Asianet Suvarna News Asianet Suvarna News

ಕಾರವಾರ: ಚಾರಣ ಪ್ರಿಯರು ಒಮ್ಮೆ ಬರಲೇಬೇಕಾದ ಜಾಗ ಭೀಮನ ಬುಗರಿ ಗುಡ್ಡ..!

ಕಾರವಾರದ (Karwar)ತೋಡೂರು ಗ್ರಾಮದಲ್ಲಿರುವ ಭೀಮನ ಬುಗರಿ ಎಂಬ ಗುಡ್ಡ. .ದಟ್ಟ ಅರಣ್ಯ ಭಾಗದಲ್ಲಿ ಸುಮಾರು 12ಕಿ.ಮೀ. ಚಾರಣ ಮಾಡಿದರೆ, ತುತ್ತತುದಿಯಲ್ಲಿ ಪ್ರಕೃತಿಯೇ ಅದೇನೋ ಮ್ಯಾಜಿಕ್ ಮಾಡಿ ಬೃಹತ್ ರಾಕ್ಷಸ ಗಾತ್ರದ ಬಂಡೆಯನ್ನು (Rock) ಬ್ಯಾಲೆನ್ಸ್‌ನಲ್ಲಿ ಇರಿಸಿದಂತೆ ಕಾಣುತ್ತದಲ್ಲದೇ, ಸುತ್ತಲೂ ಸ್ವರ್ಗದಂತೆ ಕಾಣುವ ಪ್ರಕೃತಿಯ ಅದ್ಭುತ ಸೌಂದರ್ಯ ಆಹ್ಲಾದ ನೀಡುತ್ತದೆ. 

May 14, 2022, 4:50 PM IST

ಉತ್ತರ ಕನ್ನಡ (ಮೇ.14):  ಕಾರವಾರದ (Karwar)ತೋಡೂರು ಗ್ರಾಮದಲ್ಲಿರುವ ಭೀಮನ ಬುಗರಿ ಎಂಬ ಗುಡ್ಡ. .ದಟ್ಟ ಅರಣ್ಯ ಭಾಗದಲ್ಲಿ ಸುಮಾರು 12ಕಿ.ಮೀ. ಚಾರಣ ಮಾಡಿದರೆ, ತುತ್ತತುದಿಯಲ್ಲಿ ಪ್ರಕೃತಿಯೇ ಅದೇನೋ ಮ್ಯಾಜಿಕ್ ಮಾಡಿ ಬೃಹತ್ ರಾಕ್ಷಸ ಗಾತ್ರದ ಬಂಡೆಯನ್ನು (Rock) ಬ್ಯಾಲೆನ್ಸ್‌ನಲ್ಲಿ ಇರಿಸಿದಂತೆ ಕಾಣುತ್ತದಲ್ಲದೇ, ಸುತ್ತಲೂ ಸ್ವರ್ಗದಂತೆ ಕಾಣುವ ಪ್ರಕೃತಿಯ ಅದ್ಭುತ ಸೌಂದರ್ಯ ಆಹ್ಲಾದ ನೀಡುತ್ತದೆ. 

 ಅದು ದ್ವಾಪರಯುಗದ ಕಾಲದಲ್ಲಿ ಪಾಂಡವರು ಭೇಟಿಯಿತ್ತಂತಹ ತಾಣ. ಈ ಪ್ರದೇಶದಲ್ಲಿ ಪಾಂಡವರು ಆಟವಾಡಿದ್ದಲ್ಲದೇ, ಗುಡ್ಡದ ತುತ್ತ ತುದಿಯಲ್ಲಿ ದ್ವಿತೀಯ ಪಾಂಡವ ಭೀಮ ಬೃಹತ್ ಬಂಡೆಗಲ್ಲನ್ನು ಬುಗರಿಯಂತೆ ತಿರುಗಿಸಿ ಕಲ್ಲಿನ ಮೇಲೆ ನಿಲ್ಲಿಸಿದ್ದನಂತೆ. ಸಂಪೂರ್ಣ ಅರಣ್ಯ ಪ್ರದೇಶವಾಗಿರುವ ಈ ತಾಣ ಚಾರಣ ಪ್ರಿಯರಿಗೂ (Trekking) ಯೋಗ್ಯವಾದ ಸ್ಥಳವಾಗಿದ್ದು, ಸಾಕಷ್ಟು ಚಾರಣಿಗರು ಈ ಸ್ಥಳಕ್ಕೆ ಭೇಟಿ ನೀಡುತ್ತಾರೆ.

ಪಾರ್ಶ್ವವಾಯುವಿಗೆ ಆಯುರ್ವೇದ ರಾಮಬಾಣ, 200 ವರ್ಷಗಳಿಂದ ಚಿಕಿತ್ಸೆ ನೀಡುತ್ತಿರುವ ಕುಟುಂಬ!

