ಸಚಿವ ಸಂಪುಟದಲ್ಲಿನ ಸಣ್ಣ ಬದಲಾವಣೆಗಳು ಮತ್ತು ನಿಗಮ-ಮಂಡಳಿ ಅಧ್ಯಕ್ಷರ ನೇಮಕದ ಕುರಿತು ಚರ್ಚಿಸಲು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ದೆಹಲಿಗೆ ತೆರಳಲಿದ್ದಾರೆ. ಈ ಭೇಟಿಯಲ್ಲಿ, ಖಾಲಿ ಇರುವ ಒಂದು ಮಹಿಳಾ ಕೋಟಾದ ಸ್ಥಾನವನ್ನು ಭರ್ತಿ ಮಾಡುವ ಬಗ್ಗೆ ವರಿಷ್ಠರೊಂದಿಗೆ ಚರ್ಚೆ..
ಸಂಪುಟ ಮೈನರ್ ಸರ್ಜರಿ: ನಾಳೆ ಸಿಎಂ ದೆಹಲಿಗೆ 1 ಮಹಿಳಾ ಸ್ಥಾನ, 2 ಸಚಿವ ಸ್ಥಾನ ಬದಲು ಚರ್ಚೆಗೆ ಸಿಎಂ ದಿಲ್ಲಿಗೆ
ಬೆಂಗಳೂರು (ಆ.26): ಸಚಿವ ಸಂಪುಟದಲ್ಲಿ ಕೆಲ ಬದಲಾವಣೆ ಹಾಗೂ ನಿಗಮ-ಮಂಡಳಿ ಅಧ್ಯಕ್ಷರ ನೇಮಕ ಕುರಿತು ಚರ್ಚಿಸಲು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಇಂದು (ಗುರುವಾರ) ದೆಹಲಿಗೆ ತೆರಳಲಿದ್ದಾರೆ.
ಸಚಿವ ಸಂಪುಟದಲ್ಲಿ ಖಾಲಿ ಇರುವ ಒಂದು ಹುದ್ದೆ ಜತೆಗೆ ಸಚಿವ ಸ್ಥಾನಕ್ಕಾಗಿ ಪಟ್ಟು ಹಿಡಿದವರಿಗೆ ಹೇಗೆ ಅವಕಾಶ ನೀಡಬೇಕು. ಅದಕ್ಕಾಗಿ ಯಾವ ರೀತಿಯ ಬದಲಾವಣೆಗಳನ್ನು ಮಾಡಬೇಕು ಎಂಬ ಬಗ್ಗೆ ವರಿಷ್ಠರ ಅಭಿಪ್ರಾಯ ಪಡೆಯಲಿದ್ದಾರೆ ಎಂದು ತಿಳಿದುಬಂದಿದೆ.
ಎಂ ಕೃಷ್ಣಪ್ಪ-ಬಸವರಾಜ್ ಶಿವಣ್ಣನವರ್ ಇಬ್ಬರಲ್ಲಿ ಯಾರಿಗೆ ಸಚಿವ ಸ್ಥಾನ?
ಸಂಪುಟ ವಿಸ್ತರಣೆ ಪೂರ್ಣಗೊಂಡಿದ್ದು ಮಹಿಳೆಗೆ ನೀಡಬೇಕಾದ ಒಂದು ಸ್ಥಾನ ಮಾತ್ರ ಖಾಲಿಯಿದೆ. ಇದರ ನಡುವೆ ಎಂ.ಕೃಷ್ಣಪ್ಪ ಅವರು ಸಚಿವ ಸ್ಥಾನಕ್ಕಾಗಿ ಹಠ ಹಿಡಿದಿದ್ದು, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಸವರಾಜ ಶಿವಣ್ಣನವರ್ ಅವರಿಗೆ ಕುರುಬ ಕೋಟಾ ಅಡಿ ಸಚಿವ ಸ್ಥಾನಕ್ಕಾಗಿ ಪಟ್ಟು ಹಿಡಿದಿದ್ದಾರೆ.
ಹೀಗಾಗಿ ಎಂ.ಕೃಷ್ಣಪ್ಪ ಹಾಗೂ ಬಸವರಾಜ ಶಿವಣ್ಣನವರ್ ಅವರ ವಿಚಾರದಲ್ಲಿ ಯಾವ ರೀತಿಯ ನಡೆ ಅನುಸರಿಸಬೇಕು ಎಂಬ ಬಗ್ಗೆ ಹೈಕಮಾಂಡ್ ಅಭಿಪ್ರಾಯ ಕೋರಲಿದ್ದಾರೆ.
ಈ ಇಬ್ಬರಿಗೆ ಸಂಪುಟದಲ್ಲಿ ಅವಕಾಶ ನೀಡಬೇಕಾದ ಅನಿವಾರ್ಯ ಎದುರಾದರೆ ಇಬ್ಬರು ಹಾಲಿ ಸಚಿವರಿಗೆ ಕೊಕ್ ನೀಡಬೇಕಾಗುತ್ತದೆ. ಮೂಲಗಳ ಪ್ರಕಾರ ಬಾಲಕೃಷ್ಣ ಹಾಗೂ ಬಿ. ನಾಗೇಂದ್ರ ಅವರನ್ನು ಸಚಿವ ಸ್ಥಾನದಿಂದ ಕೈಬಿಟ್ಟು ಎಂ.ಕೃಷ್ಣಪ್ಪ ಹಾಗೂ ಬಸವರಾಜ್ ಅವರಿಗೆ ಅವಕಾಶ ಸೃಷ್ಟಿಸುವ ಸಾಧ್ಯತೆಗಳ ಬಗ್ಗೆ ಚರ್ಚೆ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ.
ಇನ್ನು ಖಾಲಿ ಇರುವ ಮಹಿಳಾ ಕೋಟಾದ ಸಚಿವ ಸ್ಥಾನಕ್ಕೆ ಹಲವರು ಪೈಪೋಟಿ ನಡೆಸಿದ್ದು, ಲಕ್ಷ್ಮೀಹೆಬ್ಬಾಳ್ಕರ್ ಅವರ ಹೆಸರು ಪ್ರಮುಖವಾಗಿ ಕೇಳಿ ಬರುತ್ತಿದೆ.
ನಿಗಮ-ಮಂಡಳಿ ನೇಮಕ:
ದೆಹಲಿ ಭೇಟಿ ವೇಳೆ ನಿಗಮ-ಮಂಡಳಿ ಅಧ್ಯಕ್ಷರ ನೇಮಕದ ಬಗ್ಗೆಯೂ ಮುಖ್ಯಮಂತ್ರಿ ಅವರು ಪ್ರಾಥಮಿಕ ಚರ್ಚೆ ನಡೆಸಲಿದ್ದಾರೆ. ಇನ್ನು ಎರಡು ವರ್ಷ ಅವಧಿಯೂ ಸಹ ಬಾಕಿ ಇಲ್ಲ. ಹೀಗಾಗಿ ಹಾಲಿ ಅಧ್ಯಕ್ಷರಿಂದ ರಾಜೀನಾಮೆ ಪಡೆದು ಆಕಾಂಕ್ಷಿಗಳಿಗೆ ಅವಕಾಶ ನೀಡುವ ಬಗ್ಗೆ ಚರ್ಚಿಸಲಿದ್ದಾರೆ ಎಂದು ತಿಳಿದುಬಂದಿದೆ.


