Toxic Movie Review: ಯಶ್ ನಟನೆಯ ‘ಟಾಕ್ಸಿಕ್’ ಸಾಮಾನ್ಯ ಗ್ಯಾಂಗ್‌ಸ್ಟರ್ ಸಿನಿಮಾವಲ್ಲ. ಪ್ರೀತಿ, ಹಿಂಸೆ, ನೆನಪು, ಭ್ರಮೆ ಮತ್ತು ಅಪರಾಧಪ್ರಜ್ಞೆಯ ನಡುವೆ ಸಿಲುಕಿರುವ ರಾಯನ ಕಥೆಯನ್ನು ಗೀತು ಮೋಹನ್‌ದಾಸ್ ವಿಭಿನ್ನವಾಗಿ ಕಟ್ಟಿದ್ದಾರೆ.
- ಜೋಗಿ
ಗ್ಯಾಂಗ್‌ಸ್ಟರ್ ಸಿನಿಮಾಗಳಿಗೆ ಒಂದು ಸಿದ್ಧ ಮಾದರಿ ಇರುತ್ತದೆ. ಅದು ಯಾವತ್ತೂ ಆತನ ಅಂತರಂಗವನ್ನು ಪೂರ್ತಿಯಾಗಿ ತೆರೆದಿಡುವುದಿಲ್ಲ. ಪ್ರೇಕ್ಷಕನ ಭಾವುಕತೆಯನ್ನು ಗ್ಯಾಂಗ್‌ಸ್ಟರ್ ಸಿನಿಮಾಗಳು ಎಷ್ಟು ಬೇಕೋ ಅಷ್ಟು ಮಾತ್ರ ಪ್ರಚೋದಿಸುತ್ತಿರುತ್ತವೆ. ಟಾಕ್ಸಿಕ್ ಹೀಗೆ ಮಾಡುವುದಿಲ್ಲ ಅನ್ನುವ ಕಾರಣಕ್ಕೇ ವಿಶಿಷ್ಟವಾಗಿದೆ. ಇದು ಒಬ್ಬ ಡಾನ್‌ನ ಬದುಕನ್ನು ಹೊರಗಿನಿಂದ ನೋಡುವ ಸಿನಿಮಾ ಮಾತ್ರ ಅಲ್ಲ. ಅವನ ಹೊರ ಬದುಕಿನಷ್ಟೇ ತೀವ್ರವಾಗಿ, ಅವನ ಮನಸ್ಸಿನೊಳಗೆ ಏನೇನು ನಡೆಯುತ್ತಿದೆ ಎನ್ನುವುದನ್ನು ಹೇಳಲು ಪ್ರಯತ್ನಿಸುವ ಸಿನಿಮಾ.
ಒಬ್ಬ ಗ್ಯಾಂಗ್‌ಸ್ಟರ್- ರಾಯ. ಅವನಿಗೆ ಸಿಗದ ಪ್ರೀತಿ. ಅವನು ಕಳೆದುಕೊಂಡ ಪ್ರೀತಿಯ ನೆನಪು, ಅವನಿಗೆ ನಿಜವೋ ಅಲ್ಲವೋ ಕೊನೆಗೂ ತಿಳಿಯದಂತೆ ಕಾಡುವ ಮಗಿರಿ- ಈ ಮೂರರ ನಡುವೆ ತಲ್ಲಣಿಸುತ್ತಿರುವ ಬದುಕು. ಬದುಕಿಗೆ ಅಂಟಿಕೊಳ್ಳಲು ಅವನು ಮೊರೆಹೋಗುವ ಅಮಲು, ಕ್ರೌರ್ಯ, ಹಿಂಸೆ ಮತ್ತು ಮೋಹಕ ಹುಚ್ಚುತನ.
