ರಾಜ್ಯದಲ್ಲಿ RSS ವಿರುದ್ಧ ಯಾವುದೇ ಗಲಭೆ ಪ್ರಕರಣ ದಾಖಲಾಗಿಲ್ಲ ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ ವಿಧಾನಪರಿಷತ್‌ನಲ್ಲಿ ಸ್ಪಷ್ಟಪಡಿಸಿದ್ದಾರೆ. ಛಲವಾದಿ ನಾರಾಯಣಸ್ವಾಮಿ ಅವರ ಪ್ರಶ್ನೆಗೆ ಲಿಖಿತ ಉತ್ತರ ನೀಡಿದ ಅವರು, ಸಂಘದ ಪಥ ಸಂಚಲನ ಅಥವಾ ಶಾಖೆ ವೇಳೆ ಯಾವುದೇ ಅಹಿತಕರ ಘಟನೆ ನಡೆದಿಲ್ಲ ಎಂದರು.
ಬೆಂಗಳೂರು (ಆ.26): ರಾಜ್ಯದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘ (RSS) ವಿರುದ್ಧ ಯಾವುದೇ ಗಲಭೆ ಪ್ರಕರಣ ದಾಖಲಾಗಿಲ್ಲ ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ ಉತ್ತರಿಸಿದ್ದಾರೆ.
ಅಧಿವೇಶನದಲ್ಲಿ ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ಆರ್‌ಎಸ್‌ಎಸ್ ಕುರಿತಂತೆ ಕೇಳಿದ ಚುಕ್ಕೆ ಗುರುತಿಲ್ಲದ ಪ್ರಶ್ನೆಗೆ ಪ್ರಿಯಾಂಕ್ ಖರ್ಗೆ ಅವರು ಲಿಖಿತ ರೂಪದಲ್ಲಿ ಉತ್ತರಿಸಿದ್ದಾರೆ.
ಆರ್‌ಎಸ್‌ಎಸ್ ವಿರುದ್ಧ ದಾಖಲಾಗಿರುವ ಪ್ರಕರಣಗಳೆಷ್ಟು?
ಛಲವಾದಿ ನಾರಾಯಣಸ್ವಾಮಿ ಅವರು, ಆರ್‌ಎಸ್‌ಎಸ್ ವಿರುದ್ಧ ದಾಖಲಾಗಿರುವ ಪ್ರಕರಣಗಳೆಷ್ಟು? ಯಾವುದಾದರೂ ಗಲಭೆ ಪ್ರಕರಣದಲ್ಲಿ ಭಾಗಿಯಾಗಿದೆಯೇ? ಆರ್‌ಎಸ್‌ಎಸ್ ಪಥ ಸಂಚಲನ ಮತ್ತು ಶಾಖೆ ನಡೆಸುವ ಸಂದರ್ಭದಲ್ಲಿ ಯಾವುದಾದರೂ ಅಹಿತಕರ ಘಟನೆಗಳು ಜರುಗಿದ ಪ್ರಕರಣಗಳು ಬೆಳಕಿಗೆ ಬಂದಿವೆಯೇ ಎಂದು ಪ್ರಶ್ನಿಸಿದ್ದರು. ಅದಕ್ಕೆ ಉತ್ತರಿಸಿರುವ ಪ್ರಿಯಾಂಕ್ ಖರ್ಗೆ, ಆ ರೀತಿಯ ಯಾವುದೇ ಪ್ರಕರಣವೂ ಆರ್‌ಎಸ್‌ಎಸ್ ವಿರುದ್ಧ ದಾಖಲಾಗಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ನೂರು ಸುಳ್ಳು ಹೇಳಿದರೂ ಸಂಘದ ಸಂಸ್ಕಾರಕ್ಕೆ ಧಕ್ಕೆ ಇಲ್ಲ: ಸುನೀಲ್
ಬೆಂಗಳೂರು: ‘ಗೊಬೆಲ್ಸ್ ಕಾಂಗ್ರೆಸ್’ ನಾಯಕರೇ ನೂರು ಸುಳ್ಳು ಹೇಳಿದರೂ ಸಂಘದ ಸಂಸ್ಕಾರಕ್ಕೆ ಧಕ್ಕೆ ತರಲಾಗದು ಎಂದು ಮಾಜಿ ಸಚಿವ ಹಾಗೂ ಬಿಜೆಪಿ ನಾಯಕ ವಿ.ಸುನೀಲ್‌ಕುಮಾರ್ ಹೇಳಿದ್ದಾರೆ. ಇಬ್ಬರು ಗೃಹ ಸಚಿವರು, ಆರ್‌ಎಸ್‌ಎಸ್ ಸಂಘಟನೆ ಬಗ್ಗೆ ದಿನ ಬೆಳಗಾದರೆ ದ್ವೇಷ ಕಕ್ಕುವ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರೇ ಸದನದಲ್ಲಿ ಸಂಘದ ಬಗ್ಗೆ ಬರೆದ ಷರಾ ಇದು. ಆರ್‌ಎಸ್‌ಎಸ್ ಶಾಖೆ ಹಾಗೂ ಪಂಥ ಸಂಚಲನದಲ್ಲಿ ಯಾವುದೇ ಅಹಿತಕರ ಘಟನೆ ನಡೆದಿಲ್ಲ ಎಂದು ಪ್ರಿಯಾಂಕ್ ವಿಧಾನ ಪರಿಷತ್ತಿನಲ್ಲಿ ಉತ್ತರಿಸಿದ್ದಾರೆ. ಕಳೆದ 2025ರಲ್ಲಿ ಅಂದಿನ ಗೃಹ ಸಚಿವ ಡಾ। ಜಿ.ಪರಮೇಶ್ವರ ಕೂಡ ಇದೇ ಉತ್ತರ ನೀಡಿದ್ದರು ಎಂದು ಸಾಮಾಜಿಕ ಜಾಲತಾಣದ ಮೂಲಕ ತಿರುಗೇಟು ನೀಡಿದ್ದಾರೆ.


