ನಿರ್ದೇಶಕ ಇಂದ್ರಜಿತ್ ಲಂಕೇಶ್ ದೀಪಿಕಾ ಪಡುಕೋಣೆ ನಟಿಯಾಗುವ ಮೊದಲೇ ಅವರಲ್ಲಿದ್ದ ಪ್ರತಿಭೆ, ಏಕಾಗ್ರತೆ, ಶಿಸ್ತು ಹಾಗೂ ಜಾಗತಿಕ ಮಟ್ಟದಲ್ಲಿ ಬೆಳೆಯುವ ಸಾಮರ್ಥ್ಯವನ್ನು ಗುರುತಿಸಿದ್ದಾಗಿ ಹೇಳಿದ್ದಾರೆ.
ಸ್ಯಾಂಡಲ್‌ವುಡ್ ನಿರ್ದೇಶಕ ಇಂದ್ರಜಿತ್ ಲಂಕೇಶ್ ಅವರಿಗೆ ಪ್ರತಿಭೆಯನ್ನು ಗುರುತಿಸುವ ಸಾಮರ್ಥ್ಯವೇ ತಮ್ಮ ದೊಡ್ಡ ಶಕ್ತಿ ಎಂಬ ನಂಬಿಕೆ ಸದಾ ಇದೆ. ದೀಪಿಕಾ ಪಡುಕೋಣೆ ಭಾರತೀಯ ಚಿತ್ರರಂಗದ ದೊಡ್ಡ ಹೆಸರುಗಳಲ್ಲಿ ಒಂದಾಗುವ ಹಲವು ವರ್ಷಗಳ ಮೊದಲೇ, ಅವರಲ್ಲಿದ್ದ ಪ್ರತಿಭೆ ಹಾಗೂ ಸಾಮರ್ಥ್ಯವನ್ನು ತಾವು ಗುರುತಿಸಿದ್ದಾಗಿ ಇಂದ್ರಜಿತ್ ಲಂಕೇಶ್ 'ಟೈಮ್ಸ್ ಆಫ್ ಇಂಡಿಯಾ'ಗೆ ಹೇಳಿದ್ದಾರೆ. ವಿಶೇಷವೆಂದರೆ, ದೀಪಿಕಾ ಪಡುಕೋಣೆ ನಟಿಯಾಗಿ ಚಿತ್ರರಂಗಕ್ಕೆ ಕಾಲಿಡುವುದಕ್ಕೂ ಮುನ್ನವೇ ಅವರ ಪರಿಚಯ ಇಂದ್ರಜಿತ್ ಲಂಕೇಶ್ ಅವರಿಗಿತ್ತು. ಆಗ ದೀಪಿಕಾ ಬ್ಯಾಡ್ಮಿಂಟನ್ ಆಟಗಾರ್ತಿಯಾಗಿದ್ದರು.
ಬ್ಯಾಡ್ಮಿಂಟನ್ ಆಡುತ್ತಿದ್ದ ದೀಪಿಕಾ; ಬಳಿಕ ನಟಿಯಾದರು
'ದೀಪಿಕಾ ಪಡುಕೋಣೆ ರಾಜ್ಯ ಮಟ್ಟದಲ್ಲಿ ಬ್ಯಾಡ್ಮಿಂಟನ್ ಆಡುತ್ತಿದ್ದಾಗ ನಾನು ಅವರೊಂದಿಗೆ ಬ್ಯಾಡ್ಮಿಂಟನ್ ಆಡಿದ್ದೆ. ನಂತರ ನಾನು ನಿರ್ದೇಶಕನಾದೆ, ಅವರು ನಟಿಯಾದರು. ನಾನು ನಿರ್ದೇಶಕನಾಗಿ ನಾಲ್ಕು ಸಿನಿಮಾಗಳನ್ನು ಮಾಡಿದ್ದ ಬಳಿಕ ದೀಪಿಕಾರನ್ನು ನನ್ನ ಸಿನಿಮಾಗೆ ಆಯ್ಕೆ ಮಾಡಬೇಕು ಎಂದುಕೊಂಡಿದ್ದೆ. ಆಗ ಅವರು ಮಾಡೆಲ್ ಆಗಿದ್ದರು' ಎಂದು ಲಂಕೇಶ್ ನೆನಪಿಸಿಕೊಂಡಿದ್ದಾರೆ.
