ಅಫ್ಘಾನಿಸ್ತಾನ ವಿರುದ್ಧದ 3ನೇ ಟಿ20 ಪಂದ್ಯದಲ್ಲಿ ಭಾರತ 127 ರನ್‌ಗಳ ಭರ್ಜರಿ ಗೆಲುವು ಸಾಧಿಸಿ, ಸರಣಿಯನ್ನು 3-0 ಅಂತರದಲ್ಲಿ ಕ್ಲೀನ್‌ಸ್ವೀಪ್‌ ಮಾಡಿಕೊಂಡಿದೆ. ಈ ಪಂದ್ಯದಲ್ಲಿ ಕೇವಲ 30 ಎಸೆತಗಳಲ್ಲಿ ಶತಕ ಸಿಡಿಸಿದ ಅಭಿಷೇಕ್‌ ಶರ್ಮಾ, ರೋಹಿತ್ ಶರ್ಮಾ ಅವರ ವೇಗದ ಶತಕದ ದಾಖಲೆಯನ್ನು ಮುರಿದಿದ್ದಾರೆ. ಅಲ್ಲದೆ, ಟಿ20ಯಲ್ಲಿ 10 ಶತಕ ಪೂರೈಸುವ ಮೂಲಕ ವಿರಾಟ್ ಕೊಹ್ಲಿಯ ದಾಖಲೆಯನ್ನು ಸರಿಗಟ್ಟಿದ್ದಾರೆ.

ನವದೆಹಲಿ: ಅಭಿಷೇಕ್‌ ಶರ್ಮಾ ದಾಖಲೆಯ ಶತಕ, ಬೌಲರ್‌ಗಳ ಮಾರಕ ದಾಳಿ ನೆರವಿನಿಂದ ಅಫ್ಘಾನಿಸ್ತಾನ ವಿರುದ್ಧ 3ನೇ ಟಿ20 ಪಂದ್ಯದಲ್ಲಿ ಭಾರತ 127 ರನ್‌ ಭರ್ಜರಿ ಗೆಲುವು ಸಾಧಿಸಿದ್ದು, 3 ಪಂದ್ಯಗಳ ಸರಣಿಯನ್ನು 3-0 ಅಂತರದಲ್ಲಿ ಕ್ಲೀನ್‌ಸ್ವೀಪ್‌ ಮಾಡಿಕೊಂಡಿತು.

ಮೊದಲು ಬ್ಯಾಟ್‌ ಮಾಡಿದ ಭಾರತ 7 ವಿಕೆಟ್‌ಗೆ 221 ರನ್‌ ಗಳಿಸಿತು. ಮೊದಲ 10 ಓವರ್‌ನಲ್ಲೇ ತಂಡ 142 ರನ್‌ ಸೇರಿಸಿತು. 30 ಎಸೆತಗಳಲ್ಲೇ ಶತಕ ಪೂರೈಸಿದ ಅಭಿಷೇಕ್‌ 34 ಎಸೆತಗಳಲ್ಲಿ 9 ಬೌಂಡರಿ, 11 ಸಿಕ್ಸರ್‌ನೊಂದಿಗೆ 108 ರನ್‌ ಬಾರಿಸಿದರು. ಸಂಜು ಸ್ಯಾಮ್ಸನ್‌ 50, ಶ್ರೇಯಸ್ 29 ರನ್‌ ಸಿಡಿಸಿದರು.

ಬೃಹತ್‌ ಗುರಿ ಬೆನ್ನತ್ತಿದ ಆಫ್ಘನ್‌ 14.1 ಓವರ್‌ಗಳಲ್ಲಿ 94 ರನ್‌ಗೆ ಆಲೌಟಾಯಿತು. ಇಬ್ರಾಹಿಂ ಜದ್ರಾನ್‌(25) ಗರಿಷ್ಠ ಮೊತ್ತ ಗಳಿಸಿದರು. ನಿತೀಶ್‌ ಕುಮಾರ್‌, ರವಿ ಬಿಷ್ಣೋಯ್‌ ತಲಾ 3 ವಿಕೆಟ್‌ ಕಿತ್ತರು.

