ದೇಶದ ಅತ್ಯಂತ ಶ್ರೀಮಂತ ತಿರುಪತಿ ತಿಮ್ಮಪನ ದೇಗುಲ ಇರುವ ತಿರುಪತಿಯಲ್ಲಿ ಆಘಾತಕಾರಿ ಘಟನೆಯೊಂದು ನಡೆದಿದೆ. ತಿರುಪತಿಯ ಹೃದಯ ಭಾಗದಲ್ಲಿರುವ ಶ್ರೀ ಗೋವಿಂದರಾಜ ಸ್ವಾಮಿ ದೇವಾಲಯದ ಗೋಪುರವನ್ನು ಏರಿದ ಕುಡುಕನೋರ್ವ ಅಲ್ಲಿ ಹೈಡ್ರಾಮಾ ಸೃಷ್ಟಿಸಿದ್ದು, ಕಳಸಕ್ಕೆ ಹಾನಿ ಮಾಡುವುದಕ್ಕೆ ಯತ್ನಿಸಿದ್ದಾನೆ.
ತಿರುಪತಿ: ದೇಶದ ಅತ್ಯಂತ ಶ್ರೀಮಂತ ತಿರುಪತಿ ತಿಮ್ಮಪನ ದೇಗುಲ ಇರುವ ತಿರುಪತಿಯಲ್ಲಿ ಆಘಾತಕಾರಿ ಘಟನೆಯೊಂದು ನಡೆದಿದೆ. ತಿರುಪತಿಯ ಹೃದಯ ಭಾಗದಲ್ಲಿರುವ ಶ್ರೀ ಗೋವಿಂದರಾಜ ಸ್ವಾಮಿ ದೇವಾಲಯದ ಗೋಪುರವನ್ನು ಏರಿದ ಕುಡುಕನೋರ್ವ ಅಲ್ಲಿ ಹೈಡ್ರಾಮಾ ಸೃಷ್ಟಿಸಿದ್ದು, ಕಳಸಕ್ಕೆ ಹಾನಿ ಮಾಡುವುದಕ್ಕೆ ಯತ್ನಿಸಿದ್ದಾನೆ. ವಿಚಾರ ತಿಳಿದು ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ಸಿಬ್ಬಂದಿ ಹಾಗೂ ಪೊಲೀಸರು ಹಲವು ಗಂಟೆಗಳ ಕಾರ್ಯಾಚರಣೆ ನಡೆಸಿ ಆತನನ್ನು ಕೆಳಗಿಳಿಸಿ ಬಳಿಕ ಬಂಧಿಸಿದ್ದಾರೆ.
ಶುಕ್ರವಾರ ಮಧ್ಯರಾತ್ರಿ ಈ ಘಟನೆ ನಡೆದಿದೆ. 42 ವರ್ಷದ ವ್ಯಕ್ತಿ ಕುಡಿದ ಅಮಲಿನಲ್ಲಿ ದೇಗುಲದ ಆವರಣದೊಳಿಗೆ ನುಗ್ಗಿ ಟಿಟಿಡಿ ದೇವಾಲಯದೊಳಗಿನ ಗೋಪುರಗಳಲ್ಲೊಂದರ ಕಲಶವನ್ನು ಒಡೆಯಲು ಯತ್ನಿಸಿದ್ದು, ಇದು ದೇಗುಲದ ಒಳಗೆ ಭಾರಿ ಭದ್ರತಾ ಲೋಪವಾಗಿರುವುದ್ನು ಖಚಿತಪಡಿಸಿದೆ. ವಿಶ್ವವಿಖ್ಯಾತ ಅತ್ಯಂತ ಭದ್ರತೆಯ ದೇಶದ ಅತೀ ಶ್ರೀಮಂತ ದೇಗುಲ ಎನಿಸಿರುವ ತಿರುಪತಿ ದೇಗುಲದ ಆವರಣದಲ್ಲಿರುವ ಈ ದೇಗುಲದಲ್ಲೇ ಈ ಕೃತ್ಯ ನಡೆದಿರುವುದಕ್ಕೆ ಅನೇಕರು ಅಚ್ಚರಿ ಆಘಾತ ವ್ಯಕ್ತಪಡಿಸಿದ್ದಾರೆ.
