ವಿಜಯ್ ಹಜಾರೆ ಟ್ರೋಫಿಯಲ್ಲಿ, ಹಾರ್ದಿಕ್ ಪಾಂಡ್ಯ ತಮ್ಮ ಚೊಚ್ಚಲ ಲಿಸ್ಟ್ 'ಎ' ಶತಕವನ್ನು (133) ಸಿಡಿಸಿ ಮಿಂಚಿದ್ದಾರೆ. ಸಂಕಷ್ಟದಲ್ಲಿದ್ದ ಬರೋಡ ತಂಡಕ್ಕೆ ಆಸರೆಯಾದ ಅವರು, ಒಂದೇ ಓವರ್‌ನಲ್ಲಿ ಸತತ 5 ಸಿಕ್ಸರ್‌ಗಳನ್ನು ಬಾರಿಸಿ ತಂಡದ ಮೊತ್ತವನ್ನು 293ಕ್ಕೆ ಏರಿಸಲು ನೆರವಾದರು.

ರಾಜ್‌ಕೋಟ್: ಟೀಂ ಇಂಡಿಯಾ ಸ್ಟಾರ್ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ, ವಿಜಯ್ ಹಜಾರೆ ಟ್ರೋಫಿ ಟೂರ್ನಿಯಲ್ಲಿ ಸ್ಪೋಟಕ ಶತಕ ಸಿಡಿಸಿ ಮಿಂಚಿದ್ದಾರೆ. ಇಲ್ಲಿನ ನಿರಂಜನ್ ಶಾ ಸ್ಟೇಡಿಯಂನಲ್ಲಿ ವಿದರ್ಭ ಎದುರಿನ ಪಂದ್ಯದಲ್ಲಿ ಒಂದೇ ಓವರ್‌ನಲ್ಲಿ ಸತತ 5 ಸಿಕ್ಸರ್ ಹಾಗೂ ಬೌಂಡರಿ ಬಾರಿಸುವ ಮೂಲಕ ಲಿಸ್ಟ್‌ ಎ ಕ್ರಿಕೆಟ್‌ನಲ್ಲಿ ಚೊಚ್ಚಲ ಶತಕ ಸಿಡಿಸಿ ಸಂಭ್ರಮಿಸಿದ್ದಾರೆ. ಹಾರ್ದಿಕ್ ಪಾಂಡ್ಯ ಕೇವಲ 68 ಎಸೆತಗಳನ್ನು ಎದುರಿಸಿ ಆರು ಬೌಂಡರಿ ಹಾಗೂ 8 ಸಿಕ್ಸರ್ ಸಿಡಿಸಿ ಅಭಿಮಾನಿಗಳನ್ನು ರಂಜಿಸಿದರು.

ಬರೋಡ ತಂಡವು 71 ರನ್‌ಗಳಿಗೆ 5 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದಾಗ ಕ್ರೀಸ್‌ಗಿಳಿದ ಹಾರ್ದಿಕ್ ಪಾಂಡ್ಯ ಸಾಕಷ್ಟು ಎಚ್ಚರಿಕೆಯ ಬ್ಯಾಟಿಂಗ್ ನಡೆಸಿದರು. ಅರ್ಧಶತಕ ಸಿಡಿಸಲು ಪಾಂಡ್ಯ 44 ಎಸೆತಗಳನ್ನು ತೆಗೆದುಕೊಂಡರು. ಆದರೆ ಇದಾದ ಬಳಿಕ ಮೈಚಳಿ ಬಿಟ್ಟು ಬ್ಯಾಟ್ ಬೀಸಲಾರಂಭಿಸಿದ ಪಾಂಡ್ಯ ಇದಾದ ಬಳಿಕ ಕೇವಲ 24 ಎಸೆತಗಳಲ್ಲಿ ಮೂರಂಕಿ ಮೊತ್ತ ದಾಖಲಿಸುವಲ್ಲಿ ಯಶಸ್ವಿಯಾದರು.

