ನವದೆಹಲಿ(ಜು.05): ಮೋದಿ 2.0 ಸರ್ಕಾರದ ಮೊದಲ ಪೂರ್ಣ ಪ್ರಮಾಣದ ಬಜೆಟ್ ಲೋಕಸಭೆಯಲ್ಲಿ ಮಂಡನೆಯಾಗಿದೆ. ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಬಜೆಟ್ ಬುತ್ತಿ ಬಿಚ್ಚಿಟ್ಟಿದ್ದಾರೆ. ಬಜೆಟ್ ಭಾಷಣ ಪೂರ್ಣಗೊಳಿಸಿರುವ ನಿರ್ಮಲಾ ಸೀತಾರಾಮನ್, ದೇಶದ ಆರ್ಥಿಕ ಅಭಿವೃದ್ಧಿಯ ನೀಲನಕ್ಷೆಯನ್ನು ಎಳೆ ಎಳೆಯಾಗಿ ಬಿಚ್ಚಿಟ್ಟರು.

ಆದರೆ ಕೃಷಿ ವಲಯಕ್ಕೆ ಈ ಬಾರಿಯ ಬಜೆಟ್'ನಲ್ಲಿ ಹೆಚ್ಚಿನ ಉತ್ತೇಜನ ಸಿಗದಿರುವುದು ಅನ್ನದಾತನಿಗೆ ನಿರಾಸೆ ಮೂಡಿಸಿದೆ. ಈ ಬಾರಿಯ ಬಜೆಟ್'ನಲ್ಲಿ ಕೃಷಿ ವಲಯಕ್ಕೆ ಸಂಬಂಧಿಸಿದಂತೆ ಯಾವುದೇ ಹೊಸ ಯೋಜನೆ ಘೋಷಣೆಯಾಗಿಲ್ಲ.

ನರೇಗಾ ಕೂಲಿ ಹೆಚ್ಚಳದ ಬೇಡಿಕೆಗೆ ಮೋದಿ ಸರ್ಕಾರ ಮಣೆ ಹಾಕಿಲ್ಲ. ಆದರೆ ಹಿಂದಿನ ಬಾರಿ ಘೋಷಿಸಿದ್ದ ರೈತರಿಗೆ ವಾರ್ಷಿಕ 6 ಸಾವಿರ ರೂ. ಸಹಾಯಧನದ ಯೋಜನೆ ಮುಂದುವರೆಸಲಾಗಿದೆ. ಆದರೆ ಈ ಸಹಾಯಧನ ಮತ್ತಷ್ಟು ಹೆಚ್ಚಳವಾಗುವ ನಿರೀಕ್ಷೆಯೂ ಹುಸಿಯಾಗಿದೆ.

ಇನ್ನು ಶೂನ್ಯ ಬಂಡವಾಳ ಕೃಷಿಗೆ ಹೆಚ್ಚಿನ ಆದ್ಯತೆ ನೀಡಲಾಗಿದ್ದು, ಕೃಷಿ ಆಧಾರಿತ ಕೈಗಾರಿಕೆಗಳಲ್ಲಿ ಖಾಸಗಿ ಹೂಡಿಕೆಗೆ ಸರ್ಕಾರ ಮುಂದಾಗಿದೆ. ಕೃಷಿಕರಿಗೆ ಸೂಕ್ತ ಬೆಲೆ ಮತ್ತು ಮಾರತುಕಟ್ಟೆ ವ್ಯವಸ್ಥೆಗೆ 10 ಸಾವಿರ ಹೊಸ ಕೃಷಿಕರ ಸಂಘ ಸ್ಥಾಪಿಸಲು ನಿರ್ಧರಿಸಲಾಗಿದೆ.