''ಐಶ್ವರ್ಯ' ಸಿನಿಮಾದ ಕಥೆಯನ್ನು ಹೇಳಲು ಮೊದಲ ಬಾರಿ ಅವರನ್ನು ಭೇಟಿಯಾದ ದಿನವೇ, ಅವರು ದೊಡ್ಡ ಸ್ಟಾರ್ ಆಗುವ ಹಾದಿಯಲ್ಲಿದ್ದಾರೆ ಎಂಬುದು ನನಗೆ ಅರ್ಥವಾಗಿತ್ತು. ದೀಪಿಕಾ ಮೊದಲ ಭೇಟಿಗೇ ಮ್ಯಾನೇಜರ್ ಜೊತೆ ಬಂದಿದ್ದರು. ಆಗ ಪೂಜಾ ದದ್ಲಾನಿ ಅವರ ವೃತ್ತಿಪರ ಕೆಲಸಗಳನ್ನು ನಿರ್ವಹಿಸುತ್ತಿದ್ದರು. ಅವರಲ್ಲಿದ್ದ ಆ ಪ್ರೊಫೆಷನಲಿಸಂ ನನಗೆ ತುಂಬಾ ಇಷ್ಟವಾಯಿತು. ಆ ಬಳಿಕ ನಡೆದದ್ದೆಲ್ಲ ಇತಿಹಾಸ' ಎಂದು ಹೇಳಿದ್ದಾರೆ.
'ಮೊದಲೇ ದೀಪಿಕಾರಲ್ಲಿದ್ದ ಗುಣಗಳನ್ನು ಗುರುತಿಸಿದ್ದೆ'
ದೀಪಿಕಾ ಕ್ಯಾಮೆರಾ ಎದುರು ನಿಲ್ಲುವುದಕ್ಕೂ ಮುನ್ನವೇ ಅವರಲ್ಲಿದ್ದ ಏಕಾಗ್ರತೆ ಮತ್ತು ವೃತ್ತಿಪರತೆಯಿಂದ ತಾವು ಪ್ರಭಾವಿತರಾಗಿದ್ದಾಗಿ ಇಂದ್ರಜಿತ್ ಹೇಳಿದ್ದಾರೆ. 'ಅವರಲ್ಲಿದ್ದ ಏಕಾಗ್ರತೆ, ಸಾಧಿಸುವ ಹಂಬಲ, ಮಹತ್ವಾಕಾಂಕ್ಷೆ ಮತ್ತು ಶಿಸ್ತು ನನಗೆ ಕಾಣಿಸಿತ್ತು. ಶೂಟಿಂಗ್ ಸಮಯದಲ್ಲೇ ನಾನು ಅವರಿಗೆ ಒಂದು ಮಾತು ಹೇಳಿದ್ದೆ. ಅವರು ಕೇವಲ ಕನ್ನಡ ಅಥವಾ ಬಾಲಿವುಡ್‌ಗೆ ಸೀಮಿತವಾಗುವುದಿಲ್ಲ. ಜಾಗತಿಕ ಮಟ್ಟದ ಸ್ಟಾರ್ ಆಗುವ ಸಾಮರ್ಥ್ಯ ಅವರಲ್ಲಿದೆ ಎಂದು ನನಗೆ ಅನಿಸಿತ್ತು' ಎಂದು ಲಂಕೇಶ್ ಹೇಳಿದ್ದಾರೆ.
