ಬುದ್ಧಿವಂತ ಪ್ರಾಣಿ ಎನಿಸಿರುವ ಆನೆಗೆ ಸುತ್ತಲಿನ ಪರಿಸರದ ಬಗ್ಗೆ ಅಲ್ಲಾಗುತ್ತಿರುವ ಬೆಳವಣಿಗೆಗಳ ಬಗ್ಗೆ ಜಾಗೃತಿ ಇರುತ್ತದೆ. ಹಾಗೆಯೇ ಇಲ್ಲೊಂದು ಕಡೆ ಆನೆಯೊಂದು ಕಾಡಿನಲ್ಲಿ ಆಳವಡಿಸಲಾಗಿದ್ದ ಕ್ಯಾಮರಾವನ್ನು ಕಿತ್ತೆಸೆದ ಘಟನೆ ನಡೆದಿದೆ. ಘಟನೆಯ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗ್ತಿದೆ.

ಆನೆಗಳು ಕಾಡಿನಲ್ಲಿರುವ ಬುದ್ಧಿವಂತ ಪ್ರಾಣಿಗಳಲ್ಲಿ ಒಂದು ಎಂಬುದರಲ್ಲಿ ಯಾವುದೇ ಸಂಶಯವಿಲ್ಲ, ನೆಲದಡಿ ಹರಿಯುವ ನೀರಿನ ಬಗ್ಗೆಯೂ ಈ ಆನೆಗಳಿಗೆ ಬಹಳ ಚೆನ್ನಾಗಿ ಗೊತ್ತಿರುತ್ತದೆ. ಆನೆಗಳಿಗೆ ತಮ್ಮ ಮರಿಗಳ ಮೇಲಿರುವ ಪ್ರೀತಿ ಹಾಗೂ ಕಾಳಜಿಯ ಬಗ್ಗೆ ಪ್ರತ್ಯೇಕವಾಗಿ ಹೇಳಬೇಕಿಲ್ಲ. ನೈಸರ್ಗಿಕವಾಗಿಲ್ಲದ ಪ್ರತಿಯೊಂದನ್ನು ಆನೆಗಳು ಬಹಳ ಜಾಣ್ಮೆಯಿಂದಲೇ ಗಮನಿಸುತ್ತಿರುತ್ತವೆ. ತಮ್ಮ ವೈಯಕ್ತಿಕ ಸ್ಥಳವನ್ನು ಬೇರೆಯವರು ಆಕ್ರಮಿಸುವುದನ್ನು ಆನೆಗಳು ಸೇರಿದಂತೆ ಯಾವ ಪ್ರಾಣಿಗಳು ಇಷ್ಟಪಡುವುದಿಲ್ಲ. ಅವುಗಳಿಗೆ ತಮ್ಮ ಸುತ್ತಲಿನ ಪರಿಸರದ ಬಗ್ಗೆ ಅಲ್ಲಾಗುತ್ತಿರುವ ಬೆಳವಣಿಗೆಗಳ ಬಗ್ಗೆ ಸಾಕಷ್ಟು ಜಾಗೃತಿ ಇರುತ್ತದೆ. ಅವುಗಳು ಅದನ್ನು ಸದಾ ಗಮನಿಸುತ್ತಿರುತ್ತವೆ. ಹಾಗೆಯೇ ಇಲ್ಲೊಂದು ಕಡೆ ಆನೆಯೊಂದು ಕಾಡಿನಲ್ಲಿ ಆಳವಡಿಸಲಾಗಿದ್ದ ಕ್ಯಾಮರಾವನ್ನು ಕಿತ್ತೆಸೆದ ಘಟನೆ ನಡೆದಿದೆ. ಘಟನೆಯ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗ್ತಿದೆ.

