ಶಿವಮೊಗ್ಗದಲ್ಲಿ ಖುರೇಷಿ ಶಿಷ್ಯನ ಅಪ್ರಾಪ್ತಳ ಲವ್​​ ಸ್ಟೋರಿಗೆ ಅಮಾಯಕ ಬಲಿ; ಸುಹೇಲ್ ಅಂಡ್ ಗ್ಯಾಂಗ್ ಅರೆಸ್ಟ್!

ಶಿವಮೊಗ್ಗದಲ್ಲಿ ಹುಡುಗಿಯ ವಿಚಾರಕ್ಕೆ ರೌಡಿ ಸುಹೇಲ್ ಎಂಬಾತನಿಂದ ಭೀಕರ ಹಲ್ಲೆಗೊಳಗಾಗಿದ್ದ ಮೌಸಿನ್ ಎಂಬ ಯುವಕ, 11 ದಿನಗಳ ಹೋರಾಟದ ನಂತರ ಸಾವನ್ನಪ್ಪಿದ್ದಾನೆ. ತಲೆಯಲ್ಲಿ ಮಚ್ಚು ಸಿಲುಕಿಕೊಂಡ ಸ್ಥಿತಿಯಲ್ಲೇ ಆಸ್ಪತ್ರೆಗೆ ದಾಖಲಾಗಿದ್ದ ಈ ಘಟನೆ, ರೌಡಿಸಂನ ಕ್ರೂರ ಮುಖವನ್ನು ಬಯಲು ಮಾಡಿದೆ.

Share this Video
  • FB
  • Linkdin
  • Whatsapp

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದಲ್ಲಿ ರೌಡಿಗಳ ಅಟ್ಟಹಾಸ ಮತ್ತೊಂದು ಬಲಿಯನ್ನು ಪಡೆದಿದೆ. ಕಳೆದ 11 ದಿನಗಳ ಹಿಂದೆ ನಡೆದ ಭೀಕರ ಹಲ್ಲೆಯ ಸಂದರ್ಭದಲ್ಲಿ ತಲೆಯಲ್ಲಿ ಮಚ್ಚು ಸಿಲುಕಿಕೊಂಡ ಸ್ಥಿತಿಯಲ್ಲೇ ಆಸ್ಪತ್ರೆಗೆ ದಾಖಲಾಗಿದ್ದ ಮೌಸಿನ್ ಎಂಬ ಯುವಕ, ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾನೆ. ಒಂದು ಹುಡುಗಿಯ ವಿಷಯಕ್ಕೆ ನಡೆದ ಈ ರಕ್ತಸಿಕ್ತ ಕಥೆ ಇಡೀ ಶಿವಮೊಗ್ಗವನ್ನೇ ಬೆಚ್ಚಿಬೀಳಿಸಿದೆ.

Add Asianetnews Kannada as a Preferred SourcegooglePreferred

ಏನಿದು ಭೀಕರ ಘಟನೆ?
ಕಳೆದ ಏಪ್ರಿಲ್ 24ರಂದು ಶಿವಮೊಗ್ಗದ ಲಷ್ಕರ್ ಮೊಹಲ್ಲಾದಲ್ಲಿ ಈ ಘಟನೆ ನಡೆದಿತ್ತು. ಮೌಸಿನ್ ಎಂಬ ಯುವಕನ ಮೇಲೆ ಸುಹೇಲ್ ಅಲಿಯಾಸ್ 'ಡೇಂಜರ್' ಸುಹೇಲ್ ನೇತೃತ್ವದ ಗ್ಯಾಂಗ್ ಮಚ್ಚಿನಿಂದ ದಾಳಿ ಮಾಡಿತ್ತು. ದಾಳಿ ಎಷ್ಟು ಭೀಕರವಾಗಿತ್ತೆಂದರೆ, ಕಿರಾತಕರು ಬೀಸಿದ ಮಚ್ಚು ಮೌಸಿನ್ ತಲೆಯ ಒಳಗೆ ಆಳವಾಗಿ ಸಿಲುಕಿಕೊಂಡಿತ್ತು. ಆ ಮಚ್ಚನ್ನು ತಲೆಯಲ್ಲಿ ಇಟ್ಟುಕೊಂಡೇ ಮೌಸಿನ್ ಆಸ್ಪತ್ರೆಗೆ ಹೋಗಿದ್ದ ದೃಶ್ಯಗಳನ್ನು ನೋಡಿ ಜನ ಕಂಗಾಲಾಗಿದ್ದರು. ಸುಮಾರು ಮೂರು ಆಸ್ಪತ್ರೆಗಳನ್ನು ಬದಲಿಸಿ, ಅಂತಿಮವಾಗಿ ಬೆಂಗಳೂರಿನ ಆಸ್ಪತ್ರೆಯಲ್ಲಿ 11 ದಿನಗಳ ಕಾಲ ಸಾವು-ಬದುಕಿನ ನಡುವೆ ಹೋರಾಡಿದ ಮೌಸಿನ್, ಮೇ 4ರಂದು ಮೃತಪಟ್ಟಿದ್ದಾನೆ.