ಒಂದೇ ಓವರ್‌ನಲ್ಲಿ ಸತತ 5 ಸಿಕ್ಸರ್ ಚಚ್ಚಿದ ಪಾಂಡ್ಯ:

ಇನ್ನು ಇನ್ನಿಂಗ್ಸ್‌ನ 39ನೇ ಓವರ್‌ ಬೌಲಿಂಗ್ ಮಾಡಿದ ಎಡಗೈ ಸ್ಪಿನ್ನರ್ ಪಾರ್ಥ್‌ ರೇಖೆಡೆಯ ಒಂದೇ ಓವರ್‌ನಲ್ಲಿ ಪಾಂಡ್ಯ ಸತತ 5 ಸಿಕ್ಸರ್ ಹಾಗೂ ಒಂದು ಬೌಂಡರಿ ಸಹಿತ 34 ರನ್ ಸಿಡಿಸಿದರು. ಇದು ವಿಜಯ್ ಹಜಾರೆ ಟ್ರೋಫಿ ಇತಿಹಾಸದಲ್ಲಿ ದಾಖಲಾದ ಮೂರನೇ ದುಬಾರಿ ಓವರ್ ಎನಿಸಿಕೊಂಡಿತು. ಅಂತಿಮವಾಗಿ ಹಾರ್ದಿಕ್ ಪಾಂಡ್ಯ 92 ಎಸೆತಗಳನ್ನು ಎದುರಿಸಿ 11 ಸಿಕ್ಸರ್ ಹಾಗೂ 8 ಬೌಂಡರಿಗಳ ನೆರವಿನಿಂದ 133 ರನ್ ಸಿಡಿಸಿ ಯಶ್ ಠಾಕೂರ್‌ಗೆ ವಿಕೆಟ್ ಒಪ್ಪಿಸಿದರು.

ಲಿಸ್ಟ್‌ ಎ ಕ್ರಿಕೆಟ್‌ನಲ್ಲಿ ಪಾಂಡ್ಯಗಿದು ಮೊದಲ ಶತಕ:

ಹಾರ್ದಿಕ್ ಪಾಂಡ್ಯ 50 ಓವರ್‌ಗಳ ಲಿಸ್ಟ್‌ 'ಎ' ಕ್ರಿಕೆಟ್‌ನಲ್ಲಿ ಇದುವರೆಗೂ 119 ಪಂದ್ಯಗಳನ್ನಾಡಿದ್ದು, 94 ಪಂದ್ಯಗಳನ್ನು ಭಾರತ ಪರ, 8 ಪಂದ್ಯಗಳನ್ನು ಭಾರತ 'ಎ' ತಂಡದ ಪರ ಹಾಗೂ 17 ಪಂದ್ಯಗಳನ್ನು ಬರೋಡ ಪರ ಆಡಿದ್ದಾರೆ. ಈ ಪೈಕಿ 2020ರಲ್ಲಿ ಕೆನ್‌ಬೆರಾದಲ್ಲಿ ಆಸ್ಟ್ರೇಲಿಯಾ ಎದುರು ಅಜೇಯ 92 ರನ್ ಸಿಡಿಸಿದ್ದೇ ಅವರ ಗರಿಷ್ಠ ವೈಯುಕ್ತಿಕ ಸ್ಕೋರ್ ಆಗಿತ್ತು. ಲಿಸ್ಟ್‌ ಎ ಕ್ರಿಕೆಟ್‌ನಲ್ಲಿ ಪಾಂಡ್ಯ ಇದೇ ಮೊದಲ ಬಾರಿಗೆ ಶತಕ ಸಿಡಿಸುವ ಮೂಲಕ ಈ ಪಂದ್ಯವನ್ನು ಸ್ಮರಣೀಯವಾಗಿಸಿಕೊಂಡರು.

ಹಾರ್ದಿಕ್ ಪಾಂಡ್ಯ ಅವರ ಈ ಶತಕದ ನೆರವಿನಿಂದ ಬರೋಡ ತಂಡವು ನಿಗದಿತ 50 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 293 ರನ್ ಸಿಡಿಸಿದೆ. ಇನ್ನು ಗುರಿ ಬೆನ್ನತ್ತಿರುವ ವಿದರ್ಭ ತಂಡವು ಉತ್ತಮ ಆರಂಭ ಪಡೆದಿದ್ದು 22 ಓವರ್ ಅಂತ್ಯಕ್ಕೆ ಒಂದು ವಿಕೆಟ್ ಕಳೆದುಕೊಂಡು 157 ರನ್ ಬಾರಿಸಿದೆ.