ನಟಿ ಕೃತಿ ಸನೋನ್ ಅವರ ರಕ್ಷಾಬಂಧನ ಜಾಹೀರಾತು, ಅವರ ಉಡುಪು ಮತ್ತು ನಾಯಿಗೆ ರಾಖಿ ಕಟ್ಟಿದ್ದಕ್ಕಾಗಿ ತೀವ್ರ ವಿವಾದಕ್ಕೆ ಕಾರಣವಾಗಿದೆ. ಇದಕ್ಕೆ ಪ್ರತಿಕ್ರಿಯಿಸಿದ ಕೃತಿ, 'ಸಂಸ್ಕೃತಿ ಇರುವುದು ಮನಸ್ಸಿನಲ್ಲಿ, ಉಡುಪಿನ ನೆಕ್‌ಲೈನ್‌ನಲ್ಲಿ ಅಲ್ಲ' ಎಂದು ಟ್ರೋಲ್‌ಗಳಿಗೆ ತಿರುಗೇಟು ನೀಡಿದ್ದಾರೆ.

ಮುಂಬೈ (ಆ.25): ಖ್ಯಾತ ನಟಿ ಕೃತಿ ಸನೋನ್ ಅಭಿನಯದ ನೂತನ ರಕ್ಷಾಬಂಧನ ಜಾಹೀರಾತು (Raksha Bandhan Ad) ಸೋಶಿಯಲ್‌ ಮೀಡಿಯಾದಲ್ಲಿ ಭಾರಿ ಚರ್ಚೆಗೆ ಹಾಗೂ ವಿವಾದಕ್ಕೆ ಕಾರಣವಾಗಿದೆ. ಜಾಹೀರಾತಿನಲ್ಲಿ ನಟಿ ಧರಿಸಿದ್ದ ಬಟ್ಟೆ ಹಾಗೂ ನಾಯಿಗೆ ರಾಖಿ ಕಟ್ಟುವುದು ಸೇರಿದಂತೆ ಹಬ್ಬದ ಚಿತ್ರಣದ ವಿರುದ್ಧ ಎದ್ದಿರುವ ಟೀಕೆಗಳಿಗೆ 36 ವರ್ಷದ ನಟಿ ಕೃತಿ ಸನೋನ್ ತೀವ್ರವಾಗಿ ವಾಗ್ದಾಳಿ ನಡೆಸಿದ್ದಾರೆ. "ಸಂಸ್ಕೃತಿ ಮತ್ತು ಸಂಪ್ರದಾಯಗಳು ಇರುವುದು ಹೆಣ್ಣಿನ ಮನಸ್ಸಿನಲ್ಲಿ, ಆಕೆಯ ಉಡುಪಿನ ನೆಕ್‌ಲೈನ್‌ನಲ್ಲಿ ಅಲ್ಲ (Culture & Traditions are in her heart, not in her neckline)" ಎಂದು ಬರೆದುಕೊಳ್ಳುವ ಮೂಲಕ ಟ್ರೋಲರ್‌ಗಳಿಗೆ ಖಾರವಾದ ಉತ್ತರ ನೀಡಿದ್ದಾರೆ.

ಆಭರಣ ಸಂಸ್ಥೆಯೊಂದರ ಈ ಜಾಹೀರಾತಿನಲ್ಲಿ ಕೃತಿ ಸನೋನ್ ಆಫ್-ವೈಟ್ ಬ್ರ್ಯಾಲೆಟ್ ಮಾದರಿಯ ಬ್ಲೌಸ್, ಕೇಪ್ ಹಾಗೂ ಡ್ರೇಪ್ಡ್ ಸ್ಕರ್ಟ್ ಧರಿಸಿ ರಕ್ಷಾಬಂಧನ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದರು. ಸಾಂಪ್ರದಾಯಿಕ ಹಬ್ಬಕ್ಕೆ ಆಧುನಿಕ ಮತ್ತು ಫ್ಯಾಶನೇಬಲ್ ಸ್ಪರ್ಶ ನೀಡಲು ಬ್ರ್ಯಾಂಡ್ ಯತ್ನಿಸಿದೆಯಾದರೂ, ಹಬ್ಬದ ಆಚರಣೆಗೆ ಇಂತಹ ಉಡುಪು ಸೂಕ್ತವೇ ಎಂದು ನೆಟ್ಟಿಗರು ಪ್ರಶ್ನಿಸಿದ್ದರು.

