ಗ್ರಾಮಸ್ಥರಿಗೆ ಕುತ್ತು ತಂದಿರುವ ಕೆ.ಸಿ. ವ್ಯಾಲಿ ಯೋಜನೆ..! ಕೊಳಕು ನೀರಿನಿಂದ ಲಕ್ಷ್ಮಿ ಸಾಗರ ಗ್ರಾಮದಲ್ಲಿ ದುರ್ನಾತ !
ಆ ಗ್ರಾಮದಲ್ಲಿ ನರಕ ಸದೃಶ ವಾತಾವರಣ. ವಿಶಕಾರಿ ನೀರನ್ನೇ ಕುಡಿಯಬೇಕು.ಮೂಗು ಮುಚ್ಚಿಕೊಂಡೇ ಓಡಾಡಬೇಕು.ಬೆಂಗಳೂರಿಗರ ತ್ಯಾಜ್ಯವನ್ನ ಅವರು ಬಳಸಬೇಕು.ಇದು ದುಃಖಕರವಾದರೂ ಕೂಡ ಸತ್ಯ. ಹಾಗಾದ್ರೆ ಏನು ಆ ಗ್ರಾಮದ ಸಮಸ್ಯೆ ಎಂದು ಕೊಂಡ್ರ ಇಲ್ಲಿದೆ ನೋಡಿ ಒಂದು ವರದಿ.
ಇದು ಕೋಲಾರ ಜಿಲ್ಲೆಯ ಲಕ್ಷ್ಮಿ ಸಾಗರ ಗ್ರಾಮ. ಈ ಗ್ರಾಮಕ್ಕೆ ಹೊಂದಿಕೊಂಡೇ ಕೆರೆಯಿದೆ. ಊರಿನ ಜಲದಾಹ ನೀಗಿಸಿ, ಆಸರೆಯಾಗಬೇಕಿದ್ದ ಇದೇ ಕೆರೆ ಈಗ ಊರ ನೆಮ್ಮದಿಯನ್ನೇ ಕೆಡಿಸಿದೆ. ಹೂದು ಕೆರೆಯ ಗಬ್ಬು ವಾಸನೆ ಗ್ರಾಮದ ಜನರ ನಿದ್ದೆಗೆಡಿಸಿದೆ. ಕೋಲಾರ(kolar) ಜಿಲ್ಲೆಯ ಕೆರೆಗಳಿಗೆ ನೀರು ತುಂಬಿಸುವ ಯೋಜನೆಯಾದ ಕೆಸಿ ವ್ಯಾಲಿ(KC Valley) ಈ ಗ್ರಾಮಕ್ಕೆ ಶಾಪವಾಗಿ ಪರಿಣಮಿಸಿದೆ. ಬೆಂಗಳೂರು(Bengaluru) ನಗರದ ಹಲವಾರು ಬಡಾವಣೆಗಳ ತ್ಯಾಜ್ಯ ನೀರನ್ನು ಶುದ್ಧಿಕರಿಸಿ ಆ ನೀರನ್ನು ಪೈಪ್‌ಲೈನ್ ಗಳ ಮುಖಾಂತರ ಕೋಲಾರಕ್ಕೆ ಹರಿಸಲಾಗುತ್ತಿದೆ. ಎರಡು ಹಂತಗಳಲ್ಲಿ ಶುದ್ದೀಕರಣ ಮಾಡಿ ಕಳುಹಿಸುತ್ತಿರುವ ನೀರು ಪೈಪ್ ಮುಖಾಂತರ ನೇರವಾಗಿ ಲಕ್ಷ್ಮಿ ಸಾಗರ ಕೆರೆಗೆ ಬರುತ್ತದೆ. ಅಲ್ಲಿಂದ ಜಿಲ್ಲೆಯ ಇತರೆಡೆ ಪೂರೈಕೆ ಆಗುತ್ತೆ, ಆದರೆ ಸ್ವಚ್ಛ್ಛವಾಗಿದ್ದ ಇಲ್ಲಿಯ ಕೆರೆ ಈಗ ಕೊಳೆತು ನಾರುತ್ತಿದೆ. ಇದೇ ಎಲ್ಲಾ ಕಡೆ ಸರಬರಾಜು ಮಾಡಲಾಗ್ತಿದೆ. ಕುಡಿಯೋಕೆ, ಅಡುಗೆ ಮಾಡೋಕೆ, ಶಾಲೆಯಲ್ಲಿ ಅಡುಗೆಗೂ ಇದೇ ನೀರು ಬಳಕೆಯಾಗ್ತಿದೆ. ಕೆರೆಯಿಂದ ಬರುವ ದುರ್ನಾತದಿಂದ ಗ್ರಾಮದಲ್ಲಿ ಸರಾಗವಾಗಿ ಉಸಿರಾಡಲು ಸಹ ಸಾಧ್ಯವಾಗ್ತಿಲ್ಲ. ವಿಪರೀತ ಸೊಳ್ಳೆಗಳು ಗ್ರಾಮಸ್ಥರಲ್ಲಿ ರೋಗರುಜೀನಗಳಿಂದ ನಲುಗುವಂತೆ ಮಾಡಿವೆ. ಅಷ್ಟೇ ಏಕೆ ಇಲ್ಲಿ ಪಂಚಾಯಿತಿಯಿಂದ ಮನೆಗಳಿಗೆ ಪೂರೈಸುವ ನೀರಲ್ಲೂ ಕೂಡ ವಾಸನೆ ಇದೆ.ಇಷ್ಟೊಂದು ಸಮಸ್ಯೆಗಳ ಹೊರತಾಗಿಯೂ ಗ್ರಾಮದ ಜನ ಸಹಿಸಿಕೊಂಡು ಜೀವನ ಸಾಗಿಸುತಿದ್ದಾರೆ. ಅಧಿಕಾರಿಗಳಿಗೆ, ಜನಪ್ರತಿನಿಧಿಗಳಿಗೆ ಕಷ್ಟಗಳನ್ನು ಹೇಳಿಕೊಂಡ್ರು ಕೇಳೋರೇ ಇಲ್ಲ ಅನ್ನೋದು ಗ್ರಾಮಸ್ಥರ ಅಳಲು.ಬೆಂಗಳೂರು ನಗರದ ಹಲವು ಬಡಾವಣೆಗಳ ತ್ಯಾಜ್ಯ ನೀರು ಎರಡು ಹಂತಗಳಲ್ಲಿ ಶುದ್ದೀಕರಣ ಗೊಳಿಸಿ ಹರಿಸಲಾಗುತ್ತಿದೆ ಎಂಬುದು ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ಮಾತು.ಆದರೆ ಈ ನೀರು ಶುದ್ದೀಕರಣ ಮಾಡಿದಂತೆ ಕಾಣ್ತಿಲ್ಲ.. ನಮಗೆ ಈ ಕೊಳಕು ಬೇಡ.. ಎತ್ತಿನ ಹೊಳೆಯ ಶುದ್ದ ನೀರನ್ನು ನಮ್ಮ ಕೆರೆಗಳಿಗೆ ಹರಿಸಿ ಎಂದು ಸ್ಥಳೀಯರು ಆಗ್ರಹಿಸುತ್ತಿದ್ದಾರೆ.
ಇದನ್ನೂ ವೀಕ್ಷಿಸಿ: ಮಸೀದಿ ಕಮಾನ್ ನಿರ್ಮಾಣ ವಿಚಾರಕ್ಕೆ ಗಲಾಟೆ! ಬಿಜೆಪಿ ವಿರೋಧದ ಬಳಿಕ ಕಾಮಗಾರಿಗೆ 2 ದಿನ ತಡೆ!