2025-26ರ ವಿಜಯ್ ಹಜಾರೆ ಟ್ರೋಫಿಯಲ್ಲಿ ತ್ರಿಪುರ ವಿರುದ್ಧ ಕರ್ನಾಟಕ ತಂಡವು ಬೃಹತ್ ಮೊತ್ತ ಕಲೆಹಾಕಿದೆ. ದೇವದತ್ ಪಡಿಕ್ಕಲ್ ಈ ಟೂರ್ನಿಯಲ್ಲಿ ತಮ್ಮ ನಾಲ್ಕನೇ ಶತಕ (108) ಸಿಡಿಸಿದರೆ, ಕೆಳಕ್ರಮಾಂಕದಲ್ಲಿ ಅಭಿನವ್ ಮನೋಹರ್ ಸ್ಪೋಟಕ ಅರ್ಧಶತಕ (79*) ಬಾರಿಸಿ ತಂಡದ ಮೊತ್ತವನ್ನು 332ಕ್ಕೆ ಏರಿಸಿದರು.
ಅಹಮದಾಬಾದ್: 2025-26ನೇ ಸಾಲಿನ ವಿಜಯ್ ಹಜಾರೆ ಟ್ರೋಫಿ ಟೂರ್ನಿಯಲ್ಲಿಂದು ಕರ್ನಾಟಕ ಹಾಗೂ ತ್ರಿಪುರ ತಂಡಗಳು ಮುಖಾಮುಖಿಯಾಗಿದ್ದು, ರಾಜ್ಯದ ಸ್ಟಾರ್ ಕ್ರಿಕೆಟಿಗ ದೇವದತ್ ಪಡಿಕ್ಕಲ್ ಮತ್ತೊಂದು ಶತಕ ಸಿಡಿಸಿ ಸಂಭ್ರಮಿಸಿದ್ದಾರೆ. ಐಪಿಎಲ್‌ನಲ್ಲಿ ಆರ್‌ಸಿಬಿ ತಂಡದ ಪ್ರಮುಖ ಆಟಗಾರನಾಗಿ ಗುರುತಿಸಿಕೊಂಡಿರುವ ದೇವದತ್ ಪಡಿಕ್ಕಲ್, ಈ ಆವೃತ್ತಿಯ ವಿಜಯ್ ಹಜಾರೆ ಟ್ರೋಫಿ ಟೂರ್ನಿಯಲ್ಲಿ ನಾಲ್ಕನೇ ಶತಕ ಸಿಡಿಸಿ ಮಿಂಚಿದ್ದಾರೆ. ಪಡಿಕ್ಕಲ್ ಶತಕದ ನೆರವಿನಿಂದ ಕರ್ನಾಟಕ ತಂಡವು ನಿಗದಿತ 50 ಓವರ್‌ಗಳಲ್ಲಿ 7 ವಿಕೆಟ್ ಕಳೆದುಕೊಂಡು 332 ರನ್ ಬಾರಿಸಿದ್ದು, ಗೆಲ್ಲಲು ತ್ರಿಪುರಗೆ ಕಠಿಣ ಗುರಿ ನೀಡಿದೆ.
ಹೌದು, ಇಲ್ಲಿನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಮೊದಲು ಬ್ಯಾಟ್ ಮಾಡಿದ ಕರ್ನಾಟಕ ತಂಡವು ಆರಂಭದಲ್ಲೇ ನಾಯಕ ಮಯಾಂಕ್ ಅಗರ್‌ವಾಲ್(5) ಹಾಗೂ ಕರುಣ್ ನಾಯರ್ ಶೂನ್ಯಕ್ಕೆ ವಿಕೆಟ್ ಒಪ್ಪಿಸಿ ನಿರಾಸೆ ಮೂಡಿಸಿದರು. ಆರು ರನ್ ಗಳಿಸುವಷ್ಟರಲ್ಲಿ ಕರ್ನಾಟಕ ತಂಡವು ಮೊದಲ ಎರಡು ವಿಕೆಟ್ ಕಳೆದುಕೊಂಡು ಆರಂಭಿಕ ಆಘಾತಕ್ಕೆ ಒಳಗಾಯಿತು. ಇದಾದ ಬಳಿಕ ಮೂರನೇ ವಿಕೆಟ್‌ಗೆ ದೇವದತ್ ಪಡಿಕ್ಕಲ್ ಹಾಗೂ ಸ್ಮರಣ್ ರವಿಚಂದ್ರನ್ 136 ರನ್‌ಗಳ ಆಕರ್ಷಕ ಜತೆಯಾಟವಾಡುವ ಮೂಲಕ ತಂಡಕ್ಕೆ ಆಸರೆಯಾದರು. ಸ್ಮರಣ್ ರವಿಚಂದ್ರನ್ 60 ರನ್ ಬಾರಿಸಿ ವಿಕೆಟ್ ಒಪ್ಪಿಸಿದರು.
