ಸಚಿವ ಸತೀಶ್ ಜಾರಕಿಹೊಳೆ ಆಪ್ತರ ಮೇಲಿನ ಇಡಿ ದಾಳಿಯನ್ನು ಉದ್ಯಮಿ ವಿಜಯ್ ಮಲ್ಯ 'ಎಕ್ಸ್'ನಲ್ಲಿ ಖಂಡಿಸಿದ್ದಾರೆ. ಇಡಿ ಕಾರ್ಯವೈಖರಿಯನ್ನು ಕಡುಭ್ರಷ್ಟ ಎಂದಿರುವ ಅವರು, ಇದು ಸಾರ್ವಜನಿಕ ಚಾರಿತ್ರ್ಯ ವಧೆ ಎಂದು ಟೀಕಿಸಿದ್ದಾರೆ. ಅಲ್ಲದೆ, ಭಾರತದ ದೇವಾಲಯಗಳಿಗೆ ಭೇಟಿ ನೀಡಲು ಸಾಧ್ಯವಾಗದಿರುವುದಕ್ಕೆ ಬೇಸರ ವ್ಯಕ್ತಪಡಿಸಿದ್ದಾರೆ.

ಬೆಂಗಳೂರು: ಸಚಿವ ಸತೀಶ್ ಜಾರಕಿಹೊಳಿ ಹಾಗೂ ಅವರ ಆಪ್ತರ ಮನೆಗಳ ಮೇಲಿನ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ದಾಳಿ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ, ವಿದೇಶದಲ್ಲಿರುವ ಉದ್ಯಮಿ ವಿಜಯ್ ಮಲ್ಯ ಸಾಮಾಜಿಕ ಜಾಲತಾಣ 'ಎಕ್ಸ್'ನಲ್ಲಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇಡಿ ಕಾರ್ಯವೈಖರಿಯನ್ನು ಕಡುಭ್ರಷ್ಟ ಮತ್ತು ನಾಚಿಕೆಗೇಡಿನ ಸಂಗತಿ ಎಂದು ಬಣ್ಣಿಸಿರುವ ಅವರು, ಯಾವುದೇ ಸೂಕ್ತ ಚಾರ್ಜ್‌ಶೀಟ್ ಸಲ್ಲಿಸದೆ ಹಾಗೂ ನ್ಯಾಯಯುತ ವಿಚಾರಣೆ ನಡೆಸದೆ, ಕೇವಲ ಸಾರ್ವಜನಿಕವಾಗಿ ವ್ಯಕ್ತಿಗಳ ಚಾರಿತ್ರ್ಯ ವಧೆ ಮಾಡುವುದರಲ್ಲಿ ಇಡಿ ಹೆಮ್ಮೆ ಪಟ್ಟುಕೊಳ್ಳುತ್ತಿದೆ. ವಿಶ್ವದ ಯಾವುದೇ ಪ್ರಜಾಪ್ರಭುತ್ವ ರಾಷ್ಟ್ರದಲ್ಲೂ ಇಂತಹ ಜಾರಿ ಸಂಸ್ಥೆಗಳ ನಡವಳಿಕೆಯನ್ನು ಕಾಣಲು ಸಾಧ್ಯವಿಲ್ಲ. ನಾಗರಿಕರು ಈ ಬಗ್ಗೆ ಯೋಚಿಸಬೇಕು ಎಂದು ಪ್ರಶ್ನಿಸಿದ್ದಾರೆ.

ತಮ್ಮ ಮೇಲಿನ ಆರೋಪಗಳು ಹಾಗೂ ಸಾರ್ವಜನಿಕ ಟೀಕೆಗಳ ಕುರಿತು ಪ್ರತಿಕ್ರಿಯಿಸಿದ ಮಲ್ಯ, ನನ್ನನ್ನು ಪ್ರೀತಿಸಿ, ದ್ವೇಷಿಸಿ, ನಿಂದಿಸಿ ಅಥವಾ ನಿರ್ಲಕ್ಷಿಸಿ ಆದರೆ ನಾನು ಎಂದಿಗೂ ಬದಲಾಗುವುದಿಲ್ಲ. ದೇವರು ನನಗೆ ಸಾಟಿಯಿಲ್ಲದ ಧೈರ್ಯ ಮತ್ತು ಶಕ್ತಿಯನ್ನು ನೀಡಿದ್ದಾನೆ. ಕೊನೆಯಲ್ಲಿ ಸತ್ಯವೇ ಜಯಗಳಿಸಲಿದೆ ಎಂಬ ನಂಬಿಕೆ ನನಗಿದೆ. ಭಾರತದಲ್ಲಿರುವ ನಾನು ಪೂಜಿಸುವ ಪವಿತ್ರ ದೇವಾಲಯಗಳಿಗೆ ಭೇಟಿ ನೀಡಲಾಗದಿರುವುದು ನನಗೆ ಅತ್ಯಂತ ಬೇಸರ ತಂದಿದೆ. ನಾನು ದೇವಾಲಯ ಭೇಟಿಯನ್ನು ಮಿಸ್ ಮಾಡಿಕೊಳ್ಳುತ್ತೇನೆ. ಆದಾಗ್ಯೂ, ನನ್ನ ಧಾರ್ಮಿಕ ಚೌಕಟ್ಟು ಮತ್ತು ನಿಷ್ಠೆಯನ್ನು ನಾನು ಸದಾ ಕಾಪಾಡಿಕೊಳ್ಳುತ್ತೇನೆ ಎಂದು ಬರೆದುಕೊಂಡಿದ್ದಾರೆ.

