ಪಾರ್ಶ್ವವಾಯುವಿಗೆ ಆಯುರ್ವೇದ ರಾಮಬಾಣ, 200 ವರ್ಷಗಳಿಂದ ಚಿಕಿತ್ಸೆ ನೀಡುತ್ತಿರುವ ಕುಟುಂಬ!

ಸ್ಪರ್ಧಾತ್ಮಕ ಜಗತ್ತಿನಲ್ಲಿ ಒತ್ತಡದೊಂದಿಗೆ ಜೀವನ ಮಾಡುವ ಜನರಿಗೆ ಕಾಡುವ ಬಹುದೊಡ್ಡ ಸಮಸ್ಯೆಯೆಂದ್ರೆ ಪಾರ್ಶ್ವವಾಯು. ಮಾನಸಿಕ ಒತ್ತಡದ ಕಾರಣ ರಕ್ತದೊತ್ತಡ ಕಾಣಿಸಿಕೊಂಡ ಬಳಿಕ‌ ಎರಗುವ ಪಾರ್ಶ್ವವಾಯುಗೆ ಸರಿಯಾದ ಚಿಕಿತ್ಸೆ ಸಿಗದೇ ಹಲವರು ತಮ್ಮ ಪ್ರಾಣವನ್ನು ಕೂಡಾ ಕಳೆದುಕೊಂಡಿದ್ದಾರೆ.‌ ಪರಿಸ್ಥಿತಿ ಹೀಗಿರುವಾಗ 200ವರ್ಷಗಳ ವೈದ್ಯ ವೃತ್ತಿಯ ಇತಿಹಾಸ ಹೊಂದಿರುವ ಇಲ್ಲೊಂದು ಕುಟುಂಬ, ಈ ರೋಗಕ್ಕೆ ಬಹಳ ಸರಳವಾಗಿ ಆಯುರ್ವೇದಿಕ್ ಚಿಕಿತ್ಸೆ ನೀಡಿ ಕೆಲವೇ ದಿನಗಳಲ್ಲಿ ಗುಣವಾಗುವಂತೆ ಮಾಡುತ್ತಿದೆ. ಮಹಾತ್ಮಾ ಗಾಂಧಿ, ಅಮಿತಾಬ್ ಬಚ್ಚನ್ ಅವರ ಅನಾರೋಗ್ಯ ಸಮಸ್ಯೆಗೆ ಚಿಕಿತ್ಸೆ ನೀಡಿರುವ ಈ ಕುಟುಂಬ ಸಾವಿರಾರು ಜನರ ಮುಖದಲ್ಲಿ ನಗು ಮೂಡುವಂತೆ ಮಾಡಿದ್ದಾರೆ. ಅಷ್ಟಕ್ಕೂ ಆ ಕುಟುಂಬ ಯಾವುದು ಅಂತೀರಾ‌‌..? 

First Published May 10, 2022, 12:50 PM IST | Last Updated May 10, 2022, 12:50 PM IST