ನಾಲ್ಕನೇ ಶತಕ ಸಿಡಿಸಿದ ದೇವದತ್ ಪಡಿಕ್ಕಲ್:
ಇನ್ನು 2025-26ನೇ ಸಾಲಿನ ವಿಜಯ್ ಹಜಾರೆ ಟ್ರೋಫಿ ಟೂರ್ನಿಯಲ್ಲಿ ದೇವದತ್ ಪಡಿಕ್ಕಲ್ ರೆಡ್ ಹಾಟ್ ಫಾರ್ಮ್‌ನಲ್ಲಿದ್ದು ಇದೀಗ ತ್ರಿಪುರ ವಿರುದ್ದವೂ ಶತಕ ಸಿಡಿಸಿ ಮಿಂಚಿದ್ದಾರೆ. ಜಾರ್ಖಂಡ್, ಕೇರಳ, ಪುದುಚೆರಿ ಮೇಲೆ ಶತಕ ಸಿಡಿಸಿದ್ದ ಪಡಿಕ್ಕಲ್ ಇದೀಗ ತ್ರಿಪುರ ಎದುರು ತಮ್ಮ ಬ್ಯಾಟಿಂಗ್ ಪರಾಕ್ರಮ ಅನಾವರಣ ಮಾಡಿದ್ದಾರೆ. ತ್ರಿಪುರ ಬೌಲರ್‌ಗಳನ್ನು ದಿಟ್ಟವಾಗಿ ಎದುರಿಸಿದ ದೇವದತ್ ಪಡಿಕ್ಕಲ್ 120 ಎಸೆತಗಳನ್ನು ಎದುರಿಸಿ 8 ಬೌಂಡರಿ ಹಾಗೂ 3 ಸಿಕ್ಸರ್ ಸಹಿತ 108 ರನ್ ಸಿಡಿಸಿ ಅಭಿಜಿತ್ ಸರ್ಕಾರ್‌ಗೆ ವಿಕೆಟ್ ಒಪ್ಪಿಸಿದರು.
ದೇಶಿ ಕ್ರಿಕೆಟ್‌ನಲ್ಲಿ ಅದ್ಭುತ ಫಾರ್ಮ್‌ನಲ್ಲಿರುವ ದೇವದತ್ ಪಡಿಕ್ಕಲ್‌ಗೆ ಇದು ಲಿಸ್ಟ್ ಎ ಕ್ರಿಕೆಟ್‌ನಲ್ಲಿ 13ನೇ ಶತಕ ಎನಿಸಿಕೊಂಡಿದೆ.
ಕಮ್‌ಬ್ಯಾಕ್ ಪಂದ್ಯದಲ್ಲಿ ನಿರಾಸೆ ಮೂಡಿಸಿದ ರಾಹುಲ್:
ಇನ್ನು ವಿಜಯ್ ಹಜಾರೆ ಟ್ರೋಫಿ ಟೂರ್ನಿಯ ಮೊದಲ ನಾಲ್ಕು ಪಂದ್ಯಗಳಲ್ಲಿ ತಂಡದಿಂದ ಹೊರಗುಳಿದಿದ್ದ ಕೆ ಎಲ್ ರಾಹುಲ್, ಇಂದು ತ್ರಿಪುರ ಎದುರಿನ ಪಂದ್ಯದಲ್ಲಿ ಕಣಕ್ಕಿಳಿದರು. ಆದರೆ ಕೆ ಎಲ್ ರಾಹುಲ್ ದೊಡ್ಡ ಮೊತ್ತ ಗಳಿಸಲು ವಿಫಲವಾದರು. ಸ್ಮರಣ್ ರವಿಚಂದ್ರನ್ ವಿಕೆಟ್ ಪತನದ ಬಳಿಕ ಕ್ರೀಸ್‌ಗಿಳಿದ ರಾಹುಲ್, 28 ಎಸೆತಗಳನ್ನು ಎದುರಿಸಿ 4 ಬೌಂಡರಿ ಹಾಗೂ ಒಂದು ಸಿಕ್ಸರ್ ಸಹಿತ 35 ರನ್ ಬಾರಿಸಿ ವಿಕೆಟ್ ಒಪ್ಪಿಸಿದರು.
ಸ್ಪೋಟಕ ಅರ್ಧಶತಕ ಸಿಡಿಸಿದ ಅಭಿನವ್ ಮನೋಹರ್:
ಇನ್ನು ಫಿನಿಶರ್ ಪಾತ್ರವನ್ನು ಅಚ್ಚುಕಟ್ಟಾಗಿ ನಿಭಾಯಿಸುತ್ತಿರುವ ಅಭಿನವ್ ಮನೋಹರ್ ಇದೀಗ ಮತ್ತೊಮ್ಮೆ ರಾಜ್ಯ ತಂಡದ ಪರ ಸ್ಪೋಟಕ ಅರ್ಧಶತಕ ಸಿಡಿಸುವ ಮೂಲಕ ಆಸರೆಯಾಗಿದ್ದಾರೆ. ತ್ರಿಪುರ ಬೌಲರ್‌ಗಳನ್ನು ಚೆಂಡಾಡಿದ ಅಭಿನವ್ ಮನೋಹರ್ ಕೇವಲ 30 ಎಸೆತಗಳಲ್ಲಿ ಅರ್ಧಶತಕ ಸಿಡಿಸಿ ಮಿಂಚಿದರು. ಅಂತಿಮವಾಗಿ ಅಭಿನವ್ ಮನೋಹರ್ ಕೇವಲ 43 ಎಸೆತಗಳನ್ನು ಎದುರಿಸಿ 6 ಬೌಂಡರಿ ಹಾಗೂ 4 ಸಿಕ್ಸರ್ ಸಹಿತ 79 ರನ್ ಸಿಡಿಸಿ ಅಜೇಯರಾಗುಳಿದರು.