ಈ ವೀಡಿಯೋವನ್ನು ಭಾರತೀಯ ಅರಣ್ಯ ಸೇವೆ ಅಧಿಕಾರಿ ಪರ್ವಿನ್ ಕಸ್ವಾನ್ ಅವರು ಪೋಸ್ಟ್ ಮಾಡಿದ್ದಾರೆ. 28 ಸೆಕೆಂಡ್‌ಗಳ ವೀಡಿಯೋದಲ್ಲಿ ಕಾಡಾನೆ ಕ್ಯಾಮರಾವನ್ನು ದೂರದಿಂದಲೇ ಗಮನಿಸಿ ಅದರತ್ತ ಬಂದು ದಾಳಿ ಮಾಡಿ ಅದನ್ನು ಕಿತ್ತೆಸೆದಿದೆ. ಕ್ಯಾಮರಾ ಕೆಳಗೆ ಬಿದ್ದ ನಂತರ ಆನೆ ಸಮಾಧಾನದಿಂದ ಅಲ್ಲಿಂದ ಹೊರಟು ಹೋಗಿದೆ.

ಈ ವೀಡಿಯೋವನ್ನು ಹಂಚಿಕೊಂಡ ಪರ್ವಿನ್ ಕಸ್ವಾನ್ ಅವರು ಹೀಗೆ ಬರೆದಿದ್ದಾರೆ. ಖಾಸಗಿತನ ಬಹಳ ಅಗತ್ಯ. ಆನೆಯೊಂದು ಏನೋ ನೈಸರ್ಗಿಕವಲ್ಲದ ಸೆಟಪ್‌ನ್ನು ಗಮನಿಸಿ ಅದನ್ನು ಕಿತ್ತೆಸೆಯಲು ನಿರ್ಧಾರ ಮಾಡಿತ್ತು. ಅದು ಎಷ್ಟು ಬುದ್ಧಿವಂತ ನೋಡಿ ಎಂದು ಅವರು ಬರೆದಿದ್ದಾರೆ. ಪ್ರಾಣಿಗಳ ಚಲನವಲನಗಳ ವೀಕ್ಷಣೆಗೆ ಪರಿಸರದ ಅಧ್ಯಯನಕ್ಕೆ ಉದ್ಯಾನವಲಯದಲ್ಲಿ ಕ್ಯಾಮರಾವನ್ನು ಅಳವಡಿಸಲಾಗಿತ್ತು. ಪ್ರಸ್ತುತ 210 ಅಂತಹ ಕ್ಯಾಮರಾಗಳನ್ನು ರಾಷ್ಟ್ರೀಯ ಉದ್ಯಾನವನದಲ್ಲಿ ಅಳವಡಿಸಲಾಗಿದೆ.

ಆನೆ ಕ್ಯಾಮರಾವನ್ನು ದೂರ ಎಸೆದಿದ್ದರೂ ಕ್ಯಾಮರಾಗೆ ಹೆಚ್ಚೇನು ಹಾನಿಯಾಗದೇ ಸುರಕ್ಷಿತವಾಗಿತ್ತು. ಹೀಗಾಗಿಯೇ ಆನೆ ದಾಳಿ ಮಾಡಿರುವ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಆನೆಯ ವರ್ತನೆಯನ್ನು ಸೆರೆ ಹಿಡಿದಿದೆ. ಪ್ರಾಣಿಗಳ ನೈಸರ್ಗಿಕ ಪ್ರವೃತ್ತಿಯನ್ನು ಪ್ರದರ್ಶಿಸುವ ಅದ್ಭುತ ವೀಡಿಯೊವನ್ನು ಪ್ರಸಾರ ಮಾಡುವಲ್ಲಿ ಕ್ಯಾಮರಾ ಯಶಸ್ವಿಯಾಗಿದೆ ಎಂದು ಕಸ್ವಾನ್ ಹೇಳಿದ್ದಾರೆ.