'8 ಗಂಟೆಗಿಂತ ಹೆಚ್ಚು ಕೆಲಸ ಮಾಡಿದರೆ ಕ್ಯಾಮೆರಾದಲ್ಲಿ ಅದು ಕಾಣಿಸುತ್ತದೆ'
ಇತ್ತೀಚೆಗೆ ದೀಪಿಕಾ ಪಡುಕೋಣೆ ಎಂಟು ಗಂಟೆಗಳ ಕೆಲಸದ ಅವಧಿಯ ಬಗ್ಗೆ ಮಾತನಾಡಿದ್ದು ಚರ್ಚೆಗೆ ಕಾರಣವಾಗಿತ್ತು. ಈ ವಿಚಾರದಲ್ಲಿ ತಾವು ಸಂಪೂರ್ಣವಾಗಿ ದೀಪಿಕಾ ಮಾತನ್ನು ಒಪ್ಪುತ್ತೇನೆ ಎಂದು ಇಂದ್ರಜಿತ್ ಲಂಕೇಶ್ ಹೇಳಿದ್ದಾರೆ. 'ನಾನು ಅವರ ಮಾತನ್ನು ಸಂಪೂರ್ಣವಾಗಿ ಒಪ್ಪುತ್ತೇನೆ. ವಾಸ್ತವವಾಗಿ ನಿರ್ದೇಶಕನಾಗಿ ನಾನು ಸಾಮಾನ್ಯವಾಗಿ ಆರು ಅಥವಾ ಏಳು ಗಂಟೆಗಳ ಕಾಲವೇ ಶೂಟಿಂಗ್ ಮಾಡುತ್ತೇನೆ. ಒಬ್ಬ ನಟ ಎಂಟು ಗಂಟೆಗಳಿಗಿಂತ ಹೆಚ್ಚು ಕಾಲ ಕೆಲಸ ಮಾಡಿದರೆ ಅದರ ಪರಿಣಾಮ ಕ್ಯಾಮೆರಾದಲ್ಲೂ ಕಾಣಿಸಬಹುದು' ಎಂದು ಅವರು ಹೇಳಿದ್ದಾರೆ.
ಹೊಸ ಪ್ರತಿಭೆಗಳಿಗೆ ಅವಕಾಶ ನೀಡುವುದೇ ಲಂಕೇಶ್ ಶೈಲಿ
ಪ್ರತಿಭೆಯನ್ನು ಗುರುತಿಸುವ ತಮ್ಮ ಗುಣವನ್ನು ಇಂದ್ರಜಿತ್ ಲಂಕೇಶ್ ಈಗಲೂ ಮುಂದುವರಿಸಿಕೊಂಡು ಬರುತ್ತಿದ್ದಾರೆ. ಅವರ ಮುಂಬರುವ 'ಜೈ ಹಿಂದ್, ಜೈ ಸಿಂಧ್: ಎ ಲವ್ ಸ್ಟೋರಿ' ಸಿನಿಮಾದಲ್ಲಿ ಹೊಸ ಪ್ರತಿಭೆ ಅಕೈಶಾ ವಾಟ್ಸ್ ಅವರನ್ನು ನಾಯಕಿಯಾಗಿ ಪರಿಚಯಿಸುತ್ತಿದ್ದಾರೆ. ಸ್ಯಾಮಿ ನಾನ್ವಾನಿ ನಿರ್ಮಾಣದ ಈ ರೊಮ್ಯಾಂಟಿಕ್ ಸಿನಿಮಾ ಈ ವರ್ಷ ಹಿಂದಿ, ತಮಿಳು, ತೆಲುಗು ಮತ್ತು ಕನ್ನಡ ಭಾಷೆಗಳಲ್ಲಿ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಚಿತ್ರಮಂದಿರಗಳಿಗೆ ಬಿಡುಗಡೆಯಾಗಲಿದೆ.
'ಹೊಸಬರು ಕಚ್ಚಾ ವಜ್ರಗಳಿದ್ದಂತೆ. ಅವರೊಂದಿಗೆ ಯಾವುದೇ ಹಿಂದಿನ ಇಮೇಜ್ ಅಥವಾ ಪೂರ್ವನಿರ್ಧರಿತ ಅಭಿಪ್ರಾಯ ಇರುವುದಿಲ್ಲ. ಹಾಗಾಗಿ ನಿರ್ದೇಶಕರಿಗೆ ಅವರನ್ನು ಪಾತ್ರಕ್ಕೆ ತಕ್ಕಂತೆ ಬೆಳೆಸಲು, ರೂಪಿಸಲು ಮತ್ತು ಹೊಳಪು ನೀಡಲು ಹೆಚ್ಚಿನ ಸ್ವಾತಂತ್ರ್ಯ ಸಿಗುತ್ತದೆ. ಇದು ನಿರ್ದೇಶಕರಿಗೆ ಅಪಾರ ಸೃಜನಶೀಲ ಸ್ವಾತಂತ್ರ್ಯ ನೀಡುತ್ತದೆ' ಎಂದು ಲಂಕೇಶ್ ಹೇಳಿದ್ದಾರೆ.
