೆಯಬಹುದಲ್ಲದೇ, 11 KV  ಫೀಡರ್ ಲೈನ್ ಒತ್ತಡ ಕಡಿಮೆ ಮಾಡಬಹುದು. ಈಗಾಗಲೇ ಕೃಷಿ ಉದ್ದೇಶಕ್ಕೆ 173.2 ಬಿಲಿಯನ್ ಯೂನಿಟ್ ವಿದ್ಯುತ್ ಬಳಕೆಯಾಗುತ್ತಿದೆ. ಇದರಲ್ಲಿ ಒಟ್ಟು 52 ಬಿಲಿಯನ್ ಯೂನಿಟ್ ವಿದ್ಯುತ್ ಉಳಿಸಬಹುದು, ಉಳಿತಾಯವಾದ ವಿದ್ಯುತ್ ಇತರ ಬಳಕೆಗೆ ಹಂಚಬಹುದು, ಎಂದು ಕೃಷ್ಣ ವಿವರಿಸಿದ್ದಾರೆ. 

ಸಾಂಪ್ರದಾಯಿಕ ಪಂಪ್‌ಸೆಟ್‌ಗಳನ್ನು ಕೈಬಿಟ್ಟು ಹೊಸ ತಂತ್ರಜ್ಞಾನ ಅಪ್ಪಿಕೊಳ್ಳುವ ಈ ಹೊಸ ಯೋಜನೆಗೆ ‘ಪ್ರಧಾನ ಮಂತ್ರಿ ಸಸ್ಯ ಶ್ಯಾಮಲ ಕೃಷಿ ಸಮೃದ್ಧಿ’ ಎಂಬ ಹೆಸರನ್ನೂ ಕೃಷ್ಣ ಸೂಚಿಸಿದ್ದಾರೆ. ಈ ಯೋಜನೆಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು 75:25ರ ಅನುಪಾತದಲ್ಲಿ ವೆಚ್ಚ ಭರಿಸಬೇಕು ಎಂದಿದ್ದಾರೆ.