ರಾಜ್ಯ ಸರ್ಕಾರ ತುಳು ಭಾಷೆಯನ್ನು ಎರಡನೇ ಹೆಚ್ಚುವರಿ ಭಾಷೆಯಾಗಿ ಘೋಷಿಸಿದೆ. ಇದರ ಬೆನ್ನಲ್ಲೇ ಸಂಸದ ಯದುವೀರ್ ಅವರು ಕೊಡವ ಭಾಷೆಗೂ ಇದೇ ರೀತಿಯ ಮಾನ್ಯತೆ ನೀಡಬೇಕು ಎಂದು ಆಗ್ರಹಿಸಿದ್ದಾರೆ. ಅಲ್ಲದೆ ಕರಾವಳಿ ಭಾಗದಲ್ಲಿ ಸರ್ಕಾರದ ಯೋಜನೆಗಳು ಕೇವಲ ಘೋಷಣೆಯಾಗಬಾರದು ಎಂದು ಒತ್ತಾಯಿಸಿದ್ದಾರೆ.
ಮೈಸೂರು(ಸೆ.20): ಮಂಗಳೂರಿನಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ತುಳು ಭಾಷೆಯನ್ನು ಕರ್ನಾಟಕದ ಎರಡನೇ ಹೆಚ್ಚುವರಿ ಭಾಷೆಯಾಗಿ ಘೋಷಿಸುವ ಪ್ರಸ್ತಾವನೆಗೆ ರಾಜ್ಯ ಸಚಿವ ಸಂಪುಟ ಸಭೆ ಅನುಮೋದನೆ ನೀಡಿದೆ. ಆ ಮೂಲಕ ಉಡುಪಿ-ಮಂಗಳೂರು ಭಾಗದ ಜನರ ಬಹುದಿನಗಳ ಬೇಡಿಕೆಯನ್ನ ಸರ್ಕಾರ ಈಡೇರಿಸುವ ಪ್ರಯತ್ನ ಮಾಡಿದೆ.
ಆದರೆ ಈಗ ತುಳು ಭಾಷೆಗೆ ರಾಜ್ಯದ ಎರಡನೇ ಹೆಚ್ಚುವರಿ ಭಾಷೆಯಾಗಿ ಪ್ರಾತಿನಿಧ್ಯ ನೀಡಿದಂತೆ ಕೊಡವ ಭಾಷೆಗೂ ನೀಡಬೇಕು ಎಂಬ ಕೂಗು ಎದ್ದಿದೆ.
ತುಳುವಿನಂತೆ ಕೊಡವ ಭಾಷೆಗೂ ಪ್ರತಿನಿಧ್ಯ ಕೊಡಲಿ:
ಹೌದು, ತುಳು ಭಾಷೆಗೆ ಪ್ರಾತಿನಿಧ್ಯ ನೀಡಿದಂತೆಯೇ ಕೊಡವ ಭಾಷೆಗೂ ನೀಡಬೇಕು ಎಂದು ಸಂಸದ ಯದುವೀರ್ ಕೃಷ್ಟದತ್ತ ಚಾಮರಾಜ ಒಡೆಯರ್ ಆಗ್ರಹಿಸಿದ್ದಾರೆ.
ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೊಡವ ಅರೆಭಾಷೆಗೆ ಮಾನ್ಯತೆ ನೀಡಬೇಕು. ಮಂಗಳೂರಿನಲ್ಲಿ ತುಳು ಭಾಷೆಗೆ ಪ್ರಾತಿನಿಧ್ಯ ನೀಡಿದ್ದು ಸಂತಸ ತಂದಿದೆ. ಅದೇ ರೀತಿ ಕೊಡಗಿನಲ್ಲೂ ಇರುವ ಭಾಷೆಗಳ ಅಭಿವೃದ್ಧಿಗೆ ಶ್ರಮಿಸಿ ಎಂದು ಒತ್ತಾಯಿಸಿದ್ದಾರೆ.
ಕರಾವಳಿ ಬಿಜೆಪಿಯ ಭದ್ರಕೋಟೆ
ಕರಾವಳಿ ಭಾಗದಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸಂಚಾರ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಕರಾವಳಿ ಬಿಜೆಪಿಯ ಭದ್ರಕೋಟೆಯಾಗಿದೆ. ಕೇವಲ ಯೋಜನೆಗಳನ್ನು ಘೋಷಣೆ ಮಾಡಿದರಷ್ಟೇ ಸಾಲದು. ಈ ಹಿಂದೆ ಸಿದ್ದರಾಮಯ್ಯ ಕೂಡ ಹಲವು ಯೋಜನೆಗಳನ್ನು ಘೋಷಿಸಿದರು. ಆದರೆ, ಯಾವೊಂದು ಯೋಜನೆಗಳು ಅನುಷ್ಠಾನಕ್ಕೆ ಬರಲೇ ಇಲ್ಲ. ಘೋಷಣೆಗಳು ಕೇವಲ ಘೋಷಣೆಗಳಾಗಿಯೇ ಉಳಿಯಬಾರದು ಎಂದು ಹೇಳಿದರು.


