ಭಾರತವು ಅಫ್ಘಾನಿಸ್ತಾನ ವಿರುದ್ಧ 3 ಪಂದ್ಯಗಳ ಟಿ20 ಸರಣಿಯನ್ನು ಆಡಲಿದ್ದು, ಶ್ರೇಯಸ್‌ ಅಯ್ಯರ್‌ ನಾಯಕರಾಗಿದ್ದಾರೆ. ಆರಂಭಿಕರ ಆಯ್ಕೆ ಗೊಂದಲದ ನಡುವೆಯೂ, ಜಸ್‌ಪ್ರೀತ್‌ ಬುಮ್ರಾ ಅವರ ವಾಪಸಾತಿಯು ತಂಡದ ಬೌಲಿಂಗ್ ವಿಭಾಗವನ್ನು ಬಲಪಡಿಸಿದೆ. ಇತ್ತ ಇಬ್ರಾಹಿಂ ಜದ್ರಾನ್‌ ನಾಯಕತ್ವದ ಅಫ್ಘಾನ್ ತಂಡವು ರಶೀದ್‌ ಖಾನ್‌ರಂತಹ ಅನುಭವಿಗಳೊಂದಿಗೆ ಸವಾಲೊಡ್ಡಲು ಸಜ್ಜಾಗಿದೆ.

ನವದೆಹಲಿ: ಭಾರತ ಕ್ರಿಕೆಟ್‌ ತಂಡ ಭಾನುವಾರದಿಂದ ಅಫ್ಘಾನಿಸ್ತಾನ ವಿರುದ್ಧ 3 ಪಂದ್ಯಗಳ ಟಿ20 ಸರಣಿಯನ್ನು ಆಡಲಿದೆ. ಈ ಸರಣಿ ಭಾರತದಲ್ಲೇ ನಡೆಯಲಿದೆಯಾದರೂ, ಆತಿಥ್ಯ ವಹಿಸುತ್ತಿರುವುದು ಅಫ್ಘಾನಿಸ್ತಾನ ಎನ್ನುವುದು ವಿಶೇಷ. 3 ಪಂದ್ಯಗಳೂ ರಾಜಧಾನಿಯಲ್ಲೇ ನಡೆಯಲಿದೆ.

ಅಫ್ಘಾನಿಸ್ತಾನ ತಂಡ ಭಾರತ ವಿರುದ್ಧ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಮೊದಲ ಜಯಕ್ಕಾಗಿ ಎದುರು ನೋಡುತ್ತಿದ್ದರೆ, ಐರ್ಲೆಂಡ್‌ ಹಾಗೂ ಇಂಗ್ಲೆಂಡ್‌ನಲ್ಲಿ ಟಿ20 ಸರಣಿಗಳನ್ನು ಸೋತಿದ್ದ ಶ್ರೇಯಸ್‌ ಅಯ್ಯರ್‌ ನಾಯಕತ್ವದ ತಂಡ, ತವರಿನಲ್ಲಿ ಸರಣಿ ಗೆಲ್ಲಲು ಕಾತರಿಸುತ್ತಿದೆ. ಇತ್ತೀಚೆಗೆ ಜಿಂಬಾಬ್ವೆಯಲ್ಲಿ ಭಾರತ ಸರಣಿ ಜಯಿಸಿತ್ತಾದರೂ, ಅದಕ್ಕೆ ಅಷ್ಟೇನೂ ಮಹತ್ವ ಸಿಕ್ಕಿರಲಿಲ್ಲ.

ಟೀಂ ಇಂಡಿಯಾಗೆ ಶುರುವಾಗಿದೆ ಆಯ್ಕೆ ತಲೆಬಿಸಿ

ನಾಯಕ ಶ್ರೇಯಸ್‌ಗೆ ಮೊದಲ ಪಂದ್ಯಕ್ಕೂ ಮೊದಲೇ ಆಯ್ಕೆ ತಲೆಬಿಸಿ ಶುರುವಾಗಿದೆ. ಆರಂಭಿಕರನ್ನಾಗಿ ಅಭಿಷೇಕ್‌ ಶರ್ಮಾ, ಸಂಜು ಸ್ಯಾಮ್ಸನ್‌ ಹಾಗೂ ವೈಭವ್‌ ಸೂರ್ಯವಂಶಿ ನಡುವೆ ಯಾರಿಬ್ಬರನ್ನು ಆಯ್ಕೆ ಮಾಡಬೇಕು ಎನ್ನುವ ಗೊಂದಲವಿದೆ. ಇನ್ನು ಆಲ್ರೌಂಡರ್‌ಗಳ ಆಯ್ಕೆಯೂ ಕಷ್ಟ ಎನಿಸಿದೆ. ಆದರೆ ಜಸ್‌ಪ್ರೀತ್‌ ಬುಮ್ರಾ ಹಾಗೂ ವರುಣ್‌ ಚಕ್ರವರ್ತಿ ತಂಡಕ್ಕೆ ವಾಪಸಾಗಿರುವ ಕಾರಣ, ಬೌಲಿಂಗ್‌ ವಿಭಾಗ ಬಲಿಷ್ಠವಾಗಿ ತೋರುತ್ತಿದೆ.

