ರಾಜ್ಯದಲ್ಲಿ ಮಳೆ ಕೊರತೆಯಿಂದಾಗಿ ಮಳೆಗಾಲದಲ್ಲೇ ವಿದ್ಯುತ್ ಬೇಡಿಕೆ ಸಾರ್ವಕಾಲಿಕ ದಾಖಲೆ ನಿರ್ಮಿಸಿದೆ. ರೈತರ ಪಂಪ್‌ಸೆಟ್ ಬಳಕೆ ಹಾಗೂ ಬಿಸಿಲಿನಿಂದ ಎಸಿ, ಫ್ಯಾನ್‌ಗಳ ಬಳಕೆ ಹೆಚ್ಚಾಗಿದ್ದು, ಜಲವಿದ್ಯುತ್ ಉತ್ಪಾದನೆ ಕುಸಿದಿದೆ. ಇದರಿಂದಾಗಿ, ರಾಜ್ಯವು ಅನಧಿಕೃತ ಲೋಡ್ ಶೆಡ್ಡಿಂಗ್ ಮತ್ತು ವಿದ್ಯುತ್ ಕೊರತೆಯನ್ನು ಎದುರಿಸುತ್ತಿದೆ.
ವರದಿ- ಶ್ರೀಕಾಂತ್ ಎನ್. ಗೌಡಸಂದ್ರ
ಬೆಂಗಳೂರು (ಸೆ.13): ರಾಜ್ಯದಲ್ಲಿ ಮಳೆಗಾಲದಲ್ಲೇ ಗರಿಷ್ಠ ವಿದ್ಯುತ್ ಬೇಡಿಕೆ ಸೃಷ್ಟಿಯಾಗಿದೆ. ಸೆ.11ರಂದು ಮೊದಲ ಬಾರಿ ದಿನದ ಗರಿಷ್ಠ ವಿದ್ಯುತ್ ಬೇಡಿಕೆ 20 ಸಾವಿರ ಮೆ.ವ್ಯಾಟ್ ಗಡಿ ದಾಟಿದ್ದು, ಬರೋಬ್ಬರಿ 20,094 ಮೆ.ವ್ಯಾಟ್ ವಿದ್ಯುತ್ ಬಳಕೆಯಾಗಿದೆ.
ಎಲ್‌ನಿನೋ ಪರಿಣಾಮ ಹಾಗೂ ತೀವ್ರ ಬರದ ಹಿನ್ನೆಲೆಯಲ್ಲಿ ಇಂಧನ ಇಲಾಖೆ ಅಂದಾಜಿಸಿದ ಪ್ರಮಾಣಕ್ಕಿಂತ ಶೇ.27ರಷ್ಟು ಹೆಚ್ಚು ವಿದ್ಯುತ್ ಬಳಕೆಯಾಗುತ್ತಿದೆ. ಜತೆಗೆ ಜಲವಿದ್ಯುತ್ ಉತ್ಪಾದನೆ ಭಾರೀ ಪ್ರಮಾಣದಲ್ಲಿ ಕುಸಿದಿದ್ದು, ನಿರೀಕ್ಷೆಗೂ ಮೀರಿ ಸೃಷ್ಟಿಯಾಗಿರುವ ಬೇಡಿಕೆಗೆ ತಕ್ಕಂತೆ ವಿದ್ಯುತ್ ಪೂರೈಕೆಯಾಗುತ್ತಿಲ್ಲ. ಹೀಗಾಗಿ ಅನಧಿಕೃತವಾಗಿ ಲೋಡ್ ಶೆಡ್ಡಿಂಗ್ ಮೊರೆ ಹೋಗಲಾಗಿದೆ. ಈ ಬಗ್ಗೆ ಸೆ.3ರಂದು ಕೆಪಿಟಿಸಿಎಲ್ ಎಲ್ಲಾ ಎಸ್ಕಾಂಗಳಿಗೆ ಪೀಕ್ ಅವಧಿಯಲ್ಲಿ ಹೆಚ್ಚು ವಿದ್ಯುತ್ ಬಳಕೆ ಮಾಡದಂತೆ ಮಿತಿ ವಿಧಿಸಿದ್ದ ದಾಖಲೆ ‘ಕನ್ನಡಪ್ರಭ’ಕ್ಕೆ ಲಭ್ಯವಾಗಿದೆ.
