India Latest News Live: ಉಮರ್ ಪರ ಅಮೆರಿಕ ಸಂಸದೆ ಜೊತೆ ರಾಹುಲ್ ಗಾಂಧಿ; ಬಿಜೆಪಿ ಕಿಡಿ

ನವದೆಹಲಿ: 2020ರ ದೆಹಲಿ ಗಲಭೆಯ ಆರೋಪಿ ಉಮರ್ ಖಾಲಿದ್‌ನನ್ನು ನ್ಯಾಯಪರವಾಗಿ ವಿಚಾರಣೆ ನಡೆಸುವಂತೆ ಭಾರತ ಸರ್ಕಾರಕ್ಕೆ ಅಮೆರಿಕದ 8 ಸಂಸದರು ಪತ್ರ ಬರೆದು ಆಗ್ರಹಿಸಿದ್ದಾರೆ. ಇವರಲ್ಲಿ ಒಬ್ಬರಾದ ಜನಿಸ್ ಶಾಕೋವ್ಸ್ಕಿಎಂಬ ಸಂಸದೆಯ ಜತೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ 2024ರಲ್ಲಿ ಸಭೆ ನಡೆಸಿದ ಫೋಟೊವನ್ನು ಬಿಜೆಪಿ ಹಂಚಿಕೊಂಡಿದ್ದು, ಇದು ರಾಹುಲ್ ಅವರ ಭಾರತ ವಿರೋಧಿ ನಡೆಯನ್ನು ಸ್ಪಷ್ಟಪಡಿಸುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದೆ.
ಬಿಜೆಪಿ ವಕ್ತಾರ ಪ್ರದೀಪ್ ಭಂಡಾರಿ, 2024ರಲ್ಲಿ ರಾಹುಲ್ ಹಾಗೂ ಅಮೆರಿಕದ ಇಬ್ಬರು ಸಂಸದರಾದ ಶಾಕೋವ್ಸ್ಕಿ ಮತ್ತು ಇಲ್ಹಾನ್ ಒಮರ್ ಸಭೆ ನಡೆಸುತ್ತಿರುವ ಫೋಟೊ ಪೋಸ್ಟ್ ಮಾಡಿ, ‘ಪ್ರತಿ ಬಾರಿ ಭಾರತ ವಿರೋಧಿ ವಿಚಾರ ವಿದೇಶಗಳಲ್ಲಿ ಹರಡಿದಾಗಲೂ ಒಂದು ಹೆಸರು (ರಾಹುಲ್ ಗಾಂಧಿ) ಹಿನ್ನೆಲೆಯಲ್ಲಿ ಕೇಳಿಬರುತ್ತದೆ. ಭಾರತವನ್ನು ದುರ್ಬಲಗೊಳಿಸಲು, ಅದರ ಸರ್ಕಾರದ ಹೆಸರು ಕೆಡಿಸಲು ಮತ್ತು ಅದರ ಉಗ್ರವಿರೋಧಿ ಕಾನೂನುಗಳನ್ನು ದುರ್ಬಲಗೊಳಿಸಲು ಬಯಸುವವರು ಆತನ ಸುತ್ತ ಸೇರಿಕೊಳ್ಳುತ್ತಾರೆ’ ಎಂದು ಕಿಡಿ ಕಾರಿದ್ದಾರೆ.