ಕಳೆದ ವರ್ಷ ಪಾಕಿಸ್ತಾನದ ಕಿರಾನಾ ಬೆಟ್ಟದ ಮೇಲೆ ಭಾರತದ ಡ್ರೋನ್ ಅಪ್ಪಳಿಸಿದ್ದು ಉದ್ದೇಶಪೂರ್ವಕ ದಾಳಿಯಲ್ಲ, ಬದಲಿಗೆ ಇಂಧನ ಖಾಲಿಯಾಗಿತ್ತು ಎಂದು ಮಾಜಿ ಸಿಡಿಎಸ್‌ ಜ. ಅನಿಲ್‌ ಚೌಹಾಣ್‌ ಸ್ಪಷ್ಟಪಡಿಸಿದ್ದಾರೆ. ಈ ಮೂಲಕ ಪಾಕ್ ಅಣ್ವಸ್ತ್ರ ಕೇಂದ್ರದ ಮೇಲೆ ಭಾರತ ದಾಳಿ ನಡೆಸಿತ್ತು ಎಂಬ ವದಂತಿಗೆ ಅವರು ತೆರೆ ಎಳೆದಿದ್ದಾರೆ.

ನವದೆಹಲಿ: ಕಳೆದ ವರ್ಷ ಆಪರೇಷನ್‌ ಸಿಂದೂರದ ಸಮಯದಲ್ಲಿ ಪಾಕಿಸ್ತಾನದ ಪ್ರಮುಖ ಅಣ್ವಸ್ತ್ರ ಕೇಂದ್ರವಾದ ಕಿರಾನಾ ಬೆಟ್ಟದ ಮೇಲೆ ಭಾರತ ದಾಳಿ ನಡೆಸಿತ್ತು ಎಂಬ ವದಂತಿಗೆ ಭಾರತ ತೆರೆ ಎಳೆದಿದೆ. ಉದ್ದೇಶಪೂರ್ವಕವಾಗಿ ಕಿರಾನಾ ಹಿಲ್ಸ್‌ ಮೇಲೆ ಭಾರತ ದಾಳಿ ನಡೆಸಿರಲಿಲ್ಲ, ಬದಲಾಗಿ ನಾವು ಹಾರಿಬಿಟ್ಟ ಡ್ರೋನ್‌ನ ಇಂಧನ ಖಾಲಿಯಾಗಿ ಅದರ ಮೇಲೆ ಅಪ್ಪಳಿಸಿತು ಎಂದು ಮಾಜಿ ಸಿಡಿಎಸ್‌ ಜ. ಅನಿಲ್‌ ಚೌಹಾಣ್‌ ತಿಳಿಸಿದ್ದಾರೆ.

ಎ.ಕೆ. ಭಾರತಿ ನೀಡಿದ್ದ ಹೇಳಿಕೆ ಸಂಪೂರ್ಣ ಸತ್ಯ.

ದೆಹಲಿಯ ವಿವೇಕಾನಂದ ಅಂತಾರಾಷ್ಟ್ರೀಯ ಫೌಂಡೇಶನ್‌ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ‘ಭಾರತವು ಕಿರಾನಾ ಹಿಲ್ಸ್ ಅನ್ನು ಗುರಿಯಾಗಿಸಿಕೊಂಡಿರಲಿಲ್ಲ ಎಂದು ವಾಯುಪಡೆಯ ಮಾಜಿ ಏರ್ ಮಾರ್ಷಲ್ ಎ.ಕೆ. ಭಾರತಿ ಅವರು ನೀಡಿದ್ದ ಹೇಳಿಕೆ ಸಂಪೂರ್ಣ ಸತ್ಯ.

ಇಂಧನ ಖಾಲಿಯಾದಾಗ ಬಿದ್ದಿತ್ತು

ಭಾರತೀಯ ಪಡೆಗಳು ಸರ್ಗೋಧಾ ಮತ್ತು ಅದರಿಂದ ಸುಮಾರು 10 ಕಿ.ಮೀ. ದೂರದಲ್ಲಿರುವ ಕಿರಾನಾ ಹಿಲ್ಸ್ ಪ್ರದೇಶದಲ್ಲಿ ಶತ್ರುಗಳ ರೇಡಾರ್‌ಗಳನ್ನು ಧ್ವಂಸಗೊಳಿಸಲು ಹಲವು ಲಾಯಿಟರಿಂಗ್ ಅಮ್ಯುನಿಷನ್ ಡ್ರೋನ್‌ಗಳನ್ನು ಕಾರ್ಯಾಚರಣೆಗೆ ಇಳಿಸಿದ್ದವು. ಸುಮಾರು 2 ಗಂಟೆ ಕಾಲ ಆಕಾಶದಲ್ಲೇ ಸುತ್ತಾಡಿ ಗುರಿಯನ್ನು ಹುಡುಕುವ ಸಾಮರ್ಥ್ಯ ಹೊಂದಿರುವ ಈ ಡ್ರೋನ್‌ಗಳಿಗೆ ನಿರ್ದಿಷ್ಟ ರೇಡಾರ್ ಗುರಿ ಸಿಗದಿದ್ದಾಗ ಹಾಗೂ ಇಂಧನ ಮುಗಿಯುವ ಹಂತ ತಲುಪಿದಾಗ, ಅವು ಸುರಕ್ಷಿತವಾಗಿ ಯಾವುದಾದರೂ ಒಂದು ಪ್ರದೇಶಕ್ಕೆ ಅಪ್ಪಳಿಸುವಂತೆ ವಿನ್ಯಾಸಗೊಳಿಸಲಾಗಿರುತ್ತದೆ. ಅದರಂತೆ ಇಂಧನ ಖಾಲಿಯಾದ ಭಾರತದ ಡ್ರೋನ್ ಕಿರಾನಾ ಬೆಟ್ಟಗಳ ಸಾಲಿನಲ್ಲಿ ಬಿದ್ದಿತ್ತು’ ಎಂದರು.

ಇದನ್ನೂ ಓದಿ: ಭಾರತದ ಯುವಕರಿಗಾಗಿ ಬಂದರು 150 ಪಾಕ್​ ಯುವತಿಯರು: ಲೈನ್​ನಲ್ಲಿ ಇದ್ದಾರೆ ಇನ್ನೂ 300 ಮಂದಿ- ಏನಿದು ವಿಷ್ಯ