ಯಾರು ಈ 'ಡೇಂಜರ್' ಸುಹೇಲ್?
ಈ ಕೃತ್ಯದ ಮಾಸ್ಟರ್ ಮೈಂಡ್ ಸುಹೇಲ್ ಅಲಿಯಾಸ್ ಡೇಂಜರ್ ಸುಹೇಲ್. ಈತ ಒಬ್ಬ ಕುಖ್ಯಾತ ರೌಡಿ ಶೀಟರ್. ಈತ ಜೈಲಿಗೆ ಹೋಗಿ ಬಂದವನು. 2024ರ ಲೋಕಸಭಾ ಚುನಾವಣೆಯ ದಿನದಂದೇ ಶಿವಮೊಗ್ಗದ ನಡುರಸ್ತೆಯಲ್ಲಿ ರೌಡಿ ಶೀಟರ್ ಯಾಸೀನ್ ಖುರೇಷಿ ಎಂಬಾತನ ಕೊಲೆಯಾಗಿತ್ತು. ಆದಿಲ್ ಗ್ಯಾಂಗ್ ನಡೆಸಿದ್ದ ಆ ದಾಳಿಯ ಸಂದರ್ಭದಲ್ಲಿ, ಖುರೇಷಿ ಪರವಾಗಿ ಎದುರಾಳಿ ಗ್ಯಾಂಗ್ ಮೇಲೆ ಅಟ್ಯಾಕ್ ಮಾಡಿದ್ದವನೇ ಈ ಸುಹೇಲ್. ಆ ಪ್ರಕರಣದಲ್ಲಿ ಜೈಲು ಸೇರಿ ಹೊರಬಂದ ಮೇಲೆ ಈತ ತನ್ನ ಏರಿಯಾದಲ್ಲೇ ರೌಡಿಸಂ ಶುರು ಮಾಡಿದ್ದ.

ಕೊಲೆಗೆ ಕಾರಣ ಒಬ್ಬ ಅಪ್ರಾಪ್ತ ಬಾಲಕಿ!
ಪೊಲೀಸರ ತನಿಖೆಯ ಪ್ರಕಾರ, ಈ ಭೀಕರ ದಾಳಿಗೆ ಕಾರಣ ಒಬ್ಬ ಅಪ್ರಾಪ್ತ ಬಾಲಕಿ. ಈ ಬಾಲಕಿಯನ್ನು ರೌಡಿ ಸುಹೇಲ್ ಪ್ರೀತಿಸುತ್ತಿದ್ದ. ಆದರೆ, ಸುಹೇಲ್‌ನ ರೌಡಿಸಂ ಮತ್ತು ಕೆಟ್ಟ ನಡತೆ ತಿಳಿದ ಬಾಲಕಿ ಆತನಿಂದ ದೂರವಾಗಲು ಬಯಸಿದ್ದಳು. ಈ ನಡುವೆ ಆಕೆಗೆ ಮೌಸಿನ್ ಪರಿಚಯವಾಗಿದ್ದ. ಸುಹೇಲ್‌ನನ್ನು ಬಿಡಲೆಂದೇ ಆಕೆ ಮೌಸಿನ್ ಜೊತೆ ಫೋಟೋಗಳನ್ನು ಕ್ಲಿಕ್ಕಿಸಿಕೊಂಡು ಆತನಿಗೆ ಕಳುಹಿಸುತ್ತಿದ್ದಳು. 'ನೋಡು ಇವನೇ ನನ್ನ ಹೊಸ ಬಾಯ್ ಫ್ರೆಂಡ್' ಎಂದು ಸುಹೇಲ್‌ನನ್ನು ರೇಗಿಸುತ್ತಿದ್ದಳು. ಇದು ರೌಡಿ ಸುಹೇಲ್‌ನ ಪಿತ್ತ ನೆತ್ತಿಗೇರುವಂತೆ ಮಾಡಿತ್ತು. 'ನನ್ನ ಹುಡುಗಿಯನ್ನೇ ಪಟಾಯಿಸುತ್ತೀಯಾ?' ಎಂದು ಮೌಸಿನ್ ಮೇಲೆ ದ್ವೇಷ ಸಾಧಿಸಿದ ಸುಹೇಲ್, ಆತನನ್ನು ಮುಗಿಸಲು ಸ್ಕೆಚ್ ಹಾಕಿದ್ದ.

