ಗಾಲ್ವಾನ್ ಕಣಿವೆ ಘರ್ಷಣೆಯ ನಂತರ, ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಚೀನಾದ ವಿದೇಶಾಂಗ ಸಚಿವ ವಾಂಗ್ ಯಿ ಅವರನ್ನು ಭೇಟಿಯಾಗಿದ್ದಾರೆ. ಈ ಸಭೆಯಲ್ಲಿ ವಾಸ್ತವ ಗಡಿ ನಿಯಂತ್ರಣ ರೇಖೆಯಲ್ಲಿ ಶಾಂತಿ, ಗಡಿ ವಿವಾದ ಮತ್ತು ದ್ವಿಪಕ್ಷೀಯ ಸಹಕಾರದ ಬಗ್ಗೆ ಮಹತ್ವದ ಚರ್ಚೆ ನಡೆಸಲಾಗಿದೆ.
ಭಾರತ-ಚೀನಾ ನಡುವಿನ ಸಂಬಂಧಗಳು ಮತ್ತೆ ಹಳಿಗೆ ಬಂದಂತೆ ಕಾಣ್ತಿವೆ. 2020ರಲ್ಲಿ ನಡೆದ ಗಾಲ್ವಾನ್ ಕಣಿವೆ ಘರ್ಷಣೆ ಬಳಿಕ ರಾಷ್ಟ್ರೀಯ ಭದ್ರತಾ ಸಲಹೆಗಾರ (NSA) ಅಜಿತ್ ದೋವಲ್ ಚೀನಾಗೆ ಭೇಟಿ ನೀಡಿದ್ದಾರೆ. ಇದು ಹಲವು ರೀತಿಯಲ್ಲಿ ಮಹತ್ವದ ಭೇಟಿಯಾಗಿದೆ. ಈ ಭೇಟಿಯಿಂದ ಭಾರತ-ಚೀನಾ ಸಂಬಂಧಗಳು ಮತ್ತೆ ಮೊದಲ ಸ್ಥಿತಿಗೆ ಮರಳುವ ಸಾಧ್ಯತೆಯಿದೆ ಎಂದು ನಂಬಲಾಗಿದೆ.
ದೋವಲ್-ವಾಂಗ್ ಯಿ ಭೇಟಿ
ಅಜಿತ್ ದೋವಲ್ ಆಗಸ್ಟ್ 25, ಮಂಗಳವಾರ ಚೀನಾದ ವಿದೇಶಾಂಗ ಸಚಿವ ವಾಂಗ್ ಯಿ ಅವರನ್ನು ಭೇಟಿಯಾಗಿದ್ದಾರೆ. ಭೇಟಿ ವೇಳೆ ಭಾರತ-ಚೀನಾ ನಡುವಿನ ವಾಸ್ತವ ಗಡಿ ನಿಯಂತ್ರಣ ರೇಖೆ(LAC) ಉದ್ದಕ್ಕೂ ಶಾಂತಿ ಕಾಪಾಡಿಕೊಳ್ಳುವುದರ ಜೊತೆಗೆ ಗಡಿ ವಿವಾದದ ಬಗ್ಗೆ ಗಂಭೀರ ಚರ್ಚೆಗಳು ನಡೆದವು ಎಂದು ವರದಿಯಾಗಿದೆ. ಇದರ ನಡುವೆ ಭಾರತ-ಚೀನಾ ಪರಸ್ಪರ ಸಹಕಾರ ಹೆಚ್ಚಿಸುವ ಮಾರ್ಗಗಳ ಬಗ್ಗೆಯೂ ಚರ್ಚಿಸಲಾಗಿದೆ. ಬ್ರಿಕ್ಸ್ ಶೃಂಗಸಭೆಗೆ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಭಾರತಕ್ಕೆ ಭೇಟಿ ನೀಡುತ್ತಿರುವ ವೇಳೆಯೇ ಈ ಭೇಟಿ ಮಹತ್ವ ಪಡೆದುಕೊಂಡಿದೆ.
ಸಭೆಯಲ್ಲಿ ದೋವಲ್ ಮಾತನಾಡಿದ್ದು, ಭಾರತ-ಚೀನಾ ಸಂಬಂಧಗಳು ಸಾಮಾನ್ಯ ಸ್ಥಿತಿಗೆ ಮರಳಲು ಎರಡು ಕಡೆಯವರು ಶಾಂತಿ ಕಾಪಾಡಿಕೊಂಡಿರುವುದೇ ಕಾರಣ ಎಂದು ಹೇಳಿದ್ದಾರೆ. ಬೀಜಿಂಗ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿ, 'ದ್ವಿಪಕ್ಷೀಯ ಸಂಬಂಧಗಳಲ್ಲಿನ ನಿರಂತರ ಒಳ್ಳೆಯ ಬೆಳವಣಿಗೆ ಕಾಣುತ್ತಿದೆ. ಎರಡೂ ಕಡೆಯವರು ಪರಿಶೀಲಿಸಿದ್ದಾರೆ, ಇದು ಪ್ರಧಾನಿ ನರೇಂದ್ರ ಮೋದಿ ಮತ್ತು ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರ ನಿರ್ದೇಶನಗಳು ಮತ್ತು ದೃಷ್ಟಿಕೋನಕ್ಕೆ ಅನುಗುಣವಾಗಿದೆ ಎಂದು ಹೇಳಿದೆ.
ಅರುಣಾಚಲ ಪ್ರದೇಶ: ಭಾರತ ಮತ್ತು ಚೀನಾ ನಡುವೆ ಏನಾಯಿತು?
