ನವದೆಹಲಿ(ಜು.05): ಮೋದಿ 2.0 ಸರ್ಕಾರದ ಮೊದಲ ಪೂರ್ಣ ಪ್ರಮಾಣದ ಬಜೆಟ್ ಲೋಕಸಭೆಯಲ್ಲಿ ಮಂಡನೆಯಾಗುತ್ತಿದ್ದು, ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಬಜೆಟ್ ಬುತ್ತಿ ಬಿಚ್ಚಿಡುತ್ತಿದ್ದಾರೆ. ಬಜೆಟ್ ಭಾಷಣ ಆರಂಭಿಸಿರುವ ನಿರ್ಮಲಾ ಸೀತಾರಾಮನ್, ದೇಶದ ಆರ್ಥಿಕ ಅಭಿವೃದ್ಧಿಯ ನೀಲನಕ್ಷೆಯನ್ನು ಎಳೆ ಎಳೆಯಾಗಿ ಬಿಚ್ಚಿಡುತ್ತಿದ್ದಾರೆ.

ದೇಶದ ಸುಮಾರು ಶೇ.97ರಷ್ಟು ಗ್ರಾಮಗಳಿಗೆ ಸರ್ವಋತು ಸಾರಿಗೆ ನೀತಿಯಡಿ ರಸ್ತೆ ನಿರ್ಮಾಣ ಕಾರ್ಯಕ್ಕೆ ಚಾಲನೆ ನೀಡಲಾಗಿದ್ದು, ಮುಂದಿನ ಐದು ವರ್ಷದಲ್ಲಿ  1 ಲಕ್ಷ, 25 ಸಾವಿರ ಕಿ.ಮೀ ರಸ್ತೆ ನಿರ್ಮಾಣ ಪೂರ್ಣಗೊಳಿಸಲಾಗುವುದು ಎಂದು ಹಣಕಸು ಸಚಿವೆ ಸ್ಪಷ್ಟಪಡಿಸಿದರು.

ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಹೆಚ್ಚುವರಿ 24 ಸಾವಿರ ಕೋಟಿ ರೂ. ಘೋಷಿಸಿರುವ ನಿರ್ಮಲಾ ಸೀತಾರಾಮನ್, ದೇಶದ ಮೂಲೆ ಮೂಲೆಗೂ ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಕೇಂದ್ರ ಸರ್ಕಾರದ ಕನಸು ಎಂದು ಹೇಳಿದರು.

ಇದೇ ವೇಳೆ ರೈಲು ಮೂಲ ಸೌಕರ್ಯ ಅಭಿವೃದ್ಧಿಗೆ 50 ಲಕ್ಷ ಕೋಟಿ ರೂ. ಅಗತ್ಯವಿದ್ದು, ಸಾರ್ವಜನಿಕ ಮತ್ತು ಖಾಸಗಿ ಸಹಭಾಗಿತ್ವದಲ್ಲಿ ಈ ಗುರಿಯನ್ನು ತಲುಪಲಾಗುವುದು ಎಂದು ನಿರ್ಮಳಾ ಸೀತಾರಾಮನ್ ಸದನಕ್ಕೆ ಮಾಹಿತಿ ನೀಡಿದರು.

ಉಡಾನ್ ಯೋಜನೆಯ ಮೂಲಕ ದೇಶದ ಎರಡು ಮತ್ತು ಮೂರನೇ ದರ್ಜೆಯ ನಗರಗಳಿಗೆ ವಿಮಾನಯಾನ ಸೇವೆ ಕಲ್ಪಿಸಲು ಸರ್ಕಾರ ಸಂಕಲ್ಪ ಬದ್ಧವಾಗಿದ್ದು, ಭೂ, ಜಲ ಜಲ ಹಾಗೂ ವಾಯುಸಾರಿಗೆಯ ಸಮಗ್ರ ಅಭಿವೃದ್ಧಿಗೆ ಒತ್ತು ನೀಡಲಾಗುವುದು ಎಂದು ಸಚಿವರು ಘೋಷಿಸಿದರು.