ಸಂಚು ನಡೆಸಿ ಕೊಲೆ:
ಏಪ್ರಿಲ್ 24ರಂದು ಸ್ಕೆಚ್ ಪ್ರಕಾರ ಮೌಸಿನ್‌ನನ್ನು ಮನೆಯಿಂದ ಕರೆಸಿಕೊಂಡ ಸುಹೇಲ್ ಗ್ಯಾಂಗ್, ಆತನ ಮೇಲೆ ಮಚ್ಚಿನಿಂದ ದಾಳಿ ಮಾಡಿತ್ತು. ಜನ ಸೇರುತ್ತಿದ್ದಂತೆ ಗ್ಯಾಂಗ್ ಎಸ್ಕೇಪ್ ಆಗಿತ್ತು. ಆದರೆ ಮೌಸಿನ್ ತಲೆಯಲ್ಲಿ ಮಚ್ಚು ಸಿಲುಕಿಕೊಂಡಿತ್ತು. ಘಟನೆಯ ನಂತರ ಕಾರ್ಯಾಚರಣೆ ನಡೆಸಿದ ಶಿವಮೊಗ್ಗ ಪೊಲೀಸರು ಡೇಂಜರ್ ಸುಹೇಲ್, ಶೇತಲ್, ಸಿಖಂದರ್ ಸೇರಿದಂತೆ ಐವರನ್ನು ಬಂಧಿಸಿ ಜೈಲಿಗಟ್ಟಿದ್ದಾರೆ.

ಕಣ್ಣೀರಲ್ಲಿ ಕೈ ತೊಳೆಯುತ್ತಿರುವ ತಾಯಿ:
'ನನ್ನ ಮಗ ಮತ್ತೆ ಎದ್ದು ಬರುತ್ತಾನೆ, ಮೊದಲಿನಂತೆ ನನ್ನ ಜೊತೆ ಮಾತನಾಡುತ್ತಾನೆ' ಎಂದು 11 ದಿನಗಳ ಕಾಲ ಆಸ್ಪತ್ರೆಯ ಹೊರಗೆ ಕಾದಿದ್ದ ಆ ತಾಯಿಯ ನಿರೀಕ್ಷೆ ಸುಳ್ಳಾಗಿದೆ. ಮಗನ ಹೆಣದ ಮುಂದೆ ಆ ತಾಯಿ ಹಾಕುತ್ತಿರುವ ಆಕ್ರಂದನ ಯಾರಿಗೂ ಬೇಡ. ಒಂದು ಹುಡುಗಿಯ ವಿಷಯಕ್ಕೆ ತಲೆಕೆಡಿಸಿಕೊಂಡ ರೌಡಿಯ ಅಟ್ಟಹಾಸಕ್ಕೆ ಇಂದು ಒಬ್ಬ ಅಮಾಯಕ ಯುವಕ ಬಲಿಯಾಗಿದ್ದಾನೆ. ಕಷ್ಟಪಟ್ಟು ಓದಿದ ಮಕ್ಕಳ ಭವಿಷ್ಯ ಹೀಗೆ ಬೀದಿಬದಿಯ ರೌಡಿಸಂಗೆ ಬಲಿಯಾಗುತ್ತಿರುವುದು ದುರಂತ. ಇಂತಹ ಕಿರಾತಕರಿಗೆ ನ್ಯಾಯಾಲಯ ಕಠಿಣ ಶಿಕ್ಷೆ ವಿಧಿಸಲಿ ಎಂಬುದು ಶಿವಮೊಗ್ಗದ ಜನರ ಆಗ್ರಹವಾಗಿದೆ.

Related Video