ರಾಜ್ಯಾದ್ಯಂತ ಆಹಾರ ಉದ್ದಿಮೆಗಳಲ್ಲಿನ ಲೋಪದೋಷಗಳ ಹಿನ್ನೆಲೆಯಲ್ಲಿ, ಆಹಾರ ಸುರಕ್ಷತಾ ಇಲಾಖೆಯು 12 ಅಂಶಗಳ ಹೊಸ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದೆ. ಈ ನಿಯಮಗಳನ್ನು ಪಾಲಿಸಲು 15 ದಿನಗಳ ಗಡುವು ನೀಡಲಾಗಿದ್ದು, ತಪ್ಪಿದಲ್ಲಿ ಕಾನೂನು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದೆ.
ಬೆಂಗಳೂರು (ಆ.26): ರಾಜ್ಯಾದ್ಯಂತ ಆಹಾರ ಉದ್ದಿಮೆಗಳಲ್ಲಿ ಆಹಾರ ಸುರಕ್ಷತೆ, ಸ್ವಚ್ಛತೆ, ಶುಚಿತ್ವಕ್ಕೆ ಸಂಬಂಧಿಸಿದಂತೆ ಲೋಪದೋಷಗಳು ಕಂಡು ಬಂದಿರುವ ಹಿನ್ನೆಲೆಯಲ್ಲಿ ಆಹಾರ ಸುರಕ್ಷತಾ ಇಲಾಖೆಯು ಆಹಾರ ಉದ್ದಿಮೆದಾರರಿಗೆ ಮಾರ್ಗಸೂಚಿ ಬಿಡುಗಡೆ ಮಾಡಲಾಗಿದೆ.
ಆಹಾರ ಉದ್ದಿಮೆದಾರರು ಹಾಗೂ ಮಾರಾಟಗಾರರು ಕಡ್ಡಾಯವಾಗಿ ಎಫ್‌ಎಸ್‌ಎಸ್‌ಎಐ ಪರವಾನಗಿ ಹೊಂದಿರಬೇಕು. ಜತೆಗೆ ಆಹಾರದ ಗುಣಮಟ್ಟ ಮತ್ತು ಸುರಕ್ಷತೆ, ಅವಧಿ ಮೀರಿದ ಆಹಾರ ಪದಾರ್ಥಗಳ ವಿಲೇವಾರಿ, ಕೀಟ ನಿಯಂತ್ರಣ ಕ್ರಮ, ಸಿಬ್ಬಂದಿಯ ವೈಯಕ್ತಿಕ ನೈರ್ಮಲ್ಯ ಸೇರಿ 12 ಅಂಶಗಳ ಮಾರ್ಗಸೂಚಿಯನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಆಹಾರ ಸುರಕ್ಷತೆ ಮತ್ತು ಔಷಧ ನಿಯಂತ್ರಣ ಇಲಾಖೆ ತಿಳಿಸಿದೆ.
15 ದಿನಗಳ ಗಡುವು:
ಅಲ್ಲದೆ, ಆಹಾರ ಸುರಕ್ಷತಾ ಅಧಿಕಾರಿಗಳ ದಾಳಿ, ಪರಿಶೀಲನೆ ವೇಳೆ ಹಲವು ಉದ್ದಿಮೆಗಳಲ್ಲಿ ಲೋಪಗಳು ಕಂಡು ಬಂದಿವೆ. ಈ ಲೋಪಗಳನ್ನು ಸರಿಪಡಿಸಿಕೊಳ್ಳಲು 15 ದಿನಗಳ ಕಾಲಾವಕಾಶ ನೀಡಲಾಗಿದೆ. ಈ ಅವಧಿಯಲ್ಲಿ ಎಲ್ಲಾ ಆಹಾರ ಉದ್ದಿಮೆದಾರರು, ಅಗತ್ಯ ಸುಧಾರಣಾ ಕ್ರಮಗಳನ್ನು ಕೈಗೊಂಡು ತಮ್ಮ ಆಹಾರ ಉದ್ದಿಮೆಗಳನ್ನು ಆನ್ವಯವಾಗುವ ಆಹಾರ ಸುರಕ್ಷತಾ ಮಾನದಂಡಗಳು, ನಿಯಮಗಳು ಹಾಗೂ ನಿಯಮಾವಳಿಗಳಿಗೆ ಅನುಗುಣವಾಗಿ ಕಾರ್ಯನಿರ್ವಹಿಸುವುದನ್ನು ಖಚಿತಪಡಿಸಿಕೊಳ್ಳಬೇಕು ಎಂದು ಸ್ಪಷ್ಟಪಡಿಸಲಾಗಿದೆ.
ಇಲ್ಲದಿದ್ದರೆ ಕಾನೂನು ಕ್ರಮ:
ಇಲ್ಲದಿದ್ದರೆ 15 ದಿನಗಳ ಕಾಲಾವಧಿ ಪೂರ್ಣಗೊಂಡ ನಂತರ ಸಂಬಂಧಪಟ್ಟ ಅಧಿಕಾರಿಗಳಿಂದ ಮರುತಪಾಸಣೆ ಮಾಡಿ ಕಾಯ್ದೆ 2006, ನಿಯಮಗಳು 2011ರನ್ವಯ ಸೂಕ್ತ ಕಾನೂನು ಕ್ರಮಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಲಾಗಿದೆ.
