'ಟಾಕ್ಸಿಕ್' ಕೇವಲ ಯಶ್ ಅಭಿಮಾನಿಗಳಿಗಷ್ಟೇ ಅಲ್ಲ, ಸಿನಿಮಾವನ್ನು ಪ್ರೀತಿಸುವ ಪ್ರತಿಯೊಬ್ಬರಿಗೂ ಹಬ್ಬ. ಕನ್ನಡ ಚಿತ್ರರಂಗದ ಹೆಮ್ಮೆಯಾಗಿ ಮೂಡಿಬಂದಿರುವ ಈ ಸಿನಿಮಾ 'ಪ್ಯಾನ್ ವರ್ಲ್ಡ್' ಎಂಬ ಬಿರುದಿಗೆ ಸಂಪೂರ್ಣ ಅರ್ಹವಾಗಿದೆ. ಸಿನಿಮಾ ನೋಡಿದ ಪ್ರತಿಯೊಬ್ಬ ವಯಸ್ಕರನ್ನೂ ಕೂಡ ಇದು ಯಾವುದೋ ಒಂದು ರೀತಿಯಲ್ಲಿ ಇದು ಕಾಡಬಹುದು.

'ಟಾಕ್ಸಿಕ್' ಸಿನಿಮಾ ಬರೀ ಸಿನಿಮಾವಲ್ಲ, ಯಶ್ ಎಂಬ ಬ್ರ್ಯಾಂಡ್‌ನ ಹೊಸ ಮೈಲಿಗಲ್ಲು!

ಕೆಜಿಎಫ್ ಚಾಪ್ಟರ್ 2 ನಂತರ ಸುಮಾರು ನಾಲ್ಕುವರೆ ವರ್ಷಗಳ ಕಾಲ ತಮ್ಮ ಅಭಿಮಾನಿಗಳನ್ನು ಕಾಯಿಸಿದ ರಾಕಿಂಗ್ ಸ್ಟಾರ್ ಯಶ್, 'ಟಾಕ್ಸಿಕ್' ಮೂಲಕ ಮತ್ತೆ ಬೆಳ್ಳಿ ಪರದೆಯ ಮೇಲೆ ಅಬ್ಬರಿಸಿದ್ದಾರೆ. ಗೀತು ಮೋಹನ್ ದಾಸ್ ನಿರ್ದೇಶನದಲ್ಲಿ ಮೂಡಿಬಂದಿರುವ ಈ ಸಿನಿಮಾ, ಭಾರತೀಯ ಚಿತ್ರರಂಗವನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ಯುವಲ್ಲಿ ಯಶಸ್ವಿಯಾಗಿದೆ. ಒಂದು ಕಡೆ ಸಿನಿಮಾದಲ್ಲಿ ಯಶ್ ಅಬ್ಬರ, ಮತ್ತೊಂದು ಕಡೆ ಚಿತ್ರಮಂದಿರದಲ್ಲಿ ಪ್ರೇಕ್ಷಕರ ಶಿಳ್ಳೆ-ಚಪ್ಪಾಳೆಗಳ ಆಗರ.. ಟಾಕ್ಸಿಕ್ ಸಿನಿಮಾ ನೋಡುಗರಿಗೆ ಅಕ್ಷರಶಃ ಹಬ್ಬ!

ಹೇಗಿದೆ ಯಶ್ ಟಾಕ್ಸಿಕ್?

