ನವದೆಹಲಿ[ಜೂ.23]: ಮತ್ತೊಂದು ಅವಧಿಗೆ ಪುನರಾಯ್ಕೆಯಾಗಿರುವ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ಮೊದಲ ಬಜೆಟ್‌ ಜು.5ಕ್ಕೆ ಮಂಡನೆಯಾಗಲಿರುವ ಹಿನ್ನೆಲೆಯಲ್ಲಿ ಆಯವ್ಯಯ ಪ್ರತಿಗಳ ಮುದ್ರಣ ಕಾರ್ಯಕ್ಕೆ ಶನಿವಾರ ಚಾಲನೆ ನೀಡಲಾಗಿದೆ.

ಬಜೆಟ್‌ ತಯಾರಿ ಮುಗಿದ ಹಿನ್ನೆಲೆಯಲ್ಲಿ ಹಣಕಾಸು ಸಚಿವಾಲಯದಲ್ಲಿ ಶನಿವಾರ ಮಧ್ಯಾಹ್ನ ಹಲ್ವಾ ಸಮಾರಂಭ ನಡೆಯಿತು. ದೊಡ್ಡ ಕಡಾಯಿಯಲ್ಲಿ ತಯಾರಿಸಲಾದ ಹಲ್ವಾವನ್ನು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಹಾಗೂ ರಾಜ್ಯ ಸಚಿವ ಅನುರಾಗ್‌ ಠಾಕೂರ್‌ ಅವರು ಬಜೆಟ್‌ ತಯಾರಿಸಲು ಶ್ರಮಿಸಿದ ಅಧಿಕಾರಿಗಳು, ಸಿಬ್ಬಂದಿಗೆ ಹಂಚಿದರು.

ಹಣಕಾಸು ಸಚಿವಾಲಯದ ಕೆಳ ಅಂತಸ್ತಿನಲ್ಲಿ ಮುದ್ರಣಾಲಯ ಇದೆ. ಬಜೆಟ್‌ ಮಂಡನೆಗೆ ಕೆಲವು ದಿನಗಳ ಮೊದಲೇ ಅಲ್ಲಿ ಆಯವ್ಯಯ ಪ್ರತಿಗಳ ಮುದ್ರಣ ಕಾರ್ಯ ಆರಂಭವಾಗುತ್ತದೆ. ಬಜೆಟ್‌ ತಯಾರಿಯಲ್ಲಿ ಸುಮಾರು 100 ಅಧಿಕಾರಿಗಳು, ಸಿಬ್ಬಂದಿ ಭಾಗಿಯಾಗಿರುತ್ತಾರೆ. ಬಜೆಟ್‌ ಮಂಡನೆಯಾಗುವವರೆಗೂ ಈ ಸಿಬ್ಬಂದಿ ತಮ್ಮ ಮನೆಗೆ ಹೋಗುವಂತಿಲ್ಲ. ಕುಟುಂಬದ ಜತೆಗೆ ಫೋನ್‌ ಇರಲಿ, ಇ-ಮೇಲ್‌ನಲ್ಲೂ ಸಂಪರ್ಕ ಇಟ್ಟುಕೊಳ್ಳುವಂತಿಲ್ಲ. ಕೇವಲ ಹಿರಿಯ ಅಧಿಕಾರಿಗಳಿಗೆ ಮಾತ್ರ ಮನೆಗೆ ಹೋಗಲು ಅವಕಾಶವಿರುತ್ತದೆ. ಉಳಿದವರು ಹಣಕಾಸು ಸಚಿವಾಲಯದಲ್ಲೇ ತಂಗಬೇಕಾಗುತ್ತದೆ. ಇದಕ್ಕೆ ಬೇಕಾದ ವ್ಯವಸ್ಥೆಯನ್ನು ಅಲ್ಲಿ ಕಲ್ಪಿಸಿರಲಾಗುತ್ತದೆ.