ವಾಲ್ಮೀಕಿ ನಿಗಮ ಹಗರಣದ ಹಿನ್ನೆಲೆಯಲ್ಲಿ ಸಚಿವ ಬಿ.ನಾಗೇಂದ್ರ ರಾಜೀನಾಮೆಗೆ ಒತ್ತಾಯಿಸಿ ಬಿಜೆಪಿ ಸೆ.1 ರಿಂದ 10 ದಿನಗಳ ಕಾಲ ಪಾದಯಾತ್ರೆ ಹಮ್ಮಿಕೊಂಡಿದೆ. ರಾಯಚೂರಿನ ಗುರುಗುಂಟಾದಿಂದ ಬಳ್ಳಾರಿಯವರೆಗೆ ಸಾಗಲಿರುವ ಈ ಯಾತ್ರೆಯು, ಕಾಂಗ್ರೆಸ್ ಸರ್ಕಾರದ ವಿವಿಧ ವೈಫಲ್ಯಗಳನ್ನು ಜನರ ಮುಂದಿಡುವ ಗುರಿ ಹೊಂದಿದೆ.

ಬೆಂಗಳೂರು (ಆ.26): ವಾಲ್ಮೀಕಿ ನಿಗಮದಲ್ಲಿನ ಹಗರಣ(Valmiki corporation scam)ದ ಆರೋಪಿಯಾಗಿರುವ ಯೋಜನೆ ಮತ್ತು ಸಾಂಖ್ಯಿಕ ಸಚಿವ ಬಿ.ನಾಗೇಂದ್ರ ರಾಜೀನಾಮೆ(B Nagendra Resignation)ಗೆ ಒತ್ತಾಯ ಸೇರಿದಂತೆ ಸರ್ಕಾರದ ವಿವಿಧ ವೈಫಲ್ಯಗಳ ವಿರುದ್ಧ ಬರುವ ಸೆ.1ರಿಂದ 10ರವರೆಗೆ ಪಾದಯಾತ್ರೆ ನಡೆಸುವುದಾಗಿ ಪ್ರಮುಖ ಪ್ರತಿಪಕ್ಷ ಬಿಜೆಪಿ(BJP) ಘೋಷಿಸಿದೆ.

ಸೆ.1ರಂದು ರಾಯಚೂರು ಜಿಲ್ಲೆ ಲಿಂಗಸೂಗೂರಿನ ಗುರುಗುಂಟಾದಿಂದ ಆರಂಭವಾಗಿ 10ರಂದು ಬಳ್ಳಾರಿಯಲ್ಲಿ ಪಾದಯಾತ್ರೆ ಅಂತ್ಯವಾಗಲಿದೆ. ಹತ್ತು ದಿನಗಳ ಅವಧಿಯಲ್ಲಿ ಸುಮಾರು 170 ಕಿ.ಮೀ. ನಷ್ಟು ಸಂಚರಿಸಲಿದೆ.

ಬಿವೈ ವಿಜಯೇಂದ್ರ ಪತ್ರಿಕಾಗೋಷ್ಠಿ

ಮಂಗಳವಾರ ರಾಜ್ಯ ಬಿಜೆಪಿ ಕಚೇರಿಯಲ್ಲಿ ಪಕ್ಷದ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ(BY Vijayendra) ಅವರು ಜಂಟಿ ಪತ್ರಿಕಾಗೋಷ್ಠಿ ನಡೆಸಿ ಪಾದಯಾತ್ರೆಯ ವಿಷಯವನ್ನು ಅಧಿಕೃತವಾಗಿ ಪ್ರಕಟಿಸಿದರು. ಈ ವೇಳೆ ವಿಧಾನಮಂಡಲದ ಉಭಯ ಸದನಗಳ ಪ್ರತಿಪಕ್ಷಗಳ ನಾಯಕರಾದ ಆರ್.ಅಶೋಕ್, ಛಲವಾದಿ ನಾರಾಯಣಸ್ವಾಮಿ, ಮುಖಂಡರಾದ ಬಿ.ಶ್ರೀರಾಮುಲು, ಡಾ.ಸಿ.ಎನ್.ಅಶ್ವತ್ಥನಾರಾಯಣ, ಸಿ.ಟಿ.ರವಿ, ಗಾಲಿ ಜನಾರ್ದನರೆಡ್ಡಿ, ರಾಜುಗೌಡ, ಮಾನಪ್ಪ ವಜ್ಜಲ್‌ ಮತ್ತಿತರರು ಉಪಸ್ಥಿತರಿದ್ದರು.