ಇಂತಹ ಪ್ರದೇಶಕ್ಕೆ ಕಾರವಾರದ ಕರಾವಳಿ ದೋಣಿ ವಿಹಾರ ಮತ್ತು ಸಾಹಸ ಕೇಂದ್ರದ ನೇತೃತ್ವದಲ್ಲಿ ಈ ಹಿಂದೆ ಪ್ರತೀ ವರ್ಷ ನಾಲ್ಕೈದು ಬಾರಿ ಚಾರಣ ಕೈಗೊಳ್ಳುವುದರ ಮೂಲಕ ಸಾಹಸಪ್ರಿಯರಿಗೆ ಅನುಕೂಲ ಮಾಡಿಕೊಳ್ಳಲಾಗುತ್ತಿತ್ತು. ಹೀಗಾಗಿ ಕಳೆದ ಕೆಲವು ವರ್ಷಗಳಿಂದ ಸಾಹಸ ಪ್ರಿಯರು ಇಲ್ಲಿಗೆ ಹೋಗಿ ಬರುತ್ತಿದ್ದರು. ಈ ಬಾರಿ ಕರಾವಳಿ ದೋಣಿ ವಿಹಾರ ಮತ್ತು ಸಾಹಸ ಕೇಂದ್ರದ ವಿಶೇಷವಾಗಿ ಮಕ್ಕಳಿಗಾಗಿ ಚಾರಣ ಹಮ್ಮಿಕೊಳ್ಳಲಾಗಿದ್ದು, ಚಿಕ್ಕ ಚಿಕ್ಕ ಮಕ್ಕಳು ಸೇರಿ ಸುಮಾರು 40ಕ್ಕೂ ಹೆಚ್ಚು ಜನರು ಈ ಚಾರಣದಲ್ಲಿ ಭಾಗವಹಿಸಿದ್ದರು. ಮಕ್ಕಳಂತೂ ಕಡಿದಾದ ಬೆಟ್ಟವನ್ನು ಸರಸರನೆ ಹತ್ತುವ ದೃಶ್ಯ ಯುವಕರನ್ನು ಕೂಡಾ ನಾಚಿಸುವಂತಿತ್ತು. ಮೊದಲ ಬಾರಿ ಪಶ್ಚಿಮ ಘಟ್ಟಗಳ ಕಾಡಿನಲ್ಲಿ ಚಾರಣ ಮಾಡಿದ ಮಕ್ಕಳು ಹಾಗೂ ಯುವಕರಿಗೆ ಇದು ವಿಶೇಷ ಅನುಭವ ನೀಡಿತ್ತು. 

ಅಂದಹಾಗೆ, ಭೀಮನಬುಗರಿಗೆ ದ್ವಾಪರಯುಗದ ಇತಿಹಾಸವಿದ್ದು, ಪಾಂಡವರು ಈ ಸ್ಥಳಕ್ಕೆ ಭೇಟಿ ನೀಡಿದ್ದರಂತೆ. ಅಲ್ಲದೇ, ಈ ಪ್ರದೇಶದಲ್ಲಿ ಪಾಂಡವರು ಆಟವಾಡಿದ್ದಲ್ಲದೇ, ಗುಡ್ಡದ ತುತ್ತ ತುದಿಯಲ್ಲಿ ದ್ವಿತೀಯ ಪಾಂಡವ ಭೀಮ ಬೃಹತ್ ಬಂಡೆಗಲ್ಲನ್ನು ಬುಗರಿಯಂತೆ ತಿರುಗಿಸಿ ಕಲ್ಲಿನ ಮೇಲೆ ನಿಲ್ಲಿಸಿದ್ದ ಅಂತಾ ಕಥೆಗಳು ಹೇಳುತ್ತವೆ. ಭೀಮನ ಬುಗುರಿ ಗುಡ್ಡಕ್ಕೆ ಹೋಗಿ ಬರಬೇಕಂದ್ರೆ 12+12 ಒಟ್ಟು 24ಕಿ.ಮೀ.ನೊಂದಿಗೆ ಸುಮಾರು ನಾಲ್ಕು ತಾಸುಗಳ ಕಾಲ ಕಾಡಿನ ನಡುವೆ ಪ್ರಯಾಣ ಮಾಡಲೇಬೇಕು. 

