ನವದೆಹಲಿ(ಜು.05): ಮೋದಿ 2.0 ಸರ್ಕಾರದ ಮೊದಲ ಪೂರ್ಣ ಪ್ರಮಾಣದ ಬಜೆಟ್ ಲೋಕಸಭೆಯಲ್ಲಿ ಮಂಡನೆಯಾಗುತ್ತಿದ್ದು, ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಬಜೆಟ್ ಬುತ್ತಿ ಬಿಚ್ಚಿಡುತ್ತಿದ್ದಾರೆ. ಬಜೆಟ್ ಭಾಷಣ ಆರಂಭಿಸಿರುವ ನಿರ್ಮಲಾ ಸೀತಾರಾಮನ್, ದೇಶದ ಆರ್ಥಿಕ ಅಭಿವೃದ್ಧಿಯ ನೀಲನಕ್ಷೆಯನ್ನು ಎಳೆ ಎಳೆಯಾಗಿ ಬಿಚ್ಚಿಡುತ್ತಿದ್ದಾರೆ.

ದೇಶದ ಅರ್ಥ ವ್ಯವಸ್ಥೆ ಈ ವರ್ಷ 3 ಟ್ರಿಲಿಯನ್ ಯುಎಸ್ ಡಾಲರ್‌ಗೆ ತಲುಪಲಿದ್ದು, 2024ರ ವೇಳೆಗೆ ಅರದಥ ವ್ಯವಸ್ಥೆಯನ್ನು 5 ಟ್ರಿಲಿಯನ್ ಯುಎಸ್ ಡಾಲರ್‌ಗೆ ಏರಿಸುವ ಇರಾದೆ ಹೊಂದಲಾಗಿದೆ ಎಂದು ನಿರ್ಮಲಾ ಹೇಳಿದರು.

ರಾಷ್ಟ್ರೀಯ ಬದ್ಧತೆ ಮತ್ತು ಆರ್ಥಿಕ ಅಭಿವೃದ್ಧಿ ಕೇಂದ್ರ ಸರ್ಕಾರದ ನೀತಿಯಾಗಿದ್ದು, ಅದರಂತೆ ಅರ್ಥ ವ್ಯವಸ್ಥೆ ನಿರಂತರವಾಗಿ ಅಭಿವೃದ್ಧಿಯ ಪಥದಲ್ಲಿ ಸಾಗುವಂತೆ ಮಾಡಲು ಸರ್ಕಾರ ಸಿದ್ಧವಾಗಿದೆ ಎಂದು ಹಣಕಾಸು ಸಚಿವರು ಭರವಸೆ ನೀಡಿದರು.

ದೇಶದ ಆರ್ಥಿಕ ಬೆಳವಣಿಗೆಯಲ್ಲಿ ಖಾಸಗಿ ಉದ್ದಿಮೆ ಸಂಸ್ಥೆಗಳು ಪ್ರಮುಖ ಕೊಡುಗೆ ನೀಡಿದ್ದು, ವಿಮಾನಯಾನ ಉದ್ದಿಮೆ ಕ್ಷೇತ್ರದಲ್ಲಿ ಭಾರತ ಕಾಲಿಡಲು ಕಾಲ ಪ್ರಶಸ್ತವಾಗಿದೆ ಎಂದು ನಿರ್ಮಲಾ ಅಭಿಪ್ರಾಯಪಟ್ಟರು.

ಕೇವಲ ಒಂದು ವರ್ಷದಲ್ಲಿ ದೇಶದಲ್ಲಿ 300 ಕಿ.ಮೀ ಹೊಸ ರೈಲು ಮಾರ್ಗಗಳನ್ನು ನಿರ್ಮಿಸಲಾಗಿದ್ದು, 218 ಕಿ.ಮೀ. ಉದ್ದದ ಮೆಟ್ರೋ ರೈಲು ಮಾರ್ಗವನ್ನು ಉದ್ಘಾಟಿಸಲಾಗಿದೆ ಎಂದು ಹಣಕಾಸು ಸಚಿವರು ಮಾಹಿತಿ ನೀಡಿದರು.

ಚಿಲ್ಲರೆ ವ್ಯಾಪಾರಿಗಳಿಗೆ ಈಗಾಗಲೇ ಪಿಂಚಣಿ ಯೋಜನೆಯಾದ 'ಪ್ರಧಾನಮಂತ್ರಿ ಕರ್ಮಯೋಗಿ ಮಾನ್ ಸಮ್ಮಾನ್ ಯೋಜನೆ' ಘೋಷಿಸಲಾಗಿದ್ದು, ಇದರಿಂದ ದೇಶದ ಸುಮಾರು 3 ಕೋಟಿ ಚಿಲ್ಲರೆ ವ್ಯಾಪಾರಿಗಳು ಲಾಭ ಪಡೆಯಲಿದ್ದಾರೆ ಎಂದು ಚಿತ್ತ ಸಚಿವೆ ಘೋಷಿಸಿದರು.