ಹೀಗೆ ದೇಗುಲದ ಗೋಪುರವೇರಿದ ವ್ಯಕ್ತಿಯನ್ನು ತೆಲಂಗಾಣದ ನಿಜಾಮಾಬಾದ್ ಜಿಲ್ಲೆಯ ಪೆದ್ದಮಲ್ಲರೆಡ್ಡಿ ಗ್ರಾಮದ ನಿವಾಸಿ ಕುಠಡಿ ತಿರುಪತಿ ಎಂದು ಗುರುತಿಸಲಾಗಿದೆ. ಈ ವ್ಯಕ್ತಿ ತನ್ನ ಕುಟುಂಬದೊಂದಿಗೆ ತಿರುಪತಿಗೆ ಸ್ಥಳಾಂತರಗೊಂಡು ದಿನಗೂಲಿ ಕಟ್ಟಡ ನಿರ್ಮಾಣ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದ. ಶುಕ್ರವಾರ ರಾತ್ರಿ ವಿಪರೀತ ಕುಡಿದ ಮತ್ತಿನಲ್ಲಿ ತಿರುಪತಿಯಲ್ಲಿ ಇತರ ಭಕ್ತರೊಂದಿಗೆ ಬೆರೆತು ಗೋವಿಂದರಾಜ ಸ್ವಾಮಿ ದೇವಸ್ಥಾನವನ್ನು ಈತ ಪ್ರವೇಶಿಸಿದ್ದಾರೆ. ಸ್ವಲ್ಪ ಸಮಯದ ನಂತರ, ಅವನು ನಾದಿಮಿ ಗೋಪುರವನ್ನು ಏರುವಲ್ಲಿ ಯಶಸ್ವಿಯಾಗಿದ್ದಾನೆ ಅಲ್ಲದೇ ದೊಡ್ಡ ಕೋಲನ್ನು ಬಳಸಿ ಗೋಪುರದ ಮೇಲಿನ ಕಲಶಗಳನ್ನು ಒಡೆಯುವುದಕ್ಕೆ ಮುಂದಾಗಿದ್ದಾನೆ.
ನಾದಿಮಿ ಗೋಪುರದ ಮೇಲೆ ಅನುಮಾನಾಸ್ಪದ ವ್ಯಕ್ತಿಯೊಬ್ಬ ದೇಗುಲದ ಕಲಶಗಳನ್ನು ಒಡೆಯಲು ಪ್ರಯತ್ನಿಸುತ್ತಿರುವುದನ್ನು ಗಮನಿಸಿದ ಟಿಟಿಡಿ ಜಾಗೃತ ದಳ ಮತ್ತು ಭದ್ರತಾ ಸಿಬ್ಬಂದಿ, ತಕ್ಷಣವೇ ಜಾಗೃತ ದಳ ಮತ್ತು ಭದ್ರತಾ ಇಲಾಖೆಯ ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಅವರು ತಿರುಪತಿ ಪೂರ್ವ ಪೊಲೀಸರು ಮತ್ತು ಸ್ಥಳೀಯ ಅಗ್ನಿಶಾಮಕ ದಳದ ಸಿಬ್ಬಂದಿಗೆ ಕೂಡಲೇ ಮಾಹಿತಿ ನೀಡಿದರು.