ಇಂದಿನ ಒತ್ತಡದ ಬದುಕಿನಲ್ಲಿ ರಕ್ತದೊತ್ತಡ ವ್ಯತ್ಯಯವಾಗಿ ಉಂಟಾಗುವ ದೊಡ್ಡ ರೋಗ ಪಾರ್ಶ್ವವಾಯು(Paralysis), ಯುವಕರು, ವೃದ್ಧರೆನ್ನದೆ ಎಲ್ಲರನ್ನೂ ಕಾಡುತ್ತಿದೆ. ವಿಶ್ವ ಆರೋಗ್ಯ ಸಂಸ್ಥೆ(WHO)ಯ ಅಂಕಿ-ಅಂಶಗಳ ಪ್ರಕಾರ ಹೃದಯಾಘಾತದ ನಂತರ ಜಗತ್ತಿನಲ್ಲಿ ಅತಿ ಹೆಚ್ಚು ಜನರನ್ನು ಕೊಲ್ಲುವ  ಮಾರಣಾಂತಿಕ ರೋಗವಾಗಿ ಎರಡನೇ ಸ್ಥಾನದಲ್ಲಿದೆ ಪಾರ್ಶ್ವವಾಯು. ಸುಮಾರು 1.8 ಕೋಟಿ ಮಂದಿ ಪ್ರಪಂಚದಾದ್ಯಂತ  ಈ ರೋಗಕ್ಕೆ ಪ್ರತಿ ವರ್ಷ ತುತ್ತಾಗುತ್ತಿದ್ದು, 55 ಲಕ್ಷ ಜನರು ಈ ರೋಗದಿಂದ ಪ್ರತೀ ವರ್ಷ ಸಾವನ್ನಪ್ಪುತ್ತಿದ್ದಾರೆ. ಭಾರತದಲ್ಲಿಯೂ ಪಾರ್ಶ್ವವಾಯುವಿನ ಹಾವಳಿ ಗಂಭೀರವಾಗಿಯೇ ಇದೆ. ಸ್ರ್ಟೋಕ್(Stroke) ಆದ ತಕ್ಷಣ ಮನುಷ್ಯ ಭಯ ಬೀಳದೆ ಹತ್ತಿರದ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದುಕೊಂಡಲ್ಲಿ ಎಲ್ಲ ಸಮಸ್ಯೆಗಳಿಂದ ಗುಣಮುಖರಾಗುವ ಸಾಧ್ಯತೆ ಹೆಚ್ಚು. ಆದರೆ, ಸಾಕಷ್ಟು ಜನರಿಗೆ ಸರಿಯಾದ ಸಮಯ ಹಾಗೂ ಸ್ಥಳದಲ್ಲಿ  ಸರಿಯಾದ ಚಿಕಿತ್ಸೆ(treatment) ದೊರೆಯದೇ ಇಂದಿಗೂ ಮಲಗಿದ್ದಲ್ಲೇ ಇದ್ದರೆ, ಕೆಲವರು ಪ್ರಾಣವನ್ನೇ ಕಳೆದುಕೊಂಡಿದ್ದಾರೆ.

 ಇಂತಹ ಭೀಕರ ಸಮಸ್ಯೆಯಿರುವವರನ್ನು ಶೇ. 99ರಷ್ಟು ಗುಣಮುಖರನ್ನಾಗಿಸಿರುವವರು ಉತ್ತರಕನ್ನಡ(Uttara Kannada) ಜಿಲ್ಲೆಯ ಅಂಕೋಲಾ ತಾಲೂಕಿನ ಬೆಳಂಬಾರ ಗ್ರಾಮದ ಹನುಮಂತ ಬೊಮ್ಮುಗೌಡ. 200 ವರ್ಷಗಳಿಂದ ತಲೆ ತಲಾಂತರದಿಂದ ಪಾಲಿಸಿಕೊಂಡು ಬಂದಿರುವ ತನ್ನ ಆಯುರ್ವೇದ ಚಿಕಿತ್ಸೆಯಿಂದಲೇ ಖಾಸಗಿ ಆಸ್ಪತ್ರೆಗಳು ಕೈ ಬಿಟ್ಟಿರುವ ಪ್ರಕರಣವನ್ನೂ ಕೂಡಾ ಗುಣಮುಖರನ್ನಾಗಿಸಿದ್ದಾರೆ. ದಿ. ಬೊಮ್ಮು ಗೋವಿಂದ ಗೌಡರಿಂದ ಪ್ರಾರಂಭಗೊಂಡ ಈ ನಾಟಿ ವೈದ್ಯ ಪದ್ಧತಿ, ಬಳಿಕ ಅವರ ಪುತ್ರ ದಿ. ಶಿವು ಬೊಮ್ಮ ಗೌಡ ಮುಂದುವರಿಸಿದ್ದರು. ದಿ. ಶಿವು ಬೊಮ್ಮ ಗೌಡರ ಬಳಿಕ ಅವರ ಪುತ್ರ ದಿ. ಬೊಮ್ಮ ಶಿವು ಗೌಡ, ನಂತರ ಇವರ ಪುತ್ರ ಹನುಮಂತ ಬೊಮ್ಮು ಗೌಡ ಪ್ರಸ್ತುತ ಈ ಚಿಕಿತ್ಸಾ ಪದ್ಧತಿಯನ್ನು ದಿ. ಶಿವು ಬೊಮ್ಮ ಗೌಡರ ಅವರ ಶಾಂತಿ ಸ್ಮಾರಕ ಚಿಕಿತ್ಸಾಲದಲ್ಲಿ ಮುಂದುವರಿಸಿಕೊಂಡು ಸಾಗುತ್ತಿದ್ದಾರೆ. ಇವರು ನೀಡುವ ನಾಟಿ ಚಿಕಿತ್ಸೆಯಿಂದಲೇ ದೇಶ, ವಿದೇಶಗಳ ಸಾವಿರಾರು ಜನರು ಗುಣಮುಖರಾಗಿದ್ದು, ಸ್ಟ್ರೆಚರ್‌ನಲ್ಲಿ ಬಂದ ರೋಗಿಗಳು ಹಿಂತಿರುವಾಗ ಕುಟುಂಬದ ಜತೆ ನಡೆದಾಡುತ್ತಾ ನಗು ನಗುತ್ತಲೇ ತೆರಳಿದ್ದಾರೆ. 

