Asianet Suvarna News Asianet Suvarna News

Uttara Kannada:ಕಾರವಾರದಲ್ಲಿ ಏರ್‌ಕ್ರಾಫ್ಟ್‌ ಮ್ಯೂಸಿಯಂ ನಿರ್ಮಾಣ ಕಾಮಗಾರಿ ವಿಳಂಬ

ಉತ್ತರಕನ್ನಡ ಜಿಲ್ಲಾಡಳಿತದ ಯೋಜನೆಯಂತೆ ಆ ಜಾಗದಲ್ಲಿ ಯುದ್ಧವಿಮಾನ ವಸ್ತು ಸಂಗ್ರಹಾಲಯವಾಗಿ ನಿಲ್ಲಬೇಕಿತ್ತು. ಈ ಮೂಲಕ ಪ್ರವಾಸಿಗರ ಅಚ್ಚುಮೆಚ್ಚಿನ ಪ್ರದೇಶಕ್ಕೊಂದು ನೂತನ ಆಕರ್ಷಣಾ ಕೇಂದ್ರ ಸೇರ್ಪಡೆಯಾಗುತ್ತಿತ್ತು. ಆದ್ರೆ, ಅದ್ಯಾಕೋ ಏನೋ ವಸ್ತುಸಂಗ್ರಹಾಲಯದ ನಿರ್ಮಾಣ ಕಾರ್ಯ ವಿಳಂಬವಾಗುತ್ತಿದೆ. 

ಉತ್ತರ ಕನ್ನಡ ಜಿಲ್ಲೆಯ ಕಾರವಾರ (Karwar) ಅಂದಾಕ್ಷಣ ಮೊದಲು ನೆನಪಾಗೋದೇ ಇಲ್ಲಿನ ವಿಶಾಲವಾದ ಕಡಲತೀರ. ಜತೆಗೆ ದೇಶದ ಪ್ರತಿಷ್ಠಿತ ಯೋಜನೆಗಳಲ್ಲಿ ಒಂದಾದ ಕದಂಬ ನೌಕಾನೆಲೆ. ಕಾರವಾರ ತಾಲೂಕಿನ ಅರಗಾ ಗ್ರಾಮದ ಬಳಿಯಿರುವ ಕದಂಬ ನೌಕಾನೆಲೆ ಏಷ್ಯಾದಲ್ಲೇ ಅತೀದೊಡ್ಡ ನೌಕಾನೆಲೆಯಾಗಿದ್ದು, ಇದು ಇಡೀ ರಾಜ್ಯಕ್ಕೂ ಹೆಮ್ಮೆಯನ್ನು ತಂದಿದೆ. ಇದರೊಂದಿಗೆ ಪ್ರವಾಸಿಗರನ್ನು ಆಕರ್ಷಿಸುವುದರ ಜೊತೆಗೆ ಕದಂಬ ನೌಕಾನೆಲೆಯ ಬಗ್ಗೆ ಮಾಹಿತಿ ಒದಗಿಸುವ ನಿಟ್ಟಿನಲ್ಲಿ ನಗರದ ರವೀಂದ್ರನಾಥ ಟ್ಯಾಗೋರ್ ತೀರದಲ್ಲಿ ಇಡಲಾಗಿರುವ ಚಾಪೆಲ್ ಯುದ್ಧನೌಕೆ ವಸ್ತು ಸಂಗ್ರಹಾಲಯ (Chapal Warship Museum) ಪ್ರವಾಸಿಗರ ಮೆಚ್ಚಿನ ತಾಣವಾಗಿದೆ. 

