ಭಾರತದ ಅಧ್ಯಕ್ಷತೆಯಲ್ಲಿ ನಡೆದ 18ನೇ ಬ್ರಿಕ್ಸ್ ಶೃಂಗಸಭೆಯಲ್ಲಿ 'ನವದೆಹಲಿ ನಿರ್ಣಯ 2026' ಅನ್ನು ಸರ್ವಾನುಮತದಿಂದ ಅಂಗೀಕರಿಸಲಾಗಿದೆ. ಈ ನಿರ್ಣಯವು ಯುದ್ಧ, ಪಹಲ್ಗಾಂ ದಾಳಿ ಸೇರಿದಂತೆ ಎಲ್ಲಾ ರೀತಿಯ ಭಯೋತ್ಪಾದನೆ ಮತ್ತು ಏಕಪಕ್ಷೀಯ ಸುಂಕ ಹೇರಿಕೆಯನ್ನು ಖಂಡಿಸಿದ್ದು, ಇದು ಭಾರತಕ್ಕೆ ಸಿಕ್ಕ ದೊಡ್ಡ ರಾಜತಾಂತ್ರಿಕ ಯಶಸ್ಸು ಎಂದು ಪರಿಗಣಿಸಲಾಗಿದೆ.
ಪಿಟಿಐ ನವದೆಹಲಿ (ಸೆ.13): ಭಾರತದ ಅಧ್ಯಕ್ಷತೆಯಲ್ಲಿ ದೆಹಲಿಯಲ್ಲಿ ನಡೆಯುತ್ತಿರುವ 18ನೇ ಬ್ರಿಕ್ಸ್ ಶೃಂಗಸಭೆಯ ಮೊದಲ ದಿನದಂದೇ ಬ್ರಿಕ್ಸ್ ಒಕ್ಕೂಟವು ಯುದ್ಧವನ್ನು ಖಂಡಿಸಿ, ಸರ್ವಾನುಮತದಿಂದ ‘ನವದೆಹಲಿ ನಿರ್ಣಯ 2026’ ಅನ್ನು ಅಂಗೀಕರಿಸಿದೆ. ಇದೇ ವೇಳೆ, ಪಹಲ್ಗಾಂ ದಾಳಿ ಹಾಗೂ ಎಲ್ಲ ರೀತಿಯ ಉಗ್ರವಾದ ಖಂಡಿಸಿ ಪಾಕಿಸ್ತಾನಕ್ಕೆ ಚಾಟಿಯೇಟು ನೀಡಿದೆ. ಇನ್ನು ಏಕಪಕ್ಷೀಯ ಸುಂಕ ಹೇರಿಕೆಯನ್ನೂ ಪ್ರಶ್ನಿಸಿ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ಗೆ ಪರೋಕ್ಷ ಸಂದೇಶ ರವಾನಿಸಿದೆ.
ಶೃಂಗಸಭೆಯ ಉದ್ಘಾಟನಾ ಅಧಿವೇಶನದ ಮುಕ್ತಾಯದ ವೇಳೆ ಪ್ರಧಾನಿ ನರೇಂದ್ರ ಮೋದಿ, ಜಂಟಿ ಪ್ರಕಟಣೆಯ ಅಂಗೀಕಾರವನ್ನು ಅಧಿಕೃತವಾಗಿ ಘೋಷಿಸಿದರು. ‘ಯಾವ ಸದಸ್ಯ ರಾಷ್ಟ್ರವೂ ಯಾವುದೇ ಆಕ್ಷೇಪಣೆ ಎತ್ತಿಲ್ಲ. ಹೀಗಾಗಿ ‘ನವದೆಹಲಿ ನಿರ್ಣಯ 2026’ ಅನ್ನು ಸರ್ವಸಮ್ಮತಿಯಿಂದ ಅಂಗೀಕರಿಸಲಾಗಿದೆ’ ಎಂದು ತಿಳಿಸಿದರು.
