Udupi: ಸರ್ಕಾರಿ ಶಾಲೆಗಳ ಟಾಯ್ಲೆಟ್ ಸ್ವಚ್ಛತೆಗೆ ರಥ: ಗೋಪಾಡಿ ಶ್ರೀನಿವಾಸ ರಾವ್ ಕೊಡುಗೆ!

ಶಾಲೆಯ ಶೌಚಾಲಯಗಳೆಂದರೆ ಅಲ್ಲಿ ಮೂಗು ಮುಚ್ಚಿಕೊಂಡೇ ಹೋಗಬೇಕು, ಕೊಳಕು ಶೌಚಾಲಯವನ್ನು ವಿದ್ಯಾರ್ಥಿಗಳಿಂದ ಸ್ವಚ್ಛ ಮಾಡಿಸುವಂತಿಲ್ಲ! ಹಾಗಂತ ಸಿಬ್ಬಂದಿ ನೇಮಿಸಿ ನಿರ್ವಹಣೆ ಮಾಡಲು ಸಾಧ್ಯವಿಲ್ಲ.

Share this Video
  • FB
  • Linkdin
  • Whatsapp

ಉಡುಪಿ (ಡಿ.12): ಶಾಲೆಯ ಶೌಚಾಲಯಗಳೆಂದರೆ ಅಲ್ಲಿ ಮೂಗು ಮುಚ್ಚಿಕೊಂಡೇ ಹೋಗಬೇಕು, ಕೊಳಕು ಶೌಚಾಲಯವನ್ನು ವಿದ್ಯಾರ್ಥಿಗಳಿಂದ ಸ್ವಚ್ಛ ಮಾಡಿಸುವಂತಿಲ್ಲ! ಹಾಗಂತ ಸಿಬ್ಬಂದಿ ನೇಮಿಸಿ ನಿರ್ವಹಣೆ ಮಾಡಲು ಸಾಧ್ಯವಿಲ್ಲ. ಈ ಸಮಸ್ಯೆಗೆ ಉಡುಪಿಯಲ್ಲಿ ಪರಿಹಾರ ಸಿಕ್ಕಿದೆ. ಸರಕಾರಿ ಶಾಲೆಗಳ ಟಾಯ್ಲೆಟ್ ಸ್ವಚ್ಛತೆಗೆ ರಥ ಹೊರಟಿದೆ. ಖಾಸಗಿ ಸಹಭಾಗಿತ್ವದಿಂದ ಶಿಕ್ಷಣ ಕ್ಷೇತ್ರದಲ್ಲಿ ಗಮನಾರ್ಹ ಸಾಧನೆ ಮಾಡುತ್ತಾ ಬಂದಿರುವ ಉಡುಪಿಯಲ್ಲಿ, ಇದೀಗ ಹೊಸ ಅಭಿಯಾನ ಶುರುವಾಗಿದೆ. ಹೋಟೆಲ್ ಉದ್ಯಮದಲ್ಲಿ ಸ್ವಚ್ಛತೆ ಹಾಗೂ ಗುಣಮಟ್ಟಕ್ಕೆ ಹೆಸರಾದ ಗೋಪಾಡಿ ಶ್ರೀನಿವಾಸ ರಾವ್, ತಮ್ಮ ನೇತೃತ್ವದ ಗೋಪಾಡಿ ಶ್ರೀನಿವಾಸ -ರುಕ್ಮಿಣಿ ಫೌಂಡೇಶನ್ ಮೂಲಕ, ದೇಶದಲ್ಲೇ ಮೊದಲು ಎನ್ನಬಹುದಾದ ಸಾಮಾಜಿಕ ಕಳಕಳಿಯ ಕೆಲಸಕ್ಕೆ ಚಾಲನೆ ನೀಡಿದ್ದಾರೆ. ತನ್ನ ಊರಿನ ಸರಕಾರಿ ಶಾಲೆಗಳ ಟಾಯ್ಲೆಟ್ ಸ್ವಚ್ಛತೆಗೆ ವಾಹನವೊಂದನ್ನು ಕೊಡುಗೆಯಾಗಿ ನೀಡಿದ್ದಾರೆ.

