* ಆದಾಯ ತೆರಿಗೆ ವಿನಾಯ್ತಿ ಮಿತಿ ಹೆಚ್ಚಳ

ಈ ವರ್ಷದ ಆರಂಭದಲ್ಲಿ ಹಿಂದಿನ ಕೇಂದ್ರ ಹಣಕಾಸು ಖಾತೆಯ ಪ್ರಭಾರಿ ಸಚಿವರಾಗಿದ್ದ ಪಿಯೂಷ್‌ ಗೋಯಲ… ಮಧ್ಯಂತರ ಬಜೆಟ್‌ ಮಂಡಿಸಿದ್ದರು. ಆಗ ವೈಯಕ್ತಿಕ ತೆರಿಗೆ ಸ್ಲಾ್ಯಬ್‌ಗಳಲ್ಲಿ ಮಾರ್ಪಾಟು ಮಾಡದೆಯೇ 5 ಲಕ್ಷ ರು.ವರೆಗಿನ ಆದಾಯಕ್ಕೆ ತೆರಿಗೆ ರಿಬೇಟ್‌ ನೀಡಿದ್ದರು. ಅಂದರೆ 5 ಲಕ್ಷ ರು.ವರೆಗೆ ವಾರ್ಷಿಕ ಆದಾಯವಿದ್ದವರು ತೆರಿಗೆ ಪಾವತಿಸುವ ಅಗತ್ಯವಿರಲಿಲ್ಲ. ಆದರೆ, ತೆರಿಗೆ ವಿನಾಯ್ತಿ ಮಿತಿ 2.5 ಲಕ್ಷ ರುಪಾಯಿಯೇ ಇತ್ತು. ಅದನ್ನು ಈ ಬಾರಿ 3 ಲಕ್ಷ ರು.ಗಾದರೂ ಏರಿಸಬೇಕು ಎಂಬ ಕೂಗಿದೆ. ಜೊತೆಗೆ, ಈ ಬಜೆಟ್‌ನಲ್ಲಿ ತೆರಿಗೆ ರಿಬೇಟ್‌ ಅನ್ನು 5 ಲಕ್ಷಕ್ಕಿಂತ ಹೆಚ್ಚಿಸಬೇಕೆಂಬ ನಿರೀಕ್ಷೆಯೂ ಇದೆ.

* ಎನ್‌ಪಿಎಸ್‌ ವಿತ್‌ಡ್ರಾ ತೆರಿಗೆ ವಿನಾಯ್ತಿ

ರಾಷ್ಟ್ರೀಯ ಪಿಂಚಣಿ ಯೋಜನೆ (ಎನ್‌ಪಿಎಸ್‌)ಯಿಂದ ಹಣ ಹಿಂಪಡೆಯುವಾಗ ಅದಕ್ಕೆ ಭಾಗಶಃ ತೆರಿಗೆ ಪಾವತಿಸಬೇಕಾಗುತ್ತದೆ. ಎನ್‌ಪಿಎಸ್‌ ಸದಸ್ಯರು ತಮಗೆ 60 ವರ್ಷ ವಯಸ್ಸಾದ ನಂತರ ಎನ್‌ಪಿಎಸ್‌ ಖಾತೆಯಲ್ಲಿ ಜಮೆಯಾಗಿರುವ ಶೇ.60ರಷ್ಟುಮೊತ್ತವನ್ನು ಹಿಂಪಡೆಯಬಹುದು. ಇದರಲ್ಲಿ ಶೇ.40 ಮೊತ್ತಕ್ಕೆ ತೆರಿಗೆ ವಿನಾಯ್ತಿ ಇದ್ದು, ಶೇ.20ಕ್ಕೆ ತೆರಿಗೆ ಕಟ್ಟಬೇಕಾಗುತ್ತದೆ. ಹಾಗೆಯೇ ಇನ್ನುಳಿದ ಶೇ.40ರಷ್ಟುಮೊತ್ತವನ್ನು ಮಾಸಿಕ ಪಿಂಚಣಿ ಪಡೆಯುವ ಸಲುವಾಗಿ ಖಾತೆಯಲ್ಲಿ ಹಾಗೆಯೇ ಉಳಿಸಿಕೊಳ್ಳಬೇಕಾಗುತ್ತದೆ. ಆದರೆ ಈಗ ಹಿಂಪಡೆಯಬಹುದಾದ ಸಂಪೂರ್ಣ ಶೇ.60ರಷ್ಟುಮೊತ್ತಕ್ಕೆ ತೆರಿಗೆ ವಿನಾಯ್ತಿ ನೀಡುವ ಪ್ರಸ್ತಾವನೆ ಸರ್ಕಾರದ ಮುಂದಿದ್ದು, ಇಂಥದೊಂದು ಘೋಷಣೆ ಆಗಬಹುದು ಎಂಬ ನಿರೀಕ್ಷೆ ಇದೆ.