'ಟಾಕ್ಸಿಕ್' ಕೇವಲ ಒಂದು ಆ್ಯಕ್ಷನ್ ಸಿನಿಮಾವಲ್ಲ, ಇದೊಂದು ತೀವ್ರವಾದ ಭಾವನಾತ್ಮಕ ಕಥೆಯನ್ನು ಒಳಗೊಂಡ ಡಾರ್ಕ್ ಕ್ರೈಮ್ ಥ್ರಿಲ್ಲರ್. ಗೋವಾದ ಹಿನ್ನೆಲೆಯಲ್ಲಿ ಸಾಗುವ ಈ ಕಥೆ, ಅಂತರಾಷ್ಟ್ರೀಯ ಡ್ರಗ್ ಮಾಫಿಯಾ ಮತ್ತು ಭೂಗತ ಲೋಕದ ಕರಾಳ ಮುಖಗಳನ್ನು ಅನಾವರಣಗೊಳಿಸುತ್ತದೆ. ಯಶ್ ಇಲ್ಲಿ ಕೇವಲ ಒಬ್ಬ ನಾಯಕನಾಗಿ ಅಲ್ಲದೆ, ಒಂದು ಶಕ್ತಿಯಾಗಿ ಕಾಣಿಸಿಕೊಂಡಿದ್ದಾರೆ. ರಾಯ-ಟಿಕೆಟ್ ಹೆಸರಿನ ಯಶ್ ದ್ವಿಪಾತ್ರದ ಹೆಸರು ಮತ್ತು ಹಿನ್ನೆಲೆ ಪ್ರೇಕ್ಷಕರಿಗೆ ಕೊನೆಯವರೆಗೂ ಕುತೂಹಲ ಕಾಯ್ದಿರಿಸುತ್ತದೆ.

ಏನು ಕಥಾಹಂದರ?

ಟಾಕ್ಸಿಕ್ ಸಿನಿಮಾದ ವಿಮರ್ಶೆಯನ್ನು ಒಂದೇ ಒಂದು ಸೂಕ್ತವಾದ ಸಾಲಿನಲ್ಲಿ (ಒನ್ ಲೈನ್-One Line) ನಲ್ಲಿ ಹೇಳಬೇಕು ಎಂದರೆ - 'ಪ್ರತಿಯೊಂದು ಆಯ್ಕೆಗೂ ತಕ್ಕ ಬೆಲೆ ತೆರಲೇಬೇಕು'.. ಹೌದು, ಸ್ವತಃ ನಟ ಯಶ್ ಅವರು 'ರಾಯ'ನ ಪಾತ್ರದಲ್ಲಿ ಹೇಳುವ ಡೈಲಾಗ್‌ನಂತೆ ಟಾಕ್ಸಿಕ್ ಸಿನಿಮಾದಲ್ಲಿ 'ಅಲ್ಲಿ ಯಾರೂ ಹೀರೋ ಇಲ್ಲ, ವಿಲನ್‌ಗಳು ಮಾತ್ರ' ಎಂಬುದು ಇಡೀ ಕಥೆ-ಚಿತ್ರಕಥೆಯಲ್ಲಿ ಎದ್ದು ಕಾಣಿಸುವ ಅಂಶ. ಗೋವಾದಲ್ಲಿ ಪೋರ್ಚುಗೀಸರ ಕಾಲದಲ್ಲಿ ನಡೆಯುವ ಕಥೆ. ಆದರೆ, ಈ ಸಿನಿಮಾದಲ್ಲಿ ಕಾಲಘಟ್ಟದ ಕುರುಹು ಅಥವಾ ಘಟನೆಗಳ ಬದಲು ಇಡೀ ಸಿನಿಮಾ ಹೆಚ್ಚಾಗಿ ವ್ಯಕ್ತಿಗತ ಪಾತ್ರಗಳ ಸುತ್ತವೇ ಸುತ್ತುತ್ತದೆ. ಗೋವಾ, ಹಿಮಾಲಯ ಸೇರಿದಂತೆ ಹಲವು ಸುಂದರ ಲೊಕೇಶನ್ಸ್‌ ಹಾಗೂ ಬೆಲೆಬಾಳುವ ಸೆಟ್‌ಗಳಲ್ಲಿ ಶೂಟ್ ಆಗಿರುವ ಟಾಕ್ಸಿಕ್ ಸಿನಿಮಾ, ಹಾಲಿವುಡ್ ಮಟ್ಟದ ರಿಚ್ ಮೇಕಿಂಗ್ ಮೂಲಕ ಗಮನಸೆಳೆಯುತ್ತದೆ.

