ದೇವನಹಳ್ಳಿ ಬಳಿಯ ನೆಲ್ಲುಕುಂಟೆ ಗ್ರಾಮದಲ್ಲಿರುವ ಶ್ರೀ ಕೃಷ್ಣ ದೇವರಾಯ ಶಿಕ್ಷಣ ಟ್ರಸ್ಟ್ ಸುಪರ್ದಿಯಲ್ಲಿದ್ದ 31 ಎಕರೆ 36 ಗುಂಟೆ 'ಬಿ' ಖರಾಬು ಜಮೀನನ್ನು ವಶಕ್ಕೆ ಪಡೆಯುವಂತೆ ಹೈಕೋರ್ಟ್ ಸರ್ಕಾರಕ್ಕೆ ನಿರ್ದೇಶಿಸಿದೆ. ಈ ಸರ್ಕಾರಿ ಜಮೀನಿನ ಮೇಲೆ ಟ್ರಸ್ಟ್‌ಗೆ ಯಾವುದೇ ಮಾಲೀಕತ್ವದ ಹಕ್ಕಿಲ್ಲ ಎಂದು ಸ್ಪಷ್ಟಪಡಿಸಿದ ನ್ಯಾಯಪೀಠ, ಭೂಮಿಯನ್ನು ಮರುಸರ್ವೇ ಮಾಡಿ ರಕ್ಷಿಸಲು ಆದೇಶಿಸಿದೆ.

ಬೆಂಗಳೂರು: ದೇವನಹಳ್ಳಿಯ ಸಮೀಪದ ನೆಲ್ಲುಕುಂಟೆ ಗ್ರಾಮದಲ್ಲಿ ‘ಶ್ರೀ ಕೃಷ್ಣ ದೇವರಾಯ ಶಿಕ್ಷಣ ಟ್ರಸ್ಟ್’ ಸುಪರ್ದಿಯಲ್ಲಿರುವ ಬಹುಕೋಟಿ ಮೌಲ್ಯದ 31 ಎಕರೆ 36 ಗುಂಟೆ ಬಿ ಖರಾಬು ಜಮೀನನ್ನು ವಶಕ್ಕೆ ಪಡೆಯಬೇಕೆಂದು ಸರ್ಕಾರಕ್ಕೆ ಹೈಕೋರ್ಟ್‌ ನಿರ್ದೇಶಿಸಿದೆ.

ರಾಜ್ಯ ಸರ್ಕಾರ ಸಲ್ಲಿಸಿದ ಮೇಲ್ಮನವಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಡಿ.ಕೆ.ಸಿಂಗ್ ಹಾಗೂ ನ್ಯಾಯಮೂರ್ತಿ ಎಚ್‌.ಶಾಂತಿಭೂಷಣ್‌ ಅವರಿದ್ದ ವಿಭಾಗೀಯ ನ್ಯಾಯಪೀಠ ಈ ಆದೇಶ ಮಾಡಿದೆ.

ನೆಲ್ಲುಕುಂಟೆ ಗ್ರಾಮದ ಸರ್ವೇ ನಂ 45ರಲ್ಲಿ 133 ಎಕರೆ ಮತ್ತು 33 ಗುಂಟೆ ಜಾಗವನ್ನು ಖಾಸಗಿ ವ್ಯಕ್ತಿಗಳಿಂದ ಖರೀದಿಸಿರುವುದಾಗಿ ಶ್ರೀಕೃಷ್ಣ ದೇವರಾಯ ಶಿಕ್ಷಣ ಟ್ರಸ್ಟ್‌ ಕ್ಲೇಮು ಮಾಡುತ್ತಿದೆ. ಆದರೆ, ಸರ್ಕಾರಿ ವಕೀಲರು ಸರ್ವೇ ನಂ. 45ಕ್ಕೆ ಸಂಬಂಧಿಸಿದ ಆರ್‌ಟಿಸಿ ಪ್ರಕಾರ ಈ ಸರ್ವೇ ನಂಬರ್‌ನಲ್ಲಿ ಒಟ್ಟು 133 ಎಕರೆ 33 ಗುಂಟೆ ಇದೆ. ಅದರಲ್ಲಿ 31 ಎಕರೆ 36 ಗುಂಟೆಗಳಷ್ಟು ಭೂಮಿಯನ್ನು ನಿರ್ದಿಷ್ಟವಾಗಿ ‘ಬಿ’ ಖರಾಬ್ ಎಂದು ವರ್ಗೀಕರಿಸಿರುವುದು ಸ್ಪಷ್ಟವಾಗಿ ತಿಳಿಯುತ್ತದೆ. ಆದ್ದರಿಂದ, ಮಾರಾಟ ಪತ್ರಗಳಲ್ಲಿ ನಮೂದಿಸಲಾದ ಸಂಪೂರ್ಣ ಜಮೀನನ್ನು ಮಾರಾಟಗಾರರು ಹಸ್ತಾಂತರಿಸಲು ಅರ್ಹವಾದ ಖಾಸಗಿ ಭೂಮಿ ಎಂದು ಪರಿಗಣಿಸಲು ಸಾಧ್ಯವಿಲ್ಲ ಎಂಬುದು ಈ ಕಂದಾಯ ದಾಖಲೆಯಿಂದ ಸ್ಪಷ್ಟವಾಗುತ್ತದೆ ಎಂದು ಪೀಠ ಹೇಳಿದೆ.