ಅವನ ಹೊರಗಿನ ಜಗತ್ತು ಹಿಂಸೆ, ಅಧಿಕಾರ, ಭಯ ಮತ್ತು ಅಪರಾಧಗಳದ್ದು. ಒಳಗಿನ ಜಗತ್ತು ಕೂಡ ಇಷ್ಟೇ ವಿಚಿತ್ರ. ಅಲ್ಲಿ ನೆನಪುಗಳು ವರ್ತಮಾನಕ್ಕೆ ಬಂದು ನಿಲ್ಲುತ್ತವೆ. ಭೂತಕಾಲ ಇದ್ದಕ್ಕಿದ್ದಂತೆ ವರ್ತಮಾನವನ್ನು ನಿಯಂತ್ರಿಸುತ್ತದೆ. ಇಲ್ಲದವರು ಎದುರು ನಿಂತಂತೆ ಕಾಣುತ್ತಾರೆ. ನಡೆದ ಘಟನೆಗಳಿಗಿಂತ ಮನಸ್ಸಿನಲ್ಲಿ ನಡೆದ ಘಟನೆಗಳೇ ಕೆಲವೊಮ್ಮೆ ಹೆಚ್ಚು ನಿಜವಾಗಿರುತ್ತವೆ. ಕಲ್ಪನೆಯ ನಿಯತ್ತಿಗಿಂತ ವಾಸ್ತವದ ದ್ರೋಹವೇ ಹೆಚ್ಚು ಪ್ರಾಮಾಣಿಕ ಅನ್ನುವ ಮಾತು ರಾಯನ ಬಾಯಿಯಿಂದಲೇ ಬರುತ್ತದೆ.
ಟಾಕ್ಸಿಕ್‌ನಲ್ಲಿ ಯಾವುದು ವಾಸ್ತವ, ಯಾವುದು ನೆನಪು, ಯಾವುದು ಭ್ರಮೆ, ಯಾವುದು ಅವನ ಕಲ್ಪನೆ ಎನ್ನುವುದು ಸ್ಪಷ್ಟವಾಗುವುದೇ ಇಲ್ಲ. ಇವೆಲ್ಲವುಗಳ ಕೊಲಾಜ್ ನಮ್ಮ ಮುಂದೆ ಹಾದು ಹೋಗುತ್ತಿರುತ್ತದೆ. ಅವನು ಕೇಡಿಗಳ ಮಹರಾಯನಾಗಿ ಎಲ್ಲವನ್ನೂ ನಿಯಂತ್ರಿಸಬಲ್ಲ. ಜನರನ್ನು ಹೆದರಿಸಬಲ್ಲ. ಎದುರಾಳಿಗಳನ್ನು ಸೋಲಿಸಬಲ್ಲ. ತನ್ನ ಸುತ್ತಲಿನ ಜಗತ್ತನ್ನು ತನ್ನ ನಿಯಮಗಳಂತೆ ನಡೆಸಬಲ್ಲ. ಪ್ರೀತಿಯನ್ನು ಮಾತ್ರ ಆಳುವುದು ಸಾಧ್ಯವಾಗುವುದಿಲ್ಲ.
ಅವನಿಗೆ ಸಿಗದ ಪ್ರೀತಿ ಅವನೊಳಗಿನ ದುರ್ಬಲ ಮನುಷ್ಯನನ್ನು ಹೊರಗೆ ತರುತ್ತದೆ. ಅವನು ಎಷ್ಟೇ ಕ್ರೂರಿಯಾಗಿದ್ದರೂ, ಆ ಪ್ರೀತಿಯ ಮುಂದೆ ಅವನು ಅಸಹಾಯಕ. ಅವನು ಕಳೆದುಕೊಂಡ ಪ್ರೀತಿ ಅವನ ನೆನಪಿನಲ್ಲಿ ಬದುಕುತ್ತಲೇ ಇರುತ್ತದೆ. ಅದು ಕೇವಲ ನೆನಪೇ ಅಥವಾ ಅವನ ಅಪರಾಧಪ್ರಜ್ಞೆ, ನೋವು ಮತ್ತು ಏಕಾಂತ ಸೇರಿ ಸೃಷ್ಟಿಸಿರುವ ಭ್ರಮೆಯೇ ಎಂಬುದೂ ಇಲ್ಲಿ ಅಸ್ಪಷ್ಟ. ಗೀತು ಮೋಹನ್‌ದಾಸ್ ಇವನ್ನೆಲ್ಲ ರೂಪಕಗಳಲ್ಲಿ ಮತ್ತು ತುಣುಕು ಸಂಭಾಷಣೆಗಳಲ್ಲಿ ಹಿಡಿದಿಡುತ್ತಾ ಹೋಗಿದ್ದಾರೆ.
