Asianet Suvarna News Asianet Suvarna News

ಹೊರಗೆ ಆಲೆಮನೆ..ಒಳಗೆ ಭ್ರೂಣ ಪತ್ತೆ ದಂಧೆ: ಸಕ್ಕರೆ,ಬೆಲ್ಲ ತಯಾರಿಸೋ ಸ್ಥಳದಲ್ಲಿ ಪತ್ತೆಯಾಗ್ತಿತ್ತು ಭ್ರೂಣ..!

ಭ್ರೂಣ ಪತ್ತೆ ಮತ್ತು ಹತ್ಯೆ ಜಾಲ ಕೆದಕಿದಷ್ಟು ಭಯಾನಕತೆ ತೆರೆದುಕೊಳ್ತಿದೆ. ನಾಲ್ಕಾರು ತಲೆಗಳಲ್ಲ, ಈ ಜಾಲದ ಹಿಂದೆ ನೂರಾರು ಕೈಗಳು ಕೆಲಸ ಮಾಡ್ತಿವೆ. ಸಾವಿರಾರು ಜನರ ನಡುವೆಯೇ ಇದ್ದು, ಯಾರ ಕಣ್ಣಿಗೂ ಬೀಳದಂತೆ ಎಗ್ಗಿಲ್ಲದೆ ದಂಧೆ ನಡೆಸ್ತಿದ್ದಾರೆ. ಹೇಗೆ ನಡೀತಿತ್ತು ಆ ದಂಧೆ ಅನ್ನೋದನ್ನ ನಿಮ್ಮ ಏಷ್ಯಾನೆಟ್ ಸುವರ್ಣ ನ್ಯೂಸ್ ಬಯಲು ಮಾಡಿದೆ.

ಕಳೆದೊಂದು ವಾರದಿಂದ ಭ್ರೂಣ ಪತ್ತೆ ಮತ್ತು ಹತ್ಯೆ (female foeticide)ವಿಚಾರ ರಾಜ್ಯದ ಜನತೆ ನಿದ್ದೆಗೆಡಿಸಿದೆ. ಇದೀಗ ಸುವರ್ಣ ನ್ಯೂಸ್ ಈ ಜಾಲದ ಆಳ, ಅಗಲದ ಜೊತೆಗೆ ದಂಧೆಯ ಕಾರ್ಯ ವೈಖರಿಯನ್ನೇ ರಹಸ್ಯ ಕಾರ್ಯಾಚರಣೆ ಮೂಲಕ ಬಯಲಿಗೆಳೆದಿದೆ. ಸಕ್ಕರೆ, ಬೆಲ್ಲ ತಯಾರಿಸೋ ಆಲೆ ಮನೆಯಲ್ಲೇ ಪಾಪಿಗಳ ರಕ್ಕಸ ಕೃತ್ಯ ನಡೆಸುತ್ತಿದ್ದರು. ಹೊರಗೆ ನೋಡೋರಿಗೆ ಆಲೆಮನೆ. ಆದರೆ ಒಳಗೆ ಮಾತ್ರ ಭ್ರೂಣ ಪತ್ತೆ ಜಾಲದ ಮೂಲ ಮನೆ. ತನ್ನದೇ ಜಾಲ ಸೃಷ್ಟಿಸಿಕೊಂಡಿದ್ದ ಈ ಗ್ಯಾಂಗ್ನಲ್ಲಿ ಮಹಿಳೆಯರೇ(Women) ಹೆಚ್ಚು. ಏರಿಯಾ ಏರಿಯಾ ಸುತ್ತಿ ಗರ್ಭಿಣಿಯರನ್ನ ಹುಡುಕುತ್ತಿದ್ದ ಖತರ್ನಾಕ್ ಲೇಡಿಗಳು.. ಬಳಿಕ ಅವರನ್ನ ಮಂಡ್ಯ(Mandya) ಬಸ್ ನಿಲ್ದಾಣಕ್ಕೆ ಬರೋಕೆ ಹೇಳ್ತಿದ್ರಂತೆ. ಈ ಬಸ್ ನಿಲ್ದಾಣವೇ ಇವರ ದಂಧೆಯ ಮುಖ್ಯ ಅಡ್ಡವಾಗಿತ್ತಂತೆ.ಜಾಲಕ್ಕೆ ಬಿದ್ದ ಗರ್ಭಿಣಿಯರನ್ನ ಮಂಡ್ಯ KSRTC ನಿಲ್ದಾಣಕ್ಕೆ ಕರೆಯುತ್ತಿದ್ದರಂತೆ. 