ಮಾರ್ಗಸೂಚಿಯಲ್ಲಿನ ಪ್ರಮುಖ ಅಂಶಗಳು:
* ಆಹಾರ ಉದ್ದಿಮೆದಾರರು ಎಫ್‌ಎಸ್‌ಎಸ್‌ಎಐ ಪರವಾನಗಿ ಅಥವಾ ನೋಂದಣಿ ಕಡ್ಡಾಯವಾಗಿ ಹೊಂದಿರಬೇಕು. ಎಲ್ಲಾ ಷರತ್ತುಗಳು ಮತ್ತು ನಿಯಮಾವಳಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು.
* ಸುರಕ್ಷಿತ, ಗುಣಮಟ್ಟದ ಹಾಗೂ ಮನುಷ್ಯರ ಸೇವನೆಗೆ ಯೋಗ್ಯವಾದ ಆಹಾರ ಪದಾರ್ಥಗಳನ್ನು ಮಾತ್ರವೇ ತಯಾರಿಸಿ, ಸಂಗ್ರಹಿಸಿ ಮತ್ತು ಮಾರಾಟ ಮಾಡಬೇಕು.
* ಕಚ್ಚಾ ವಸ್ತುಗಳನ್ನು ವಿಶ್ವಾಸಾರ್ಹ ಮೂಲಗಳಿಂದ ಖರೀದಿಸಿ, ಅವುಗಳನ್ನು ಸೂಕ್ತ ತಾಪಮಾನದಲ್ಲಿ ಸಂಗ್ರಹಿಸಿಡಬೇಕು.
* ಆಹಾರ ಉತ್ಪನ್ನಗಳ ಖರೀದಿ ಸಂದರ್ಭದಲ್ಲಿ ಗುಣಮಟ್ಟ, ಬ್ಯಾಚ್ ಸಂಖ್ಯೆ, ತಯಾರಿಕೆ ದಿನಾಂಕ, ಅವಧಿ ಮುಕ್ತಾಯ ದಿನಾಂಕ ಎಲ್ಲವನ್ನು ಪರಿಶೀಲಿಸಬೇಕು.
* ಅಡುಗೆಮನೆ, ಆಹಾರ ತಯಾರಿಕಾ ಸ್ಥಳ, ಸಂಗ್ರಹಣಾ ಪ್ರದೇಶ, ನೆಲ, ಗೋಡೆ, ಕಿಟಕಿ, ಮೇಲ್ಚಾವಣಿ ಸೇರಿ ಎಲ್ಲೆಡೆ ಶುಚಿತ್ವ ಕಾಯ್ದುಕೊಳ್ಳಬೇಕು.
*ಆಹಾರ ತಯಾರಿಕೆಗೆ ಬಳಸುವ ಪಾತ್ರೆಗಳು, ತರಕಾರಿ ಕತ್ತರಿಸುವ ಬೋರ್ಡ್‌ಗಳು, ಚಾಕುಗಳು, ಕೌಂಟರ್‌ಗಳು ಹಾಗೂ ಇತರೆ ಉಪಕರಣಗಳನ್ನು ಸೂಕ್ತ ರೀತಿಯಲ್ಲಿ ಸ್ವಚ್ಛಗೊಳಿಸಿ ಬಳಸಬೇಕು.
* ಕೀಟಗಳು ಪ್ರವೇಶ ತಡೆಯಲು ಪರಿಣಾಮಕಾರಿ ಕೀಟ ನಿಯಂತ್ರಣ ಕ್ರಮಗಳನ್ನು ಕೈಗೊಳ್ಳಬೇಕು.
* ಹಾಲು, ಮಾಂಸ, ಮೊಟ್ಟೆ, ಸಿದ್ಧ ಆಹಾರ ಹಾಗೂ ಇತರೆ ಶೀಘ್ರ ಹಾಳಾಗುವ ಆಹಾರ ಪದಾರ್ಥಗಳನ್ನು ನಿಗದಿತ ತಾಪಮಾನದಲ್ಲಿ ಸಂಗ್ರಹಿಸಬೇಕು.
* ಆಹಾರ ನಿರ್ವಹಿಸುವ ಸಿಬ್ಬಂದಿಯು ಸ್ವಚ್ಛವಾದ ಉಡುಪು, ಹೆಡ್ ಕ್ಯಾಪ್, ಹೆಡ್ ಕವರ್, ಏಪ್ರನ್ ಹಾಗೂ ಅಗತ್ಯವಿರುವ ವೈಯಕ್ತಿಕ ರಕ್ಷಣಾ ಸಾಧನಗಳನ್ನು ಬಳಸಬೇಕು.
* ಕುಡಿಯಲು ಬಳಸುವ ನೀರು ಸುರಕ್ಷಿತವಾಗಿರಬೇಕು. ಹಾಗೆಯೇ ಆಹಾರ ತಯಾರಿಕೆ ಮತ್ತು ಪಾನೀಯಗಳಿಗೆ ಬಳಸುವ ಐಸ್ ಕೂಡ ಗುಣಮಟ್ಟದ ನೀರಿನಿಂದಲೇ ತಯಾರಿಸಿರಬೇಕು.
* ಆಹಾರ ತ್ಯಾಜ್ಯವನ್ನು ಸೂಕ್ತ ಮುಚ್ಚಳ ಹೊಂದಿರುವ ಕಸದ ಬುಟ್ಟಿಗಳಲ್ಲಿ ಸಂಗ್ರಹಿಸಿ ವಿಲೇವಾರಿ ಮಾಡಬೇಕು.


