ನವದೆಹಲಿ[ಜು.05]: ಎಂದಿನಂತೆ ಈ ಬಾರಿಯೂ ಬಜೆಟ್ ನಲ್ಲಿ ಕೇಂದ್ರ ಸರ್ಕಾರ ಶಿಕ್ಷಣಕ್ಕೆ ಹೆಚ್ಚು ಮಹತ್ವ ಕೊಟ್ಟಿದೆ. ಕೇಂದ್ರ ಮುಂಗಡ ಪತ್ರವನ್ನು ಮಂಡಿಸಿದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಅಂತರಾಷ್ಟ್ರೀಯ ಸಂಶೋಧನಾ ಫೌಂಡೇಶನ್ ಸ್ಥಾಪನೆ ಹಾಗೂ ಹೊಸ ಶಿಕ್ಷಣ ನೀತಿ ಜಾರಿಗೆ ತರುವ ಯೋಜನೆಯನ್ನು ಉಲ್ಲೇಖಿಸಿದ್ದಾರೆ.

ಉನ್ನತ ಶಿಕ್ಷಣಕ್ಕೂ ಒತ್ತು ನೀಡಿರುವ ಸರ್ಕಾರ, ಆರ್ಟಿಫಿಶಿಯಲ್ ಇಂಟೆಲಿಜೆನ್ಸ್, ಬಿಗ್ ಡಾಟಾ, ರೊಬೊಟಿಕ್ ಕ್ಷೇತ್ರಗಳಲ್ಲಿ ವಿದ್ಯಾರ್ಥಿಗಳು ಹೆಚ್ಚು ಸಂಶೋಧನೆಯಲ್ಲಿ ತೊಡಗುವಂತೆ ಮಾಡಬೇಕಿದೆ ಎಂದಿದೆ. ಇದಕ್ಕಾಗಿ 400 ಕೋಟಿ ಮೀಸಲಿಟ್ಟಿದೆ. ಈಗಾಗಲೇ ವಿಶ್ವದ ಅಗ್ರ 200 ಕಾಲೇಜುಗಳ ಪಟ್ಟಿಯಲ್ಲಿ ಭಾರತದ 3 ಕಾಲೇಜುಗಳು ಸೇರ್ಪಡೆಯಾಗಿದ್ದು, ಈ ಸಂಖ್ಯೆ ಹೆಚ್ಚಿಸುವುದು ಸರ್ಕಾರದ ಗುರಿ ಎಂದು ನಿರ್ಮಲಾ ಸೀತಾರಾಮನ್ ಉಲ್ಲೇಖಿಸಿದ್ದಾರೆ.

 ಆನ್ಲೈನ್ ಕೋರ್ಸ್ ಗಳನ್ನು ಉತ್ತೇಜಿಸುವ ನಿಟ್ಟಿನಲ್ಲಿ ಸರ್ಕಾರ 'ಅಧ್ಯಯನ' ಕಾರ್ಯಕ್ರಮ ಪ್ರಾರಂಭಿಸಲಿದೆ. ಅದರ ಅಡಿಯಲ್ಲಿ ವಿದೇಶಿ ವಿದ್ಯಾರ್ಥಿಗಳಿಗೆ ಭಾರತದಲ್ಲಿ ಶಿಕ್ಷಣ ಪಡೆಯಲು ಅವಕಾಶ ಸಿಗಲಿದೆ. ಉನ್ನತ ಶಿಕ್ಷಣಕ್ಕಾಗಿ ಪ್ರತ್ಯೇಕ ಕಾನೂನು ಸರ್ಕಾರ ಜಾರಿಗೊಳಿಸಲಿದೆ.

ಕೇಂದ್ರ ಬಜೆಟ್‌ 2019ಕ್ಕೆ ಸಂಬಂಧಿಸಿದ ಎಲ್ಲಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ: https://bit.ly/2LC5Jvu