* 80ಸಿ ವಿನಾಯ್ತಿ ಮಿತಿ ಹೆಚ್ಚಳ

ಪ್ರಸ್ತುತ ಆದಾಯ ತೆರಿಗೆ ಕಾಯ್ದೆಯ 80ಸಿ ಅಡಿ 1.5 ಲಕ್ಷ ರು.ಗೆ ತೆರಿಗೆ ವಿನಾಯ್ತಿ ಇದೆ. ಇದನ್ನು 2 ಲಕ್ಷ ರು.ಗೆ ಹೆಚ್ಚಿಸುವ ಪ್ರಸ್ತಾವನೆ ಸರ್ಕಾರದ ಮುಂದಿದೆ. ತೆರಿಗೆದಾತರ ಹಲವಾರು ರೀತಿಯ ಪಾವತಿಗಳಾದ ಮಕ್ಕಳ ಟ್ಯೂಶನ್‌ ಫೀ, ಹೂಡಿಕೆಗಳು ಮತ್ತು ಗೃಹ ಸಾಲ ಮರುಪಾವತಿ, ನಿವೃತ್ತಿ ಜೀವನಕ್ಕೆ ಸಹಾಯಕವಾಗುವ ಹೂಡಿಕೆಗಳು ಹೀಗೆ ಹಲವಾರು ಪಾವತಿಗಳಿಗೆ 80ಸಿ ಅಡಿ 1.5 ಲಕ್ಷ ರು.ವರೆಗೆ ತೆರಿಗೆ ವಿನಾಯ್ತಿ ಸಿಗುತ್ತದೆ. ಇದನ್ನು ಈ ಬಾರಿ ಬಜೆಟ್‌ನಲ್ಲಿ ಕನಿಷ್ಠ 2 ಲಕ್ಷದವರೆಗೆ ಹೆಚ್ಚಿಸುವ ನಿರೀಕ್ಷೆಯಿದೆ.

* ಕೃಷಿ ಮತ್ತು ಸುಸ್ಥಿರ ನೀರಾವರಿಗೆ ಆದ್ಯತೆ

ಕೃಷಿ ದೇಶದ ಬೆನ್ನುಲುಬು. ಈ ಕ್ಷೇತ್ರದಲ್ಲಿ ಉದ್ಯೋಗ ಸೃಷ್ಟಿಯಾದಲ್ಲಿ ಹಾಗೂ ರೈತರ ಆದಾಯ ದ್ವಿಗುಣಗೊಂಡಲ್ಲಿ ದೇಶದ ಹಲವು ಸಮಸ್ಯೆಗಳು ಬಗೆಹರಿದಂತೆ. ಈ ಹಿಂದಿನ ಮಧ್ಯಂತರ ಬಜೆಟ್‌ನಲ್ಲಿ ಕೇಂದ್ರ ಸರ್ಕಾರ ಕೃಷಿ ಸಮ್ಮಾನ್‌ ಯೋಜನೆ ಪ್ರಕಟಿಸಿ, ರೈತರಿಗೆ ವರ್ಷಕ್ಕೆ 6000 ರು. ನೀಡುವ ಯೋಜನೆಯನ್ನು ಘೋಷಿಸಿತ್ತು. ಆದರೆ ಇದರಿಂದ ರೈತರ ಜೀವನ ಸುಧಾರಿಸಲು ಸಾಧ್ಯವಿಲ್ಲ. ಜೊತೆಗೆ ಈ ಬಾರಿ ಮುಂಗಾರು ಹಿನ್ನಡೆಯಾಗಿದೆ. ಸಾಲ ಮಾಡಿರುವ ರೈತರು ಆತ್ಮಹತ್ಯೆಗೆ ಮುಂದಾಗುತ್ತಿದ್ದಾರೆ. ಮಧ್ಯವರ್ತಿಗಳ ಹಾವಳಿಯಿಂದಾಗಿ ತಾವು ಬೆಳೆದ ಬೆಳೆಯ ಲಾಭ ರೈತರಿಗೆ ಸಿಗುತ್ತಿಲ್ಲ. ಬೆಳೆಯ ಶೇಖರಣೆಗೆ ಸರಿಯಾದ ವ್ಯವಸ್ಥೆ ಇಲ್ಲದ ಕಾರಣ ಬೆಳೆ ಹಾಳಾಗುತ್ತಿದೆ. ಜೊತೆಗೆ ದೇಶದ ಹಲವು ಭಾಗಗಳಲ್ಲಿ ಈಗ ಆಹಾರಕ್ಕೆ ಕೊರತೆ ಇದೆ. ಮತ್ತೊಂದೆಡೆ ಬರ ಕಾಣಿಸಿಕೊಂಡಿದೆ. ಇಂದಿಗೂ ದೇಶದ 50% ಕೃಷಿ ಮಳೆಯೊಂದಿಗೆ ಆಡುವ ಜೂಜಾಗಿದೆ.