'ನಾಯಿಯೂ ನಮ್ಮ ಕುಟುಂಬದ ಸದಸ್ಯನೇ' ಹಬ್ಬದ ಅರ್ಥ ವಿವರಿಸಿದ ಕೃತಿ

ತಮ್ಮ ಸೋಷಿಯಲ್ ಮೀಡಿಯಾ ಪೋಸ್ಟ್‌ನಲ್ಲಿ ಜಾಹೀರಾತಿನ ಪರವಾಗಿ ನಿಂತ ಕೃತಿ, ಹಬ್ಬದ ನಿಜವಾದ ಭಾವನೆಯನ್ನು ಹಂಚಿಕೊಂಡಿದ್ದಾರೆ. 'ಹಬ್ಬಗಳ ಮೂಲ ಸತ್ವ ಅಡಗಿರುವುದು ನೀವು ತೊಡುವ ಬಟ್ಟೆಯಲ್ಲಲ್ಲ, ಬದಲಿಗೆ ಸಂಪ್ರದಾಯಗಳ ಬಗ್ಗೆ ನಿಮಗಿರುವ ಭಾವನೆ ಮತ್ತು ಅರ್ಥದಲ್ಲಿ. ರಕ್ಷಾಬಂಧನ ಎಂಬುದು ರಕ್ಷಣೆಯ ಬಂಧ. ನಾನು ಮತ್ತು ನನ್ನ ಸಹೋದರಿ ಪರಸ್ಪರ ರಾಖಿ ಕಟ್ಟಿಕೊಳ್ಳುತ್ತೇವೆ. ಒಬ್ಬ ಸಹೋದರ ರಕ್ಷಣೆ ನೀಡುವಷ್ಟೇ ಸಮರ್ಥವಾಗಿ ನಾವು ಒಬ್ಬರಿಗೊಬ್ಬರು ರಕ್ಷಣೆ ನೀಡಬಲ್ಲೆವು ಎಂಬುದು ನಮಗೆ ತಿಳಿದಿದೆ' ಎಂದು ಬರೆದಿದ್ದಾರೆ.

ಸಹೋದರಿಯರಿಬ್ಬರೂ ಪರಸ್ಪರ ಆರೋಗ್ಯ ಮತ್ತು ದೀರ್ಘಾಯುಷ್ಯಕ್ಕಾಗಿ ಪ್ರಾರ್ಥಿಸುವುದಾಗಿ ಹೇಳಿದ ಕೃತಿ, ಜಾಹೀರಾತಿನಲ್ಲಿ ನಾಯಿಯನ್ನು ತಂದಿದ್ದರ ಕುರಿತಾಗಿಯೂ ಸ್ಪಷ್ಟನೆ ನೀಡಿದ್ದಾರೆ. 'ನಮಗೆ ಈ ಪ್ರಾರ್ಥನೆ ಮತ್ತು ಭರವಸೆ ನಮ್ಮ ಸಾಕುಪ್ರಾಣಿ ನಾಯಿಗೂ ಅನ್ವಯಿಸುತ್ತದೆ! ಏಕೆಂದರೆ ಕೊನೆಗೆ ಅವುಗಳೂ ನಮ್ಮ ಕುಟುಂಬದ ಭಾಗವಲ್ಲವೇ' ಎಂದು ಸಮರ್ಥಿಸಿಕೊಂಡಿದ್ದಾರೆ. ಜಾಹೀರಾತಿನಲ್ಲಿ ಕೃತಿ, ಗಟ್ಟಿಯಾಗಿ ಬೊಗಳುವ ನಾಯಿಗೆ ರಾಖಿ ಕಟ್ಟಿ ಹಬ್ಬದ ಆಚರಣೆಯ ಭಾಗವಾಗಿಸಿಕೊಂಡಿರುವುದನ್ನು ತೋರಿಸಲಾಗಿತ್ತು. ಆದರೆ ಇದು ಭಾರತೀಯ ಹಬ್ಬವನ್ನು ಹಾಸ್ಯಾಸ್ಪದಗೊಳಿಸುವ ಯತ್ನ ಎಂದು ಸೋಷಿಯಲ್ ಮೀಡಿಯಾದಲ್ಲಿ ಜನರು ಆಕ್ರೋಶ ವ್ಯಕ್ತಪಡಿಸಿದ್ದರು.