ಇಲ್ಲಿ ಹಿಂಸೆಯ ಮಧ್ಯೆ ಪ್ರೀತಿ ಬರುತ್ತದೆ. ಪ್ರೀತಿಯ ಮಧ್ಯೆ ಹಿಂಸೆ ನುಗ್ಗುತ್ತದೆ. ಒಂದು ನೆನಪು ಅವನನ್ನು ಇನ್ನೊಂದು ಕಾಲಕ್ಕೆ ಕರೆದೊಯ್ಯುತ್ತದೆ. ಒಂದು ಘಟನೆ ಅವನೊಳಗಿನ ಮತ್ತೊಂದು ಗಾಯವನ್ನು ತೆರೆದುಬಿಡುತ್ತದೆ. ಇದನ್ನೆಲ್ಲ ಒಂದು ಓದಲಾಗದ ಭಾಷೆಯಲ್ಲಿ ಗೀತು ಮೋಹನ್‌ದಾಸ್ ಬರೆದಿದ್ದಾರೆ. ಟಾಕ್ಸಿಕ್ ಚಿತ್ರದ ವೈಚಿತ್ರ್ಯವೇ ಅದರ ಚಿತ್ರಭಾಷೆ. ಸಿನಿಮಾ ಅವನ ಬದುಕನ್ನು ಸರಳವಾಗಿ ಹೇಳುವುದಕ್ಕಿಂತ, ಅವನ ಮನಸ್ಸು ಹೇಗೆ ಅವನ ಸ್ಥಿತಿಯನ್ನು ಅನುಭವಿಸುತ್ತಿದೆ ಎಂಬುದನ್ನು ತೋರಿಸಲು ಪ್ರಯತ್ನಿಸುತ್ತದೆ. ಅವನ ಭಯ, ಕೋಪ, ಕಾಮನೆ, ಪ್ರೀತಿ, ಅಪರಾಧಪ್ರಜ್ಞೆ, ಏಕಾಂತ ಎಲ್ಲವೂ ಒಂದಕ್ಕೊಂದು ಬೆರೆತು ಹೋಗುತ್ತವೆ.
ಹೀಗಾಗಿ ಟಾಕ್ಸಿಕ್ ಒಬ್ಬ ಡಾನ್‌ನ ಏಳು-ಬೀಳುಗಳ ಕಥೆ ಮಾತ್ರ ಅಲ್ಲ. ಹೊರಗೆ ಅವನು ನಿರ್ಮಿಸಿಕೊಂಡಿರುವ ಜಗತ್ತಿಗಿಂತ, ತನ್ನೊಳಗೆ ಅವನು ಸಿಕ್ಕಿಹಾಕಿಕೊಂಡಿರುವ ಜಗತ್ತಿನ ಕಥೆ ಇದು. ಅವನು ತನ್ನ ಶತ್ರುಗಳನ್ನು ಕೊಲ್ಲಬಹುದು. ತನ್ನೊಳಗೆ ಬದುಕುತ್ತಿರುವ ಭೂತಕಾಲ ಎಂಬ ಮಹಾವೈರಿಯನ್ನು ಕೊಲ್ಲಲಾರ. ಒಬ್ಬ ಗ್ಯಾಂಗ್‌ಸ್ಟರ್‌ನ ಕಥೆಯಾಗಿ ಶುರುವಾಗುವ ಟಾಕ್ಸಿಕ್, ತನ್ನದೇ ಮನಸ್ಸಿನೊಳಗೆ ಸಿಕ್ಕಿಹಾಕಿಕೊಂಡಿರುವ ಒಬ್ಬ ಮನುಷ್ಯನ ಕಥೆಯಾಗಿ ಬದಲಾಗುತ್ತದೆ. ಅದೇ ಈ ಸಿನಿಮಾದ ಶಕ್ತಿ, ಮಿತಿ ಮತ್ತು ವೈಚಿತ್ರ್ಯ. ಅದೇ ಇದರ ಟಾಕ್ಸಿಸಿಟಿ.