ಗಡಿ ಮತ್ತು ಅರುಣಾಚಲ ಪ್ರದೇಶಕ್ಕೆ ಸಂಬಂಧಿಸಿದಂತೆ ಎರಡೂ ದೇಶಗಳ ನಡುವಿನ ಭಿನ್ನಾಭಿಪ್ರಾಯಗಳ ವಿಷಯದ ಕುರಿತು ದೋವಲ್ ಸಭೆಯಲ್ಲಿ ಮಾತನಾಡಿದ್ದು, ಗಡಿಯಲ್ಲಿ ಪರಸ್ಪರ ಘರ್ಷಣೆಗಿಂತ, ಎರಡು ಕಡೆಯಿಂದಲೂ ಶಾಂತಿ ಕಾಪಾಡಿಕೊಳ್ಳುವ ನಮ್ಮ ಪ್ರಯತ್ನಗಳನ್ನು ಹೇಗೆ ಹೆಚ್ಚು ಪರಿಣಾಮಕಾರಿಯಾಗಿಸಬಹುದು ಎಂಬುದರ ಕುರಿತು ಇಂದು ನಾವು ವಿವರವಾಗಿ ಚರ್ಚಿಸಿದ್ದೇವೆ' ಎಂದು ಹೇಳಿದರು.
ಅರುಣಾಚಲ ಪ್ರದೇಶ ದಕ್ಷಿಣ ಟಿಬೇಟಿನ ಭಾಗ ಎಂದ ಚೀನಾ
ಅರುಣಾಚಲ ಪ್ರದೇಶವನ್ನು ದಕ್ಷಿಣ ಟಿಬೆಟ್‌ನ ಭಾಗವೆಂದು ಚೀನಾ ಹೇಳಿಕೊಂಡಿದೆ. ಎರಡೂ ದೇಶಗಳ ನಡುವಿನ ಜನರ ಸಂಪರ್ಕವನ್ನು ಹೆಚ್ಚಿಸುವಲ್ಲಿ ಆಗಿರುವ ಪ್ರಗತಿಯನ್ನು ದೋವಲ್ ಉಲ್ಲೇಖಿಸಿದ್ದಾರೆ. 'ನಾಥು ಲಾ ಮೂಲಕ ಕೈಲಾಸ ಮಾನಸ ಸರೋವರ ಯಾತ್ರೆಯ ಯಶಸ್ವಿ ಮಾತುಕತೆ ಮತ್ತು ನಾಥು ಲಾ ಪಾಸ್‌ಗಳ ಮೂಲಕ ಸಾಂಪ್ರದಾಯಿಕ ಗಡಿ ವ್ಯಾಪಾರದ ಪುನರಾರಂಭವು ನಮ್ಮ ಜನರಿಗೆ ವಿಶೇಷವಾಗಿ ಗಡಿ ಪ್ರದೇಶಗಳಲ್ಲಿ ವಾಸಿಸುವವರಿಗೆ ಪ್ರಯೋಜನವನ್ನು ನೀಡಿದೆ ಎಂದಿದ್ದಾರೆ.
ದೋವಲ್ ಜೊತೆಗಿನ ಭೇಟಿ ಬಗ್ಗೆ ಚೀನಾ ಹೇಳಿದ್ದೇನು?
ಭಾರತ-ಚೀನಾ ಗಡಿ ಸಮಸ್ಯೆಗಳ ಕುರಿತು ಕ್ರಮೇಣ ಒಳ್ಳೆಯ ಮಾತುಕತೆ ನಡೆಸುವ ಮೂಲಕ ಶಾಂತಿ ಮತ್ತು ಸಹಕಾರವನ್ನು ಮುಖ್ಯ ಆಧಾರವನ್ನಾಗಿ ಮಾಡುವ ಮತ್ತು ದ್ವಿಪಕ್ಷೀಯ ಸಂಬಂಧಗಳ ಆರೋಗ್ಯಕರ, ಅಭಿವೃದ್ಧಿಗೆ ಅಗತ್ಯ ಎಂದು ವಾಂಗ್ ಹೇಳಿದ್ದಾರೆ ಎಂದು ಚೀನಾದ ವಿದೇಶಾಂಗ ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ. 'ನಾವು ಪರಸ್ಪರ ಚೆನ್ನಾಗಿ ಅರ್ಥಮಾಡಿಕೊಳ್ಳಲು ಮತ್ತು ಗಡಿ ವಿವಾದವನ್ನು ಸರಿಯಾಗಿ ನಿಭಾಯಿಸಲು ಸಾಮಾನ್ಯ ಹಿತಾಸಕ್ತಿಯ ವಿಷಯಗಳ ಕುರಿತು ನಿಮ್ಮೊಂದಿಗೆ ಇನ್ನಷ್ಟು ಚರ್ಚೆಗಳನ್ನು ಮುಂದುವರಿಸಲು ಎದುರು ನೋಡುತ್ತಿದ್ದೇನೆ. ಇದು ಗಡಿ ಪ್ರದೇಶಗಳಲ್ಲಿ ಶಾಂತಿ ಮತ್ತು ಸ್ಥಿರತೆಯನ್ನು ಕಾಪಾಡಿಕೊಳ್ಳುವುದಲ್ಲದೆ ದ್ವಿಪಕ್ಷೀಯ ಸಂಬಂಧಗಳಿಗೆ ಹೊಸ ಆವೇಗವನ್ನು ನೀಡುತ್ತದೆ' ಎಂದು ವಾಂಗ್ ಹೇಳಿದ್ದಾರೆ.


