ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರು ಲಂಚದ ಹಣದಿಂದ ಆಫ್ರಿಕಾದ ಕಾಂಗೋ ದೇಶದ ಚಿನ್ನದ ಗಣಿಯಲ್ಲಿ ಶೇ.40ರಷ್ಟು ಪಾಲು ಖರೀದಿಸಿರುವುದು ಇ.ಡಿ ತನಿಖೆಯಿಂದ ಬೆಳಕಿಗೆ ಬಂದಿದೆ. ಜಾರಕಿಹೊಳಿ ಮತ್ತು ಅವರ ಕುಟುಂಬದ ಸದಸ್ಯರ ನಿವಾಸಗಳ ಮೇಲೆ ನಡೆದ ದಾಳಿಯಲ್ಲಿ, ಘೋಷಿಸದ ವಿದೇಶಿ ಹೂಡಿಕೆಗಳು, ನಗದು ಹಾಗೂ ಫೇಮಾ ಉಲ್ಲಂಘನೆಗೆ ಸಂಬಂಧಿಸಿದ ದಾಖಲೆಗಳು ಪತ್ತೆಯಾಗಿವೆ.

ಬೆಂಗಳೂರು : ಕಾಂಗ್ರೆಸ್ಸಿನ ಪ್ರಭಾವಿ ನಾಯಕ ಹಾಗೂ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರು ಆಫ್ರಿಕಾದ ಕಾಂಗೋ ದೇಶದ ಚಿನ್ನದ ಗಣಿ ಕಂಪನಿಯಲ್ಲಿ ಶೇ.40ರಷ್ಟು ಪಾಲು ಹೊಂದಿರುವುದು ಜಾರಿ ನಿರ್ದೇಶನಾಲಯ (ಇ.ಡಿ) ತನಿಖೆಯ ವೇಳೆ ಪತ್ತೆಯಾಗಿದೆ.

ಲೋಕೋಪಯೋಗಿ ಇಲಾಖೆಯಿಂದ ಟೆಂಡರ್ ಪಡೆಯುವ ಸಲುವಾಗಿ ಭಾರತ್‌ ವಾಣಿಜ್ಯ ಈಸ್ಟರ್ನ್‌ ಪ್ರೈ.ಲಿ. ಸೇರಿ ವಿವಿಧ ಗುತ್ತಿಗೆ ಕಂಪನಿಗಳು ಭಾರೀ ಪ್ರಮಾಣದ ಲಂಚ ಪಾವತಿಸಿದ್ದು, ಆ ಹಣವನ್ನು ವಿದೇಶಿ ಆಸ್ತಿಗಳ ಖರೀದಿಗೆ ಬಳಸಲಾಗಿದೆ ಎಂದು ಇ.ಡಿ ತಿಳಿಸಿದೆ.

ಸಚಿವ ಸತೀಶ್ ಜಾರಕಿಹೊಳಿ ಅವರ ನಿವಾಸಗಳು ಮತ್ತು ಕಚೇರಿಗಳ ಮೇಲೆ ನಡೆಸಿದ ದಾಳಿಗೆ ಸಂಬಂಧಿಸಿ ಇ.ಡಿ ಶುಕ್ರವಾರ ಅಧಿಕೃತ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದೆ. ಶೋಧ ಕಾರ್ಯಾಚರಣೆ ವೇಳೆ, ಸತೀಶ್‌ ಜಾರಕಿಹೊಳಿ ಕುಟುಂಬದ ಸದಸ್ಯರಾದ ಚಿಕ್ಕೋಡಿ ಸಂಸದೆ, ಪುತ್ರಿ ಪ್ರಿಯಾಂಕಾ ಜಾರಕಿಹೊಳಿ, ಪುತ್ರ ರಾಹುಲ್ ಜಾರಕಿಹೊಳಿ ಹಾಗೂ ವೈ.ಡಿ ಮಂಜುನಾಥ್ ಅವರ ಪತ್ನಿ ಮತ್ತು ಸತೀಶ್ ಜಾರಕಿಹೊಳಿ ಅವರ ಸಹೋದರಿ ಮಹಾದೇವಿ ಮಂಜುನಾಥ್ ಅವರು ಹಲವು ವಿದೇಶಿ ಸಂಸ್ಥೆಗಳಲ್ಲಿ ಷೇರು (ಪಾಲು) ಹೊಂದಿರುವುದು ಪತ್ತೆಯಾಗಿದೆ. ಇವುಗಳಲ್ಲಿ ಕಾಂಗೋದ ಎಲ್‌ಡೊರಾಡೊ ಮೈನಿಂಗ್‌ ರಿಸೋರ್ಸಸ್‌ ಹಾಗೂ ಜಾಂಬಿಯಾದಲ್ಲಿರುವ ನವ ಔರಂ ಮೈನಿಂಗ್‌ ಲಿಮಿಟೆಡ್‌ ಸೇರಿ ಹಲವು ಸಂಸ್ಥೆಗಳೂ ಸೇರಿವೆ.