ಎಸ್ಕಾಂಗಳು ಸೆ.3ರಂದು ಸಂಜೆ 6.15 ಗಂಟೆಯಿಂದ ರಾತ್ರಿ 8.15 ಗಂಟೆವರೆಗೆ 1,200 ಮೆ.ವ್ಯಾಟ್ ವಿದ್ಯುತ್ ಮಾತ್ರ ಡ್ರಾ ಮಾಡಬೇಕು. ರಾತ್ರಿ 8.15 ರಿಂದ ರಾತ್ರಿ 9 ಗಂಟೆವರೆಗೆ 650 ಮೆ.ವ್ಯಾಟ್ ಮಾತ್ರ ಬಳಕೆ ಮಾಡಬೇಕು ಎಂದು ಅಧಿಕೃತವಾಗಿ ತಿಳಿಸಿದೆ. ಇದರಿಂದ ವಿಧಿ ಇಲ್ಲದೆ ಎಸ್ಕಾಂಗಳು ವಿದ್ಯುತ್ ಕಡಿತದ ಮೊರೆ ಹೋಗಿದ್ದು, ಅನಧಿಕೃತ ಲೋಡ್ ಶೆಡ್ಡಿಂಗ್ ಶುರುವಾಗಿದೆ.
ಅಲ್ಲದೆ ದಿನದಿಂದ ದಿನಕ್ಕೆ ವಿದ್ಯುತ್ ಬೇಡಿಕೆ ಹೆಚ್ಚಾಗುತ್ತಿದ್ದು, ಪೂರೈಕೆ ಕಡಿಮೆಯಾಗುತ್ತಿದೆ. ಹೀಗಾಗಿ ನಿತ್ಯವೂ ಅನಧಿಕೃತ ಕರ್ಟೈಲ್‌ಮೆಂಟ್ ಮುಂದುವರೆದಿದೆ. ಮೌಖಿಕವಾಗಿ ಕರ್ಟೈಲ್‌ಮೆಂಟ್ ಸೂಚನೆ ನೀಡಲಾಗುತ್ತಿದೆ. ಹೀಗಾಗಿ ಗ್ರಾಮೀಣ ಭಾಗದಲ್ಲಿ ಅನಿವಾರ್ಯವಾಗಿ ವಿದ್ಯುತ್ ಕಡಿತ ಮಾಡಲಾಗುತ್ತಿದೆ ಎಂದು ಇಂಧನ ಇಲಾಖೆ ಮೂಲಗಳು ತಿಳಿಸಿವೆ.
ನಿರೀಕ್ಷೆಗೂ ಮೀರಿ ವಿದ್ಯುತ್ ಬಳಕೆ:
ಇಂಧನ ಇಲಾಖೆ 2026-27ನೇ ಅವಧಿಗೆ ನಿತ್ಯ ಸರಾಸರಿ 277.1 ದಶಲಕ್ಷ ಯುನಿಟ್‌ನಂತೆ (ಎಂಯು) 1,01,155 ದಶಲಕ್ಷ ಯುನಿಟ್ ಬಳಕೆ ಅಂದಾಜಿಸಿತ್ತು. ಆದರೆ, ಏ.1 ರಿಂದ ಸೆ.11 ರವರೆಗೆ ಸರಾಸರಿ 302.8 ದಶಲಕ್ಷ ಯುನಿಟ್‌ನಂತೆ 49,666 ಎಂ.ಯು ಬಳಕೆಯಾಗಿದೆ. ಮಳೆಗಾಲದಲ್ಲಿ ವಾಡಿಕೆ ಪ್ರಕಾರ ವಿದ್ಯುತ್ ಬಳಕೆ ಕಡಿಮೆಯಾಗಲಿದೆ. ಹೀಗಾಗಿ ಸೆಪ್ಟೆಂಬರ್ ತಿಂಗಳಲ್ಲಿ ಪ್ರತಿ ದಿನ 253 ಮಿ.ಯು. ವಿದ್ಯುತ್ ಬಳಕೆ ನಿರೀಕ್ಷಿಸಲಾಗಿತ್ತು. ಆದರೆ, ಸೆ.11 ರಂದು ಸಾರ್ವಕಾಲಿಕ 345.35 ದಶಲಕ್ಷ ಯುನಿಟ್ ವಿದ್ಯುತ್ ಬಳಕೆಯಾಗಿದೆ. ಇದು ಇಂಧನ ಇಲಾಖೆಗೆ ತಲೆನೋವಾಗಿ ಪರಿಣಮಿಸಿದೆ.