ಅಕೈಶಾ ಬಗ್ಗೆ ಇಂದ್ರಜಿತ್ ಲಂಕೇಶ್ ಹೇಳಿದ್ದೇನು?
ಅಕೈಶಾ ಅವರನ್ನು ಮೊದಲ ಬಾರಿ ನೋಡಿದಾಗಲೇ, ಆ ಪಾತ್ರಕ್ಕೆ ಬೇಕಾದ ಹೊಸತನ ಮತ್ತು ಸಾಮರ್ಥ್ಯ ಅವರಲ್ಲಿದೆ ಎಂದು ಅನಿಸಿತ್ತು ಎಂದು ಲಂಕೇಶ್ ಹೇಳಿದ್ದಾರೆ. 'ಅಕೈಶಾರನ್ನು ನೋಡಿದಾಗ, ಆ ಪಾತ್ರಕ್ಕೆ ಬೇಕಾದ ಫ್ರೆಶ್‌ನೆಸ್ ಮತ್ತು ಸಾಮರ್ಥ್ಯ ಅವರಲ್ಲಿದೆ ಎಂದು ನನಗೆ ಅನಿಸಿತು. ಯುವ ಪ್ರತಿಭೆಗಳಿಗೆ ವೇದಿಕೆ ನೀಡುವುದನ್ನು ನಾನು ಯಾವಾಗಲೂ ನಂಬಿದ್ದೇನೆ. ಯಾರಲ್ಲಾದರೂ ಸ್ಪಾರ್ಕ್ ಮತ್ತು ನಿಜವಾದ ಪ್ರತಿಭೆ ಕಾಣಿಸಿದರೆ, ಅವರಿಗೆ ಅವಕಾಶ ನೀಡಬೇಕು ಎಂಬುದು ನನ್ನ ಆಶಯ' ಎಂದು ಹೇಳಿದ್ದಾರೆ.
'ಪ್ರತಿಯೊಬ್ಬ ನಟನಿಗೂ ಅವರದ್ದೇ ಆದ ಜರ್ನಿ ಇರುತ್ತದೆ'
ದೀಪಿಕಾರನ್ನು ಗುರುತಿಸಿದ ಸಂದರ್ಭದಿಂದ ಅಕೈಶಾಗೆ ಅವಕಾಶ ನೀಡುವವರೆಗಿನ ತಮ್ಮ ಪಯಣದ ಹಿಂದೆ ಒಂದೇ ರೀತಿಯ ನಂಬಿಕೆ ಇದೆ ಎಂದು ಇಂದ್ರಜಿತ್ ಹೇಳಿದ್ದಾರೆ. 'ನಾನು ಎಂದಿಗೂ ಒಬ್ಬ ನಟನನ್ನು ಮತ್ತೊಬ್ಬ ನಟನೊಂದಿಗೆ ಹೋಲಿಸುವುದಿಲ್ಲ. ಏಕೆಂದರೆ ಪ್ರತಿಯೊಬ್ಬರಿಗೂ ಅವರದ್ದೇ ಆದ ಪಯಣ ಇರುತ್ತದೆ. ಆದರೆ ಹೊಸಬರಲ್ಲಿ ಆ ಸ್ಪಾರ್ಕ್ ಕಾಣಿಸಿದಾಗ, ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಲು ಅವರಿಗೆ ಒಂದು ಅವಕಾಶ ನೀಡಬೇಕು ಎಂದು ಅನಿಸುತ್ತದೆ' ಎಂದು ಲಂಕೇಶ್ ಹೇಳಿದ್ದಾರೆ. ಇನ್ನು 'ಚಿತ್ರ ನಿರ್ದೇಶಕನಾಗಿ ನಾನು ಯಾವಾಗಲೂ ಮಾಡುತ್ತಾ ಬಂದಿರುವ ಮತ್ತು ನನಗೆ ಅತ್ಯಂತ ಖುಷಿ ನೀಡುವ ಕೆಲಸ ಇದೇ' ಎಂದು ಇಂದ್ರಜಿತ್ ಲಂಕೇಶ್ ಹೇಳಿದ್ದಾರೆ.