ಮತ್ತೊಂದೆಡೆ ಅಫ್ಘಾನಿಸ್ತಾನಕ್ಕೆ ಇಬ್ರಾಹಿಂ ಜದ್ರಾನ್‌ ನಾಯಕನಾಗಿ ನೇಮಕಗೊಂಡಿದ್ದಾರೆ. ರಶೀದ್‌ ಖಾನ್‌, ಮೊಹಮದ್‌ ನಬಿ, ರಹಮಾನುಲ್ಲಾ ಗುರ್ಬಾಜ್‌ರಂಥ ಅನುಭವಿಗಳ ಬಲ ತಂಡಕ್ಕಿದೆ. ಒಟ್ಟಾರೆಯಾಗಿ, 3 ಪಂದ್ಯಗಳ ಸರಣಿ ಸಾಕಷ್ಟು ಕುತೂಹಲ ಮೂಡಿಸಿದ್ದು ಸ್ಪರ್ಧಾತ್ಮಕ ಕ್ರಿಕೆಟ್‌ಗೆ ಸಾಕ್ಷಿಯಾಗುವ ನಿರೀಕ್ಷೆ ಇದೆ.

ಆಫ್ಘಾನಿಸ್ತಾನ ಎದುರಿನ ಸರಣಿಗೆ ಭಾರತ ತಂಡ ಹೀಗಿದೆ:

ಶ್ರೇಯಸ್ ಅಯ್ಯರ್(ನಾಯಕ), ಅಭಿಷೇಕ್ ಶರ್ಮಾ, ವೈಭವ್ ಸೂರ್ಯವಂಶಿ, ಸಂಜು ಸ್ಯಾಮ್ಸನ್(ವಿಕೆಟ್ ಕೀಪರ್), ಇಶಾನ್ ಕಿಶನ್(ವಿಕೆಟ್ ಕೀಪರ್), ತಿಲಕ್ ವರ್ಮಾ(ಉಪನಾಯಕ), ಶಿವಂ ದುಬೆ, ನಿತೀಶ್ ಕುಮಾರ್ ರೆಡ್ಡಿ, ಅಕ್ಷರ್ ಪಟೇಲ್, ವಾಷಿಂಗ್ಟನ್ ಸುಂದರ್, ವರುಣ್ ಚಕ್ರವರ್ತಿ, ರವಿ ಬಿಷ್ಣೋಯಿ, ಜಸ್ಪ್ರೀತ್ ಬುಮ್ರಾ, ಅರ್ಶದೀಪ್ ಸಿಂಗ್, ಯಶ್ ಠಾಕೂರ್.

ಭಾರತ ಎದುರಿನ ಟಿ20 ಆಫ್ಘಾನಿಸ್ತಾನ ತಂಡ ಹೀಗಿದೆ:

ಇಬ್ರಾಹಿಂ ಜದ್ರಾನ್(ನಾಯಕ), ರೆಹಮನುಲ್ಲಾ ಗುರ್ಬಾಜ್(ವಿಕೆಟ್ ಕೀಪರ್), ನೂರ್ ರೆಹಮಾನ್(ವಿಕೆಟ್ ಕೀಪರ್), ಸೆದಿಕ್ಕುಲ್ಲಾ ಅಟಲ್, ಡೌರಿಶ್ ರಸೋಲಿ, ಅಜ್ಮತುಲ್ಲಾ ಓಮರ್‌ಝೈ, ಗುಲ್ಬದ್ದೀನ್ ನೈಬ್, ಮೊಹಮ್ಮದ್ ನಬಿ, ರಶೀದ್ ಖಾನ್, ನಂಗ್ಯಾಲ್ ಖರೋಟಿ, ನೂರ್ ಅಹಮ್ಮದ್, ಮುಜೀಬ್ ಉರ್ ರೆಹಮಾನ್, ಫಝಲ್‌ಹಕ್ ಫಾರೂಕಿ, ಅಬ್ದುಲ್ಲಾ ಅಹಮದ್‌ಝೈ, ನವೀನ್ ಉಲ್ ಹಕ್

ಪಂದ್ಯ ಆರಂಭ: ಸಂಜೆ 7.30ಕ್ಕೆ, ನೇರ ಪ್ರಸಾರ: ಸೋನಿ ಸ್ಪೋರ್ಟ್ಸ್‌ ಟೆನ್‌ 5/ಫ್ಯಾನ್‌ಕೋಡ್‌