ನವದೆಹಲಿ(ಜು.05): ಮೋದಿ 2.0 ಸರ್ಕಾರದ ಮೊದಲ ಪೂರ್ಣ ಪ್ರಮಾಣದ ಬಜೆಟ್ ಲೋಕಸಭೆಯಲ್ಲಿ ಮಂಡನೆಯಾಗಿದೆ. ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಬಜೆಟ್ ಬುತ್ತಿ ಬಿಚ್ಚಿಟ್ಟಿದ್ದಾರೆ. ಬಜೆಟ್ ಭಾಷಣ ಪೂರ್ಣಗೊಳಿಸಿರುವ ನಿರ್ಮಲಾ ಸೀತಾರಾಮನ್, ದೇಶದ ಆರ್ಥಿಕ ಅಭಿವೃದ್ಧಿಯ ನೀಲನಕ್ಷೆಯನ್ನು ಎಳೆ ಎಳೆಯಾಗಿ ಬಿಚ್ಚಿಟ್ಟರು.

ತೆರಿಗೆ ನೀತಿಯಲ್ಲಿ ಮಹತ್ತರ ಬದಲಾವಣೆ ಮಾಡಿರುವ ಕೇಂದ್ರ ಸರ್ಕಾರ ವಾರ್ಷಿಕ 5 ಲಕ್ಷ ರೂ.ವರೆಗಿನ ಆದಾಯಕ್ಕೆ ತೆರಿಗೆ ವಿನಾಯ್ತಿ ಘೋಷಿಸಿದೆ.

ಈ ಮಧ್ಯೆ ಕ್ರೆಡಿಟ್ ಕಾರ್ಡ್ ಬಳಕೆದಾರರಿಗೆ ಬಂಪರ್ ಕೊಡುಗೆ ಘೋಷಿಸಿರುವ ಕೇಂದ್ರ ಸರ್ಕಾರ, ಕ್ರೆಡಿಟ್ ಕಾರ್ಡ್ ಪೇಮೆಂಟ್ ಮೇಲೆ ಹೆಚ್ಚಿನ ಶುಲ್ಕ ವಿಧಿಸುವಂತಿಲ್ಲ ಎಂದು ಸ್ಪಷ್ಟಪಡಿಸಿದೆ.

ನಗದು ವ್ಯವಹಾರಗಳಿಗೆ ಕಡಿವಾಣ ಹಾಕಲು ನಿರ್ಧರಿಸಿರುವ ಕೇಂದ್ರ, ಡಿಜಿಟಲ್ ಪೇಮೆಂಟ್'ಗಳಿಗೆ ಉತ್ತೇಜನ ನೀಡಲಿದೆ. ಈ ಹಿನ್ನೆಲೆಯಲ್ಲಿ ಕ್ರೆಡಿಟ್ ಕಾರ್ಡ್ ಬಳಕೆದಾರರಿಗೆ ಶುಲ್ಕ ವಿನಾಯ್ತಿ ಘೋಷಿಸಲಾಗಿದೆ.

ಇದೇ ವೇಳೆ 45 ಲಕ್ಷ ರೂ ಕೊಟ್ಟು ಮನೆ ಖರೀದಿಸಿದರೆ ತೆರಿಗೆ ಪಾವತಿಯಲ್ಲಿ ಮೂರೂವರೆ ಲಕ್ಷ ರೂ. ಇಳಿಕೆ ಘೋಷಿಸಲಾಗಿದೆ. ಅಲ್ಲದೆ 7 ಲಕ್ಷ ರೂ.ವರೆಗೆ ಮನೆ ಖರೀಧಿ ಸಾಲಕ್ಕೆ ತೆರಿಗೆ ವಿನಾಯ್ತಿಯನ್ನೂ ಘೋಷಿಸಲಾಗಿದೆ.

ಗೃಹ ಸಾಲಗಳ ಮೇಲೆ ನ್ಯಾಷನಲ್ ಹೌಸಿಂಗ್ ಬೋಡರ್ಡ್ ಬದಲಾಗಿ ಆರ್‌ಬಿಐ ಗೆ ಉಸ್ತುವಾರಿ ಹೊಣೆ ನೀಡಲಾಗಿದೆ. ಈ ಮೂಲಕ ವಸತಿ ಕ್ಷೇತ್ರದಲ್ಲಿ ಭಾರೀ ಬದಲಾವಣೆಗೆ ಕೇಂದ್ರ ಸರ್ಕಾರ ಮುಂದಾಗಿದೆ.

ವಸತಿ ಮೂಲಸೌಕರ್ಯ ಅಭಿವೃದ್ಧಿಗೆ 5 ವರ್ಷದಲ್ಲಿ 100 ಲಕ್ಷ ಕೋಟಿ ಮೀಸಲಿಡಲು ಸರ್ಕಾರ ನಿರ್ಧರಿಸಿದೆ ಎಂದು ವಿತ್ತ ಸಚಿವೆ ನಿರ್ಮಲಾಸೀತಾರಾಮನ್ ತಿಳಿಸಿದರು.