ದಕ್ಷಿಣ ಆಫ್ರಿಕಾ ಎ ವಿರುದ್ಧದ ಯೂತ್ ಏಕದಿನ ಪಂದ್ಯದಲ್ಲಿ, ಭಾರತ ಎ ತಂಡವು ಕಳಪೆ ಆರಂಭದ ಹೊರತಾಗಿಯೂ 300 ರನ್‌ಗಳ ಬೃಹತ್ ಮೊತ್ತ ಕಲೆಹಾಕಿತು. ಹರ್ವಾನ್ಶ್ ಪಂಗಾಲಿಯಾ (93) ಮತ್ತು ಆರ್ ಎಸ್ ಅಂಬ್ರಿಶ್ (65) ಅವರ ಅಮೋಘ ಬ್ಯಾಟಿಂಗ್ ನೆರವಿನಿಂದ ತಂಡ ಚೇತರಿಸಿಕೊಂಡಿತು.
ಬೆನೋನಿ: 19 ವರ್ಷದೊಳಗಿನವರ ಯೂತ್ ಏಕದಿನ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ಎ ವಿರುದ್ಧ ಭಾರತ ಕಳಪೆ ಆರಂಭ ಪಡೆದಿದ್ದ ಭಾರತ ಎ ತಂಡವು, ಆ ಬಳಿಕ ಚೇತರಿಸಿಕೊಂಡು ಬೃಹತ್ ಮೊತ್ತ ಕಲೆಹಾಕುವಲ್ಲಿ ಯಶಸ್ವಿಯಾಗಿದೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಭಾರತ 19 ವರ್ಷದೊಳಗಿನವರ ತಂಡ, ನಿಗದಿತ 50 ಓವರ್‌ಗಳಲ್ಲಿ 300 ರನ್ ಕಲೆಹಾಕುವಲ್ಲಿ ಯಶಸ್ವಿಯಾಗಿದೆ. ಭಾರತ ಎ ತಂಡದ ಪರ ಹರ್ವಾನ್ಶ್ ಪಂಗಾಲಿಯಾ(93) ಹಾಗೂ ಆರ್ ಎಸ್ ಅಂಬ್ರಿಶ್(65) ಆಕರ್ಷಕ ಬ್ಯಾಟಿಂಗ್ ನಡೆಸುವ ಮೂಲಕ ತಂಡಕ್ಕೆ ಆಸರೆಯಾದರು.
ಭಾರತಕ್ಕೆ ಆರಂಭಿಕ ಆಘಾತ
ಟಾಸ್ ಸೋತು ಕ್ರೀಸ್‌ಗಿಳಿದ ಭಾರತ, ಎರಡನೇ ಓವರ್‌ನಲ್ಲೇ ಏಳು ಎಸೆತಗಳಲ್ಲಿ ಐದು ರನ್ ಗಳಿಸಿದ್ದ ಆರೋನ್ ಜಾರ್ಜ್ ವಿಕೆಟ್ ಕಳೆದುಕೊಂಡಿತು. ಏಳನೇ ಓವರ್‌ನ ಮೊದಲ ಎಸೆತದಲ್ಲಿ 12 ಎಸೆತಗಳಲ್ಲಿ 11 ರನ್ ಗಳಿಸಿದ್ದ ನಾಯಕ ವೈಭವ್ ಸೂರ್ಯವಂಶಿ ಕೂಡ ಔಟಾದಾಗ ಭಾರತ 34-2ಕ್ಕೆ ಕುಸಿಯಿತು. ಆದರೆ, ಮೂರನೇ ವಿಕೆಟ್‌ಗೆ ಜೊತೆಯಾದ ವೇದಾಂತ್ ತ್ರಿವೇದಿ ಮತ್ತು ಅಭಿಜ್ಞಾನ್ ಕುಂಡು ತಂಡವನ್ನು 50ರ ಗಡಿ ದಾಟಿಸಿದರು. 14ನೇ ಓವರ್‌ನಲ್ಲಿ ಸ್ಕೋರ್ 67 ಆಗಿದ್ದಾಗ ಅಭಿಜ್ಞಾನ್ ಕುಂಡು (21) ರನೌಟ್ ಆಗಿದ್ದು ಭಾರತಕ್ಕೆ ಹಿನ್ನಡೆಯಾಯಿತು.
ಇನ್ನುಳಿದಂತೆ ಮಧ್ಯಮ ಕ್ರಮಾಂಕದಲ್ಲಿ ಕನಿಷ್ಕ್ ಚೌಹ್ಹಾಣ್(32) ಹಾಗೂ ಖಿಲಾನ್ ಪಟೇಲ್(26) ಸ್ಪೋಟಕ ಬ್ಯಾಟಿಂಗ್ ನಡೆಸುವ ಮೂಲಕ ತಂಡ ಸವಾಲಿನ ಮೊತ್ತ ಕಲೆಹಾಕಲು ನೆರವಾದರು.
ನಿರಾಸೆ ಮೂಡಿಸಿದ ಸೂರ್ಯವಂಶಿ:
ಇತ್ತೀಚಿಗಿನ ದಿನಗಳಲ್ಲಿ ಸ್ಪೋಟಕ ಬ್ಯಾಟಿಂಗ್ ಮೂಲಕ ಭರ್ಜರಿ ಶತಕ ಸಿಡಿಸಿ ಗಮನ ಸೆಳೆಯುತ್ತಾ ಬಂದಿರುವ ವೈಭವ್ ಸೂರ್ಯವಂಶಿ ಇದೇ ಮೊದಲ ಬಾರಿಗೆ ನಾಯಕನಾಗಿ ತಂಡವನ್ನು ಮುನ್ನಡೆಸುತ್ತಿದ್ದಾರೆ. ಹೀಗಾಗಿ ಸೂರ್ಯವಂಶಿ ಮೇಲೆ ಸಾಕಷ್ಟು ನಿರೀಕ್ಷೆಗಳಿದ್ದವು. ಆದರೆ ವೈಭವ್ ಸೂರ್ಯವಂಶಿ ಕೇವಲ 11 ರನ್ ಗಳಿಸಿ ವಿಕೆಟ್ ಒಪ್ಪಿಸುವ ಮೂಲಕ ನಿರಾಸೆ ಮೂಡಿಸಿದರು.
ಆಯುಷ್ ಮಾತ್ರೆ ಬದಲಿಗೆ ಹದಿನಾಲ್ಕು ವರ್ಷದ ವೈಭವ್ ಸೂರ್ಯವಂಶಿಯನ್ನು ಭಾರತದ 19 ವರ್ಷದೊಳಗಿನವರ ತಂಡದ ನಾಯಕರನ್ನಾಗಿ ಮಾಡಲಾಗಿದೆ. ಆಯುಷ್ ಮಾತ್ರೆ ಹೊರತುಪಡಿಸಿ, 19 ವರ್ಷದೊಳಗಿನವರ ಏಷ್ಯಾಕಪ್‌ನಲ್ಲಿ ಆಡಿದ ಹೆಚ್ಚಿನ ಆಟಗಾರರು ದಕ್ಷಿಣ ಆಫ್ರಿಕಾ ವಿರುದ್ಧದ ಯೂತ್ ಏಕದಿನ ಪಂದ್ಯದಲ್ಲಿ ಆಡುತ್ತಿದ್ದಾರೆ.