'ಜೀವನದಲ್ಲಿ ನಮ್ಮ ತಪ್ಪು ಆಯ್ಕೆಗಳಿಗೆ ನಾವು ತಕ್ಕ ಬೆಲೆ ತೆರಬೇಕಾಗುವುದು ಖಂಡಿತ' ಎಂಬ ಸಾಲಿಗೇ ಅಂಟಿಕೊಂಡಂತೆ ಸಾಗುವ ಟಾಕ್ಸಿಕ್ ಕಥೆ, ಬಹಳಷ್ಟು ಪಾತ್ರಗಳ ಮೂಲಕ ಹೆಣೆದಿರುವ ಚಿತ್ರಕಥೆ ಮೂಲಕ ಎಲ್ಲಿಯೋ ಪ್ರೇಕ್ಷಕರಿಗೆ ಬೋರ್ ಆಗದಂತೆ ಸಾಗುತ್ತದೆ. ಮುಂದೇನು ಆಗಲಿದೆ ಎಂಬ ಕುತೂಹಲ ಇರುವಂತೆಯೇ ಚಿತ್ರದ ಕ್ಲೈಮ್ಯಾಕ್ಸ್ ಹಾಜರಾಗುತ್ತದೆ. ಇಡೀ ಸಿನಿಮಾವನ್ನು ಯಶ್ ಹಾಗೂ 5 ನಟಿಯರ ಪಾತ್ರಗಳ ಸುತ್ತವೇ ಸುತ್ತಿದ್ದು, ಸಿನಿಮಾದ ಚಿತ್ರಕಥೆಯಲ್ಲಿ ಹೊಸತನ, ಮೇಕಿಂಗ್‌ನಲ್ಲಿ ಜಾಗತಿಕ ಪ್ರೇಕ್ಷಕರ ಟಾರ್ಗೆಟ್ ಎದ್ದು ಕಾಣಿಸುತ್ತಿವೆ.

ನಟನೆ:

ಯಶ್: ಯಶ್ ಅವರ ಮ್ಯಾನರಿಸಂ, ಧ್ವನಿ ಮತ್ತು ಆ ಕಣ್ಣಿನ ತೇಜಸ್ಸು ಅದ್ಭುತ. ಕೆಜಿಎಫ್‌ನ 'ರಾಕಿ ಭಾಯ್' ನೆರಳು ಇಲ್ಲಿ ಎಲ್ಲೂ ಬೀಳದಂತೆ ಅವರು ಜಾಗ್ರತೆ ವಹಿಸಿದ್ದಾರೆ. ಅವರ ಹೊಸ ಅವತಾರ ಮತ್ತು ಸ್ಟೈಲಿಂಗ್ ಪ್ರೇಕ್ಷಕರಿಗೆ ಹೊಸ ಅನುಭವ ನೀಡುತ್ತದೆ. ಅಪ್ಪ-ಮಗನ 'ರಾಯ-ಟಿಕೆಟ್' ಪಾತ್ರಗಳ ಮೂಲಕ ಕನ್ನಡದ ನಟ, ಪ್ಯಾನ್ ಇಂಡಿಯಾ ಸ್ಟಾರ್ ಈಗ 'ಪ್ಯಾನ್ ವರ್ಲ್ಡ್ ಸ್ಟಾರ್' ಪಟ್ಟದೊಂದಿಗೆ ತೆರೆಯಲ್ಲಿ ಆರ್ಭಟಿಸುತ್ತಿದ್ದಾರೆ.

