Toxic Actress Rukmini Vasanth ಸದ್ಯ ಪ್ಯಾನ್ ಇಂಡಿಯಾ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಯಶ್ ಅಭಿನಯದ ‘ಟಾಕ್ಸಿಕ್’ ಸಿನಿಮಾದಲ್ಲಿ ನಟಿಸಿದ್ದಾರೆ. ಈ ನಡುವೆ ರುಕ್ಮಿಣಿ ವಸಂತ್ ತಮ್ಮ ಸಿನಿ ಜರ್ನಿಯ ಆರಂಭದ ದಿನಗಳಲ್ಲಿನ ಕುತೂಹಲಕಾರಿ ಘಟನೆಯೊಂದನ್ನು ಬಹಿರಂಗಪಡಿಸಿದ್ದಾರೆ.

ಕನ್ನಡ ಚಿತ್ರರಂಗದಲ್ಲಿ ಕಡಿಮೆ ಅವಧಿಯಲ್ಲೇ ತನ್ನದೇ ಆದ ಛಾಪು ಮೂಡಿಸಿರುವ ನಟಿ ರುಕ್ಮಿಣಿ ವಸಂತ್ ಸದ್ಯ ಪಡ್ಡೆ ಹುಡುಗರ ಕ್ರಶ್ ಆಗಿ ಮಿಂಚುತ್ತಿದ್ದಾರೆ. ಸೌಂದರ್ಯ, ಅಭಿನಯ ಹಾಗೂ ವಿಭಿನ್ನ ಪಾತ್ರಗಳ ಮೂಲಕ ಪ್ರೇಕ್ಷಕರ ಮನಗೆದ್ದಿರುವ ಅವರು, ಇದೀಗ ಸಾಲು ಸಾಲು ಪ್ಯಾನ್ ಇಂಡಿಯಾ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ.

ಇತ್ತೀಚೆಗಷ್ಟೇ ಯಶ್ ಅಭಿನಯದ ಬಹುನಿರೀಕ್ಷಿತ ‘ಟಾಕ್ಸಿಕ್’ ಸಿನಿಮಾದ ಮೂಲಕ ರುಕ್ಮಿಣಿ ವಸಂತ್ ಪ್ರೇಕ್ಷಕರ ಮುಂದೆ ಬಂದಿದ್ದಾರೆ. ಸಿನಿಮಾ ವಿಶ್ವದಾದ್ಯಂತ ಬಿಡುಗಡೆಯಾಗಿದ್ದು, ಪ್ರೀಮಿಯರ್ ಶೋಗಳಿಂದಲೇ ಉತ್ತಮ ಪ್ರತಿಕ್ರಿಯೆ ಪಡೆದುಕೊಳ್ಳುತ್ತಿದೆ. ಇದರ ಬೆನ್ನಲ್ಲೇ ರುಕ್ಮಿಣಿ ಖಾತೆಗೆ ಮತ್ತೊಂದು ಪ್ಯಾನ್ ಇಂಡಿಯಾ ಸಿನಿಮಾ ಸೇರ್ಪಡೆಯಾಗಿದೆ. ಜೂ.ಎನ್‌ಟಿಆರ್ ಅಭಿನಯದ ‘ಡ್ರ್ಯಾಗನ್’ ಸಿನಿಮಾದಲ್ಲೂ ಅವರು ನಟಿಸುತ್ತಿದ್ದು, ಚಿತ್ರದ ಚಿತ್ರೀಕರಣ ಭರದಿಂದ ಸಾಗುತ್ತಿದೆ.

ಈ ನಡುವೆ ರಾಷ್ಟ್ರಮಟ್ಟದ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ರುಕ್ಮಿಣಿ ತಮ್ಮ ಸಿನಿ ಜರ್ನಿಯ ಆರಂಭದ ದಿನಗಳ ಬಗ್ಗೆ ಹಲವು ಕುತೂಹಲಕಾರಿ ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಅದರಲ್ಲೂ ‘ಸಪ್ತ ಸಾಗರದಾಚೆ ಎಲ್ಲೋ’ ಸಿನಿಮಾಗೆ ತಮಗೆ ಅವಕಾಶ ಸಿಕ್ಕಿದ್ದು ಹೇಗೆ ಎಂಬುದನ್ನು ಅವರು ಬಹಿರಂಗಪಡಿಸಿದ್ದಾರೆ.

ನಿರ್ದೇಶಕರಿಗೆ ಒಂದೇ ಒಂದು ಮೆಸೇಜ್... ಸಿಕ್ಕಿದ್ದು ದೊಡ್ಡ ಅವಕಾಶ!

ರಕ್ಷಿತ್ ಶೆಟ್ಟಿ ನಾಯಕನಾಗಿ ನಟಿಸಿದ್ದ ‘ಸಪ್ತ ಸಾಗರದಾಚೆ ಎಲ್ಲೋ’ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಉತ್ತಮ ಯಶಸ್ಸು ಕಂಡಿತ್ತು. ಹೇಮಂತ್ ರಾವ್ ನಿರ್ದೇಶನದ ಈ ಚಿತ್ರದಲ್ಲಿ ರುಕ್ಮಿಣಿ ವಸಂತ್ ಅವರ ಅಭಿನಯ ಪ್ರೇಕ್ಷಕರ ಗಮನ ಸೆಳೆದಿತ್ತು. ಆದರೆ ಈ ಸಿನಿಮಾದಲ್ಲಿ ರುಕ್ಮಿಣಿಗೆ ಅವಕಾಶ ಸಿಕ್ಕಿದ್ದು ಯಾವುದೇ ದೊಡ್ಡ ಶಿಫಾರಸಿನಿಂದಲ್ಲ. ಬದಲಾಗಿ, ಅವರು ಸ್ವತಃ ತೆಗೆದುಕೊಂಡ ಒಂದು ಸಣ್ಣ ಪ್ರಯತ್ನವೇ ಅವರ ಸಿನಿ ಬದುಕಿಗೆ ದೊಡ್ಡ ತಿರುವು ನೀಡಿತು.