ಅದೃಷ್ಟವಶಾತ್ ಕ್ಯಾಮೆರಾ ಜೀವಂತವಾಗಿದ್ದು, ಈ ಅದ್ಭುತ ಕ್ಲಿಪ್ ಅನ್ನು ಹೊರ ತರಲು ಸಾಧ್ಯವಾಯಿತು. ಇದರೊಂದಿಗೆ ನಾವು ನಮ್ಮ ಕ್ಷೇತ್ರ ಸಿಬ್ಬಂದಿಗೆ ಸಂರಕ್ಷಣೆಗಾಗಿ ತಂತ್ರಜ್ಞಾನದ ಬಳಕೆಯ ಬಗ್ಗೆ ತರಬೇತಿ ನೀಡುತ್ತಿದ್ದೇವೆ. ನಮ್ಮ ರಾಷ್ಟ್ರೀಯ ಉದ್ಯಾನವನದಲ್ಲಿ 20,000 ಹೆಕ್ಟೇರ್‌ಗಿಂತಲೂ ಹೆಚ್ಚು ಭೂಮಿಯನ್ನು ಕ್ಯಾಮೆರಾಗಳು ಆವರಿಸಿವೆ ಎಂದು ವನ್ಯಜೀವಿ ಅಧಿಕಾರಿಗಳು ಕ್ಯಾಮೆರಾವನ್ನು ಇರಿಸುತ್ತಿರುವ ಫೋಟೋಗಳನ್ನು ಹಂಚಿಕೊಳ್ಳುತ್ತಾ ಕಸ್ವಾನ್ ಹೇಳಿದ್ದಾರೆ.

ಇದನ್ನೂ ಓದಿ: ವಿಷಾಹಾರ: ನರ್ಮದಾ ನದಿ ತೀರದಲ್ಲಿ 200ಕ್ಕೂ ಹೆಚ್ಚು ಗಿಳಿಗಳ ಮಾರಣಹೋಮ

ಈ ವೀಡಿಯೊ ವೈರಲ್ ಆಗುತ್ತಿದ್ದಂತೆ, ಸಾಮಾಜಿಕ ಜಾಲತಾಣಗಳಲ್ಲಿ ಹಲವರು ಕಾಮೆಂಟ್ ಮಾಡಿದ್ದು, ಆನೆಗಳ ಬುದ್ಧಿವಂತಿಕೆಗೆ ಅಚ್ಚರಿಪಟ್ಟಿದ್ದಾರೆ. ದಾಳಿ ಮಾಡುವುದಕ್ಕೆ ಆನೆಯನ್ನು ಈ ರೀತಿ ಪ್ರೇರೇಪಿಸಿದ್ದು ಯಾರು ಹಾಗೂ ಏನು ಎಂದು ಒಬ್ಬರು ಪ್ರಶ್ನೆ ಮಾಡಿದ್ದಾರೆ. ಆನೆ ಪ್ರಭೇದಗಳು ಎಷ್ಟು ಬುದ್ಧಿವಂತವಾಗಿವೆ ಎಂಬುದನ್ನು ನೋಡುವುದು ನಿಜಕ್ಕೂ ಅದ್ಭುತವಾಗಿದೆ. ಅವು ಯಾವಾಗಲೂ ತಮ್ಮ ಬುದ್ಧಿವಂತಿಕೆ ಮತ್ತು ಮುಗ್ಧತೆಯಿಂದ ನಮ್ಮನ್ನು ಆಶ್ಚರ್ಯಚಕಿತಗೊಳಿಸುತ್ತವೆ ಎಂದು ಒಬ್ಬ ಬಳಕೆದಾರರು ಹೇಳಿದರು. ಕ್ಯಾಮೆರಾದಲ್ಲಿನ ಬಿಳಿ ಫ್ಲ್ಯಾಷ್ ಆನೆಗೆ ಕಿರಿಕಿರಿಯನ್ನುಂಟು ಮಾಡಿರಬಹುದು ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ಅವರು ಆನೆಯ ಖಾಸಗಿತನ ಸೆರೆ ಹಿಡಿಯಲು ಕ್ಯಾಮರಾ ಅಳವಡಿಸಿದರು. ಆದರೆ ಆನೆ ಅದನ್ನು ಸಹಿಸಲಿಲ್ಲ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ.

ಇದನ್ನೂ ಓದಿ: ಶಾಲೆಬಿಟ್ಟು ಮೊಬೈಲ್ ಕಳ್ಳತನಕ್ಕಿಳಿದ ಬಾಲಕ: ಆತನಿಗೆ ಬುದ್ಧಿ ಕಲಿಸಲು ಮುಂದಾದ ಪೋಷಕರ ವಿರುದ್ಧವೇ ಈಗ ಕೇಸ್