ಹೃದಯ ಜೋಪಾನವಾಗಿರಬೇಕಾ ? ಆಹಾರದಲ್ಲಿ ಕಪ್ಪು ಅಕ್ಕಿ ಬಳಸಿ

ಇನ್ನು ವೈದ್ಯ ದಿ. ಶಿವು ಬೊಮ್ಮಗೌಡ ಅವರ ಶಾಂತಿ ಸ್ಮಾರಕ ಚಿಕಿತ್ಸಾಲಯದಲ್ಲಿ ಕಾಡಿನಲ್ಲಿ ದೊರಕುವ ಔಷಧೀಯ ಗುಣಗಳುಳ್ಳ ಗಿಡಮೂಲಿಕೆಗಳನ್ನು ತಂದು ಅದರಿಂದ ತಯಾರಿಸಿದ ಮಾತ್ರೆ, ಎಣ್ಣೆ, ಪೇಸ್ಟ್ ಅನ್ನು ರೋಗಿಗಳಿಗೆ ಉಪಯೋಗಿಸಿ ಸತತ ವ್ಯಾಯಾಮ, ಯೋಗಾಸನ ಮಾಡಿಸುವ ಮೂಲಕ ಪಾರ್ಶ್ವವಾಯು ಪೀಡಿತ ರೋಗಿಗಳನ್ನು ಗುಣಮುಖರಾಗುವಂತೆ ಮಾಡುತ್ತಾರೆ. ಸ್ವಾತಂತ್ರ್ಯ ಪೂರ್ವದಲ್ಲಿ ಮಹಾತ್ಮ ಗಾಂಧೀಜಿಯವರಿಗೆ ಎಡಭಾಗದ ಪಾರ್ಶ್ವವಾಯು ಮತ್ತು ವಾತದ ತೊಂದರೆಯಾಗಿತ್ತು. ಈ ವೇಳೆ ಡಾ. ಹರಡೀಕರ್ ಅವರ ಸಲಹೆಯಂತೆ 1927ರ ಮೇ 15ರಂದು ಹನುಮಂತ ಗೌಡರ ಅಜ್ಜ ನಾಟಿ ವೈದ್ಯರಾದ ಶಿವು ಬೊಮ್ಮಗೌಡ ಅವರು ಬೆಂಗಳೂರಿನ ನಂದಿಬೆಟ್ಟದ ವಿಶ್ರಾಂತಿ ಧಾಮಕ್ಕೆ ತೆರಳಿ 21 ದಿನಗಳವರೆಗೆ ಗಾಂಧೀಜಿಗೆ ಚಿಕಿತ್ಸೆ ನೀಡಿ ಅವರನ್ನು ಗುಣಮುಖರನ್ನಾಗಿಸಿದ್ದಾರೆ. ಇನ್ನು ಈ ವೈದ್ಯ ಕುಟುಂಬದಿಂದ ನಟ ಅಮಿತಾಬ್ ಬಚ್ಚನ್, ನಟ ರಾಘವೇಂದ್ರ ರಾಜ್ ಕುಮಾರ್, ಮಾಜಿ ಪ್ರಧಾನಿ ದೇವೇಗೌಡ್ರು, ಬೌದ್ಧರ ಧರ್ಮಗುರು ದಲೈಲಾಮಾ, ರಿಲಾಯನ್ಸ್‌‌ನ ಧೀರೂಬಾಯಿ ಅಂಬಾನಿ, ಮಾಜಿ ಮುಖ್ಯಮಂತ್ರಿ ವೀರೇಂದ್ರ ಪಾಟೀಲ, ಪತ್ರಕರ್ತ ರವಿ ಬೆಳಗೆರೆ, ಮಾಜಿ ಸ್ಪೀಕರ್ ಬಲರಾಮ ಜಾಖಡ್, ಕೇಂದ್ರ ಸಚಿವ ಶರದ್ ಪವಾರ್ ಸೇರಿದಂತೆ ಹಲವು ಗಣ್ಯರು, ರಾಜಕೀಯ ಮುಖಂಡರಿಗೆ ಗಂಟು ನೋವು, ಪಾರ್ಶ್ವವಾಯು ಹಾಗೂ ಇತರ ಸಮಸ್ಯೆಗಳಿಗೆ ನಾಟಿ ಚಿಕಿತ್ಸೆ ಪಡೆದು ಗುಣಮುಖರಾಗಿದ್ದಾರೆ. ಅತೀ ಕಡಿಮೆ ದರದಲ್ಲಿ ಉತ್ತಮ ಚಿಕಿತ್ಸೆ ಹಾಗೂ ಸೌಲಭ್ಯಗಳನ್ನು ನೀಡುವ ಮೂಲಕ ಪರಂಪರಾಗತವಾಗಿ ಬಂದ ನಾಟಿ ಚಿಕಿತ್ಸೆಯನ್ನು ಹನುಮಂತ ಬೊಮ್ಮುಗೌಡರು ಮುಂದುವರಿಕೊಂಡು ಬಂದಿದ್ದಾರೆ.  ಇವರ ಸಾಮಾಜಿಕ ಸೇವೆಯನ್ನು ಮೆಚ್ಚಿ ಸರ್ಕಾರ 2022ರಲ್ಲಿ ರಾಜ್ಯೋತ್ಸವ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ. ಇಲ್ಲಿ ಕಡಿಮೆ ವೆಚ್ಚದಲ್ಲಿ ಚಿಕಿತ್ಸೆ ಪಡೆದುಕೊಂಡ ರೋಗಿಗಳು ಹಾಗೂ ಅವರ ಕುಟುಂಬ ಸಾಕಷ್ಟು ಸಂತೋಷಗೊಂಡಿದ್ದು, ಸಮಸ್ಯೆಗೆ ಎಲ್ಲೂ ಕಾಣದ ಪರಿಹಾರವನ್ನು ಇಲ್ಲಿ ಕಾಣುತ್ತಿದ್ದಾರೆ. 

Kids Care : ಉಗುರು ಕಚ್ಚಿ ಮಕ್ಕಳು ಆರೋಗ್ಯ ಹಾಳ್ಮಾಡಿಕೊಂಡ್ರೆ ಹೀಗೆ ಮಾಡಿ

ಒಟ್ಟಿನಲ್ಲಿ ಪಾರ್ಶ್ವವಾಯು ರೋಗಕ್ಕೆ ತುತ್ತಾಗಿ ಬೇರೆ ದಾರಿ ಕಾಣದೆ ನರಳುತ್ತಿರುವವರು ಕಡಿಮೆ ವೆಚ್ಚದಲ್ಲಿ ಇಲ್ಲಿ ಚಿಕಿತ್ಸೆ ಪಡೆದುಕೊಂಡು ಸಮಸ್ಯೆಗೆ ಮುಕ್ತಿ ಪಡೆಯಬಹುದಲ್ಲದೇ, ಮತ್ತೆ ನವ ಜೀವನ ಪ್ರಾರಂಭಿಸಬಹುದು.