ನ್ಯಾಯಾಲಯದ ಆದೇಶದಲ್ಲಿ ಏನಿದೆ?

ಅಲ್ಲದೆ, ಯಾವುದೇ ದೃಷ್ಟಿಕೋನದಿಂದ ನೋಡಿದರೂ ಟ್ರಸ್ಟ್‌ಗೆ ಭೂಮಿ ಮಾರಾಟ ಮಾಡಿರುವ ಖಾಸಗಿ ವ್ಯಕ್ತಿಗಳಿಗೆ ಕೇವಲ 101 ಎಕರೆ 37 ಗುಂಟೆಗಳಷ್ಟು ಭೂಮಿಯ ಮೇಲೆ ಮಾತ್ರ ಮಾಲೀಕತ್ವ ಮತ್ತು ಹಕ್ಕು ಇತ್ತು. 31 ಎಕರೆ 36 ಗುಂಟೆಗಳ ‘ಬಿ’ ಖರಾಬ್ ಭೂಮಿಯ ಮೇಲೆ ಅವರಿಗೆ ಯಾವುದೇ ಹಕ್ಕು, ಮಾಲೀಕತ್ವ ಇರಲಿಲ್ಲ. ಕೇವಲ ಮಾರಾಟ ಪತ್ರದಲ್ಲಿ ಭೂಮಿಯ ವಿಸ್ತೀರ್ಣವನ್ನು 133 ಎಕರೆ 33 ಗುಂಟೆ ಎಂದು ನಮೂದಿಸಿದ ಮಾತ್ರಕ್ಕೆ ಟ್ರಸ್ಟ್‌ ಈ 31 ಎಕರೆ 36 ಗುಂಟೆಗಳ ಬಿ ಖರಾಬ್ ಭೂಮಿಯ ಮಾಲೀಕರಾಗುವುದಿಲ್ಲ. ಟ್ರಸ್ಟ್‌ ತಮಗೆ ಭೂಮಿ ಮಾರಾಟ ಮಾಡಿದವರ ಪರವಾಗಿ ನಿಗದಿಯಾಗಿದ್ದಕ್ಕಿಂತ ಹೆಚ್ಚಿನ ವಿಸ್ತೀರ್ಣದ ಭೂಮಿಯನ್ನು ಕೋರುತ್ತಿದ್ದಾರೆ ಎಂಬ ಅಂಶವನ್ನು ಏಕ ಸದಸ್ಯ ಪೀಠ ಕಡೆಗಣಿಸಿದೆ ಎಂದು ಪೀಠ ಆದೇಶದಲ್ಲಿ ತಿಳಿಸಿದೆ.