ಕರಗ ಮಹೋತ್ಸವ: ನಿಖಿಲ್‌ಗೆ ಗರ್ಭಗುಡಿ ಪ್ರವೇಶ ನಿಷೇಧ, ನೆಟ್ಟಿಗರ ಆಕ್ರೋಶ

ಇದಕ್ಕೆ ಹೊಸ ಸೇರ್ಪಡೆ ಎನ್ನುವಂತೆ ಇದೇ ಕಡಲತೀರದ ಬಳಿ ಯುದ್ಧವಿಮಾನ ಸಂಗ್ರಹಾಲಯವನ್ನು ಸ್ಥಾಪಿಸಲು ಯೋಜನೆ ಸಿದ್ಧವಾಗಿತ್ತು. 2019ರ ಮಾರ್ಚ್ ತಿಂಗಳಲ್ಲಿ ನಿವೃತ್ತಿ ಹೊಂದಿದ ಟುಪೋಲೆವ್ 142M ಯುದ್ದವಿಮಾನವನ್ನು ಟ್ಯಾಗೋರ್ ಕಡಲತೀರಕ್ಕೆ ತಂದು ಯುದ್ಧವಿಮಾನ ವಸ್ತು ಸಂಗ್ರಹಾಲಯವಾಗಿ ಮಾರ್ಪಡಿಸಲು ನೌಕಾನೆಲೆಯೊಂದಿಗೆ ಒಪ್ಪಂದ ಮಾಡಿಕೊಳ್ಳಲಾಗಿತ್ತು. ಈಗಾಗಲೇ ವೈಝಾಗ್‌ನಲ್ಲಿ ನಿವೃತ್ತಿಯಾಗಿರುವ 4 ಯುದ್ದವಿಮಾನಗಳಲ್ಲಿ ಟುಪೋಲೆವ್ 142M ಯುದ್ದವಿಮಾನವನ್ನು ಕಾರವಾರ ಕಡಲತೀರದಲ್ಲಿ ಮ್ಯೂಸಿಯಂ ಮಾಡಲು ಒಪ್ಪಂದ ಮಾಡಿಕೊಳ್ಳಲಾಗಿತ್ತು. 

ಕಳೆದ 2020ರಲ್ಲೇ ಬರಬೇಕಿದ್ದ ಯುದ್ಧವಿಮಾನ ಕೊರೊನಾ ಕಾರಣಕ್ಕೆ ತಡವಾಗಿದ್ದು, ಈವರೆಗೂ ಕೂಡಾ ಆಗಮಿಸಿಲ್ಲ. ಇದೀಗ ಪ್ರವಾಸಿಗರು ಜಿಲ್ಲೆಗೆ ಭಾರೀ ಸಂಖ್ಯೆಯಲ್ಲಿ ಪ್ರವಾಸಿಗರು ಭೇಟಿ ನೀಡುತ್ತಿದ್ದು, ಕಡಲತೀರಕ್ಕೆ ಆಗಮಿಸುವ ಪ್ರವಾಸಿಗರಿಗೆ ಸದ್ಯ ವಾರ್‌ಶಿಪ್ ಮ್ಯೂಸಿಯಂ ಒಂದೇ ಆಕರ್ಷಣೆಯಾಗಿದೆ. ಈ ನಿಟ್ಟಿನಲ್ಲಿ ಆದಷ್ಟು ಶೀಘ್ರದಲ್ಲಿ ಯುದ್ಧವಿಮಾನ ವಸ್ತು ಸಂಗ್ರಹಾಲಯವನ್ನು ಸ್ಥಾಪಿಸಬೇಕಿದೆ ಎಂದು ಸ್ಥಳೀಯರು ಒತ್ತಾಯಿಸಿದ್ರೂ, ತಾಂತ್ರಿಕ ಕಾರಣಗಳಿಂದಾಗಿ ಈ ಯೋಜನೆಗೆ ಹಿನ್ನೆಡೆಯಾಗಿದೆ. 