ಈ ಬಾರಿಯ ಜಂಟಿ ಪ್ರಕಟಣೆಯಲ್ಲಿ ಯಾವುದೇ ನಿರ್ದಿಷ್ಟ ದೇಶದ ಹೆಸರು ಉಲ್ಲೇಖಿಸದೆ ‘ಏಕಪಕ್ಷೀಯ ಮಿಲಿಟರಿ ದಾಳಿ’ ಹಾಗೂ ಸಂಘರ್ಷಗಳನ್ನು ಖಂಡಿಸಲಾಗಿದೆ. ಜಾಗತಿಕ ಶಾಂತಿ, ಮಾತುಕತೆ, ಸಾರ್ವಭೌಮತ್ವದ ರಕ್ಷಣೆ, ಭಯೋತ್ಪಾದನೆ ವಿರುದ್ಧದ ಹೋರಾಟ ಹಾಗೂ ವ್ಯಾಪಾರ ವಹಿವಾಟಿನಲ್ಲಿ ಅಮೆರಿಕನ್ ಡಾಲರ್ ಬದಲಿಗೆ ಸ್ಥಳೀಯ ಕರೆನ್ಸಿಗಳ ಬಳಕೆಯನ್ನು ಉತ್ತೇಜಿಸುವ ವಿಷಯಗಳ ಬಗ್ಗೆ ಬ್ರಿಕ್ಸ್ ಒಕ್ಕೂಟ ಒಮ್ಮತಕ್ಕೆ ಬಂದಿದೆ.
ತಡರಾತ್ರಿವರೆಗೂ ಚರ್ಚೆ:
ಪ್ರಕಟಣೆಯ ಕರಡು ಸಿದ್ಧಪಡಿಸುವ ವೇಳೆ ವೈರಿ ರಾಷ್ಟ್ರಗಳಾದ ಇರಾನ್ ಮತ್ತು ಯುಎಇ ತಮ್ಮ ನಿಲುವುಗಳಿಗೆ ಪಟ್ಟು ಹಿಡಿದಿದ್ದರಿಂದ ಮಧ್ಯರಾತ್ರಿಯವರೆಗೂ ಸುದೀರ್ಘ ಮಾತುಕತೆಗಳು ನಡೆದವು. ಶನಿವಾರ ಮುಂಜಾನೆ 4 ಗಂಟೆಯವರೆಗೆ ನಡೆದ ತೀವ್ರತರ ಚರ್ಚೆಯ ಬಳಿಕ ಈ ಕರಡು ನಿರ್ಣಯಕ್ಕೆ ಒಮ್ಮತ ಮೂಡಿತು.
ಪಹಲ್ಗಾಂ ದಾಳಿಗೆ ಖಂಡನೆ:
2025ರ ಏ.22ರಂದು ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಂನಲ್ಲಿ ನಡೆದ ಉಗ್ರ ದಾಳಿಯನ್ನು ಬ್ರಿಕ್ಸ್ ಜಂಟಿ ನಿರ್ಣಯ ಖಂಡಿಸಿದೆ. ಉಗ್ರವಾದದ ವಿರುದ್ಧ ಶೂನ್ಯ ಸಹಿಷ್ಣುತೆ ಹೊಂದಲು ಮತ್ತು ವಿಶ್ವಸಂಸ್ಥೆಯ ಅಂತಾರಾಷ್ಟ್ರೀಯ ಭಯೋತ್ಪಾದನೆ ತಡೆ ಸಮಗ್ರ ಒಪ್ಪಂದವನ್ನು ಶೀಘ್ರ ಅಂಗೀಕರಿಸಲು ಕರೆ ನೀಡಲಾಗಿದೆ.
ಭಾರತಕ್ಕೆ ರಾಜತಾಂತ್ರಿಕ ಯಶ:
ಬ್ರಿಕ್ಸ್ ಶೃಂಗಸಭೆಯಲ್ಲಿ ಜಂಟಿ ಪ್ರಕಟಣೆಯ ಕುರಿತು ಎಲ್ಲಾ ಸದಸ್ಯ ರಾಷ್ಟ್ರಗಳ ನಡುವೆ ಸರ್ವಾನುಮತ ಮೂಡಿಸಿರುವುದು ಭಾರತಕ್ಕೆ ಲಭಿಸಿದ ದೊಡ್ಡ ರಾಜತಾಂತ್ರಿಕ ಯಶಸ್ಸಾಗಿದೆ. ಪ್ರಾದೇಶಿಕ ಮತ್ತು ಭೌಗೋಳಿಕ ರಾಜಕೀಯ ವಿಷಯಗಳಲ್ಲಿ ತೀವ್ರ ಭಿನ್ನಾಭಿಪ್ರಾಯ ಹೊಂದಿರುವ ಇರಾನ್ ಮತ್ತು ಯುಎಇ ದೇಶಗಳು ವಿಸ್ತರಿತ ಬ್ರಿಕ್ಸ್ ಒಕ್ಕೂಟದ ಭಾಗವಾಗಿದ್ದರೂ, ಈ ರಾಜತಾಂತ್ರಿಕ ಯಶಸ್ಸು ಲಭಿಸಿರುವುದು ಅತ್ಯಂತ ಮಹತ್ವದ ಬೆಳವಣಿಗೆಯಾಗಿದೆ.