ವಾಹನವನ್ನು ಕೊಡುಗೆಯಾಗಿ ಕೊಟ್ಟು ಅವರು ಸುಮ್ಮನಾಗಿಲ್ಲ, ಇಬ್ಬರು ಸಿಬ್ಬಂದಿಗಳನ್ನು ನೇಮಕ ಮಾಡಿ, ಸ್ವಚ್ಛತೆಗೆ ಬೇಕಾದ ಎಲ್ಲಾ ಪರಿಕರ ಸಹಿತ ಸಜ್ಜುಗೊಳಿಸಿದ್ದಾರೆ. ಈ ಪರಿಸರದ 24 ಸರಕಾರಿ ಶಾಲೆಗಳಲ್ಲಿ, ಈ ರಥ ಸಂಚರಿಸಲಿದೆ, ಪ್ರತಿಯೊಂದು ಶಾಲೆಗೆ ವಾರದಲ್ಲಿ ಎರಡು ಬಾರಿ ಭೇಟಿಕೊಟ್ಟು ಟಾಯ್ಲೆಟ್ ಸ್ವಚ್ಛಗೊಳಿಸುವ ಸತ್ಕಾರ್ಯ ಕೈಗೊಳ್ಳಲಾಗಿದೆ. ಪ್ರಧಾನಿ ಮೋದಿ ಅವರ ಸ್ವಚ್ಛ ಭಾರತ ಅಭಿಯಾನದಿಂದ ಸ್ಪೂರ್ತಿ ಪಡೆದ ಶ್ರೀನಿವಾಸ ರಾವ್, ಸರಕಾರಿ ಶಾಲೆಗಳ ಸ್ವಚ್ಛತೆಗೆ ಆದ್ಯತೆ ನೀಡುವ ನಿಟ್ಟಿನಲ್ಲಿ ಈ ಸಹಾಯ ಹಸ್ತ ಚಾಚಿದ್ದಾರೆ. ವಿಶೇಷವಾಗಿ ಹೆಣ್ಣು ಮಕ್ಕಳು ಶೌಚಾಲಯದಲ್ಲಿ ಸ್ವಚ್ಛತೆ ಇಲ್ಲದ ಕಾರಣಕ್ಕೆ ನೀರು ಕುಡಿಯದೆ ಆರೋಗ್ಯ ಹಾಳು ಮಾಡಿಕೊಳ್ಳುತ್ತಿದ್ದಾರೆ. ಇದರಿಂದ ಮನನೊಂದ ಶ್ರೀನಿವಾಸ ರಾವ್ ಈ ಮಹಾ ಕಾರ್ಯಕ್ಕೆ ಮುಂದಾಗಿದ್ದಾರೆ.

ಉಡುಪಿ ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ ಹಾಗೂ ಭೀಮನಕಟ್ಟೆ ಮಠದ ಸ್ವಾಮೀಜಿಗಳ ಮೂಲಕ ಈ ಯೋಜನೆಗೆ ಚಾಲನೆ ದೊರೆತಿದೆ. ಪರಿಸರದ 24 ಶಾಲೆಗಳು ಈ ಯೋಜನೆಯ ಪ್ರಯೋಜನ ಪಡೆಯಲಿವೆ. ತಮ್ಮ ಟ್ರಸ್ಟ್ ಅಸ್ತಿತ್ವದಲ್ಲಿ ಇರುವವರೆಗೂ ಈ ಯೋಜನೆ ಮುಂದುವರೆಯಲಿದೆ ಎಂದು ಶ್ರೀನಿವಾಸರಾವ್ ಭರವಸೆ ನೀಡಿದ್ದಾರೆ. ಈಗಾಗಲೇ ತಮ್ಮ ಈಶಾನ್ಯ ದ ರೆಸ್ಡೋರೆಂಟ್ ಮೂಲಕ ಆಹಾರ ಉದ್ಯಮದಲ್ಲಿ ಆಂಧ್ರಪ್ರದೇಶ, ಬೆಂಗಳೂರು ಮತ್ತು ಕುಂದಾಪುರದಲ್ಲಿ ಹೆಸರುವಾಸಿಯಾಗಿರುವ ಈ ಸಮೂಹ, ಸ್ವಚ್ಛತಾ ರಥದ ಮೂಲಕ ದೇಶಕ್ಕೆ ಮಾದರಿ ಯೋಜನೆ ಯೊಂದನ್ನು ಕೊಡುಗೆಯಾಗಿ ಕೊಟ್ಟಿದೆ. ಈ ಯೋಜನೆಯಿಂದ ಸ್ಪೂರ್ತಿ ಪಡೆದು, ಊರದಾನಿಗಳ ನೆರವಿನೊಂದಿಗೆ ಎಲ್ಲಾ ಶಾಲೆಗಳಲ್ಲೂ ಶೌಚಾಲಯ ಸ್ವಚ್ಛತೆಗೆ ಆದ್ಯತೆ ದೊರಕಲಿ ಎನ್ನುವುದು ಜಿಎಸ್ಆರ್ ಫೌಂಡೇಶನ್ ಆಶಯವಾಗಿದೆ.

Related Video