ಅಂದಹಾಗೆ, ಕಾರವಾರ ಕಡಲತೀರದಲ್ಲಿರುವ ವಾರ್‌ಶಿಪ್ ಮ್ಯೂಸಿಯಂ ರಾಜ್ಯದಲ್ಲೇ ಏಕೈಕ ಯುದ್ಧನೌಕೆ ವಸ್ತು ಸಂಗ್ರಹಾಲಯವಾಗಿದೆ. ಚಾಪೆಲ್ ಮ್ಯೂಸಿಯಂಗೆ ಭೇಟಿ ನೀಡುವ ಪ್ರವಾಸಿಗರು ಭಾರತೀಯ ನೌಕಾನೆಲೆಯ ಕಾರ್ಯಚಟುವಟಿಕೆಗಳ ಕುರಿತು ಮಾಹಿತಿ ಪಡೆದುಕೊಳ್ಳುವುದರ ಜತೆಗೆ ಯುದ್ಧನೌಕೆಯನ್ನು ಹತ್ತಿರದಿಂದಲೇ ವೀಕ್ಷಿಸಲು ಅವಕಾಶ ಸಿಗುತ್ತಿದೆ. ಪ್ರತಿವರ್ಷ ಕಡಲತೀರಕ್ಕೆ ಭೇಟಿ ನೀಡುವ ಪ್ರವಾಸಿಗರ ಪೈಕಿ ಸಾವಿರಾರು ಮಂದಿ ಯುದ್ಧನೌಕೆ ಸಂಗ್ರಹಾಲಯವನ್ನು ವೀಕ್ಷಣೆ ಮಾಡುತ್ತಿದ್ದು, ಮುಂದಿನ ದಿನಗಳಲ್ಲಿ ಯುದ್ಧವಿಮಾನ ಸಂಗ್ರಹಾಲಯವೂ ಕಾರವಾರ ಕಡಲತೀರದಲ್ಲೇ ಸ್ಥಾಪನೆಯಾದಲ್ಲಿ ಟ್ಯಾಗೋರ್ ಬೀಚ್‌ಗೆ ಇನ್ನಷ್ಟು ಮೆರುಗು ನೀಡಲಿದೆ. 
ಇನ್ನು ಯುದ್ಧವಿಮಾನದ ಸ್ಥಳಾಂತರದ ಜವಾಬ್ದಾರಿಯನ್ನು ನೌಕಾಪಡೆ ವಹಿಸಿಕೊಂಡಿದ್ದು, ಟೆಂಡರ್ ಪ್ರಕ್ರಿಯೆ ವಿಳಂಬವಾಗಿರುವ ಹಿನ್ನೆಲೆ ವಸ್ತುಸಂಗ್ರಹಾಲಯ ನಿರ್ಮಾಣ ಪ್ರಕ್ರಿಯೆಗೆ ಹಿನ್ನಡೆಯಾಗಿದೆ. ಇದೇ ವರ್ಷದ ಮಾರ್ಚ್ ವೇಳೆಗೆ ಟುಪೋಲೆವ್ ಯುದ್ಧವಿಮಾನವನ್ನು ಕೊಚ್ಚಿಯಿಂದ ಕಾರವಾರಕ್ಕೆ ತರುವ ಪ್ರಕ್ರಿಯೆ ನಡೆಯಬೇಕಿತ್ತು. ಆದ್ರೆ, ತಾಂತ್ರಿಕ ಹಾಗೂ ಇತರ ಕಾರಣಗಳು ಈ ಯೋಜನೆಗೆ ಅಡ್ಡಿಯಾಗಿವೆ. 

ಒಟ್ಟಿ‌ನಲ್ಲಿ ಕಾರವಾರ ಕಡಲತೀರದಲ್ಲಿ ಯುದ್ಧವಿಮಾನ ವಸ್ತುಸಂಗ್ರಹಾಲಯದ ನಿರ್ಮಾಣ ಖುಷಿಯ ವಿಚಾರವೇ ಆದರೂ ತಾಂತ್ರಿಕ ಕಾರಣದಿಂದ ವಿಳಂಬವಾಗುತ್ತಿರುವುದು ಬೇಸರದ ಸಂಗತಿ. ಆದಷ್ಟು ಶೀಘ್ರದಲ್ಲಿ ಯುದ್ಧವಿಮಾನ ವಸ್ತುಸಂಗ್ರಹಾಲಯ ಟ್ಯಾಗೋರ್ ಕಡಲತೀರದಲ್ಲಿ ಪ್ರವಾಸಿಗರ ವೀಕ್ಷಣೆಗೆ ಲಭ್ಯವಾಗಲಿ ಅನ್ನೋದೇ ನಮ್ಮ ಆಶಯ.