ಚಿತ್ರ: ಟಾಕ್ಸಿಕ್
ನಿರ್ದೇಶನ: ಗೀತು ಮೋಹನ್‌ದಾಸ್
ತಾರಾಗಣ: ಯಶ್, ನಯನತಾರಾ, ಕಿಯಾರ ಅಡ್ವಾಣಿ, ಹುಮಾ ಖುರೇಶಿ, ಸುದೇವ್ ನಾಯರ್, ರುಕ್ಮಿಣಿ ವಸಂತ್
ರೇಟಿಂಗ್: 3
ಈ ಕಥನದ ಉದ್ದಕ್ಕೂ ವೀರನಂತೆ, ವಿಕ್ಷಿಪ್ತನಂತೆ, ಮಹಾ ಪ್ರೇಮಿಯಂತೆ, ಕಾಮುಕನಂತೆ, ಲೋಲುಪನಂತೆ ಯಶ್ ನಟನೆಯ ಛಾಯೆ ಬದಲಾಗುತ್ತಾ ಹೋಗುತ್ತದೆ. ಆ ಪಾತ್ರಕ್ಕಿರುವ ಹತ್ತಾರು ನೆರಳುಗಳನ್ನು ಯಶ್ ಅದ್ಭುತವಾಗಿ ನಿಭಾಯಿಸಿದ್ದಾರೆ. ಸೋಲೊಪ್ಪಿಕೊಂಡ ದಂಡನಾಯಕನಂತೆ, ಮಗನನ್ನು ನಿಭಾಯಿಸಲಾರದ ಹತಾಶ ತಂದೆಯಂತೆ, ತಾನು ತಾನೇ ಆಗಿರುವವಳ ತೆಕ್ಕೆಗೆ ಮರಳಲಾರದ ದುರಂತ ಪ್ರೇಮಿಯಂತೆ ಬದಲಾಗುತ್ತಾ ಹೋಗುವ ಸಂಕೀರ್ಣ ಪಾತ್ರವನ್ನು ಯಶ್ ಬದುಕಿದ್ದಾರೆ.
ಕೆಲವೊಂದು ದೃಶ್ಯದಲ್ಲಿ ಯಶ್ ಅಭಿನಯ, ರಾವಣನ ಪಾತ್ರಕ್ಕಾಗಿ ಮಾಡುತ್ತಿರುವ ರಿಹರ್ಸಲ್‌ನಂತೆ ಭಾಸವಾಗುತ್ತದೆ. ನಯನತಾರಾ, ಕಿಯಾರ ಇವರಿಬ್ಬರು ಬರೀ ರಕ್ತವಲ್ಲ, ಕಂಬನಿಯೂ ಕಣ್ಣಲ್ಲಿದೆ ಅಂತ ತೋರಿಸುತ್ತಾರೆ. ಕತೆಯ ಅಂತರಾಳದಲ್ಲಿರುವ ಹಿಂಸೆ, ಅಧಿಕಾರ ಮತ್ತು ದಾಹವನ್ನು ರವಿ ಬಸ್ರೂರು ಸಂಗೀತ ಸಮರ್ಥವಾಗಿ ಎತ್ತಿ ಹಿಡಿಯುತ್ತದೆ. ಇಡೀ ಚಿತ್ರ ಹಾಲಿವುಡ್ ಶೈಲಿಯಲ್ಲಿದೆ. ಹೀಗಾಗಿ ಅನೇಕ ದೃಶ್ಯಗಳಲ್ಲಿ ಪಾತ್ರಗಳು ಆಡುವ ಕನ್ನಡ ಮಾತು ಆ ಸಂದರ್ಭಕ್ಕೆ ಹೊಂದುತ್ತಿಲ್ಲ ಅನ್ನಿಸುತ್ತಾ, ಕನ್ನಡಕ್ಕೆ ಡಬ್ ಆದ ಹಾಲಿವುಡ್ ಸಿನಿಮಾ ನೋಡಿದ ಭಾವನೆ ಮೂಡಿಸುತ್ತದೆ.