ಕೇಂದ್ರ ಸಚಿವ ಪ್ರಲ್ಹಾದ್ ಜೊಶಿ ಅವರಿಂದ ಚಾಲನೆ

ವಿಜಯೇಂದ್ರ ಮಾತನಾಡಿ, ಪಾದಯಾತ್ರೆಯನ್ನು ಕೇಂದ್ರ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಪ್ರಹ್ಲಾದ್ ಜೋಶಿ ಉದ್ಘಾಟಿಸಲಿದ್ದಾರೆ. ಇತರ ಕೇಂದ್ರ ಸಚಿವರೂ ಪಾಲ್ಗೊಳ್ಳಲಿದ್ದಾರೆ. ಜತೆಗೆ ರಾಜ್ಯದ ಎಲ್ಲ ಹಿರಿಯ ನಾಯಕರೂ ಉಪಸ್ಥಿತರಿರಲಿದ್ದಾರೆ. ಸಮಾರೋಪ ಸಮಾರಂಭದಲ್ಲಿ ಜೆಡಿಎಸ್ ರಾಜ್ಯಾಧ್ಯಕ್ಷರೂ ಆಗಿರುವ ಕೇಂದ್ರ ಕೈಗಾರಿಕಾ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು ಭಾಗವಹಿಸುವ ನಿರೀಕ್ಷೆಯಿದೆ. ಈ ಪಾದಯಾತ್ರೆಯ ಬೆಂಬಲಕ್ಕಾಗಿ ಕುಮಾರಸ್ವಾಮಿ ಅವರನ್ನು ಸಂಪರ್ಕಿಸಿ ಮಾತನಾಡಿದ್ದೇನೆ ಎಂದು ತಿಳಿಸಿದರು.

ಸತ್ಯವನ್ನು ಎದುರಿಸಲು ಸಾಧ್ಯವಾಗದೆ ಕಾಂಗ್ರೆಸ್ ಸರ್ಕಾರ ಅಧಿವೇಶನವನ್ನು ಅನಿರ್ದಿಷ್ಟ ಅವಧಿಗೆ ಮುಂದೂಡಿ ರಾಜ್ಯದ ಜನರ ಜ್ವಲಂತ ಸಮಸ್ಯೆಗಳನ್ನು ಚರ್ಚೆ ಮಾಡಲು ಬಿಡದೆ ಅನ್ಯಾಯ ಮಾಡಿದೆ. ಅಧಿವೇಶನದ ಅವಧಿಯನ್ನು ಕಡಿತ ಮಾಡಿ ಸರ್ಕಾರ ಪಲಾಯನ ಮಾಡಿದೆ. ಬಡವರ, ರೈತರ, ಯುವಕರ ವಿರೋಧಿ ಸರ್ಕಾರದ ಬಣ್ಣ ಬಯಲು ಮಾಡಲು ಹಾಗೂ ಜನರಲ್ಲಿ ಜಾಗೃತಿ ಮೂಡಿಸಲು ಈ ಹತ್ತು ದಿನಗಳ ಕಾಲ ಪಾದಯಾತ್ರೆ ಮಾಡುತ್ತಿದ್ದೇವೆ ಎಂದು ಪ್ರತಿಪಾದಿಸಿದರು.

ಭ್ರಷ್ಟಾಚಾರದ ಆರೋಪ ಹೊತ್ತಿರುವ ಸಚಿವ ನಾಗೇಂದ್ರ ರಾಜೀನಾಮೆ ಜತೆಗೆ ರಾಜ್ಯದ ಅಭಿವೃದ್ಧಿಯ ನಿರ್ಲಕ್ಷ್ಯ, ರೈತರ ಸಂಕಷ್ಟ, ಬಡವರಿಗೆ ಯೋಜನೆ ನೀಡದೆ ಇರುವುದು, ಉದ್ಯೋಗಾವಕಾಶ ಸೃಷ್ಟಿಯಲ್ಲಿ ವೈಫಲ್ಯ, ಮೀಸಲಾತಿ ಜಾರಿ, ಉತ್ತರ ಕರ್ನಾಟಕದ ಸಮಸ್ಯೆ, ಹೊಸ ನೇಮಕಾತಿ ಬಗ್ಗೆ ಮುಖ್ಯಮಂತ್ರಿಗಳ ನಿರಾಸಕ್ತಿ ಇವುಗಳ ಬಗ್ಗೆ ರಾಜ್ಯದ ಜನರಿಗೆ ತಿಳಿಸಿ ಸರ್ಕಾರದ ಬಂಡವಾಳ ಬಯಲು ಮಾಡುವ ಉದ್ದೇಶದಿಂದ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದರು.