ಇದಲ್ಲದೆ, ಕಾಂಗೋದಲ್ಲಿ ಚಿನ್ನದ ಗಣಿಗಾರಿಕೆ ನಡೆಸುತ್ತಿರುವ ಮೆ.ಮ್ಯಾಗ್ನಿಟ್ಯೂಡ್‌ ಸ್ಟಾರ್‌ ಎಸ್‌ಎಆರ್‌ಎಲ್‌ ಸಂಸ್ಥೆಯಲ್ಲಿ ಸತೀಶ್ ಜಾರಕಿಹೊಳಿ ಶೇ.40 ಪಾಲು ಹೊಂದಿರುವುದು ಪತ್ತೆಯಾಗಿದೆ. ಆಫ್ರಿಕಾದಲ್ಲಿ ಗಣಿಗಾರಿಕೆಗೆ ಸಂಬಂಧಿಸಿದ ಮತ್ತು ಅಲ್ಲಿ ಆಸ್ತಿಗಳನ್ನು ಹೊಂದಿರುವ ಬಗ್ಗೆ ಹಾಗೂ ಇತರ ಹಲವು ವಿದೇಶಿ ಸಂಸ್ಥೆಗಳಿಗೆ ಸಂಬಂಧಿಸಿದ ದಾಖಲೆ ಪತ್ತೆಯಾಗಿದ್ದು, ಅವುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಇ.ಡಿ ತಿಳಿಸಿದೆ.

21 ಸ್ಥಳಗಳ ಮೇಲೆ ದಾಳಿ

ಜಾರಿ ನಿರ್ದೇಶನಾಲಯದ (ಇ.ಡಿ) ಬೆಂಗಳೂರು ವಲಯದ ಅಧಿಕಾರಿಗಳು, ಸಚಿವ ಸತೀಶ್ ಜಾರಕಿಹೊಳಿ ಹಾಗೂ ಅವರ ಆಪ್ತರಿಗೆ ಸಂಬಂಧಿಸಿದ ಬೆಂಗಳೂರು, ಬೆಳಗಾವಿ, ಗೋಕಾಕ್ ಮತ್ತು ಕೋಲ್ಕತ್ತಾ ಸೇರಿ 21 ಸ್ಥಳಗಳ ಮೇಲೆ ಸೆ.9-10ರಂದು ದಾಳಿ ನಡೆಸಿ ಶೋಧ ನಡೆಸಿದ್ದರು.

ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆಯಡಿ(ಫೇಮಾ) ಪ್ರಕರಣ ದಾಖಲಿಸಿ ಈ ಶೋಧ ಕಾರ್ಯಾಚರಣೆ ನಡೆಸಲಾಗಿತ್ತು. ಜಾರಕಿಹೊಳಿ ಕುಟುಂಬಕ್ಕೆ ಸಂಬಂಧಿಸಿ ಘೋಷಣೆಯಾಗದ ವಿದೇಶಿ ಹೂಡಿಕೆಗಳು, ಗಡಿಯಾಚೆಗಿನ ವ್ಯವಹಾರ, ಹಣಕಾಸು ಅಕ್ರಮಗಳ ಕುರಿತು ತನಿಖೆ ನಡೆಸಿ ವಾಸ್ತವಾಂಶ ಪತ್ತೆಹಚ್ಚುವುದು ಈ ದಾಳಿ ಉದ್ದೇಶವಾಗಿತ್ತು ಎಂದು ಇ.ಡಿ ಹೇಳಿದೆ.

