ಅಮೆರಿಕವು ವೆನುಜುವೇಲದ ರಾಜಧಾನಿ ಕ್ಯಾರಕಾಸ್ ಸೇರಿದಂತೆ ನಾಲ್ಕು ನಗರಗಳ ಮೇಲೆ ಭಾರೀ ಮಿಲಿಟರಿ ದಾಳಿ ನಡೆಸಿದೆ. ಈ ದಾಳಿಯನ್ನು ಖಂಡಿಸಿರುವ ಅಧ್ಯಕ್ಷ ನಿಕೋಲಸ್ ಮಡುರೊ, ತಕ್ಕ ಉತ್ತರ ನೀಡುವುದಾಗಿ ಎಚ್ಚರಿಸಿದ್ದು, ದೇಶದಲ್ಲಿ ತುರ್ತುಪರಿಸ್ಥಿತಿ ಘೋಷಿಸಿದ್ದಾರೆ. 

ನವದೆಹಲಿ (ಜ.3): ಅಮೆರಿಕವು ವೆನುಜುವೇಲದ ರಾಜಧಾನಿ ಕ್ಯಾರಕಾಸ್ ಸೇರಿದಂತೆ ನಾಲ್ಕು ನಗರಗಳನ್ನು ಗುರಿಯಾಗಿಸಿಕೊಂಡು ಶನಿವಾರ ಬೆಳಗಿನ ಜಾವ ಭಾರೀ ಪ್ರಮಾಣದಲ್ಲಿ ಮಿಲಿಟರಿ ದಾಳಿ ನಡೆಸಿದೆ. ಇವುಗಳಲ್ಲಿ ಮಿರಾಂಡಾ, ಅರಾಗುವಾ ಮತ್ತು ಲಾ ಗೈರಾ ಸೇರಿವೆ. ಈ ರಾಜ್ಯಗಳಲ್ಲಿನ ಮಿಲಿಟರಿ ನೆಲೆಗಳ ಮೇಲೆ ಅಮೆರಿಕ ಏಳು ಏರ್‌ಸ್ಟ್ರೈಕ್‌ ನಡೆಸಿದೆ. ಮೊದಲ ದಾಳಿ ಸ್ಥಳೀಯ ಸಮಯ ಬೆಳಗಿನ ಜಾವ 2 ಗಂಟೆ ಸುಮಾರಿಗೆ ಸಂಭವಿಸಿದೆ. ಅಮೆರಿಕದ ಮಾಧ್ಯಮ ಸಿಬಿಎಸ್ ನ್ಯೂಸ್ ಪ್ರಕಾರ, ಟ್ರಂಪ್ ಮಿಲಿಟರಿ ಸೌಲಭ್ಯಗಳು ಮತ್ತು ವೆನುಜುವೇಲದ ಒಳಗಿನ ಹಲವಾರು ಪ್ರಮುಖ ಸ್ಥಳಗಳ ಮೇಲೆ ದಾಳಿ ಮಾಡಲು ಆದೇಶಿಸಿದರು.

ದಾಳಿಯ ವೈರಲ್ ವೀಡಿಯೊವು ನಗರದ ಮೇಲೆ ಸುಮಾರು 10 ವಿಮಾನಗಳು ಹಾರುತ್ತಿರುವುದನ್ನು ತೋರಿಸಿದೆ. ನಗರದ ಹಲವಾರು ಪ್ರದೇಶಗಳಲ್ಲಿ ದೊಡ್ಡ ಶಬ್ದಗಳು ಕೇಳಿಬಂದವು ಮತ್ತು ನಂತರ ವಿದ್ಯುತ್ ಕಡಿತಗೊಳಿಸಲಾಯಿತು ಎಂದು ರಾಯಿಟರ್ಸ್ ವರದಿ ಮಾಡಿದೆ.

ದಾಳಿಯ ಬೆನ್ನಲ್ಲಿಯೇ ಮಾತನಾಡಿರುವ ವೆನುಜುವೇಲದ ಅಧ್ಯಕ್ಷ ನಿಕೋಲಸ್ ಮಡುರೊ ಈ ದಾಳಿಗೆ ತಕ್ಕ ಉತ್ತರ ನೀಡಲಿದ್ದೇವೆ ಎಂದರು. ರಾಷ್ಟ್ರವ್ಯಾಪಿ ತುರ್ತುಪರಿಸ್ಥಿತಿಯನ್ನು ಘೋಷಣೆ ಮಾಡಲಾಗಿದ್ದು, ವೆನುಜುವೇಲದ ತೈಲ ಮತ್ತು ಖನಿಜ ಸಂಪನ್ಮೂಲಗಳನ್ನು ವಶಪಡಿಸಿಕೊಳ್ಳಲು ಅಮೆರಿಕವು ದಂಗೆಯನ್ನು ನಡೆಸಲು ಪ್ರಯತ್ನಿಸುತ್ತಿದೆ ಎಂದು ಅವರು ಹೇಳಿದರು.