ನಂತರ ತಿರುಪತಿ ಪೂರ್ವ ಪೊಲೀಸ್ ಅಧಿಕಾರಿಗಳು ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿ ಗೋವಿಂದರಾಜ ಸ್ವಾಮಿ ದೇವಸ್ಥಾನದ ಆವರಣಕ್ಕೆ ಆಗಮಿಸಿ ಏಣಿಗಳ ಸಹಾಯದಿಂದ ಗೋಪುರವನ್ನು ಏರಿದ್ದಾರೆ. ಮೂರು ಗಂಟೆಗಳ ಕಾಲ ನಿರಂತರ ಕಾರ್ಯಾಚರಣೆ ನಡೆಸಿದ ನಂತರ ದೇಗುಲವರಿದ ಕುಠಡಿ ತಿರುಪತಿಯನ್ನು ಗೋಪುರದಿಂದ ಕೆಳಗಿಳಿಸಿ ವಶಕ್ಕೆ ಪಡೆದು ವಿಚಾರಣೆಗಾಗಿ ತಿರುಪತಿ ಪೂರ್ವ ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಟಿಟಿಡಿ ಪ್ರತಿಕಾ ಪ್ರಕಟಣೆಯ ಮೂಲಕ ಮಾಹಿತಿ ನೀಡಿದೆ. ತಿರುಪತಿ ಎಂದು ಗುರುತಿಸಲಾದ ವ್ಯಕ್ತಿಯೊಬ್ಬರು ಶುಕ್ರವಾರ ರಾತ್ರಿ ಇತರ ಭಕ್ತರೊಂದಿಗೆ ಬೆರೆತು ಗೋವಿಂದರಾಜ ಸ್ವಾಮಿ ದೇವಸ್ಥಾನವನ್ನು ಪ್ರವೇಶಿಸಿದ್ದಾನೆ. ನಂತರ ಆತ ತಾತ್ಕಾಲಿಕ ಡೇರೆಯ ಮೇಲೆ ಹತ್ತಿ ನದಿಮಿ ಗೋಪುರವನ್ನು ಏರುವಲ್ಲಿ ಯಶಸ್ವಿಯಾಗಿದ್ದಾನೆ. ಜಾಗೃತ ಸಿಬ್ಬಂದಿ ಅವನ ಅನುಮಾನಾಸ್ಪದ ಚಟುವಟಿಕೆಗಳನ್ನು ಗಮನಿಸಿ ತಕ್ಷಣ ಪೊಲೀಸ್ ಮತ್ತು ಅಗ್ನಿಶಾಮಕ ಇಲಾಖೆಗಳಿಗೆ ಮಾಹಿತಿ ನೀಡಿದರು. ಪೊಲೀಸ್ ಸಿಬ್ಬಂದಿ ಗೋವಿಂದರಾಜ ಸ್ವಾಮಿ ದೇವಸ್ಥಾನಕ್ಕೆ ತಲುಪಿ ಅವನನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿದರು ಎಂದು ಟಿಟಿಡಿ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ದೇಶದ ಅತ್ಯಂತ ಭದ್ರತೆ ಇರುವ ದೇಗುಲದಲ್ಲೇ ಈ ರೀತಿಯ ಘಟನೆ ನಡೆದಿರುವುದಕ್ಕೆ ರಾಜ್ಯಾದೆಲ್ಲೆಡೆ ಜನ ಆಘಾತ ವ್ಯಕ್ತಪಡಿಸಿದ್ದಾರೆ. ತಿರುಪತಿ ಸಂಸದ ಡಾ. ಎಂ. ಗುರುಮೂರ್ತಿ ಅವರು ಟಿಟಿಡಿಯ ಗೋವಿಂದರಾಜ ಸ್ವಾಮಿ ದೇವಸ್ಥಾನದಲ್ಲಿ ಮತ್ತೊಮ್ಮೆ ಭದ್ರತಾ ಲೋಪ ಆಗಿರುವುದಕ್ಕೆ ದಿಗ್ಭ್ರಮೆ ವ್ಯಕ್ತಪಡಿಸಿದ್ದಾರೆ. ಈ ದೇವಾಲಯವು ತಿರುಪತಿಯ ಹೃದಯಭಾಗದಲ್ಲಿದೆ ಮತ್ತು ನಗರದ ಅತಿದೊಡ್ಡ ದೇವಾಲಯಗಳಲ್ಲಿ ಒಂದಾಗಿದೆ. ಅನುಮಾನಾಸ್ಪದ ವ್ಯಕ್ತಿಯೊಬ್ಬ ದೇವಾಲಯದ ಆವರಣಕ್ಕೆ ನುಸುಳಿದ್ದು ಮಾತ್ರವಲ್ಲದೆ ನದಿಮಿ ಗೋಪುರವನ್ನು ಹತ್ತಿ ಗೋಪುರದ ಮೇಲಿನ ಕಲಶಗಳನ್ನು ಒಡೆಯಲು ಪ್ರಯತ್ನಿಸಿದಾಗ ಟಿಟಿಡಿ ಜಾಗೃತ ದಳ ಮತ್ತು ಭದ್ರತಾ ಸಿಬ್ಬಂದಿ ಏನು ಮಾಡುತ್ತಿದ್ದರು ಎಂಬುದು ಆಘಾತಕಾರಿಯಾಗಿದೆ ಎಂದು ಗುರುಮೂರ್ತಿ ಹೇಳಿದ್ದಾರೆ.