‘ಸಪ್ತ ಸಾಗರದಾಚೆ ಎಲ್ಲೋ’ ಸಿನಿಮಾಗೆ ನಾಯಕಿಯ ಆಯ್ಕೆ ನಡೆಯುತ್ತಿದೆ ಎಂಬ ವಿಚಾರ ತಿಳಿದ ಕೂಡಲೇ ರುಕ್ಮಿಣಿ ನೇರವಾಗಿ ನಿರ್ದೇಶಕ ಹೇಮಂತ್ ರಾವ್ ಅವರಿಗೆ ಇನ್‌ಸ್ಟಾಗ್ರಾಮ್‌ನಲ್ಲಿ ಮೆಸೇಜ್ ಮಾಡಿದ್ದರಂತೆ. ಸಿನಿಮಾದಲ್ಲಿ ನಟಿಸಲು ತಮಗೆ ತುಂಬಾ ಆಸಕ್ತಿ ಇದೆ ಎಂದು ತಿಳಿಸಿದ್ದ ಅವರು, ಸಾಮಾಜಿಕ ಜಾಲತಾಣದ ಮೂಲಕ ಮಾತ್ರವಲ್ಲದೆ ಇ-ಮೇಲ್‌ ಮೂಲಕವೂ ತಮ್ಮ ಆಸಕ್ತಿಯನ್ನು ನಿರ್ದೇಶಕರಿಗೆ ತಿಳಿಸಿದ್ದರು.

10 ದಿನಗಳ ಬಳಿಕ ಬಂದ ಮೆಸೇಜ್!

ರುಕ್ಮಿಣಿ ಸತತವಾಗಿ ತಮ್ಮ ಆಸಕ್ತಿಯನ್ನು ವ್ಯಕ್ತಪಡಿಸಿದ ಬಳಿಕ ಸುಮಾರು 10 ದಿನಗಳ ನಂತರ ನಿರ್ದೇಶಕ ಹೇಮಂತ್ ರಾವ್ ಅವರಿಂದ ಇನ್‌ಸ್ಟಾಗ್ರಾಮ್‌ನಲ್ಲಿ ಪ್ರತಿಕ್ರಿಯೆ ಬಂದಿತ್ತಂತೆ. ಅಲ್ಲಿಂದ ಅವರ ಸಿನಿ ಪಯಣವೇ ಬದಲಾಗಿಬಿಟ್ಟಿತು. ಹೇಮಂತ್ ರಾವ್ ನಿರ್ದೇಶನದ ‘ಸಪ್ತ ಸಾಗರದಾಚೆ ಎಲ್ಲೋ’ ಸಿನಿಮಾದಲ್ಲಿ ರುಕ್ಮಿಣಿ, ಪ್ರಿಯಾ ಅಲಿಯಾಸ್ ಪುಟ್ಟಿ ಪಾತ್ರದಲ್ಲಿ ಕಾಣಿಸಿಕೊಂಡರು. ಈ ಪಾತ್ರವೇ ಅವರಿಗೆ ಕನ್ನಡ ಸಿನಿರಂಗದಲ್ಲಿ ದೊಡ್ಡ ಮಟ್ಟದ ಗುರುತನ್ನು ತಂದುಕೊಟ್ಟಿತು.

ಆ ಸಿನಿಮಾದ ಯಶಸ್ಸಿನ ಬಳಿಕ ರುಕ್ಮಿಣಿ ವಸಂತ್ ಹಿಂದಿರುಗಿ ನೋಡಲೇ ಇಲ್ಲ. ಒಂದರ ಹಿಂದೆ ಒಂದರಂತೆ ಸಿನಿಮಾಗಳು ಅವರ ಕೈ ಸೇರುತ್ತಿವೆ. ಇದೀಗ ‘ಟಾಕ್ಸಿಕ್’ ಬಳಿಕ ಪ್ಯಾನ್ ಇಂಡಿಯಾ ಮಟ್ಟದಲ್ಲೂ ತಮ್ಮದೇ ಛಾಪು ಮೂಡಿಸಲು ರುಕ್ಮಿಣಿ ಸಜ್ಜಾಗಿದ್ದಾರೆ. ಇನ್ನು ಒಂದು ಇನ್‌ಸ್ಟಾಗ್ರಾಮ್ ಮೆಸೇಜ್‌ನಿಂದ ಆರಂಭವಾದ ಅವಕಾಶ ಇಂದು ಅವರನ್ನು ಪ್ಯಾನ್ ಇಂಡಿಯಾ ನಾಯಕಿಯನ್ನಾಗಿ ಬೆಳೆಸಿದೆ ಎಂಬುದೇ ರುಕ್ಮಿಣಿ ವಸಂತ್ ಅವರ ಸಿನಿ ಜರ್ನಿಯ ಇಂಟರೆಸ್ಟಿಂಗ್ ಕಥೆ!