ನಟಿಯರ ಪಾತ್ರಗಳು-ನಟನೆ: ಸಿನಿಮಾದಲ್ಲಿ ನಟಿಸಿರುವ ನಟಿಯರಾದ ನಯನತಾರಾ, ಕಿಯಾರಾ ಅಡ್ವಾನಿ, ರುಕ್ಮಿಣಿ ವಸಂತ್, ತಾರಾ ಸುತಾರಿಯಾ, ಹುಮಾ ಖುರೇಷಿ ತಮ್ಮ ಪಾತ್ರಗಳಿಗೆ ನ್ಯಾಯ ಒದಗಿಸಿದ್ದಾರೆ. ನಟರಾದ ವಿವೇಕ್ ಒಬೆರಾಯ್, ಸುದೇವ್ ನಾಯರ್ ಮತ್ತಿತರರು, ವಿಲನ್ ಪಾತ್ರದಲ್ಲಿ ಕಾಣಿಸಿಕೊಂಡಿರುವ ಅಂತರಾಷ್ಟ್ರೀಯ ನಟರ ಕ್ರೌರ್ಯ ಇವೆಲ್ಲವೂ ಯಶ್ ಅವರಿಗೆ ಅಭಿನಯದಲ್ಲಿ ಸಾಕಷ್ಟು ಪೈಪೋಟಿ ನೀಡಿವೆ ಎನ್ನಬಹುದು.

ನಿರ್ದೇಶನ ಮತ್ತು ತಾಂತ್ರಿಕತೆ:

ಗೀತು ಮೋಹನ್ ದಾಸ್ ಅವರ ಮೇಕಿಂಗ್ ಶೈಲಿ ಹಾರ್ಡ್ ಹಿಟ್ಟಿಂಗ್ ಆಗಿದೆ. ಕಮರ್ಷಿಯಲ್ ಅಂಶಗಳ ಜೊತೆಗೆ ಕಲಾತ್ಮಕತೆಯನ್ನು ಬೆರೆಸಿರುವ ರೀತಿ ಅನನ್ಯ.

ಸಂಗೀತ: ಹಿನ್ನೆಲೆ ಸಂಗೀತ ಸಿನಿಮಾದ ಆತ್ಮದಂತಿದೆ. ಪ್ರತಿ ಸೀನ್‌ನ ಗಾಂಭೀರ್ಯವನ್ನು ಇದು ಹೆಚ್ಚಿಸುತ್ತದೆ. ಹಾಡುಗಳು ಹಾಗೂ ಮೇಕಿಂಗ್ ಕಣ್ಮನ ಕುಣಿಸುತ್ತವೆ, ತಣಿಸುತ್ತವೆ

ಛಾಯಾಗ್ರಹಣ: ಗೋವಾದ ಸಮುದ್ರ ತೀರಗಳು ಮತ್ತು ಕತ್ತಲೆಯ ಲೋಕವನ್ನು ಕ್ಯಾಮೆರಾದಲ್ಲಿ ಸೆರೆಹಿಡಿದಿರುವ ರೀತಿ ಹಾಲಿವುಡ್ ದರ್ಜೆಯಲ್ಲಿದೆ. ಒಂದೊಂದು ಫ್ರೇಮ್ ಕೂಡ ಮೈನವಿರೇಳಿಸುವಂತಿದೆ. ಈ ಚಿತ್ರದ ಪ್ರತಿ ಫ್ರೇಮ್‌ನಲ್ಲೂ ಶ್ರೀಮಂತಿಕೆ ಎದ್ದು ಕಾಣುತ್ತದೆ.

ಪ್ಲಸ್ ಪಾಯಿಂಟ್ಸ್:

ಯಶ್ ಅವರ ಅಪ್ರತಿಮ ನಟನೆ ಮತ್ತು ಸ್ಕ್ರೀನ್ ಪ್ರೆಸೆನ್ಸ್.

ವಿಶಿಷ್ಟವಾದ ಕಥೆ ಮತ್ತು ನಿರೂಪಣೆ.

ಹೈ-ವೋಲ್ಟೇಜ್ ಆ್ಯಕ್ಷನ್ ಸೀನ್ಸ್‌ಗಳು.

ಅಂತರಾಷ್ಟ್ರೀಯ ಮಟ್ಟದ ತಾಂತ್ರಿಕತೆ.

ಮೈನಸ್ ಪಾಯಿಂಟ್ಸ್?

