ಒಂದೂವರೆ ತಿಂಗಳ ಬಳಿಕ ದಸರಾ ಆನೆಗಳು ಕಾಡಿಗೆ : ಪೂಜೆ ಸಲ್ಲಿಸಿ ಬೀಳ್ಕೊಟ್ಟ ಅರಮನೆ ಆಡಳಿತ ಮಂಡಳಿ

ವಿಶ್ವವಿಖ್ಯಾತ ಮೈಸೂರು ದಸರಾ ಪ್ರಮುಖ ಆಕರ್ಷಣೆ ಜಂಬೂಸವಾರಿ. ಜಂಬೂಸವಾರಿ ಮೆರವಣಿಗೆಯನ್ನು ಯಶಸ್ವಿಯಾಗಿ ನಿಭಾಯಿಸಿದ ದಸರಾ ಗಜಪಡೆ ಇಂದು ನಾಡಿನಿಂದ ಕಾಡಿನತ್ತ ಪ್ರಯಾಣ ಬೆಳೆಸಿವೆ. ಕಾಡಿಗೆ ಹೊರಟ ಆನೆಗಳಿಗೆ ಜಿಲ್ಲಾಡಳಿತದಿಂದ ಸಾಂಪ್ರದಾಯಿಕ ಪೂಜೆ ಸಲ್ಲಿಸಿ ಬೀಳ್ಕೊಡಲಾಯ್ತು. ಒಲ್ಲದ ಮನಸಿನಲ್ಲೇ ಗಜಪಡೆಗಳು ಕಾಡಿನತ್ತ ಮುಖ ಮಾಡಿದವು.

First Published Oct 27, 2023, 11:54 AM IST | Last Updated Oct 27, 2023, 11:54 AM IST

ಕುಂಬಳಕಾಯಿ ಆರತಿ ಎತ್ತಿ ಆನೆಗಳಿಗೆ ವಿಶೇಷ ಪೂಜೆ. ಸೊಂಡಿಲೆತ್ತಿ ಸಲಾಮು ಹೇಳಿದ ದಸರಾ(Dasara) ಗಜಪಡೆ.. ಬಳಿಕ ಸಲೀಸಾಗಿ ಲಾರಿ ಹತ್ತಿದ ಆನೆಗಳು, ಎಲ್ಲರ ಮುಖದಲ್ಲೂ ಬೇಸರ... ಇದು  ಮೈಸೂರು(Mysore) ಅರಮನೆ ಆವರಣದಲ್ಲಿ ದಸರಾ ಗಜಪಡೆಗೆ ಬೀಳ್ಕೊಟ್ಟ ಸನ್ನಿವೇಶದ ಚಿತ್ರಣ. ಕಳೆದ ಒಂದೂವರೆ ತಿಂಗಳಿಂದ ಅರಮನೆ ಅಂಗಳದಲ್ಲೇ ದಸರಾ ಆನೆಗಳು(Elephants) ಬೀಡಿ ಬಿಟ್ಟಿದ್ವು.. ತಿಂಗಳುಗಳ ಕಾಲ ತಾಲೀಮು ನಡೆಸಿ, ಅಂತಿಮವಾಗಿ ಜಂಬೂಸವಾರಿ ಯಶಸ್ವಿಗೊಳಿಸಿ ಮೈಸೂರು ದಸರಾ ಸಂಭ್ರಮ ಹೆಚ್ಚಿಸಿವೆ.. ಜಂಬೂಸವಾರಿ ಪೂರ್ಣಗೊಳಿಸಿ ಒಂದು ದಿನ ವಿಶ್ರಾಂತಿ ಪಡೆದ ಬಳಿಕ ನಿನ್ನೆ ದಸರಾ ಆನೆಗಳು ನಾಡಿನಿಂದ ಕಾಡಿನತ್ತ ಹೊರಟವು... ಅದಕ್ಕೂ ಮುನ್ನ ಗಜಪಡೆಗೆ ಸಾಂಪ್ರದಾಯಿಕವಾಗಿ ಪೂಜೆ ಸಲ್ಲಿಸಿ ಬೀಳ್ಕೊಡಲಾಯ್ತು. ಪುರೋಹಿತರಾದ ಪ್ರಹ್ಲಾದ್, ಡಿಸಿ ಡಾ.ಕೆ.ವಿ ರಾಜೇಂದ್ರ, ಡಿಸಿಎಫ್ ಸೌರಬ್ ಕುಮಾರ್ ,ಪಶು ವೈದ್ಯ ಮುಜೀಬ್ ನೇತೃತ್ವದಲ್ಲಿ ಆನೆಗಳಿಗೆ ಪೂಜೆ ಸಲ್ಲಿಸಲಾಯ್ತು. ಪೂಜೆ ನಂತರ ಆನೆಗಳು ಮತ್ತಿಗೋಡು, ರಾಮಪುರ, ದುಬಾರೆ ಶಿಬಿರಗಳಿಗೆ ಪ್ರಯಾಣ ಬೆಳೆಸಿದವು. ಆನೆ ಜೊತೆಗೆ ಬಂದಿದ್ದ ಮಾವುತ ಕಾವಾಡಿಗಳಿಗೆ ಅರಮನೆ ಆಡಳಿತ ಮಂಡಳಿಯಿಂದ ಸನ್ಮಾನಿಸಿ ಬೀಳ್ಕೊಡಲಾಯ್ತು. ಈ ಬಾರಿ ಅಭಿಮನ್ಯು ನೇತೃತ್ವದ 14 ಆನೆಗಳನ್ನು ಜಂಬೂಸವಾರಿಗೆ ಕರೆತರಲಾಗಿತ್ತು. ಅಭಿಮನ್ಯು, ಭೀಮಾ, ಅರ್ಜುನ, ಕಂಜನ್, ವಿಜಯ, ವರಲಕ್ಷ್ಮೀ, ಗೋಪಿ, ಸುಗ್ರೀವ, ಧನಂಜಯ, ಹಿರಣ್ಯ, ರೋಹಿತ್, ಪ್ರಶಾಂತ್, ಮಹೇಂದ್ರ, ಲಕ್ಷ್ಮೀ ಆನೆಗಳು ಜಂಬೂಸವಾರಿ ಯಶಸ್ವಿಗೊಳಿಸಿ ಮರಳಿ ತಮ್ಮ ಕ್ಯಾಂಪ್ಗೆ ತೆರಳಿದ್ವು‌. ಮರಳಿ ಕಾಡಿನತ್ತ ಹೊರಟ ದಸರಾ ಆನೆಗಳಿಗೆ ಭಾರದ ಮನಸ್ಸಿನಲ್ಲೇ ಕಳುಹಿಸಿಕೊಡಲಾಯ್ತು.

ಇದನ್ನೂ ವೀಕ್ಷಿಸಿ:  ರಾಯಚೂರಿನಲ್ಲಿ ಬೆಳೆಗೆ ನೀರಿಲ್ಲದೆ ಹಾಹಾಕಾರ: ಒಣಗಿ ನಿಂತ ಭತ್ತದ ಬೆಳೆ