ಮಳೆಗಾಲದಲ್ಲೇ ಹೆಚ್ಚಾಯ್ತು ಬೇಡಿಕೆ:
ರಾಜ್ಯದ ಪ್ರಮುಖ ಮೂರು ಜಲಾಶಯಗಳಲ್ಲಿ ಜಲವಿದ್ಯುತ್ ಉತ್ಪಾದನೆ ಕುಸಿದಿದೆ. ಲಿಂಗನಮಕ್ಕಿ, ಸೂಪಾ, ವಾರಾಹಿ ಯೋಜನೆಗಳಲ್ಲಿ ಕಳೆದ ವರ್ಷ ಏ.1 ರಿಂದ ಸೆ.11ರ ವರೆಗೆ 5,143 ದಶಲಕ್ಷ ಯುನಿಟ್ ಉತ್ಪಾದನೆಯಾಗಿತ್ತು. ಈ ಬಾರಿ 3,507 ಮಿಲಿಯನ್ ಯುನಿಟ್ ಮಾತ್ರ ಆಗಿದ್ದು, 1,635 ಮಿಲಿಯನ್ ಯುನಿಟ್ ಕೊರತೆ ಸೃಷ್ಟಿಯಾಗಿದೆ. ಸಣ್ಣ ಜಲಾಶಯಗಳಲ್ಲಿ 2,640 ದಶಲಕ್ಷ ಯುನಿಟ್ ಬದಲಿಗೆ 1,427 ದಶಲಕ್ಷ ಯುನಿಟ್ ಮಾತ್ರ ಉತ್ಪಾದನೆಯಾಗಿದೆ.
ಲಿಂಗನಮಕ್ಕಿಯಲ್ಲಿ ನಿತ್ಯ 12.46 ಮಿಲಿಯನ್ ಯುನಿಟ್ ಬದಲಿಗೆ ಸೆ.11ಕ್ಕೆ 6.07 ಮಿಲಿಯನ್ ಯುನಿಟ್ ಮಾತ್ರ ಉತ್ಪಾದನೆಯಾಗಿದ್ದು, ಸೂಪಾ ಜಲಾಶಯದಲ್ಲಿ 6.05 ರಿಂದ 4.22ಕ್ಕೆ, ಮಾಣಿ (ವಾರಾಹಿ) ಜಲಾಶಯದಲ್ಲಿ 1.95 ರಿಂದ 1.25 ಮಿಲಿಯನ್ ಯುನಿಟ್‌ಗೆ ಕಡಿಮೆಯಾಗಿದೆ.