ಶೋಧ ಕಾರ್ಯಾಚರಣೆ ವೇಳೆ ಜಾರಕಿಹೊಳಿ ಅವರ ಪುತ್ರಿ ಪ್ರಿಯಾಂಕಾ ಜಾರಕಿಹೊಳಿ, ರಾಹುಲ್ ಜಾರಕಿಹೊಳಿ ಹಾಗೂ ಭಾವ ವೈ.ಡಿ ಮಂಜುನಾಥ್, ಅಲ್ಲದೆ, ಸತೀಶ್ ಜಾರಕಿಹೊಳಿ ಅವರ ವಿಶೇಷ ಕರ್ತವ್ಯ ಅಧಿಕಾರಿ (ಒಎಸ್‌ಡಿ) ಹಾಗೂ ಆಪ್ತ ಸಹಾಯಕ ಮಲ್ಲಗೌಡ ಪಾಟೀಲ್, ರಾಜು ದರಗಶೆಟ್ಟಿ, ವಿಠ್ಠಲ್ ಪರಸನ್ನವರ ಹಾಗೂ ಡಾ.ಗಿರೀಶ್ ಸೋನವಾಲ್ಕರ್ ಅವರಿಗೆ ಸೇರಿದ ಸ್ಥಳಗಳ ಮೇಲೂ ದಾಳಿ ನಡೆಸಿ ಶೋಧ ನಡೆಸಲಾಯಿತು.

ಇದೇ ವೇಳೆ, ಭಾರತ್‌ ವಾಣಿಜ್ಯ ಈಸ್ಟರ್ನ್‌ ಪ್ರೈ.ಲಿ. ಎಂಬ ಖಾಸಗಿ ಕಂಪನಿಯ ಅಧಿಕಾರಿಗಳಿಗೂ ಸಂಬಂಧಿಸಿದ ಸ್ಥಳಗಳಲ್ಲಿ ಶೋಧ ನಡೆಸಲಾಯಿತು. ಲೋಕೋಪಯೋಗಿ ಇಲಾಖೆಯಿಂದ ಟೆಂಡರ್ ಪಡೆಯುವ ಸಲುವಾಗಿ ಈ ಕಂಪನಿ ಭಾರೀ ಪ್ರಮಾಣದ ಲಂಚ ಪಾವತಿಸಿದೆ ಹಾಗೂ ಆ ಹಣವನ್ನು ವಿದೇಶಿ ಆಸ್ತಿಗಳ ಖರೀದಿಗೆ ಬಳಸಲಾಗಿದೆ ಎಂಬ ಆರೋಪಗಳ ಬಗ್ಗೆಯೂ ತನಿಖೆ ನಡೆಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಭಾರತ್‌ ವಾಣಿಜ್ಯ ಈಸ್ಟರ್ನ್‌ ಪ್ರೈ.ಲಿ ಸಂಸ್ಥೆಯ ಮಾಲೀಕರ ಕಚೇರಿ ಹಾಗೂ ನಿವಾಸಗಳಲ್ಲಿಯೂ ಶೋಧ ನಡೆಸಲಾಯಿತು.

ಬೆಂಗಳೂರಿನ ಡಾಲರ್ಸ್ ಕಾಲೋನಿಯಲ್ಲಿರುವ ಸಚಿವರ ನಿವಾಸ, ಕ್ರೆಸೆಂಟ್ ರಸ್ತೆಯಲ್ಲಿರುವ ನಿವಾಸ, ಗೋಕಾಕ್ ಮತ್ತು ಬೆಳಗಾವಿಯಲ್ಲಿನ ವಿವಿಧ ಸ್ಥಳಗಳು ಸೇರಿ ಹಲವು ಕಡೆಗಳಲ್ಲಿ ಏಕಕಾಲದಲ್ಲಿ ಶೋಧ ಕಾರ್ಯಾಚರಣೆ ನಡೆಸಲಾಯಿತು. ಈ ಕಾರ್ಯಾಚರಣೆ ಸಂದರ್ಭದಲ್ಲಿ ಫೆಮಾ ಉಲ್ಲಂಘನೆಗಳಿಗೆ ಸಂಬಂಧಿಸಿ ಮಹತ್ವದ ವಸ್ತುಗಳು ಮತ್ತು ದಾಖಲೆಗಳು ಪತ್ತೆಯಾಗಿವೆ ಎಂದು ಇ.ಡಿ ತಿಳಿಸಿದೆ.