ಅಧಿವೇಶನ ಆರಂಭಕ್ಕೂ ಮುನ್ನವೇ ಪತ್ರಿಕಾಗೋಷ್ಠಿ ಮಾಡಿ ವಾಲ್ಮೀಕಿ ನಿಗಮ ಹಗರಣದ ಆರೋಪಿ, ಕಳಂಕಿತ ನಾಗೇಂದ್ರ ಅವರನ್ನು ಸಂಪುಟದಿಂದ ಕೈಬಿಡಿ. ಅಧಿವೇಶನದಲ್ಲಿ ಜನರ ಸಮಸ್ಯೆ ಚರ್ಚೆಗೆ ಅವಕಾಶ ನೀಡಿ ಎಂದು ಹೇಳಿದ್ದೆವು. ಆದರೆ ಹಾಗೆ ಮಾಡದೆ ಸರ್ಕಾರ ಅಧಿವೇಶನ ಮೊಟಕು ಮಾಡಿ ಓಡಿ ಹೋಗಿದೆ. ರಾಜ್ಯದಲ್ಲಿನ ಭೀಕರ ಬರ, ಕೆಪಿಎಸ್ಸಿ ಹಗರಣ, ಸರ್ಕಾರಿ ನೇಮಕಾತಿ, ಉತ್ತರ ಕರ್ನಾಟಕ ಸಮಸ್ಯೆ, ಬಿಡದಿ ಟೌನ್ಶಿಪ್, ನೈಸ್ ಮುಂತಾದವುಗಳ ಬಗ್ಗೆ ಸದನದಲ್ಲಿ ಚರ್ಚೆ ಮಾಡಲು ಅವಕಾಶ ನೀಡಿ ಎಂದು ಮನವಿ ಮಾಡಿದ್ದೆವು. ಅದಕ್ಕೆ ಅವಕಾಶ ನೀಡಿಲ್ಲ. ಇವಕ್ಕೆಲ್ಲ ಚರ್ಚೆ ಅವಕಾಶ ನೀಡಿದರೆ ಕಾಂಗ್ರೆಸ್ ಸರ್ಕಾರದ ಮುಖವಾಡ ಬಯಲಾಗುತ್ತದೆ ಎಂದು ಹೆದರಿ ಮುಖ್ಯಮಂತ್ರಿಗಳು ಓಡಿ ಹೋಗಿದ್ದಾರೆ ಎಂದು ವಿಜಯೇಂದ್ರ ಟೀಕಿಸಿದರು.

ವಾಲ್ಮೀಕಿ ನಿಗಮ ಹಗರಣ ಆದ ನಂತರ ಭೋವಿ ಸಮಾಜಕ್ಕೆ ಸೇರಿದ ಚಂದ್ರಶೇಖರ್ ಎಂಬ ಅಧಿಕಾರಿ ಆತ್ಮ೧ಹತ್ಯೆ ಮಾಡಿಕೊಂಡರು. ಅವರ ಡೆತ್ ನೋಟ್ ಎಲ್ಲ ಹೇಳುತ್ತಿದೆ. ಸಚಿವರ ಮೌಖಿಕ ಆದೇಶದ ಮೇರೆ ಹಣ ವರ್ಗಾವಣೆ ಮಾಡಿದ್ದೇನೆ ಎಂಬುದಾಗಿ ಅವರು ಬರೆದಿದ್ದಾರೆ. ಹಿಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೂಡ ಹಗರಣ ನಡೆದಿರುವುದನ್ನು ಒಪ್ಪಿಕೊಂಡಿದ್ದಾರೆ. ಈಗಿನ ಡಿ.ಕೆ.ಶಿವಕುಮಾರ್ ಸಂಪುಟದ ಸಚಿವ ಶಿವಲಿಂಗೇಗೌಡ ಅವರೂ ಸಚಿವ ನಾಗೇಂದ್ರ ಆರೋಪಿ ಎಂದು ಒಪ್ಪಿಕೊಂಡಿದ್ದಾರೆ. ಇಷ್ಟಾದರೂ ಸರ್ಕಾರ ಭಂಡತನ ಮಾಡುತ್ತಿದೆ ಎಂದು ಹರಿಹಾಯ್ದರು.==

ಪಾದಯಾತ್ರೆ ಮಾರ್ಗ

ಗುರುಗುಂಟಾ, ಲಿಂಗಸೂಗೂರು, ಮಸ್ಕಿ, ಸಿಂಧನೂರು, ಸಿರುಗುಪ್ಪಾ, ತೆಕ್ಕಲಕೋಟೆ, ಸಿಂಧಗೆರೆ, ಬಳ್ಳಾರಿ.