
ಪ್ರೀತಿಸಿ ಮದುವೆಯಾದ ಗಂಡ; ರಾತ್ರಿ ಹೆಂಡತಿ ಪಕ್ಕದಲ್ಲಿ ಮಲಗಿದವನು ಬೆಳಗಾಗುವಷ್ಟರಲ್ಲಿ ಹೆಣವಾದ!
ಕಾಲೇಜು ದಿನಗಳ ಪ್ರೀತಿ ಮದುವೆಯಾಗಿ ಕೊನೆಗೆ ದುರಂತದಲ್ಲಿ ಅಂತ್ಯಗೊಂಡ ಎರಡು ಕಥೆಗಳಿವು. ಒಂದೆಡೆ, ಗಂಡನ ಅನುಮಾನದಿಂದ ಬೇಸತ್ತ ಹೆಂಡತಿ ಆತನನ್ನು ಕೊಲೆ ಮಾಡಿದರೆ, ಮತ್ತೊಂದೆಡೆ ವರದಕ್ಷಿಣೆ ಕಿರುಕುಳ ತಾಳಲಾರದೆ ಪ್ರೀತಿಸಿ ಮದುವೆಯಾದ ಯುವತಿ ಆತ್ಮಹತ್ಯೆಗೆ ಶರಣಾಗಿದ್ದಾಳೆ.
ಕಾಲೇಜು ದಿನಗಳ ಪ್ರೀತಿ, ಹೆತ್ತವರನ್ನು ಎದುರು ಹಾಕಿ ಮಾಡಿಕೊಂಡ ಮದುವೆ, ನೂರಾರು ಕನಸುಗಳೊಂದಿಗೆ ಆರಂಭವಾದ ದಾಂಪತ್ಯ ಜೀವನ... ಕೊನೆಗೆ ಮುಕ್ತಾಯವಾಗಿದ್ದು ಮಾತ್ರ ರಕ್ತಸಿಕ್ತ ಕೊಲೆ ಹಾಗೂ ಆತ್ಮಹತ್ಯೆಯ ಕಣ್ಣೀರಿನ ಕಥೆಯೊಂದಿಗೆ! ಪ್ರೀತಿಯ ಹೆಸರಿನಲ್ಲಿ ನಡೆಯುತ್ತಿರುವ ಈ ಭೀಕರ ದುರಂತಗಳು ಸಮಾಜ ತಲೆತಗ್ಗಿಸುವಂತೆ ಮಾಡಿವೆ. ಒಂದೆಡೆ ಹೆಂಡತಿಯೇ ಗಂಡನ ತಲೆ ಜಜ್ಜಿ ಕೊಂದರೆ, ಮತ್ತೊಂದೆಡೆ ವರದಕ್ಷಿಣೆ ರಾಕ್ಷಸನಿಗೆ ಪ್ರೀತಿಯ ಹೆಂಡತಿಯೇ ಬಲಿಯಾಗಿದ್ದಾಳೆ. ಅಪರಾಧ ಲೋಕದ ಈ ಎರಡು ರೋಚಕ ಕಥೆಗಳ ಸಂಪೂರ್ಣ ವಿವರ ಇಲ್ಲಿದೆ.

ಪಕ್ಕದಲ್ಲೇ ಮಲಗಿದ್ದ ಗಂಡನ ತಲೆ ಹೊಡೆದ ಕಿಲ್ಲರ್ ಹೆಂಡತಿ!
ಆತನಿಗೆ ಇನ್ನು ಕೇವಲ 26 ವರ್ಷ ವಯಸ್ಸು. ಕಾಲೇಜು ದಿನಗಳಲ್ಲೇ ಯುವತಿಯೊಬ್ಬಳನ್ನು ಪ್ರೀತಿಸಿ, ಹೆತ್ತವರ ಒಪ್ಪಿಗೆಯೊಂದಿಗೆ ಮದುವೆಯಾಗಿದ್ದ. ಇವರಿಗೀಗ 3 ವರ್ಷದ ಮುದ್ದಾದ ಮಗುವಿದೆ. ತನಗಿದ್ದ ಜಮೀನಿನಲ್ಲಿ ದುಡಿಯುತ್ತಾ, ಹೆಂಡತಿ-ಮಗುವನ್ನು ಚೆನ್ನಾಗಿಯೇ ಸಾಕಿ ಸಲಹುತ್ತಿದ್ದ. ಎಲ್ಲವೂ ಸುಸೂತ್ರವಾಗಿ ಸಾಗುತ್ತಿದೆ ಎನ್ನುವಷ್ಟರಲ್ಲಿ ಆ ಒಂದು ಕರಾಳ ರಾತ್ರಿ ಎಲ್ಲವನ್ನೂ ಬದಲಾಯಿಸಿತು.