ಈ ಬಾರಿ ಇಲ್ಲಿಯವರೆಗೆ 36% ಮಳೆ ಕೊರತೆಯಾಗಿದೆ ಎಂದು ವರದಿಗಳು ಹೇಳುತ್ತಿವೆ. ಇತ್ತ ಮಹಾನಗರಗಳಲ್ಲಿ ಕುಡಿಯುವ ನೀರಿಗೂ ವ್ಯಥೆ ಪಡುವ ಸ್ಥಿತಿ ಬಂದೊದಗಿದೆ. ಹಾಗಾಗಿ ನೀರಾವರಿ ಮತ್ತು ನೀರು ನಿರ್ವಹಣೆಯ ಬಗ್ಗೆ ಕ್ರಮ ಕೈಗೊಳ್ಳಲೇಬೇಕಾದ ತುರ್ತು ಇದೆ. ಪ್ರಧಾನಿ ನರೇಂದ್ರ ಮೋದಿ ಅವರೂ ಕೂಡ ‘ಜಲಶಕ್ತಿಗಾಗಿ ಜನಶಕ್ತಿ’ ಎಂದು ತಮ್ಮ ಮನ್‌ ಕೀ ಬಾತ್‌ನಲ್ಲಿ ಕರೆ ನೀಡಿದ್ದಾರೆ. ಹಾಗಾಗಿ ಸುಸ್ಥಿರ ನೀರಾವರಿ ಯೋಜನೆಗಳು ಪ್ರಕಟವಾಗುವ ಸಾಧ್ಯತೆ ಇದೆ. ರೈತರ ಆದಾಯವನ್ನು ದ್ವಿಗುಣಗೊಳಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಅನುದಾನ ಘೋಷಿಸಬಹುದು ಎಂಬ ನಿರೀಕ್ಷೆಯೂ ಇದೆ.

* ಶಿಕ್ಷಣ ಕೇತ್ರಕ್ಕೆ ಸಿಂಹಪಾಲು?

ದೇಶೀಯ ಜಿಡಿಪಿಯಲ್ಲಿ ಇದುವರೆಗೆ ಶಿಕ್ಷಣ ಕ್ಷೇತ್ರಕ್ಕೆ ಬಳಕೆಯಾಗುತ್ತಿರುವ ಪಾಲು (ರಾಜ್ಯ ಸರ್ಕಾರಗಳು ಮತ್ತು ಕೇಂದ್ರದ ಅನುದಾನ ಸೇರಿ) ಶೇ.3ರಷ್ಟುಮಾತ್ರ. ಶಿಕ್ಷಣ ಕ್ಷೇತ್ರಕ್ಕೆ ಜಗತ್ತಿನ ಬಹುತೇಕ ದೇಶಗಳು ಸರಾಸರಿ ಶೇ.4.7ರಷ್ಟುಜಿಡಿಪಿಯ ಹಣ ವೆಚ್ಚ ಮಾಡುತ್ತಿವೆ. ಭಾರತದಲ್ಲೂ ಇದನ್ನು ಏರಿಸಬೇಕೆಂಬ ಕೂಗಿದೆ. ಹೀಗಾಗಿ ಈ ಬಾರಿ ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚಿನ ಅನುದಾನ ದೊರೆಯಬಹುದು ಎಂಬ ನೀರಿಕ್ಷೆ ಇದೆ. ಎನ್‌ಡಿಎ ಸರ್ಕಾರ ಎರಡನೇ ಬಾರಿ ಅಧಿಕಾರಕ್ಕೆ ಬರುತ್ತಿದ್ದಂತೆಯೇ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಕೈಗೆತ್ತಿಕೊಂಡಿದೆ. ಅದರಲ್ಲಿ ಹಿಂದಿ ಹೇರಿಕೆಯಂತಹ ವಿವಾದಾತ್ಮಕ ಅಂಶಗಳ ಹೊರತಾಗಿಯೂ, ಶಿಕ್ಷಣ ಕ್ಷೇತ್ರದ ಆಮೂಲಾಗ್ರ ಬದಲಾವಣೆಗೆ ಅಗತ್ಯವಿರುವ ಹಲವಾರು ಅಂಶಗಳನ್ನು ಶಿಫಾರಸು ಮಾಡಲಾಗಿದೆ. ಅದರಲ್ಲಿ ಕೇಂದ್ರದ ಯೋಜನಾ ವೆಚ್ಚದ ಶೇ.20ರಷ್ಟನ್ನು ಶಿಕ್ಷಣಕ್ಕೆ ಮೀಸಲಿಡಬೇಕೆಂಬ ಶಿಫಾರಸು ಇದೆ.