ಇಲ್ಲಿಂದಲೇ ಅವರ ಡೀಲ್ ಆರಂಭವಾಗ್ತಿತ್ತು. ಬಳಿಕ ಮಂಡ್ಯ ಬಸ್ಸ್ಟ್ಯಾಂಡ್ನಿಂದ ತಮ್ಮ ಅಡ್ಡಾಗೆ ಗರ್ಭಿಣಿಯರನ್ನ ಕರೆದೊಯ್ಯುತ್ತಿದ್ದರು. ಪಾಂಡವಪುರ, ಕೆಆರ್ಪೇಟೆ, ಮಳವಳ್ಳಿ, ಮದ್ದೂರು, ಶ್ರೀರಂಗಪಟ್ಟಣ ಮತ್ತು ಮೈಸೂರು ಬಳಿಯ ಆಲೆಮನೆಗಳಿಗೆ ಕರೆದೊಯ್ದು, ಸ್ಕ್ಯಾನಿಂಗ್ ಮಾಡಿ ಭ್ರೂಣಪತ್ತೆ ಮಾಡ್ತಿದ್ರು. ಹೆಣ್ಣು ಮಗು ಬೇಡ ಎನ್ನುವವರಿಗೆ ಅಬಾರ್ಷನ್(Abortion) ಮಾಡಿಸಲು ಇವರೇ ಆಸ್ಪತ್ರೆಯನ್ನೂ ರೆಫರ್ ಮಾಡಿ, ತಮ್ಮ ನೆಟ್ವರ್ಕ್ನ ಆಸ್ಪತ್ರೆಗಳಿಗೆ ಶಿವಲಿಂಗೇಗೌಡ, ಸುನಂದಾ ಗರ್ಭಿಣಿಯರನ್ನ ಖುದ್ದು ಕರೆದೊಯ್ದು ಅಬಾರ್ಷನ್ ಮಾಡಿಸುತ್ತಿದ್ದರು.ಈ ಖತರ್ನಾಕ್ ಗ್ಯಾಂಗ್ ಹೇಗೆ ಕೆಲಸ ಮಾಡ್ತಿತ್ತು ಅಂದ್ರೆ.. ಸ್ವತಃ ಗರ್ಭಿಣಿಯರ ಗಂಡನಿಗೇ ಈ ವಿಚಾರ ತಿಳಿಯದಂತೆ ಡೀಲ್ ಮಾಡ್ತಿದ್ರು. ಭ್ರೂಣಪತ್ತೆಗೆ ಬಂದಾಗ ಗರ್ಭಿಣಿಯರು ಮೊಬೈಲ್ ಸ್ವಿಚ್ ಆಫ್ ಮಾಡ್ಬೇಕಿತ್ತಂತೆ. ಸಾಲದಕ್ಕೆ ಒಂದು ಓಮಿನಿಯಲ್ಲಿ 8ರಿಂದ 10 ಗರ್ಭಿಣಿಯರನ್ನ ಕರೆದೊಯ್ತಿದ್ರಂತೆ.

ದಾವಣಗೆರೆಯ ವೀರೇಶ್ ಈ ಭ್ರೂಣ ಪತ್ತೆ ಮಾಸ್ಟರ್ ಮೈಂಡ್ ಆಗಿದ್ದ. ವಾರಕ್ಕೊಮ್ಮೆ ಮಂಡ್ಯಕ್ಕೆ ಬರ್ತಿದ್ದ ವೀರೇಶ್ ಫಿಕ್ಸ್ ಮಾಡಿದ ಜಾಗದಲ್ಲೇ ಸ್ಕ್ಯಾನಿಂಗ್ ನಡೀತಿತ್ತು. ಒಂದೊಂದು ಸ್ಕ್ಯಾನಿಂಗ್ಗೆ ಮಿನಿಮಮ್ 15 ಸಾವಿರ ಕೊಡಲೇಬೇಕಿತ್ತು. ಹೆಣ್ಣು ಮಗು ಬೇಡ ಅನ್ನೋರಿಗೆ ಭಯ ಬೀಳಿಸುತ್ತಿದ್ದ ಗ್ಯಾಂಗ್, 5 ತಿಂಗಳು ತುಂಬೋ ಮೊದಲೇ ಅಬಾರ್ಷನ್ ಮಾಡಿಸುವಂತೆ ಬ್ರೈನ್ ವಾಷ್ ಮಾಡ್ತಿತ್ತು.ಏಷ್ಯಾನೆಟ್ ಸುವರ್ಣ ನ್ಯೂಸ್ ರಹಸ್ಯ ಕಾರ್ಯಾಚರಣೆ ಬಳಿಕ ಸರ್ಕಾರ ಮತ್ತಷ್ಟು ಎಚ್ಚೆತ್ತಿದೆ. ತಪ್ಪಿತಸ್ಥರನ್ನು ಬಿಡೋ ಮಾತೇ ಇಲ್ಲ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ರು. ಇನ್ನು ಕರಾಳ ದಂಧೆ ಮೂಲ ಪತ್ತೆ ಹಚ್ಚಿದ ಸುವರ್ಣ ನ್ಯೂಸ್ಗೆ ಧನ್ಯವಾದ ಹೇಳಿದ ಆರೋಗ್ಯ ಸಚಿವರು ಕೂಡ ತಪ್ಪಿಸ್ಥರ ವಿರುದ್ಧ ಕ್ರಮದ ಭರವಸೆ ನೀಡಿದ್ರು. ಸದನದಲ್ಲೂ ಸುವರ್ಣ ನ್ಯೂಸ್ ವರದಿ ಪ್ರತಿಧ್ವನಿಸಿತು. ಭ್ರೂಣ ಹತ್ಯೆ ದಂಧೆ ಬಗ್ಗೆ ಪ್ರಸ್ತಾಪಿಸಿದ ವಿಪಕ್ಷ ನಾಯಕ ಆರ್.ಅಶೋಕ್ ಮತ್ತು ಎಂಎಲ್ಸಿ ರವಿಕುಮಾರ್.. ಸರ್ಕಾರ ಎಚ್ಚೆತ್ತು ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ರು.

ಇದನ್ನೂ ವೀಕ್ಷಿಸಿ:  ಪೊಲೀಸ್‌ ಠಾಣೆ ಎದುರೇ ಮಂತ್ರ ಘೋಷ..ಮಾಂಗಲ್ಯ ಧಾರಣೆ: ಹಿಂದೂ ಯುವಕ-ಮುಸ್ಲಿಂ ಯುವತಿ ಮದುವೆ !