ನವದೆಹಲಿ(ಜು.05): ಮೋದಿ 2.0 ಸರ್ಕಾರದ ಮೊದಲ ಪೂರ್ಣ ಪ್ರಮಾಣದ ಬಜೆಟ್ ಲೋಕಸಭೆಯಲ್ಲಿ ಮಂಡನೆಯಾಗುತ್ತಿದ್ದು, ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಬಜೆಟ್ ಬುತ್ತಿ ಬಿಚ್ಚಿಡುತ್ತಿದ್ದಾರೆ. ಬಜೆಟ್ ಭಾಷಣ ಆರಂಭಿಸಿರುವ ನಿರ್ಮಲಾ ಸೀತಾರಾಮನ್, ದೇಶದ ಆರ್ಥಿಕ ಅಭಿವೃದ್ಧಿಯ ನೀಲನಕ್ಷೆಯನ್ನು ಎಳೆ ಎಳೆಯಾಗಿ ಬಿಚ್ಚಿಡುತ್ತಿದ್ದಾರೆ.

ಎಲ್ಲರಿಗೂ ಸೂರು ಒದಗಿಸುವ ಪ್ರಧಾನಿ ನರೇಂದ್ರ ಮೋದಿ ಅವರ ಕನಸಿಗೆ ವಿತ್ತ ಸಚಿವಾಲಯ ಬೆಂಬಲ ನೀಡಿದೆ. ಅದರಂತೆ ಪ್ರಧಾನಮಂತ್ರಿ ಗ್ರಾಮೀಣ ಆವಾಸ್ ಯೋಜನೆಯಡಿ ಒಟ್ಟು 1.95 ಕೊಟಿ ರೂ. ಮನೆಗಳ ನಿರ್ಮಾಣಕ್ಕೆ ಸರ್ಕಾರ ಮುಂದಾಗಿದೆ.

ಪ್ರತಿ ಮನೆಗೂ ಶೌಚಾಲಯ, ವಿದ್ಯುತ್ ಹಾಗೂ ಎಲ್‌ಪಿಜಿ ಸೌಕರ್ಯ ಒದಗಿಸುವುದು ಸರ್ಕಾರದ ಯೋಜನೆಯಾಗಿದೆ ವಿತ್ತ ಸಚಿವೆ ಸದನಕ್ಕೆ ಮಾಹಿತಿ ನೀಡಿದರು.

ಅಲ್ಲದೇ ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ ನಗರಗಳಲ್ಲಿ 81 ಲಕ್ಷ ಮನೆಗಳ ನಿರ್ಮಾಣಕ್ಕೆ ಗುರಿ ಹೊಂದಲಾಗಿದ್ದು, ಇದರಲ್ಲಿ 26 ಲಕ್ಷ ಮನೆಗಳು ಈಗಾಗಲೇ ಫಲಾನುಭವಿಗಳಿಗೆ ಹಸ್ತಾಂತರಿಸಲಾಗಿದೆ ಎಂದು ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.

ನೂತನ ತಂತ್ರಜ್ಞಾನದ ಸಹಾಯದಿಂದ ಆಧುನಿಕ ಮನೆಗಳ ನಿರ್ಮಾಣ ಮಾಡಿ, 24 ಲಕ್ಷ ಕುಟುಂಬಗಳಿಗೆ ಸೂರು ಒದಗಿಸುವುದು ಸರ್ಕಾರದ ಆದ್ಯ ಕರ್ತವ್ಯ ಎಂದು ನಿರ್ಮಲಾ ನುಡಿದರು.

ನಗರ ಮತ್ತು ಗ್ರಾಮೀಣ ಪ್ರದೇಶದಲ್ಲಿ ಏಕ ರೀತಿಯ ಜೀವನ ಮಾದರಿಗೆ ಆದ್ಯತೆ ನೀಡಲಾಗುವುದು ಎಂದು ವಿತ್ತ ಸಚಿವೆ ಸ್ಪಷ್ಟಪಡಿಸಿದರು.