ಇದರಿಂದ ಶಾಖೋತ್ಪನ್ನ ವಿದ್ಯುತ್ ಮೇಲಿನ ಒತ್ತಡ ಹೆಚ್ಚಾಗಿದೆ. ವಿದ್ಯುತ್ ಕೊರತೆ ನೀಗಿಸಲು ಕಲ್ಲಿದ್ದಲು ಆಧಾರಿತ ಶಾಖೋತ್ಪನ್ನ ಘಟಕಗಳ ಮೇಲೆ ಒತ್ತಡ ಹೆಚ್ಚಾಗುತ್ತದೆ. ಸೆ.11 ರಂದು ಆರ್‌ಟಿಪಿಎಸ್‌ನಿಂದ 1,007, ಬಿಟಿಪಿಎಸ್‌ನಿಂದ 1,156, ವೈಟಿಪಿಎಸ್‌ನಿಂದ 1,120 ಮೆ.ವ್ಯಾಟ್ ವಿದ್ಯುತ್ ಉತ್ಪಾದನೆ ಮಾಡಲಾಗಿದೆ. ರಾಜ್ಯಗಳು ಬೇಡಿಕೆ ಮತ್ತು ಪೂರೈಕೆಯ ನಡುವಿನ ವ್ಯತ್ಯಾಸ ಸರಿದೂಗಿಸಲು ಮುಕ್ತ ಮಾರುಕಟ್ಟೆಯಿಂದ ದುಬಾರಿ ವೆಚ್ಚದಲ್ಲಿ ವಿದ್ಯುತ್ ಖರೀದಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
ಮಳೆಯ ಅಭಾವವೇ ಪ್ರಮುಖ ಕಾರಣ
ಪ್ರತಿ ವರ್ಷ ವಾಡಿಕೆ ಪ್ರಕಾರ ಮಳೆಗಾಲದಲ್ಲಿ ವಿದ್ಯುತ್ ಬೇಡಿಕೆ ಕಡಿಮೆ ಇರಬೇಕು. ಆದರೆ, ಎಲ್‌ನಿನೋ ಹಾಗೂ ಶತಮಾನದ ಬರದ ಹಿನ್ನೆಲೆಯಲ್ಲಿ ಮಳೆ ಇಲ್ಲದೆ ಬೆಳೆಗಳು ಒಣಗುತ್ತಿವೆ. ಶತಾಯಗತಾಯ ಬೆಳೆ ಉಳಿಸಿಕೊಳ್ಳಲು ರೈತರು ಪಂಪ್‌ಸೆಟ್‌ಗಳ ಮೂಲಕ ನೀರು ಹಾಯಿಸಲು ವಿದ್ಯುತ್ ಅನ್ನು ಹೆಚ್ಚಾಗಿ ಅವಲಂಬಿಸಿದ್ದಾರೆ. ಜತೆಗೆ ಮಳೆಗಾಲ ಆಗಿದ್ದರೂ ರಾಜ್ಯದಲ್ಲಿ ಉಷ್ಣಾಂಶ 35 ಡಿಗ್ರಿ ಸೆಲ್ಸಿಯಸ್‌ವರೆಗೆ ಹೆಚ್ಚಾಗಿದೆ. ಬೆಂಗಳೂರು ಸೇರಿ ರಾಜ್ಯಾದ್ಯಂತ ಬಿಸಿಲ ಬೇಗೆ ಕಾಡುತ್ತಿದೆ. ಹೀಗಾಗಿ ಫ್ಯಾನ್, ಎಸಿಯಂತಹ ವಿದ್ಯುತ್ ಉಪಕರಣಗಳ ಬಳಕೆ ಪ್ರತಿ ವರ್ಷದ ಮಳೆಗಾಲಕ್ಕಿಂತ ತೀವ್ರ ಪ್ರಮಾಣದಲ್ಲಿ ಹೆಚ್ಚಾಗಿದೆ.
ಜತೆಗೆ ಜಲಾಶಯಗಳಲ್ಲಿ ನೀರಿನ ಮಟ್ಟ ಕಡಿಮೆಯಾಗುವುದರಿಂದ ಜಲವಿದ್ಯುತ್ ಉತ್ಪಾದನೆ ತೀವ್ರವಾಗಿ ಕುಂಠಿತಗೊಂಡಿದೆ. ಇದು ಸಮಸ್ಯೆ ಹೆಚ್ಚಳಕ್ಕೆ ಕಾರಣವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