ಸರ್ಕಾರವು ಸರ್ವೇ ನಂಬರ್‌ನಲ್ಲಿ 45ರಲ್ಲಿ ಒಟ್ಟು ಭೂಮಿಯನ್ನು ಸರ್ವೇ ನಡೆಸುವ ಕುರಿತಂತೆ ಟ್ರಸ್ಟ್‌ಗೆ ಹೊಸ ನೋಟಿಸ್ ಜಾರಿ ಮಾಡಬೇಕು. ಎಲ್ಲ ಪಕ್ಷಗಾರರಿಗೆ ಸಂಬಂಧಿತ ದಾಖಲೆಗಳನ್ನು ಹಾಜರುಪಡಿಸುವಂತೆ ಮತ್ತು ಆಕ್ಷೇಪಣೆ ಸಲ್ಲಿಕೆಗೆ ಅವಕಾಶ ನೀಡಬೇಕು. ಸರ್ವೇ ನಡೆಸಿ 101 ಎಕರೆ ಮತ್ತು 37 ಗುಂಟೆಗಳ ವಿಸ್ತೀರ್ಣವನ್ನು ಗುರುತಿಸಬೇಕು. ‘ಬಿ’ ಖರಾಬ್ ಸರ್ಕಾರಿ ಜಮೀನು ಎಂದು ಗುರುತಿಸಿದ ನಂತರ, ಅಧಿಕಾರಿಗಳು ಅದರ ವರ್ಗೀಕರಣವನ್ನು ಕಂದಾಯ ದಾಖಲೆಗಳಲ್ಲಿ ಸೂಕ್ತ ರೀತಿಯಲ್ಲಿ ನಮೂದಿಸಿ ಜಮೀನನ್ನು ರಕ್ಷಿಸಬೇಕು ಎಂದು ಪೀಠ ಹೇಳಿದೆ.

ಪ್ರಕರಣದ ಹಿನ್ನೆಲೆ ಏನು?

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲ್ಲೂಕಿನ ಜಾಲ ಹೋಬಳಿಯ ನೆಲ್ಲುಕುಂಟೆ ಗ್ರಾಮದ ಸರ್ವೇ ನಂಬರ್ 45ರ ಸಮೀಕ್ಷೆ ನಡೆಸಲು ಯಲಹಂಕ ತಾಲ್ಲೂಕು ಭೂ ದಾಖಲೆಗಳ ಸಹಾಯಕ ನಿರ್ದೇಶಕ 2023ರ ಏ.17ರಂದು ಹೊರಡಿಸಿದ್ದ ನೋಟಿಸ್‌ಗಳನ್ನು ಪ್ರಶ್ನಿಸಿ, ‘ಶ್ರೀ ಕೃಷ್ಣ ದೇವರಾಯ ಶಿಕ್ಷಣ ಟ್ರಸ್ಟ್’ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿತ್ತು. ಆ ನೋಟಿಸ್‌ಗಳನ್ನು ಏಕ ಸದಸ್ಯ ಪೀಠ ರದ್ದುಪಡಿಸಿತ್ತು. ಅಲ್ಲದೆ, ಪ್ರಕರಣ ಸಂಬಂಧ ಟ್ರಸ್ಟ್‌, ಸಕ್ಷಮ ಪ್ರಾಧಿಕಾರಕ್ಕೆ ಆಕ್ಷೇಪಣೆ ಸಲ್ಲಿಸಬೇಕು. ಅಂತಹ ಆಕ್ಷೇಪಣೆ ಸಲ್ಲಿಕೆಯಾದರೆ ಸಕ್ಷಮ ಪ್ರಾಧಿಕಾರವು ಆಕ್ಷೇಪಣೆ ಪರಿಗಣಿಸಿ, ಟ್ರಸ್ಟ್‌ ವಾದ ಆಲಿಸಿ ಸೂಕ್ತ ಆದೇಶ ಹೊರಡಿಸಬೇಕು ಎಂದು ಸೂಚಿಸಿತ್ತು. ಈ ಆದೇಶವನ್ನು ಪ್ರಶ್ನಿಸಿ ಯಲಹಂಕ ವಿಶೇಷ ತಹಶೀಲ್ದಾರ್, ಯಲಹಂಕ ತಾಲ್ಲೂಕು ಭೂ ದಾಖಲೆಗಳ ಸಹಾಯಕ ನಿರ್ದೇಶಕ ಮತ್ತು ಭೂ ಮಾಪಕ (ಸರ್ವೇಯರ್) ವಿಭಾಗೀಯ ಪೀಠಕ್ಕೆ ಮೇಲ್ಮನವಿ ಸಲ್ಲಿಸಿದ್ದರು.