ರಾತ್ರಿ ಊಟ ಮಾಡಿ ಗಂಡ-ಹೆಂಡತಿ ಇಬ್ಬರೂ ಒಟ್ಟಿಗೇ ಮಲಗಿದ್ದರು. ಆದರೆ ಬೆಳಗ್ಗೆ ಎದ್ದು ನೋಡುವಷ್ಟರಲ್ಲಿ ಗಂಡ ಹೆಣವಾಗಿದ್ದ! ತನಗೇನೂ ಗೊತ್ತೇ ಇಲ್ಲ ಎಂಬಂತೆ ಹೆಂಡತಿ ಕವಿತಾ ನಾಟಕವಾಡಿದ್ದಳು. ಆದರೆ ಪೊಲೀಸರ ಎಂಟ್ರಿಯಿಂದಾಗಿ ಕೊಲೆಯ ರಹಸ್ಯ ಬಯಲಾಗಿದೆ. ಗಂಡನಿಗಿದ್ದ ಅತಿಯಾದ ಅನುಮಾನವೇ ಈ ಕೊಲೆಗೆ ಕಾರಣ ಎನ್ನಲಾಗಿದೆ. ರಾತ್ರಿ ಗಂಡನಿಗೆ ನಿದ್ರೆ ಮಾತ್ರೆ ನೀಡಿ, ಆತ ಗಾಢ ನಿದ್ರೆಗೆ ಜಾರಿದ ಬಳಿಕ ತಲೆಗೆ ಹೊಡೆದು ಭೀಕರವಾಗಿ ಕೊಂದಿದ್ದಾಳೆ. ಅಷ್ಟೇ ಅಲ್ಲದೆ, ರಾತ್ರಿಯಿಡೀ ಶವದ ಪಕ್ಕದಲ್ಲೇ ಮಲಗಿ, ಬೆಳಗ್ಗೆ ಏನೂ ತಿಳಿಯದವಳಂತೆ ನಟಿಸಿದ್ದಾಳೆ. ಪ್ರೀತಿಯ ದಾಂಪತ್ಯ ಅನುಮಾನದ ಬೆಂಕಿಗೆ ಕರಟಿಹೋಗಿದೆ.
ಪಶು ವೈದ್ಯನ ವರದಕ್ಷಿಣೆ ಆಸೆಗೆ ಬಲಿಯಾದ ಪ್ರೇಯಸಿ!
ಇದು ಅಕ್ಕಪಕ್ಕದ ಮನೆಯವರ ಪ್ರೇಮ ಕಥೆ. ಯುವಕ ಪಶು ಇಲಾಖೆಯಲ್ಲಿ ವೈದ್ಯನಾಗಿದ್ದ ಕಾರಣ, ಹುಡುಗಿಯ ಹೆತ್ತವರು ಇಬ್ಬರಿಗೂ ಮದುವೆ ಮಾಡಲು ಯೋಚಿಸಿದ್ದರು. ಈ ನಡುವೆ ಇಬ್ಬರೂ ಗಾಢವಾದ ಪ್ರೀತಿಯಲ್ಲಿ ಬಿದ್ದರು. ಆದರೆ ಕಾಲಕ್ರಮೇಣ ಹುಡುಗನ ನಡವಳಿಕೆ ಸರಿಯಿಲ್ಲ ಎಂದು ತಿಳಿದು ಯುವತಿಯ ಹೆತ್ತವರು ಮದುವೆಗೆ ನಿರಾಕರಿಸಿದರು. ಆದರೆ ಪ್ರೀತಿಯ ಮತ್ತಿನಲ್ಲಿದ್ದ ಯುವತಿ ಕೇಳಲಿಲ್ಲ. ಹೆತ್ತವರನ್ನು ವಿರೋಧಿಸಿ ಗುಟ್ಟಾಗಿ ಮದುವೆಯಾದಳು. ತದನಂತರ ಹೆತ್ತವರು ಕೂಡ ಮಗಳ ಖುಷಿಗಾಗಿ ಒಪ್ಪಿ ಧಾರೆ ಎರೆದುಕೊಟ್ಟರು.
ಆದರೆ ಮದುವೆಯಾಗಿ ಎರಡೇ ವರ್ಷಕ್ಕೆ ಆಕೆಯ ಬಾಳು ಕತ್ತಲಾಗಿದೆ. ಮದುವೆಯಾದ ಮೊದಲೇ ದಿನದಿಂದಲೇ ಗಂಡ ಹಾಗೂ ಅತ್ತೆ ವರದಕ್ಷಿಣೆಗಾಗಿ ಮಾನಸಿಕ ಮತ್ತು ದೈಹಿಕ ಟಾರ್ಚರ್ ನೀಡಲು ಆರಂಭಿಸಿದ್ದರು. ಅತ್ತೆ-ಗಂಡನ ಕಿರುಕುಳ ತಾಳಲಾರದೆ ಬೇಸತ್ತ ಯುವತಿ, "ಅಮ್ಮನ ಮನೆಗೆ ಹೋಗಿ ಬರ್ತೀನಿ" ಎಂದು ತವರು ಮನೆಗೆ ಬಂದಿದ್ದಾಳೆ. ಆದರೆ ಅಲ್ಲಿಗೆ ಬಂದವಳು ನೇಣಿಗೆ ಶರಣಾಗಿದ್ದಾಳೆ. ಪ್ರೀತಿ ಮಾಡಿ ಮದುವೆಯಾದ ಗಂಡನೇ ಹಣದ ದಾಹಕ್ಕಾಗಿ ಹೆಂಡತಿಯ ಜೀವ ಹಿಂಡಿದ್ದಾನೆ.