ಸಾಲ ತೀರಿದರೂ ಮಲ್ಯ ಮೇಲಿನ ಕೇಸ್ ರದ್ದಾಗಲ್ಲ

ಬ್ಯಾಂಕ್‌ಗಳಿಗೆ ವಂಚಿಸಿ ದೇಶ ತೊರೆದಿರುವ ಉದ್ಯಮಿ ವಿಜಯ ಮಲ್ಯ ಅವರ 14,131.6 ಕೋಟಿ ರೂಪಾಯಿ ಮೌಲ್ಯದ ಚರ ಮತ್ತು ಸ್ಥಿರ ಆಸ್ತಿಗಳನ್ನು ಭಾರತೀಯ ಸ್ಟೇಟ್ ಬ್ಯಾಂಕ್ (ಎಸ್‌ಬಿಐ) ನೇತೃತ್ವದ ಕನ್ಸೋರ್ಟಿಯಂಗೆ ಹಸ್ತಾಂತರಿಸಲಾಗಿದ್ದರೂ, ಅವರ ವಿರುದ್ಧದ ಹಣ ಅಕ್ರಮ ವರ್ಗಾವಣೆ (ಮನಿ ಲ್ಯಾಂಡರಿಂಗ್) ಪ್ರಕರಣಗಳು ರದ್ದಾಗುವುದಿಲ್ಲ ಎಂದು ಜಾರಿ ನಿರ್ದೇಶನಾಲಯ (ಇ.ಡಿ.) ಸ್ಪಷ್ಟಪಡಿಸಿದೆ.

"ನನ್ನ 14,000 ಕೋಟಿ ರೂಪಾಯಿಗೂ ಹೆಚ್ಚಿನ ಮೌಲ್ಯದ ಆಸ್ತಿಯನ್ನು ವಶಪಡಿಸಿಕೊಂಡು ಬ್ಯಾಂಕ್‌ಗಳ ಸಾಲ ತೀರಿಸಲಾಗಿದೆ. ಆದ್ದರಿಂದ ನನ್ನ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಪ್ರಕರಣಗಳನ್ನು ಅಂತ್ಯಗೊಳಿಸಬೇಕು," ಎಂದು ಕೋರಿ ವಿಜಯ ಮಲ್ಯ ಅವರು ಬಾಂಬೆ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.

ಈ ಅರ್ಜಿಗೆ ಸಂಬಂಧಿಸಿದಂತೆ ಹೈಕೋರ್ಟ್‌ಗೆ ಅಫಿಡವಿಟ್ ಸಲ್ಲಿಸಿರುವ ಇ.ಡಿ., "ಮಲ್ಯ ಅವರು ಕಾನೂನು ಪ್ರಕ್ರಿಯೆಯಿಂದ ಹಾಗೂ ತನಿಖೆಯಿಂದ ಸತತವಾಗಿ ನುಣಚಿಕೊಳ್ಳುತ್ತಿದ್ದಾರೆ. ಆಸ್ತಿ ಮುಟ್ಟುಗೋಲು ಹಾಕಿಕೊಂಡ ತಕ್ಷಣವೇ ಅವರ ಮೇಲಿನ ಅಪರಾಧ ಹೊಣೆಗಾರಿಕೆ ಇಲ್ಲವಾಗುವುದಿಲ್ಲ. ಹೀಗಾಗಿ ಅವರ ವಿರುದ್ಧದ ಕ್ರಿಮಿನಲ್ ಪ್ರಕರಣಗಳನ್ನು ಕೈಬಿಡಲು ಸಾಧ್ಯವಿಲ್ಲ," ಎಂದು ತಿಳಿಸಿದೆ.