3.3 ಕೋಟಿ ರು. ನಗದು, 15 ಲಕ್ಷ ವಿದೇಶಿ ಕರೆನ್ಸಿ ಪತ್ತೆ

ದಾಳಿ ವೇಳೆ ಲೆಕ್ಕ ತೋರಿಸದ 3.3 ಕೋಟಿ ರು. ನಗದು ಹಾಗೂ ಅಮೆರಿಕನ್ ಡಾಲರ್, ಯುರೋ ಸೇರಿ ಸುಮಾರು 15 ಲಕ್ಷ ಮೌಲ್ಯದ ವಿದೇಶಿ ಕರೆನ್ಸಿ ಪತ್ತೆಯಾಗಿದ್ದು, ಅವುಗಳನ್ನು ವಶಪಡಿಸಿಕೊಳ್ಳಲಾಗಿದೆ.

ಶೋಧದ ವೇಳೆ ದೊರೆತ ಸಾಕ್ಷ್ಯಗಳ ಆಧಾರದ ಮೇಲೆ, ಅನುಮೋದಿತವಲ್ಲದ ಮಾರ್ಗದ ಮೂಲಕ ಕಾಂಗೋದಲ್ಲಿರುವ ಒಂದು ಸಂಸ್ಥೆಯಲ್ಲಿ ಭಾರೀ ಪ್ರಮಾಣದ ಹಣ ಹೂಡಿಕೆ ಮಾಡಲಾಗಿದೆ ಎಂಬುದು ಬೆಳಕಿಗೆ ಬಂದಿದೆ.

ಶೋಧ ಕಾರ್ಯಾಚರಣೆಯಲ್ಲಿ ಲೋಕೋಪಯೋಗಿ ಇಲಾಖೆಯಲ್ಲಿನ ಅಕ್ರಮಗಳಿಗೆ ಸಂಬಂಧಿಸಿದ ಸಾಕ್ಷ್ಯಗಳು ಹಾಗೂ ಗುತ್ತಿಗೆದಾರರಿಂದ ಭಾರತ್‌ ವಾಣಿಜ್ಯ ಈಸ್ಟ್ರರ್ನ್ ಸೇರಿ ವಿವಿಧ ಸಂಸ್ಥೆಗಳ ಮೂಲಕ ಲಂಚದ ಹಣ ಸಂಗ್ರಹಿಸಿರುವುದಕ್ಕೆ ಸಂಬಂಧಿಸಿದ ಹಲವು ದಾಖಲೆಗಳು ಮತ್ತು ಡಿಜಿಟಲ್ ಸಾಧನಗಳು ಪತ್ತೆಯಾಗಿವೆ.

ಸತೀಶ್ ಜಾರಕಿಹೊಳಿ ಅವರ ಭಾವ ವೈ.ಡಿ ಮಂಜುನಾಥ್ ಅವರು, ನಿರ್ವಹಿಸುತ್ತಿರುವ ಸಂಸ್ಥೆಯ ಖಾತೆಗಳಲ್ಲಿ ಕೆಲ ಪ್ರಭಾವಿ ವ್ಯಕ್ತಿಗಳೊಂದಿಗೆ ವ್ಯವಹಾರ ನಡೆಸಿರುವುದಕ್ಕೆ ಸಾಕ್ಷ್ಯಗಳು ಪತ್ತೆಯಾಗಿವೆ. ಈ ಕುರಿತು ಹೆಚ್ಚಿನ ತನಿಖೆ ಮುಂದುವರಿದಿದೆ ಎಂದು ಇ.ಡಿ ವಿವರಿಸಿದೆ.