ಸ್ಕೋರ್: ಭಾರತ 20 ಓವರಲ್ಲಿ 221/7 (ಅಭಿಷೇಕ್‌ 108, ಸಂಜು 50, ಓಮರ್‌ಜೈ 2-27), ಅಫ್ಘಾನಿಸ್ತಾನ 14.1 ಓವರಲ್ಲಿ 94/10 (ಜದ್ರಾನ್‌ 25, ನಿತೀಶ್‌ 3-25, ರವಿ 3-26) ಪಂದ್ಯಶ್ರೇಷ್ಠ: ರವಿ ಬಿಷ್ಣೋಯ್‌

ಪೂರ್ಣ ಸದಸ್ಯ ದೇಶಪೈಕಿ ವೇಗದ ಶತಕ

ಅಭಿಷೇಕ್‌ ಸಿಡಿಸಿದ ಶತಕ, ಐಸಿಸಿ ಪೂರ್ಣ ಸದಸ್ಯ ರಾಷ್ಟ್ರಗಳ ಆಟಗಾರರ ಪೈಕಿ ಅತಿ ವೇಗದ ಅಂ.ರಾ. ಟಿ20 ಶತಕ ಎನಿಸಿಕೊಂಡಿತು. ಇಲ್ಲಿವರೆಗೂ ಈ ದಾಖಲೆ ಜಿಂಬಾಬ್ವೆಯ ಸಿಕಂದರ್‌ ರಝಾ, ನ್ಯೂಜಿಲೆಂಡ್‌ನ ಫಿನ್‌ ಆ್ಯಲೆನ್‌ ಹೆಸರಲ್ಲಿತ್ತು. ಅವರು ತಲಾ 33 ಎಸೆತಗಳಲ್ಲಿ 100 ರನ್‌ ಹೊಡೆದಿದ್ದರು.

ರೋಹಿತ್‌ ದಾಖಲೆ ಮುರಿದ ಅಭಿಷೇಕ್‌

ಭಾರತದ ಪರ ಅಂ.ರಾ. ಟಿ20ಯಲ್ಲಿ ಅತಿ ವೇಗದ ಶತಕ ದಾಖಲಿಸಿದ ಆಟಗಾರರ ಪಟ್ಟಿಯಲ್ಲಿ ಅಭಿಷೇಕ್‌ ಈಗ ಅಗ್ರಸ್ಥಾನಕ್ಕೇರಿದರು. ಅವರು ರೋಹಿತ್‌ ಶರ್ಮಾ ದಾಖಲೆಯನ್ನು ಮುರಿದಿದ್ದಾರೆ. ರೋಹಿತ್‌ 2017ರಲ್ಲಿ ಶ್ರೀಲಂಕಾ ವಿರುದ್ಧ 35 ಎಸೆತಗಳಲ್ಲಿ ಶತಕ ಸಿಡಿಸಿದ್ದರು.

ಅಂ.ರಾ. ಟಿ20 ವೇಗದ ಶತಕ

ಎಸೆತ ಆಟಗಾರ ದೇಶ ವಿರುದ್ಧ ವರ್ಷ

27 ಸಾಹಿಲ್‌ ಎಸ್ಟೋನಿಯಾ ಸೈಪ್ರಸ್‌ 2024

29 ಫಹದ್‌ ಟರ್ಕಿ ಬಲ್ಗೇರಿಯಾ 2025

30 ಅಭಿಷೇಕ್ ಭಾರತ ಆಫ್ಘನ್‌ 2026

33 ನಿಕೋಲ್ ನಮೀಬಿಯಾ ನೇಪಾಳ 2024

33 ಸಿಕಂದರ್‌ ಜಿಂಬಾಬ್ವೆ ಗಾಂಬಿಯಾ 2024

33 ಆ್ಯಲೆನ್‌ ಕಿವೀಸ್‌ ದ.ಆಫ್ರಿಕಾ 2026

ಟಿ20ಯಲ್ಲಿ 10 ಶತಕ: ಕೊಹ್ಲಿ ದಾಖಲೆ ಸಮ

ಅಭಿಷೇಕ್‌ ಟಿ20ಯಲ್ಲಿ 10 ಶತಕ ಪೂರೈಸಿದ್ದು, ವಿರಾಟ್‌ ಕೊಹ್ಲಿಯ ದಾಖಲೆ ಸರಿಗಟ್ಟಿದ್ದಾರೆ. ಇವರಿಬ್ಬರು ಟಿ20ಯಲ್ಲಿ ಗರಿಷ್ಠ ಶತಕ ಸಿಡಿಸಿದ ಭಾರತೀಯ ಆಟಗಾರರು ಎನಿಸಿಕೊಂಡಿದ್ದಾರೆ. ಕೆ.ಎಲ್‌.ರಾಹುಲ್‌, ಸಂಜು, ರೋಹಿತ್‌ ತಲಾ 8 ಶತಕ ಸಿಡಿಸಿದ್ದಾರೆ.