ಆದರೆ ಸದ್ಯ ಶೇ.10ರಷ್ಟನ್ನು ಮಾತ್ರ ಶಿಕ್ಷಣಕ್ಕೆ ವಿನಿಯೋಗಿಸಲಾಗುತ್ತಿದೆ. ದೆಹಲಿಯಲ್ಲಿ ಅರವಿಂದ್‌ ಕೇಜ್ರಿವಾಲ್‌ ನೇತೃತ್ವದ ಆಪ್‌ ಸರ್ಕಾರ ಶಿಕ್ಷಣಕ್ಕೆ ತನ್ನ ಬಜೆಟ್‌ನಲ್ಲಿ ದೊಡ್ಡ ಪ್ರಮಾಣದಲ್ಲಿ ಹಣ ನೀಡಿ ಶಿಕ್ಷಣ ಕ್ಷೇತ್ರದ ಸುಧಾರಣೆಗೆ ಸಾಕಷ್ಟುಪ್ರಯತ್ನ ಪಡುತ್ತಿದ್ದು, ದೇಶದ ಜನರಿಂದ ಪ್ರಶಂಸೆಗೆ ಒಳಗಾಗಿದೆ. ಆದರೆ ದೆಹಲಿಯ ಹೊರಗೆ ದೇಶದ ಬಹುತೇಕ ಸರ್ಕಾರಿ ಶಾಲಾ ಕಾಲೇಜುಗಳ ಸ್ಥಿತಿ ಶೋಚನೀಯವಾಗಿದೆ. ಈ ನಿಟ್ಟಿನಲ್ಲಿ ಶಿಕ್ಷಣಕ್ಕೆ ರಾಜ್ಯ ಸರ್ಕಾರದ ಜೊತೆಗೆ ಕೇಂದ್ರ ಸರ್ಕಾರವೂ ಕೈಜೋಡಿಸಿ ಹೆಚ್ಚಿನ ಅನುದಾನ ನೀಡಬೇಕಾದ ಅಗತ್ಯವಿದೆ.

* ಆರೋಗ್ಯ ಕ್ಷೇತ್ರಕ್ಕೆ ಹೆಚ್ಚು ಹಣ?

ಬೇಸಿಗೆಯಲ್ಲಿ ಉತ್ತರದ ರಾಜ್ಯಗಳಲ್ಲಿ ಕಾಣಿಸಿಕೊಳ್ಳುವ ಎನ್ಸೆಫಲಿಟೀಸ್‌ ಅಥವಾ ಮೆದುಳು ಜ್ವರಕ್ಕೆ 150ಕ್ಕೂ ಹೆಚ್ಚು ಮಕ್ಕಳು ಬಲಿಯಾಗಿದ್ದಾರೆ. ಇದಕ್ಕೆ ಮುಖ್ಯ ಕಾರಣ ಬಿಹಾರದ ಆಸ್ಪತ್ರೆಗಳಲ್ಲಿನ ಅವ್ಯವಸ್ಥೆ. ಕೇಂದ್ರ ಸರ್ಕಾರ ಆರೋಗ್ಯ ಕ್ಷೇತ್ರ ಸುಧಾರಣೆಗೆ ‘ಮೋದಿ ಕೇರ್‌’ ಯೋಜನೆಯನ್ನು ಪ್ರಕಟಿಸಿದ್ದರೂ ನಿರೀಕ್ಷಿತ ಮಟ್ಟದಲ್ಲಿ ಅನುಷ್ಠಾನಗೊಂಡಿಲ್ಲ. ಇದುವರೆಗೆ ಜಿಡಿಪಿಯ ಶೇ.1.5ರಷ್ಟುಹಣವನ್ನು ಮಾತ್ರ ಆರೋಗ್ಯ ಕ್ಷೇತ್ರಕ್ಕೆ ಮೀಸಲಿಡಲಾಗುತ್ತಿದೆ. ಆರೋಗ್ಯ ಕ್ಷೇತ್ರದ ಸುಧಾರಣೆಗೆ ತಕ್ಕಂತೆ ಬಂಡವಾಳ ಹೂಡಿಕೆ ಆಗುತ್ತಿಲ್ಲ. ಹಾಗಾಗಿ ಈ ಬಜೆಟ್‌ನಲ್ಲಿ ಕೇಂದ್ರ ಸರ್ಕಾರ ಆರೋಗ್ಯ ಕ್ಷೇತ್ರದ ಸುಧಾರಣೆಗೆ ಹೆಚ್ಚು ಹಣ ಮೀಸಲಿಡಬೇಕೆಂಬ ಬೇಡಿಕೆ ಇದೆ.