ನಮ್ಮ ಮೇಲಿನ ದಾಳಿಗೆ ಉತ್ತರ ನೀಡುತ್ತೇವೆ

ದಾಳಿಯ ನಂತರ, ವೆನುಜುವೇಲದ ಅಧ್ಯಕ್ಷ ನಿಕೋಲಸ್ ಮಡುರೊ ಅವರು, ಅಮೆರಿಕ ಸರ್ಕಾರವು ನಡೆಸಿದ ಮಿಲಿಟರಿ ಕ್ರಮವನ್ನು ಬಲವಾಗಿ ಖಂಡಿಸುವುದಾಗಿ ಹೇಳಿದರು. ದಾಳಿಗಳು ಕ್ಯಾರಕಾಸ್ ನಗರದಲ್ಲಿ ಹಾಗೂ ಮಿರಾಂಡಾ, ಅರಾಗುವಾ ಮತ್ತು ಲಾ ಗೈರಾ ರಾಜ್ಯಗಳಲ್ಲಿನ ನಾಗರಿಕ ಮತ್ತು ಮಿಲಿಟರಿ ಗುರಿಗಳನ್ನು ಗುರಿಯಾಗಿಸಿಕೊಂಡಿವೆ. ಈ ದಾಳಿಗಳಿಗೆ ಬಲವಾದ ಉತ್ತರ ನೀಡಲಿದ್ದೇವೆ. ನಮ್ಮ ದೇಶದಲ್ಲಿ ದಂಗೆಗೆ ಅಮೆರಿಕ ಪ್ರಯತ್ನ ಮಾಡುತ್ತಿದ್ದು, ವಿಶ್ವಸಂಸ್ಥೆ ಈ ಕುರಿತಾಗಿ ಭದ್ರತಾ ಮಂಡಳಿಯ ತಕ್ಷಣದ ಸಭೆಗೆ ಒತ್ತಾಯಿಸಿದೆ.

ಡಿಫೆನ್ಸ್‌ ಪ್ಲ್ಯಾನ್‌ಗೆ ಚಾಲನೆ ನೀಡಿದ ಮಡುರೊ

ಅಮೆರಿಕದ ದಾಳಿಯ ನಂತರ, ವೆನುಜುವೇಲ ಅಧ್ಯಕ್ಷ ಮಡುರೊ ದೇಶದ ಎಲ್ಲಾ ರಕ್ಷಣಾ ಯೋಜನೆಗಳನ್ನು ಸಕ್ರಿಯಗೊಳಿಸಲು ಆದೇಶಿಸಿದ್ದಾರೆ. ಇದರರ್ಥ ಅಧ್ಯಕ್ಷರು ಸ್ವಲ್ಪ ಸಮಯದವರೆಗೆ ಜನರ ಅಧಿಕಾರವನ್ನು ಮಿತಿ ಮಾಡಲಿದ್ದು, ಸೈನ್ಯದ ಕೆಲಸವನ್ನು ಹೆಚ್ಚಿಸಲಿದ್ದಾರೆ.

ವೆನುಜುವೇಲದ ನಾಲ್ಕು ನೆಲೆಗಳ ಮೇಲೆ ಅಮೆರಿಕ ದಾಳಿ

ಫ್ಯೂರ್ಟೆ ಟಿಯುನಾ: ರಾಜಧಾನಿ ಕ್ಯಾರಕಾಸ್‌ನಲ್ಲಿರುವ ಪ್ರಮುಖ ಸೇನಾ ನೆಲೆ ಮತ್ತು ದೇಶದ ಅತಿದೊಡ್ಡ ಸೇನಾ ನೆಲೆ

ಲಾ ಕಾರ್ಲೋಟಾ : ಕ್ಯಾರಕಾಸ್‌ನ ಪ್ರಮುಖ ವಾಯುನೆಲೆ, ಇದನ್ನು ಮಿಲಿಟರಿ ಮತ್ತು ನಾಗರಿಕ ವಿಮಾನಗಳಿಗೆ ಬಳಸಲಾಗುತ್ತದೆ

ಎಲ್ ವೋಲ್ಕನ್: ಕ್ಯಾರಕಾಸ್ ಬೆಟ್ಟಗಳಲ್ಲಿ ಸಂವಹನ ಕೇಂದ್ರ

ಲಾ ಗುಯಿರಾ ಬಂದರು: ದೇಶದ ಪ್ರಮುಖ ಬಂದರು, ಇದು ಕ್ಯಾರಕಾಸ್ ಬಳಿಯ ಕೆರಿಬಿಯನ್ ಕರಾವಳಿಯಲ್ಲಿದೆ

ಕ್ಯಾರಕಾಸ್ ಹಲವಾರು ಗುಪ್ತಚರ ಸಂಸ್ಥೆಗಳು ಮತ್ತು ವಾಯುನೆಲೆಗಳ ಸ್ಥಾನ

ಕ್ಯಾರಕಾಸ್ ವೆನೆಜುವೆಲಾದ ರಾಜಧಾನಿ ಮತ್ತು ಅತಿದೊಡ್ಡ ನಗರವಾಗಿದೆ. ಇದು ಉತ್ತರ ವೆನೆಜುವೆಲಾದ ಕಾರ್ಡಿಲ್ಲೆರಾ ಡೆ ಲಾ ಕೋಸ್ಟಾ ಪರ್ವತ ಶ್ರೇಣಿಯಲ್ಲಿ, ಕೆರಿಬಿಯನ್ ಸಮುದ್ರಕ್ಕೆ ಹತ್ತಿರದಲ್ಲಿದೆ. ಇದು ಅಧ್ಯಕ್ಷೀಯ ಅರಮನೆ, ರಕ್ಷಣಾ ಸಚಿವಾಲಯ, ಮಿಲಿಟರಿ ಪ್ರಧಾನ ಕಚೇರಿ, ಗುಪ್ತಚರ ಸಂಸ್ಥೆಗಳು ಮತ್ತು ಪ್ರಮುಖ ವಾಯುನೆಲೆಯನ್ನು ಹೊಂದಿದೆ. ಕ್ಯಾರಕಾಸ್ 3 ಮಿಲಿಯನ್‌ಗಿಂತಲೂ ಹೆಚ್ಚು ಜನಸಂಖ್ಯೆಯನ್ನು ಹೊಂದಿದೆ.