ಸಿನಿಮಾದಲ್ಲಿ ಬಹಳಷ್ಟು ಪಾತ್ರಗಳು ಹಾಗೂ ಟ್ವಿಸ್ಟ್‌ಗಳು ಇರುವುದರಿಂದ ಕೆಲವರಿಗೆ ಅರ್ಥಮಾಡಿಕೊಳ್ಳಲು ಸ್ವಲ್ಪ ಕಷ್ಟವಾಗಬುಉದು.

ಹೆಚ್ಚಿನ ಹಿಂಸಾಚಾರ, ಸೌಂಡ್ ಅಬ್ಬರ ಇರುವುದರಿಂದ ಸೂಕ್ಷ್ಮ ಮನಸ್ಸಿನವರಿಗೆ ಸ್ವಲ್ಪ ಕಷ್ಟವೆನಿಸಬಹುದು.

ಕೊನೆಯ ಮಾತು:

'ಟಾಕ್ಸಿಕ್' ಕೇವಲ ಯಶ್ ಅಭಿಮಾನಿಗಳಿಗಷ್ಟೇ ಅಲ್ಲ, ಸಿನಿಮಾವನ್ನು ಪ್ರೀತಿಸುವ ಪ್ರತಿಯೊಬ್ಬರಿಗೂ ಹಬ್ಬ. ಕನ್ನಡ ಚಿತ್ರರಂಗದ ಹೆಮ್ಮೆಯಾಗಿ ಮೂಡಿಬಂದಿರುವ ಈ ಸಿನಿಮಾ 'ಪ್ಯಾನ್ ವರ್ಲ್ಡ್' ಎಂಬ ಬಿರುದಿಗೆ ಸಂಪೂರ್ಣ ಅರ್ಹವಾಗಿದೆ. ಸಿನಿಮಾ ನೋಡಿದ ಪ್ರತಿಯೊಬ್ಬ ವಯಸ್ಕರನ್ನೂ ಕೂಡ ಇದು ಯಾವುದೋ ಒಂದು ರೀತಿಯಲ್ಲಿ ಇದು ಕಾಡಬಹುದು. ಕಾಲ್ಪನಿಕ ಕಥೆ ಎಂಬ ಹಣೆಪಟ್ಟಿ ಹೊತ್ತಿದ್ದರೂ ಎಲ್ಲೋ ಒಂದು ಕಡೆ ಈ ಸಿನಿಮಾದ ಕಥೆ ಎಲ್ಲರ ಜೀವನಕ್ಕೂ ಅಲ್ಪಸ್ವಲ್ಪವಾದರೂ ಕನೆಕ್ಟ್‌ ಆಗುವಂತಿದೆ ಎನ್ನುವಂತಿದೆ

ಸಿನಿಮಾದ ಮಾಹಿತಿ:

ಸಿನಿಮಾ: 'ಟಾಕ್ಸಿಕ್: ಎ ಫೇರಿ ಟೇಲ್ ಫಾರ್ ಗ್ರೋನ್-ಅಪ್ಸ್' (Toxic: A Fairy Tale for Grown-Ups)

ಟಾಕ್ಸಿಕ್ ನಿರ್ಮಾಪಕರು:-

ವೆಂಕಟ್ ಕೆ. ನಾರಾಯಣ- ಕೆವಿಎನ್ ಪ್ರೊಡಕ್ಷನ್ಸ್ (KVN Productions))

ಯಶ್ ಮಾನ್ಸ್ಟರ್ ಮೈಂಡ್ ಕ್ರಿಯೇಷನ್ಸ್ (Monster Mind Creations)

ತಾರಾಗಣ: ಯಶ್, ನಯನತಾರಾ, ಕಿಯಾರಾ ಅಡ್ವಾನಿ, ರುಕ್ಮಿಣಿ ವಸಂತ್, ಹುಮಾ ಖುರೇಷಿ, ತಾರಾ ಸುತಾರಿಯಾ, ವಿವೇಕ್ ಒಬೆರಾಯ್, ಸುದೇವ್ ನಾಯರ್ ಮುಂತಾದವರು.