ನಿರ್ಣಯದ ಮುಖ್ಯಾಂಶಗಳು:
1.ಭಯೋತ್ಪಾದನೆ ವಿರುದ್ಧ ಶೂನ್ಯ ಸಹಿಷ್ಣುತೆ: ಗಡಿಯಾಚೆಗಿನ ಭಯೋತ್ಪಾದನೆ, ಉಗ್ರರಿಗೆ ಹಣಕಾಸು ನೆರವು ಮತ್ತು ಸುರಕ್ಷಿತ ತಾಣಗಳನ್ನು ಒದಗಿಸುವುದೂ ಸೇರಿದಂತೆ ಎಲ್ಲ ಮಾದರಿಯ ಭಯೋತ್ಪಾದನೆಯನ್ನು ಬ್ರಿಕ್ಸ್ ತೀವ್ರವಾಗಿ ಖಂಡಿಸಿದೆ.
2. ರಾಜತಾಂತ್ರಿಕ ಪರಿಹಾರಕ್ಕೆ ಒತ್ತು: ಸಂಘರ್ಷಗಳ ಮೂಲ ಕಾರಣಗಳನ್ನು ಕಂಡುಕೊಂಡು ಅವುಗಳನ್ನು ತಡೆಯಲು ಬ್ರಿಕ್ಸ್ ಒತ್ತು ನೀಡಿದೆ. ರಾಜತಾಂತ್ರಿಕತೆ, ಮಾತುಕತೆ ಮತ್ತು ಸಮಾಲೋಚನೆಗಳ ಮೂಲಕವೇ ವಿವಾದಗಳನ್ನು ಬಗೆಹರಿಸಿಕೊಳ್ಳಬೇಕು ಎಂದು ಪುನರುಚ್ಚರಿಸಿದೆ. ಗಾಜಾದಲ್ಲಿ ಕದನ ವಿರಾಮ ಪಾಲನೆ, ಮಾನವೀಯ ನೆರವು ಹಾಗೂ 1967ರ ಗಡಿ ಆಧರಿತ ಸ್ವತಂತ್ರ ಪ್ಯಾಲೆಸ್ಟೈನ್ ರಾಷ್ಟ್ರದೊಂದಿಗೆ ‘ದ್ವಿ-ರಾಷ್ಟ್ರ ಪರಿಹಾರ’ಕ್ಕೆ ಬೆಂಬಲ ಸೂಚಿಸಲಾಗಿದೆ.
3. ಏಕಪಕ್ಷೀಯ ಸುಂಕಕ್ಕೆ ಕಳವಳ: ವಿಶ್ವ ವ್ಯಾಪಾರ ಸಂಸ್ಥೆಯ ನಿಯಮಗಳಿಗೆ ವಿರುದ್ಧವಾಗಿ ಮತ್ತು ಜಾಗತಿಕ ವ್ಯಾಪಾರಕ್ಕೆ ಅಡ್ಡಿಪಡಿಸುವ ರೀತಿಯಲ್ಲಿ ಕೆಲವು ರಾಷ್ಟ್ರಗಳು ಏಕಪಕ್ಷೀಯವಾಗಿ ವಿಧಿಸುತ್ತಿರುವ ಸುಂಕ ಹಾಗೂ ಸುಂಕೇತರ ನಿರ್ಬಂಧಗಳ ಕುರಿತು ಬ್ರಿಕ್ಸ್ ತೀವ್ರ ಕಳವಳ ವ್ಯಕ್ತಪಡಿಸಿದೆ.


