ಪ್ಯಾನ್ ಇಂಡಿಯಾ ಸ್ಟಾರ್ ಪ್ರಭಾಸ್ ಅವರ ಬಹುನಿರೀಕ್ಷಿತ ಸಿನಿಮಾಗಳ ಲೈನ್‌ಅಪ್‌ಗೆ ಸತತ ವಿಳಂಬದ ಎಫೆಕ್ಟ್ ಎದುರಾಗಿದೆ ಎನ್ನಲಾಗುತ್ತಿದೆ. ಡಿಸೆಂಬರ್ 3ರಂದು ಬಿಡುಗಡೆಯಾಗಬೇಕಿದ್ದ ‘ಫೌಜಿ’ ತಡವಾಗುತ್ತಿದೆ.

ಪ್ಯಾನ್ ಇಂಡಿಯಾ ಸ್ಟಾರ್ ಪ್ರಭಾಸ್ ಅವರ ಸಿನಿಮಾ ಲೈನ್‌ಅಪ್ ನೋಡಿದ್ರೆ ಯಾವುದೇ ಹೀರೋ ಅಭಿಮಾನಿಗಳಿಗೂ ಅಚ್ಚರಿಯಾಗೋದು ಗ್ಯಾರಂಟಿ. ಕೈಯಲ್ಲಿರುವ ಬಹುತೇಕ ಸಿನಿಮಾಗಳೆಲ್ಲವೂ ಭಾರೀ ಬಜೆಟ್‌ನಲ್ಲಿ ತಯಾರಾಗುತ್ತಿರುವ ಕ್ರೇಜಿ ಪ್ರಾಜೆಕ್ಟ್‌ಗಳೇ. ಆದರೆ, ಈ ಲೈನ್‌ಅಪ್‌ನ ಪ್ಲಾನಿಂಗ್ ಇದೀಗ ಅಂದುಕೊಂಡಂತೆ ಸಾಗುತ್ತಿಲ್ಲ ಎಂಬ ಮಾತು ಕೇಳಿಬರುತ್ತಿದೆ. ಒಂದರ ಹಿಂದೆ ಒಂದರಂತೆ ಸಿನಿಮಾಗಳು ತೆರೆಗೆ ಬರಲಿವೆ ಎಂದು ನಿರೀಕ್ಷಿಸಲಾಗಿತ್ತು. ಆದರೆ ಸತತವಾಗಿ ತಡವಾಗುತ್ತಿರುವ ಪ್ರಾಜೆಕ್ಟ್‌ಗಳು ಪ್ರಭಾಸ್ ಅಭಿಮಾನಿಗಳ ತಾಳ್ಮೆಯನ್ನು ಪರೀಕ್ಷಿಸುತ್ತಿವೆ.

ಮೊದಲು ಬರಬೇಕಿದ್ದ ‘ಫೌಜಿ’ಯೂ ವಿಳಂಬ!

ಪ್ರಭಾಸ್ ಲೈನ್‌ಅಪ್‌ನಲ್ಲಿ ಮೊದಲಿಗೆ ತೆರೆಗೆ ಬರಬೇಕಿದ್ದ ‘ಫೌಜಿ’ ಸಿನಿಮಾ ಇದೀಗ ಮತ್ತಷ್ಟು ವಿಳಂಬವಾಗುತ್ತಿದೆ ಎನ್ನಲಾಗಿದೆ. ಡಿಸೆಂಬರ್ 3ರಂದು ಚಿತ್ರವನ್ನು ಬಿಡುಗಡೆ ಮಾಡಲು ಪ್ಲಾನ್ ಮಾಡಲಾಗಿತ್ತು. ಆದರೆ ಸಿನಿಮಾ ಮೇಕಿಂಗ್‌ಗೆ ನಿರೀಕ್ಷೆಗಿಂತ ಹೆಚ್ಚು ಸಮಯ ಬೇಕಾಗುತ್ತಿರುವ ಹಿನ್ನೆಲೆಯಲ್ಲಿ ಬಿಡುಗಡೆಯನ್ನು ಮುಂದೂಡಲಾಗುತ್ತಿದೆ ಎಂಬ ಮಾಹಿತಿ ಹೊರಬಿದ್ದಿದೆ. ಇದರ ನೇರ ಪರಿಣಾಮ ಪ್ರಭಾಸ್‌ ಅವರ ಮತ್ತೊಂದು ಬಹುನಿರೀಕ್ಷಿತ ಸಿನಿಮಾ ‘ಸ್ಪಿರಿಟ್’ ಮೇಲೂ ಬೀಳುತ್ತಿದೆ.

‘ಸ್ಪಿರಿಟ್’ಗೂ ಶುರುವಾಗಿಲ್ಲ ಶೂಟಿಂಗ್?