ಇದನ್ನೂ ಓದಿ: ನಮ್ಗೂ ಪ್ರೈವೆಸಿ ಬೇಕು ಗುರು: ಪ್ರಾಣಿಗಳ ಚಲನವಲನದ ವೀಕ್ಷಣೆಗೆ ಇರಿಸಿದ ಕ್ಯಾಮರಾ ಎತ್ತಿ ಎಸೆದ ಆನೆ
ಕೆಲವು ವರ್ಷಗಳ ಹಿಂದೆ, ಅದೇ ಗೋವಿಂದರಾಜ ಸ್ವಾಮಿ ದೇವಸ್ಥಾನಕ್ಕೆ ಕಳ್ಳನೊಬ್ಬ ನುಸುಳಿ, ದೇವಾಲಯದ ಕಿರೀಟಗಳೊಂದಿಗೆ ಪರಾರಿಯಾಗಿದ್ದ. ಆ ಆಘಾತಕಾರಿ ಕಳ್ಳತನವು ಭದ್ರತಾ ಲೋಪಗಳನ್ನು ಬಹಿರಂಗಪಡಿಸಿದ ನಂತರವೂ ಟಿಟಿಡಿ ಅಧಿಕಾರಿಗಳು ಭದ್ರತಾ ವ್ಯವಸ್ಥೆಯಲ್ಲಿನ ಲೋಪಗಳನ್ನು ಮುಚ್ಚಿಲ್ಲ. ಇದು ದೇವಾಲಯವನ್ನು ಸರಿಯಾಗಿ ರಕ್ಷಿಸಲು ಸಾಕಷ್ಟು ಕ್ರಮ ಕೈಗೊಂಡಿಲ್ಲ ಎಂಬುದನ್ನು ತೋರಿಸುತ್ತದೆ. ಈಗ ನಡೆದಿರುವ ಘಟನೆಯಿಂದ ಇದು ಸ್ಪಷ್ಟವಾಗಿದೆ ಎಂದು ತಿರುಪತಿ ಸಂಸದ ಗುರುಮೂರ್ತಿ ವಿಷಾದಿಸಿದ್ದಾರೆ.
ಇದನ್ನೂ ಓದಿ: ವಿಷಾಹಾರ: ನರ್ಮದಾ ನದಿ ತೀರದಲ್ಲಿ 200ಕ್ಕೂ ಹೆಚ್ಚು ಗಿಳಿಗಳ ಮಾರಣಹೋಮ
ಶುಕ್ರವಾರ ರಾತ್ರಿ ಗೋವಿಂದರಾಜ ಸ್ವಾಮಿ ದೇವಸ್ಥಾನದಲ್ಲಿ ವರದಿಯಾದ ಆಘಾತಕಾರಿ ಘಟನೆಯ ಬಗ್ಗೆ ವಿವರವಾದ ತನಿಖೆಗೆ ಆದೇಶಿಸುವಂತೆ ಆಂಧ್ರಪ್ರದೇಶ ರಾಜ್ಯ ಸರ್ಕಾರ ಮತ್ತು ಟಿಟಿಡಿಯನ್ನು ಒತ್ತಾಯಿಸಿದ ತಿರುಪತಿ ಸಂಸದರು ಭದ್ರತಾ ಲೋಪಗಳಿಗೆ ಕಾರಣರಾದ ಎಲ್ಲರ ವಿರುದ್ಧ ಕಠಿಣ ಇಲಾಖಾ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.