* ಬಿಎಸ್‌ಎನ್‌ಎಲ್‌ಗೆ ಬೇಕು ಸಂಜೀವಿನಿ

ಭಾರತ ಸಂಚಾರ ನಿಗಮ ನಿಯಮಿತ (ಬಿಎಸ್‌ಎನ್‌ಎಲ್‌) ಭಾರತೀಯ ಸರ್ಕಾರಿ ಸ್ವಾಮ್ಯದ ದೂರಸಂಪರ್ಕ ವ್ಯವಸ್ಥೆ. ಸದ್ಯ ಈ ಸಂಸ್ಥೆ ತೀವ್ರ ಆರ್ಥಿಕ ಸಂಕಷ್ಟದಲ್ಲಿದೆ. ನಷ್ಟದ ಜೊತೆಗೆ ಜಿಯೋದಂತಹ ಖಾಸಗಿ ದೂರಸಂಪರ್ಕ ಕಂಪನಿಗಳಿಂದ ತೀವ್ರ ಪೈಪೋಟಿ ಎದುರಿಸುತ್ತಿದೆ. ದೇಶದಲ್ಲಿರುವ 20 ದೂರಸಂಪರ್ಕ ವೃತ್ತಗಳಲ್ಲಿನ ನೌಕರರಿಗೆ ವೇತನ ನೀಡಲು ಬಿಎಸ್‌ಎನ್‌ಎಲ್‌ಗೆ ಪ್ರತಿ ತಿಂಗಳು 1200 ಕೋಟಿ ರು. ಬೇಕಾಗುತ್ತದೆ. ಸಂಸ್ಥೆಯ ಆದಾಯದ ಶೇ.55 ಭಾಗ ನೌಕರರ ಸಂಬಳಕ್ಕೆ ಹೋಗುತ್ತದೆ. ಪ್ರತಿ ವರ್ಷ ವೇತನದ ಖರ್ಚು ಶೇ.8ರಷ್ಟುಹೆಚ್ಚಾಗುತ್ತಿದ್ದು, ಆದಾಯ ಮಾತ್ರ ಹೆಚ್ಚುತ್ತಿಲ್ಲ. ಹೀಗಾಗಿ ಬಿಎಸ್‌ಎನ್‌ಎಲ್‌ ನಷ್ಟಕ್ಕೆ ಸಿಲುಕಿದೆ. ಸರ್ಕಾರಿ ಸ್ವಾಮ್ಯದ ಈ ಸಂಸ್ಥೆಯು ಮುಚ್ಚುವ ಹಂತಕ್ಕೆ ತಲುಪಿದೆ. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಬಜೆಟ್‌ನಲ್ಲಿ ಏನು ಮಾಡುತ್ತದೆ ಎಂಬ ಬಗ್ಗೆ ಕುತೂಹಲವಿದೆ.