ಉಡುಪಿನ ಆಧಾರದ ಮೇಲೆ ಸಂಸ್ಕೃತಿ ಅಳೆಯುವುದಕ್ಕೆ ಕೃತಿ ಆಕ್ಷೇಪ

ಮಹಿಳೆಯರ ಉಡುಪನ್ನು ಪದೇ ಪದೇ ಜಡ್ಜ್ ಮಾಡುವುದನ್ನು ಪ್ರಶ್ನಿಸಿದ ಕೃತಿ, 'ಮಹಿಳೆಯರು ಏನು ಧರಿಸಬೇಕು ಎಂದು ಹೇಳುವುದನ್ನು ನಾವು ಯಾವಾಗ ನಿಲ್ಲಿಸುತ್ತೇವೆ?? ಪಾಶ್ಚಿಮಾತ್ಯ ಮತ್ತು ಜನಾಂಗೀಯ ಫ್ಯಾಷನ್ ಕಾಲಾನಂತರದಲ್ಲಿ ಸಾಕಷ್ಟು ಬದಲಾಗಿದೆ. ಆದರೆ ಇಂದಿಗೂ ಮಹಿಳೆಯು ತನ್ನ ಸಂಸ್ಕೃತಿಗೆ ನೀಡುವ ಗೌರವವನ್ನು ಆಕೆಯ ಬಟ್ಟೆಯಿಂದ ಮಾತ್ರ ಅಳೆಯಲಾಗುತ್ತದೆ! ಸಂಸ್ಕೃತಿ ಮತ್ತು ಸಂಪ್ರದಾಯಗಳು ಇರುವುದು ಮನಸ್ಸಿನಲ್ಲಿ, ಬಟ್ಟೆಯ ನೆಕ್‌ಲೈನ್‌ನಲ್ಲಲ್ಲ' ಎಂದು ಕಿಡಿಕಾರಿದ್ದಾರೆ.

ಕಂಗನಾ ರಣಾವತ್ ಬಿಕಿನಿ ಕಾಮೆಂಟ್ ಹಾಗೂ ವಾಗ್ದಾಳಿ

ಕೃತಿ ಅವರ ಈ ಜಾಹೀರಾತು ಕೇವಲ ನೆಟ್ಟಿಗರಿಂದಷ್ಟೇ ಅಲ್ಲದೆ, ಬಿಜೆಪಿ ಸಂಸದೆ ಹಾಗೂ ನಟಿ ಕಂಗನಾ ರಣಾವತ್ ಅವರ ತೀವ್ರ ಟೀಕೆಗೂ ಗುರಿಯಾಗಿದೆ. ಕೃತಿ ಅವರ ಉಡುಪನ್ನು ಪರೋಕ್ಷವಾಗಿ ಟೀಕಿಸಿದ ಕಂಗನಾ, 'ಬಿಕಿನಿ ಧರಿಸಿ ಸಹೋದರನಿಗೆ ರಾಖಿ ಕಟ್ಟುವ ಅಗತ್ಯವೇನಿತ್ತು?' ಎಂದು ಪ್ರಶ್ನಿಸಿದ್ದಾರೆ. ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಬರೆದುಕೊಂಡಿದ್ದ ಕಂಗನಾ, "ಕಾಕ್‌ಟೇಲ್ ಡ್ರೆಸ್‌ಗಳಿಂದ ಹಿಡಿದು ಲೆಹೆಂಗಾ ಚೋಲಿ, ಜೀನ್ಸ್‌ನಿಂದ ಸೀರೆ, ಬಿಕಿನಿಯಿಂದ ಸಲ್ವಾರ್ ಕಮೀಜ್‌ವರೆಗೆ ಇಂದು ನಮ್ಮ ಮುಂದೆ ಸಾಲು ಸಾಲು ಸ್ಟೈಲಿಂಗ್ ಆಯ್ಕೆಗಳಿರುವಾಗ, ಬಿಕಿನಿ ಅಥವಾ ಒಳ ಉಡುಪಿನಲ್ಲಿ ಸಹೋದರನಿಗೆ ರಾಖಿ ಕಟ್ಟಲು ಏಕೆ ಹೋಗುತ್ತೀರಿ? ನಿಮ್ಮ ಸ್ಟೈಲಿಂಗ್ ಆಯ್ಕೆಗಳೆಲ್ಲ ಎಲ್ಲಿ ಹೋದವು?" ಎಂದು ಸವಾಲೆಸೆದಿದ್ದರಲ್ಲದೆ, ಈ ಜಾಹೀರಾತನ್ನು 'ಉದ್ದೇಶಪೂರ್ವಕವಾಗಿ ಮುಜುಗರ ತರುವಂತದ್ದು' (Intentionally Creepy) ಎಂದು ಕರೆದಿದ್ದಾರೆ.

GIVA RAKHI 2026