Uttara Kannada:ಕಾರವಾರದಲ್ಲಿ ಏರ್‌ಕ್ರಾಫ್ಟ್ ಮ್ಯೂಸಿಯಂ ನಿರ್ಮಾಣ ಕಾಮಗಾರಿ ವಿಳಂಬ

ಗಣೇಶನಿಗೆ ನಮಸ್ಕರಿಸಿದ ಬಳಿಕ ಮುಂದುವರಿಯುವ ಚಾರಣದ ವೇಳೆ ಕಾಡಿನಲ್ಲಿ ಸಾಗುವಾಗ‌ ಕಂಡು ಕೇಳರಿಯದಂತಹ ಬಗೆಬಗೆಯ ಹಾಗೂ ಅತ್ಯಂತ ರುಚಿಕರವಾದ ಕಾಡು ಹಣ್ಣುಗಳು ಕೂಡಾ ಕಾಣಸಿಗುತ್ತಿದ್ದು, ಚಾರಣಿಗರಿಗೆ ಮತ್ತಷ್ಟು ಎನರ್ಜಿ ನೀಡಲು ಈ ಹಣ್ಣುಗಳು ಸಹಾಯಕ. ಇನ್ನು ಪಕ್ಷಿಗಳ ಕಲರವ ಕೇಳುತ್ತಾ ಅಲ್ಲಲ್ಲಿ ವಿಶ್ರಮಿಸುತ್ತಾ ಮುಂದೆ ಸಾಗುವಾಗ ಕಾಡಿನ ಮಧ್ಯೆ ಹುಲಿ ದೇವರ ಗುಡಿ ಸಿಗುತ್ತದೆ. ಅಲ್ಲಿ ದೇವರಿಗೆ ನಮಸ್ಕಾರ ಹಾಕಿ ಮುಂದೆ ಸಾಗುವಾಗ ಇಡೀ ಕಾಡಿ‌ನಲ್ಲಿರುವ ಒಂದೇ ಒಂದು ಮನೆ ಕಾಣಿಸುತ್ತೆ. ಚಾರಣಿಗರಿಗೆ ಯಾವುದೇ ಅಗತ್ಯದ ಸಹಾಯ ಈ ಶ್ರಮಜೀವಿಗಳ ಮನೆಯಿಂದಲೇ ದೊರೆಯುತ್ತದೆ. ಈ ಮನೆಯ ಪ್ರದೇಶದಿಂದ ಮತ್ತೆ ಮುಕ್ಕಾಲು ಗಂಟೆ ಕ್ರಮಿಸಿದರೆ ಕಾಣುವುದೇ ಬೃಹತ್ ಕಲ್ಲಿ‌ನ ಮೇಲೆ ಅಂಚಿನಲ್ಲಿ ನಿಂತಿರುವ ಬುಗುರಿಯಾಕಾರದ ಬಂಡೆ. ಕಾಡಿನ ದಾರಿಯ ಮಧ್ಯೆ ಸಾಗಿ ತಮ್ಮ ಗುರಿಯಾದ ಈ ಬಂಡೆಯ ಬಳಿ ತಲುಪಿದಾಗ ಚಾರಣ ಪ್ರಿಯರಿಗಂತೂ  ಆಕಾಶವೇ ಕೈಗೆ ಸಿಕ್ಕಷ್ಟು ಸಂತೋಷವಾಗುತ್ತದೆ. ಇದರಂತೆ ಭೀಮನಬುಗರಿಗೆ ಚಾರಣ ಕೈಗೊಂಡ ಮಕ್ಕಳು ಕೂಡ ಬಂಡೆಗಲ್ಲಿನ ಮೇಲೆ ನಿಂತು ಸುತ್ತಮುತ್ತಲ ಪ್ರದೇಶವನ್ನು ಕಂಡು ಸಂತಸಪಟ್ಟರು. ಈ ಪ್ರದೇಶದಲ್ಲಿ ಕೇವಲ ಕೇವಲ ಚಾರಣ ಮಾತ್ರವಲ್ಲದೇ, ಇತರ ಸಾಹಸ ಚಟುವಟಿಕೆಗಳನ್ನು ಕೂಡಾ ಆಯೋಜಿಸಲಾಗುತ್ತದೆ ಅಂತಾರೆ ಸಾಹಸ ಪ್ರಿಯರು.

ಸಾರ್ವಜನಿಕ ಕುಂದು ಕೊರತೆ ಪರಿಹರಿಸಲು ಉತ್ತರ ಕನ್ನಡ ಡಿಸಿಯಿಂದ ಹೊಸ ಜನಪರ ಕಾರ್ಯಕ್ರಮ

ಒಟ್ಟಿನಲ್ಲಿ ಭೀಮನಬುಗರಿ ಗುಡ್ಡದ ಚಾರಣವಂತೂ ಮಕ್ಕಳಿಗೆ ಹಾಗೂ ಯುವಕರಿಗೆ ಅತ್ಯದ್ಭುತ ಅನುಭವ ನೀಡಿದ್ದಲ್ಲದೇ, ಪ್ರಕೃತಿಯ ಕುರಿತಂತಹ ವಿಶೇಷ ಜ್ಞಾನವನ್ನು ಕೂಡಾ ನೀಡಿದೆ. 
ನಯನ ಮನೋಹರವಾಗಿರುವ ಈ ಭೀಮನಬುಗರಿ ಗುಡ್ಡವನ್ನು ಪ್ರವಾಸೋದ್ಯಮ ಇಲಾಖೆ ಅಭಿವೃದ್ಧಿಪಡಿಸಿದ್ದಲ್ಲಿ ರಾಜ್ಯದಾದ್ಯಂತ ಹೆಚ್ಚು ಖ್ಯಾತಿ ಪಡೆಯುವುದಲ್ಲದೇ, ಚಾರಣಪ್ರಿಯರ ಮೂಲಕ ಪ್ರವಾಸೋದ್ಯಮ ಕೂಡಾ ಬೆಳೆಯುತ್ತದೆ.