ದಾವಣಗೆರೆ ಲೋಕಸಭಾ ಕ್ಷೇತ್ರದ ಎಸ್ಸೆಸ್ಸೆಲ್ಸಿ ಟಾಪರ್ ವಿದ್ಯಾರ್ಥಿಗಳನ್ನು ಉಚಿತವಾಗಿ ದೆಹಲಿ ಪ್ರವಾಸಕ್ಕೆ ಕರೆದೊಯ್ಯಲಾಗುವುದು ಎಂದು ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್ ಘೋಷಿಸಿದ್ದಾರೆ. ಗ್ರಾಮೀಣ ಪ್ರತಿಭೆಗಳನ್ನು ಪ್ರೋತ್ಸಾಹಿಸುವ ಈ ಶೈಕ್ಷಣಿಕ ಪ್ರವಾಸದಲ್ಲಿ ವಿದ್ಯಾರ್ಥಿಗಳಿಗೆ ಸಂಸತ್ ಭವನ ಸೇರಿದಂತೆ ಐತಿಹಾಸಿಕ ಸ್ಥಳಗಳನ್ನು ನೋಡುವ ಅವಕಾಶ ಸಿಗಲಿದೆ.
ವಿಜಯನಗರ/ದಾವಣಗೆರೆ (ಸೆ.13): ವಿಜಯನಗರ ಜಿಲ್ಲೆಯ ಹರಪನಹಳ್ಳಿ ಸೇರಿದಂತೆ ದಾವಣಗೆರೆ ಲೋಕಸಭಾ ಕ್ಷೇತ್ರದ ಎಲ್ಲಾ ತಾಲೂಕುಗಳ ಎಸ್ಸೆಸ್ಸೆಲ್ಸಿ (SSLC) ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಟಾಪರ್ ವಿದ್ಯಾರ್ಥಿಗಳನ್ನು ಮುಂದಿನ ತಿಂಗಳು ಉಚಿತವಾಗಿ ರಾಷ್ಟ್ರ ರಾಜಧಾನಿ ದೆಹಲಿ ಪ್ರವಾಸಕ್ಕೆ ಕರೆದೊಯ್ಯಲಾಗುವುದು ಎಂದು ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್ ಭರವಸೆ ನೀಡಿದ್ದಾರೆ.
ಪಟ್ಟಣದ ತರಳಬಾಳು ಕಲ್ಯಾಣ ಮಂಟಪದ ಆವರಣದಲ್ಲಿ ಆಯೋಜಿಸಲಾಗಿದ್ದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಅವರು, ದಾವಣಗೆರೆ ಲೋಕಸಭಾ ವ್ಯಾಪ್ತಿಯ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್ ಸಿಹಿಸುದ್ದಿ ನೀಡಿದ್ದಾರೆ. ಗ್ರಾಮೀಣ ಭಾಗದ ಪ್ರತಿಭೆಗಳನ್ನು ಪ್ರೋತ್ಸಾಹಿಸಲು ಹಾಗೂ ಅವರಿಗೆ ದೇಶದ ಆಡಳಿತ ಕೇಂದ್ರದ ಪರಿಚಯ ಮಾಡಿಕೊಡುವ ನಿಟ್ಟಿನಲ್ಲಿ ಈ ಶೈಕ್ಷಣಿಕ ಪ್ರವಾಸವನ್ನು ಆಯೋಜಿಸಲಾಗುತ್ತಿದೆ ಎಂದು ತಿಳಿಸಿದರು.
ಶಿಕ್ಷಕರು ದೇಶದ ಭವಿಷ್ಯ ರೂಪಿಸುವ ಶಿಲ್ಪಿಗಳು:
ಶಿಕ್ಷಕರ ಪಾತ್ರವನ್ನು ಮುಕ್ತಕಂಠದಿಂದ ಶ್ಲಾಘಿಸಿದ ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್, 'ಯುವ ಪೀಳಿಗೆಯನ್ನು ಸರಿಯಾದ ಹಾದಿಯಲ್ಲಿ ನಡೆಸಿ ದೇಶದ ಭವಿಷ್ಯ ರೂಪಿಸುವ ಅದ್ಭುತ ಶಕ್ತಿ ಇರುವುದು ಶಿಕ್ಷಕರಿಗೆ ಮಾತ್ರ. ಶಿಕ್ಷಕರು ಎಂದರೆ ಕೇವಲ ಪಠ್ಯಪುಸ್ತಕದ ಜ್ಞಾನ ಬೋಧಿಸುವವರಲ್ಲ, ಬದಲಿಗೆ ಮಕ್ಕಳಲ್ಲಿ ಸಂಸ್ಕಾರ, ನೈತಿಕ ಮೌಲ್ಯ ಮತ್ತು ಸಮಾಜದ ಬಗ್ಗೆ ಜವಾಬ್ದಾರಿಯನ್ನು ಬಿತ್ತುವ ನೈಜ ಶಿಲ್ಪಿಗಳು' ಎಂದು ಬಣ್ಣಿಸಿದರು.
ವಿದ್ಯಾರ್ಥಿಗಳಲ್ಲಿ ಕಲಿಕೆಯ ಆಸಕ್ತಿ ಹೆಚ್ಚಿಸಲು ಇಂತಹ ಪ್ರೋತ್ಸಾಹಕ ಕ್ರಮಗಳು ಅತ್ಯಗತ್ಯವಾಗಿದ್ದು, ದೆಹಲಿ ಪ್ರವಾಸದ ವೇಳೆ ವಿದ್ಯಾರ್ಥಿಗಳಿಗೆ ಸಂಸತ್ ಭವನ ಸೇರಿದಂತೆ ಐತಿಹಾಸಿಕ ಸ್ಥಳಗಳನ್ನು ವೀಕ್ಷಿಸುವ ಅವಕಾಶ ಕಲ್ಪಿಸಲಾಗುವುದು ಎಂದು ಮೂಲಗಳು ತಿಳಿಸಿವೆ. ಕಾರ್ಯಕ್ರಮದಲ್ಲಿ ತಾಲೂಕಿನ ಗಣ್ಯರು, ಶಿಕ್ಷಣ ಇಲಾಖೆಯ ಅಧಿಕಾರಿಗಳು ಹಾಗೂ ನೂರಾರು ಶಿಕ್ಷಕರು ಉಪಸ್ಥಿತರಿದ್ದರು.