ಸಂದೀಪ್ ರೆಡ್ಡಿ ವಂಗಾ ನಿರ್ದೇಶನದಲ್ಲಿ ಮೂಡಿಬರಲಿರುವ ‘ಸ್ಪಿರಿಟ್’ ಸಿನಿಮಾ ಮೇಲೆ ಪ್ರಭಾಸ್ ಫ್ಯಾನ್ಸ್‌ಗೆ ಭಾರಿ ನಿರೀಕ್ಷೆಯಿದೆ. ಆದರೆ ‘ಫೌಜಿ’ ಶೂಟಿಂಗ್ ಪೂರ್ಣಗೊಂಡ ಬಳಿಕವಷ್ಟೇ ‘ಸ್ಪಿರಿಟ್’ ಸೆಟ್ಟೇರಲು ಸಾಧ್ಯ ಎನ್ನಲಾಗುತ್ತಿದೆ. ಹೀಗಾಗಿ ‘ಫೌಜಿ’ ವಿಳಂಬವಾದಷ್ಟೂ ‘ಸ್ಪಿರಿಟ್’ ಆರಂಭವೂ ಮತ್ತಷ್ಟು ಮುಂದಕ್ಕೆ ಹೋಗುವ ಸಾಧ್ಯತೆ ಇದೆ.

‘ಕಲ್ಕಿ 2’, ‘ಸಲಾರ್ 2’ಗೂ ಡಿಲೇ ಎಫೆಕ್ಟ್!

ಇನ್ನು ಈ ಎರಡು ಸಿನಿಮಾಗಳ ವಿಳಂಬದ ಪರಿಣಾಮ ಪ್ರಭಾಸ್ ಕೆರಿಯರ್‌ನ ಮತ್ತಷ್ಟು ಬಿಗ್ ಪ್ರಾಜೆಕ್ಟ್‌ಗಳ ಮೇಲೂ ಬೀಳುವ ಸಾಧ್ಯತೆ ಇದೆ. ವಿಶೇಷವಾಗಿ ‘ಕಲ್ಕಿ 2’ ಮತ್ತು ‘ಸಲಾರ್ 2’ ಸಿನಿಮಾಗಳಿಗಾಗಿ ಅಭಿಮಾನಿಗಳು ಬಹಳ ದಿನಗಳಿಂದ ಕಾಯುತ್ತಿದ್ದಾರೆ. ‘ಕಲ್ಕಿ 2’ ಶೂಟಿಂಗ್‌ಗಾಗಿ ಪ್ರಭಾಸ್ ತಮ್ಮ ಡೇಟ್ಸ್‌ ಅನ್ನು 2027ರ ದ್ವಿತೀಯಾರ್ಧದಲ್ಲಿ ನೀಡುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಮತ್ತೊಂದೆಡೆ ‘ಸಲಾರ್ 2’ ಕೂಡ ಸದ್ಯಕ್ಕೆ ಹೋಲ್ಡ್‌ನಲ್ಲಿದೆ ಎಂಬ ಮಾತು ಕೇಳಿಬರುತ್ತಿದೆ.

ಪ್ರಾಜೆಕ್ಟ್‌ಗಳು ಕ್ರೇಜಿ... ಆದರೆ ರಿಲೀಸ್‌ಗೆ ಮಾತ್ರ ವೇಯ್ಟಿಂಗ್!

ಪ್ರಭಾಸ್ ಕೈಯಲ್ಲಿರುವ ಸಿನಿಮಾಗಳೆಲ್ಲವೂ ಇಂಡಸ್ಟ್ರಿಯಲ್ಲೇ ಭಾರೀ ಕ್ರೇಜ್ ಹುಟ್ಟಿಸಿರುವ ಪ್ರಾಜೆಕ್ಟ್‌ಗಳೇ. ‘ಫೌಜಿ’, ‘ಸ್ಪಿರಿಟ್’, ‘ಕಲ್ಕಿ 2’, ‘ಸಲಾರ್ 2’.. ಹೀಗೆ ಒಂದಕ್ಕಿಂತ ಒಂದು ದೊಡ್ಡ ಸಿನಿಮಾಗಳೇ ಲೈನ್‌ನಲ್ಲಿ ನಿಂತಿವೆ.

ಆದರೆ ಸಿನಿಮಾಗಳ ಮೇಲೆ ನಿರೀಕ್ಷೆ ಹೆಚ್ಚಾಗುತ್ತಿರುವಷ್ಟೇ, ಅವುಗಳ ರಿಲೀಸ್‌ಗಾಗಿ ಕಾಯುವ ಸಮಯವೂ ಹೆಚ್ಚಾಗುತ್ತಿದೆ. ಒಂದರ ನಂತರ ಮತ್ತೊಂದು ಸಿನಿಮಾ ವಿಳಂಬವಾಗುತ್ತಿರುವ ಸುದ್ದಿ ಪ್ರಭಾಸ್ ಅಭಿಮಾನಿಗಳಿಗೆ ನಿರಾಸೆ ಮೂಡಿಸುತ್ತಿದೆ. ಹೀಗಾಗಿ ಈ ಬಹುನಿರೀಕ್ಷಿತ ಸಿನಿಮಾಗಳು ನಿಜಕ್ಕೂ ಯಾವಾಗ ಸೆಟ್ಟೇರಲಿವೆ, ಯಾವಾಗ ತೆರೆಗೆ ಬರಲಿವೆ ಎಂಬುದೇ ಈಗ ಕುತೂಹಲ ಮೂಡಿಸಿರುವ ಪ್ರಶ್ನೆಯಾಗಿದೆ.