* ವಾಹನಗಳ ಮೇಲಿನ ಜಿಎಸ್ಟಿಇಳಿಕೆ

ಇತ್ತೀಚೆಗೆ ದೇಶದ ವಾಹನ ತಯಾರಿಕಾ ಉದ್ಯಮವು ತೀವ್ರ ಸಂಕಷ್ಟಕ್ಕೆ ಸಿಲುಕಿದೆ. 2018ರ ಜೂನ್‌ನಿಂದ 2018 ಮೇ ವರೆಗೆ ಮಾರಾಟದಲ್ಲಿ ಇಳಿಕೆಯಾಗಿದೆ. ನಗದು ಕೊರತೆ, ಮುಂಗಾರಿನ ಹಿನ್ನಡೆ, ವಾಹನಗಳ ಬೆಲೆ ಏರಿಕೆ ಮತ್ತು ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ವಾಹನಗಳ ಮಾರಾಟ ಕುಂಟುತ್ತಾ ಸಾಗುತ್ತಿದೆ. ಜೊತೆಗೆ ವಾಹನ ಉದ್ಯಮದ ಮೇಲಿನ ಸರಕು ಮತ್ತು ಸೇವಾ ತೆರಿಗೆಯು ಶೇ.28ರಷ್ಟಿದೆ. ಗ್ರಾಹಕರಿಗೆ ಇದು ಹೊರೆ ಎನಿಸುತ್ತಿದೆ. ಹಾಗಾಗಿ ಐಷಾರಾಮಿ ವಾಹನಗಳನ್ನು ಬಿಟ್ಟು ಉಳಿದ ವಾಹನಗಳ ಮೇಲಿನ ಜಿಎಸ್‌ಟಿಯನ್ನು ಶೇ.18ಕ್ಕೆ ಇಳಿಸಬೇಕೆಂಬ ಬೇಡಿಕೆ ಇದೆ. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ತನ್ನ ಬಜೆಟ್‌ನಲ್ಲಿ ಕ್ರಮ ಕೈಗೊಳ್ಳುತ್ತಾ ಕಾದು ನೋಡಬೇಕು.

ಬಂಪರ್‌ ಅನುದಾನದ ನಿರೀಕ್ಷೆಯಲ್ಲಿ ಕರ್ನಾಟಕ

ರೈಲ್ವೆ ವಿಚಾರದಲ್ಲಿ ಕರ್ನಾಟಕ ಅತಿ ಹೆಚ್ಚು ನಿರ್ಲಕ್ಷ್ಯಕ್ಕೆ ಒಳಗಾಗಿದೆ. ಕರ್ನಾಟಕದಿಂದ ರಾಜ್ಯಸಭೆಗೆ ಆಯ್ಕೆಯಾಗಿರುವ ನಿರ್ಮಲಾ ಸೀತಾರಾಮನ್‌, ಕೇಂದ್ರದಲ್ಲಿ ಪ್ರಭಾವಿ ಖಾತೆಯಾಗಿರುವ ಹಣಕಾಸು ಖಾತೆಯ ಸಚಿವೆಯಾಗಿದ್ದಾರೆ. ಜೊತೆಗೆ ಬೆಳಗಾವಿ ಸಂಸದ ಸುರೇಶ್‌ ಅಂಗಡಿ ರೈಲ್ವೆ ಖಾತೆಯ ರಾಜ್ಯ ಸಚಿವರು. ಹಾಗಾಗಿ ರೈಲ್ವೆಯಲ್ಲಿ ರಾಜ್ಯಕ್ಕೆ ಬಂಪರ್‌ ಅನುದಾನ ಲಭಿಸಬಹುದು ಎಂಬ ನಿರೀಕ್ಷೆಗಳಿವೆ. ಹೊಸ ಯೋಜನೆಗಳನ್ನು ಪ್ರಕಟಿಸುವುದಕ್ಕಿಂತ ಈಗಾಗಲೇ ಪ್ರಕಟಿಸಿರುವ ಬಹಳ ವರ್ಷಗಳಿಂದ ಬಾಕಿ ಉಳಿದಿರುವ ಕಾಮಗಾರಿಗಳಿಗೆ ಆದ್ಯತೆ ನೀಡಲಾಗುತ್ತದೆ ಎಂಬ ನಿರೀಕ್ಷೆ ಹೆಚ್ಚಾಗಿದೆ. ಅಲ್ಲದೆ ಈ ಬಾರಿ ಕರ್ನಾಟಕದಿಂದ 25 ಸೀಟುಗಳನ್ನು ಬಿಜೆಪಿ ಗೆದ್ದಿದೆ. ಈ ಕಾರಣಕ್ಕಾಗಿಯಾದರೂ ರಾಜ್ಯಕ್ಕೆ ಹೆಚ್ಚು ಅನುದಾನ ಲಭಿಸಬಹುದೆಂಬ ಅಂದಾಜಿದೆ.